ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಾಂಸ್ಕೃತಿಕ ವಲಯಕ್ಕೆ ಅನುದಾನ; ಸರ್ಕಾರ ಚೌಕಾಸಿ ಮಾಡಬಾರದು

Last Updated 15 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ‘ಕನ್ನಡ ಕಾಯಕ ವರ್ಷ’ ಆಚರಿಸುವುದಾಗಿ 65ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ತಮ್ಮ ಹೇಳಿಕೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದು ಬಜೆಟ್‌ನಲ್ಲಿ ಒದಗಿಸಿರುವ ಅನುದಾನದಲ್ಲಿ ಎದ್ದು ಕಾಣುತ್ತಿದೆ. ಕನ್ನಡದ ನಾಡು–ನುಡಿ, ಸಂಸ್ಕೃತಿಗೆ ಸಂಬಂಧಿಸಿದ ಸಂಸ್ಥೆಗಳ ಅನುದಾನದಲ್ಲಿ ಭಾರಿ ಕಡಿತ ಮಾಡಿರುವುದು, ಕನ್ನಡದ ನಾಳೆಗಳ ಬಗೆಗಿನ ಅವರ ಕಾಳಜಿಯನ್ನೇ ಅನುಮಾನಿಸುವಂತಿದೆ ಹಾಗೂ ‘ಕನ್ನಡ ಕಾಯಕ ವರ್ಷ’ದ ಅಣಕದಂತಿದೆ. ನಾಡು–ನುಡಿ ಮತ್ತು ಗಡಿಗೆ ಸಂಬಂಧಿಸಿದ ಕೆಲಸಗಳಿಗೆ ಅನುದಾನ ಕಡಿತ ಮಾಡಿರುವ ಸರ್ಕಾರದ ತೀರ್ಮಾನ ಅಸಮರ್ಪಕವಾದುದು ಹಾಗೂ ಕನ್ನಡ ಸಂಸ್ಕೃತಿಯ ಚಟುವಟಿಕೆಗಳನ್ನು ನಿರುತ್ಸಾಹಗೊಳಿಸುವಂಥದ್ದು. ಜಾತಿಗಳ ಹೆಸರಿನಲ್ಲಿ ರೂಪಿಸಿರುವ ಮರಾಠಾ ನಿಗಮಕ್ಕೆ ₹ 50 ಕೋಟಿ, ವೀರಶೈವ ಮತ್ತು ಒಕ್ಕಲಿಗ ನಿಗಮಗಳಿಗೆ ತಲಾ ₹ 500 ಕೋಟಿ ಮೀಸಲಿಟ್ಟಿರುವ ಸರ್ಕಾರ, ಅಲ್ಪಸಂಖ್ಯಾತರಿಗೆಂದು ₹ 1,500 ಕೋಟಿ ಹಂಚಿಕೆ ಮಾಡಿದೆ. ಜಾತಿ ನಿಗಮಗಳ ವಿಷಯದಲ್ಲಿ ಧಾರಾಳಿಯಾಗಿರುವ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ ₹ 2 ಕೋಟಿ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 5 ಕೋಟಿ ಗೊತ್ತುಪಡಿಸಿದೆ. ನಾಡಿನ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಹಂಪಿ, ಕದಂಬ ಉತ್ಸವಗಳಿಗೆ ಹಣವನ್ನು ಗೊತ್ತುಪಡಿಸುವ ಗೋಜಿಗೇ ಹೋಗಿಲ್ಲ. ಈ ಅತಾರ್ಕಿಕ ಹಂಚಿಕೆಯನ್ನು ಗಮನಿಸಿದರೆ, ಜಾತಿ ರಾಜಕಾರಣದ ಎದುರು ಭಾಷೆ–ಸಂಸ್ಕೃತಿಯ ಪಾತ್ರ ಅತ್ಯಂತ ಗೌಣವಾದುದು ಎಂದು ಸರ್ಕಾರ ಭಾವಿಸಿರುವಂತಿದೆ. ರಾಜ್ಯದಲ್ಲಿ ಆಡಳಿತ ನಡೆಸಿರುವ ಈವರೆಗಿನ ಎಲ್ಲ ಸರ್ಕಾರಗಳೂ ನಾಡು– ನುಡಿ ಅಭಿವೃದ್ಧಿಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿಲ್ಲ. ಆದರೆ, ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಹಣವನ್ನು ಹೀಗೆ ಒಮ್ಮೆಗೇ ಕಡಿತಗೊಳಿಸಿ, ಮತ್ತೊಂದೆಡೆ ಜಾತಿ ನಿಗಮಗಳ ಬಗ್ಗೆ ಇಷ್ಟೊಂದು ಉದಾರವಾಗಿ ನಡೆದುಕೊಂಡ ಉದಾಹರಣೆಗಳೂ ಇಲ್ಲ. ಸಂಸ್ಕೃತಿ, ಪರಂಪರೆ ರಕ್ಷಣೆಯ ಬಗ್ಗೆ ವೀರಾವೇಶದಿಂದ ಮಾತನಾಡುವ ಪಕ್ಷದ ನೇತೃತ್ವದ ಸರ್ಕಾರವೇ ಆ ಕ್ಷೇತ್ರವನ್ನು ದುರ್ಬಲಗೊಳಿಸಲು ಹೊರಟಿರುವುದು ಮಾತು ಮತ್ತು ಕೃತಿಯ ನಡುವೆ ತಾಳಮೇಳ ತಪ್ಪಿರುವುದಕ್ಕೆ ಉದಾಹರಣೆಯಂತಿದೆ.

ಮುಖ್ಯಮಂತ್ರಿ ‍ಪ್ರಕಟಿಸಿರುವ ‘ಕನ್ನಡ ಕಾಯಕ ವರ್ಷ’ದ ಪರಿಕಲ್ಪನೆ ಆಕರ್ಷಕವಾಗಿದೆ. ನಮ್ಮ ಬದುಕನ್ನು ಆವರಿಸಿಕೊಂಡಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡವನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯ ಎಂದು ಹೇಳಿದ್ದ ಮುಖ್ಯಮಂತ್ರಿ, ಕನ್ನಡದ ಕೆಲಸ ವರ್ಷಪೂರ್ತಿ ಸಾಗುವಂತಾಗಲು ಸ್ಪಷ್ಟವಾದ ಕಾರ್ಯಸೂಚಿ ಅಗತ್ಯ ಎಂದು ಹೇಳಿದ್ದರು. ಆದರೆ, ಮಾರ್ಚ್‌ 8ರಂದು ಅವರು ಮಂಡಿಸಿದ ಬಜೆಟ್‌ನಲ್ಲಿ ಕನ್ನಡದ ನಾಳೆಗಳನ್ನು ಭವ್ಯವಾಗಿ ಕಟ್ಟುವ ಕಾರ್ಯಸೂಚಿಯ ಮಾತಿರಲಿ, ಯಥಾಸ್ಥಿತಿ ಕಾಪಾಡಿಕೊಂಡು ಹೋಗುವ ಉದ್ದೇಶವೂ ಇದ್ದಂತೆ ಕಾಣುತ್ತಿಲ್ಲ. 2020–21ರ ಬಜೆಟ್‌ನಲ್ಲಿ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ ₹ 4,552 ಕೋಟಿ ಮೀಸಲಿರಿಸಲಾಗಿತ್ತು. ಈ ಬಾರಿ ಆ ಪ್ರಮಾಣ ₹ 2,645 ಕೋಟಿಗೆ ಇಳಿದಿರುವುದು ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಬಗೆಗಿನ ಸರ್ಕಾರದ ಕಾಳಜಿಯ ಬಗ್ಗೆ ಅನುಮಾನ ಮೂಡಿಸುವಂತಿದೆ. ಕನ್ನಡಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವ ಉದ್ದೇಶದ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತಗೊಳಿಸಿದ್ದ ಸರ್ಕಾರದ ನಿರ್ಧಾರವೂ ಇತ್ತೀಚೆಗೆ ಕನ್ನಡಪ್ರೇಮಿಗಳ ಅಸಮಾಧಾನಕ್ಕೆ ಗುರಿಯಾಗಿತ್ತು. ಕೊರೊನಾ ಕಾರಣದಿಂದಾಗಿ ಎದುರಾಗಿರುವ ಹಣಕಾಸಿನ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ಪ್ರತಿನಿಧಿಗಳು ಸಾರ್ವಜನಿಕವಾಗಿ ಆಗಾಗ ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಿಕ್ಕಟ್ಟು ಜಾತಿ ನಿಗಮಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಹಣ ನೀಡುವ ಸಂದರ್ಭದಲ್ಲಿ ಸರ್ಕಾರಕ್ಕೆ ಎದುರಾದಂತೆ ಕಾಣಿಸುತ್ತಿಲ್ಲ. ಜಾತಿ–ಧರ್ಮದ ವಿಷಯದಲ್ಲಿ ಕೊಡುಗೈಯಾಗಿರುವ ಸರ್ಕಾರಕ್ಕೆ, ಭಾಷೆಯ ಸಂದರ್ಭದಲ್ಲಿ ಮಾತ್ರ ಆರ್ಥಿಕ ಬಿಕ್ಕಟ್ಟು ನೆನಪಾಗುತ್ತದೆ. ಈ ವೈರುಧ್ಯದಿಂದ ಸರ್ಕಾರ ಹೊರಬರಬೇಕು ಹಾಗೂ ಸಾಂಸ್ಕೃತಿಕ ವಲಯಕ್ಕೆ ಅನುದಾನ ನೀಡುವಲ್ಲಿ ಚೌಕಾಸಿ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT