ಶನಿವಾರ, ಮಾರ್ಚ್ 25, 2023
28 °C

ಸಂಪಾದಕೀಯ: ಆರೋಗ್ಯ ಕೇಂದ್ರಗಳೇ ರೋಗಪೀಡಿತ ಕೊರತೆ ನಿವಾರಿಸಿ, ವಿಶ್ವಾಸ ಮೂಡಿಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಗ್ರಾಮಾಂತರ ಭಾಗಗಳ ಆರೋಗ್ಯ ವ್ಯವಸ್ಥೆಯ ಹುಳುಕುಗಳೆಲ್ಲ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಬಟಾಬಯಲಾಗಿವೆ. ಸೋಂಕುಪೀಡಿತರ ಚಿಕಿತ್ಸೆಗಾಗಲೀ ಆರೈಕೆಗಾಗಲೀ ಬೇಕಾ ದಂತಹ ಸಾಮರ್ಥ್ಯವೇ ಇಲ್ಲದೆ ಆರೋಗ್ಯ ಕೇಂದ್ರಗಳೆಲ್ಲ ಸೋತು ಕೈಚೆಲ್ಲಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ.

ಆರೋಗ್ಯ ಸೌಕರ್ಯವನ್ನು ಕಲ್ಪಿಸುವುದು ಎಂದರೆ ಬಾರಾ ಕಮಾನಿನಂತೆ ಆಲಂಕಾರಿಕವಾಗಿ ಕಟ್ಟಡವನ್ನು ಎಬ್ಬಿಸಿ ನಿಲ್ಲಿಸುವುದಲ್ಲ. ಅಲ್ಲಿ ಚಿಕಿತ್ಸೆಗೆ ಸಾಧನ, ಸಲಕರಣೆಗಳು ಇರಬೇಕು. ರೋಗ ಪತ್ತೆಗೆ ಅಗತ್ಯ ಪರೀಕ್ಷಾ ಸೌಲಭ್ಯವನ್ನು ಆ ಕೇಂದ್ರ ಹೊಂದಿರಬೇಕು. ರೋಗಿಗಳ ಆರೈಕೆಗೆ ಒಂದಿಷ್ಟು ಹಾಸಿಗೆಗಳು, ನಾಜೂಕಿನ ಸ್ಥಿತಿ ನಿಭಾಯಿಸಲು ತೀವ್ರ ನಿಗಾ ಘಟಕ, ತುರ್ತು ಅಗತ್ಯಕ್ಕೊಂದು ಶಸ್ತ್ರಚಿಕಿತ್ಸಾ ಕೊಠಡಿ ಅಲ್ಲಿರಬೇಕು. ಪ್ರಾಣವಾಯು ಪೂರೈಕೆಗೆ ವೆಂಟಿಲೇಟರ್‌ ಇರಬೇಕಾದುದು ಎಷ್ಟೊಂದು ಅಗತ್ಯ ಎನ್ನುವುದನ್ನು ಕೋವಿಡ್‌ ಸಾವುಗಳೇ ಸಾರಿ ಹೇಳಿರುವುದು ನೆನಪಿರಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ಚಿಕಿತ್ಸೆ ನೀಡಲು ವೈದ್ಯರು ಬೇಕು. ಆರೈಕೆ ಮಾಡಲು ನರ್ಸ್‌ಗಳು, ಅವರ ನೆರವಿಗೆ ಪ್ರಯೋಗಾಲಯ ಸಹಾಯಕರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಕೂಡ ಬೇಕು. ಆದರೆ, ನಮ್ಮ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಂದು ಸೌಲಭ್ಯವಿದ್ದರೆ ಮತ್ತೊಂದು ಇರುವುದಿಲ್ಲ. ವೈದ್ಯರಿದ್ದರೆ ನರ್ಸ್‌ಗಳು ಇರುವುದಿಲ್ಲ. ನರ್ಸ್‌ಗಳಿದ್ದರೆ ವೈದ್ಯರು ಇರುವುದಿಲ್ಲ. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ (ಪಿಎಚ್‌ಸಿ) ಹೀಗಿರಬೇಕು ಎಂದು ಸರ್ಕಾರವೇ ಮಾನದಂಡ ವೊಂದನ್ನು ರೂಪಿಸಿದೆ. ಆ ಮಾನದಂಡದ ಪ್ರಕಾರ, ನೂರಕ್ಕೆ ನೂರರಷ್ಟು ಸನ್ನದ್ಧವಾದ ಒಂದು ಪಿಎಚ್‌ಸಿಯೂ ರಾಜ್ಯದ ಗ್ರಾಮಾಂತರ ಭಾಗದಲ್ಲಿ ಸಿಗುವುದಿಲ್ಲ. ಆರೋಗ್ಯ ಕೇಂದ್ರಗಳೇ ಹೀಗೆ ಅನಾರೋಗ್ಯಪೀಡಿತವಾಗಿ ಹಾಸಿಗೆ ಹಿಡಿದಿರುವಾಗ ಕಾಯಿಲೆಯಿಂದ ಬಳಲುತ್ತಾ ಬಂದವರಿಗೆ ಹೇಗೆತಾನೇ ಅವುಗಳಿಂದ ಸಮರ್ಪಕ ಚಿಕಿತ್ಸೆ ಸಿಗಲು ಸಾಧ್ಯ?

ಕೋವಿಡ್‌ ನಿರ್ವಹಣೆ ಕುರಿತು ಸಂಸತ್ತಿನ ಸ್ಥಾಯಿ ಸಮಿತಿ ಕಳೆದ ನವೆಂಬರ್‌ನಲ್ಲಿ ಮಂಡಿಸಿದ ವರದಿಯಲ್ಲಿ, ‘ಗ್ರಾಮಾಂತರ ಭಾಗದ ಆರೋಗ್ಯ ಸೇವಾ ವ್ಯವಸ್ಥೆಯು ಶೋಚನೀಯ ಸ್ಥಿತಿಯಲ್ಲಿದ್ದು, ಮೂಲಸೌಕರ್ಯ ಹೆಚ್ಚಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು’ ಎಂದು ಶಿಫಾರಸು ಮಾಡಲಾಗಿತ್ತು. ಆಡಳಿತದ ಹೊಣೆ ಹೊತ್ತವರು ಆ ವರದಿಯನ್ನು ಉಗ್ರಾಣಕ್ಕೆ ಕಳುಹಿಸಿ, ಮಲಗಿ ನಿದ್ರಿಸಿದ ಪರಿಣಾಮವನ್ನು ಗ್ರಾಮೀಣ ಭಾಗದ ಜನ ಈಗ ಅನುಭವಿಸಬೇಕಾಗಿದೆ.

ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಚಿಕಿತ್ಸೆಯು ಸುಲಭವಾಗಿ ಸಿಗುವಂತಾದರೆ ಎಷ್ಟೋ ಸಾವು, ನೋವುಗಳನ್ನು ತಪ್ಪಿಸಬಹುದು. ಆದರೆ, ಅವುಗಳಲ್ಲಿ ಕನಿಷ್ಠ ಚಿಕಿತ್ಸಾ ಸೌಲಭ್ಯ ಸಹ ಮರೀಚಿಕೆ ಆಗಿಬಿಟ್ಟಿದೆ. ಹೆಚ್ಚಿನ ಚಿಕಿತ್ಸೆಗೆ ನೆರವಾಗಬಲ್ಲ ತಾಲ್ಲೂಕು ಆಸ್ಪತ್ರೆಗಳ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಕೂಡ ಬಹುದಿನಗಳಿಂದ ನನೆಗುದಿಗೆ ಬಿದ್ದಿದೆ. ಜಿಲ್ಲಾ ಆಸ್ಪತ್ರೆಯಿಂದ ಹಿಡಿದು ಉಪ ಆರೋಗ್ಯ ಕೇಂದ್ರದವರೆಗೆ ಎಲ್ಲ ಹಂತಗಳಲ್ಲೂ ವೈದ್ಯರ ಕೊರತೆ ತೀವ್ರವಾಗಿ ಬಾಧಿಸುತ್ತಿದೆ.

ಪ್ರತೀ ಹತ್ತು ಸಾವಿರ ಜನರಿಗೆ ಒಂಬತ್ತು ವೈದ್ಯರ ಸೇವೆ ಲಭ್ಯವಿರುವುದು ದೇಶದ ಸರಾಸರಿ. ಅದೇ ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಲ್ಲಿ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಕೇವಲ ಒಬ್ಬ ವೈದ್ಯ ಲಭ್ಯ. ಆರೋಗ್ಯ ಯೋಜನೆಗಳಿಗೆ ‘ಆಯುಷ್ಮಾನ್‌’ ಎಂದು ಹೆಸರಿಸಿದ ಮಾತ್ರಕ್ಕೆ ಗ್ರಾಮೀಣ ಜನಸಮುದಾಯದ ಜೀವನ ಸ್ವಸ್ಥಗೊಳ್ಳುವುದಿಲ್ಲ. ಅಲ್ಲಿನ ಜನ ನಿಜಕ್ಕೂ ಸ್ವಸ್ಥಜೀವನ ನಡೆಸುವಂತಾಗಲು ವೈದ್ಯರು ಹಾಗೂ ಮೂಲಸೌಕರ್ಯದ ಕೊರತೆಯನ್ನು ಮೊದಲು ಹೋಗಲಾಡಿಸಬೇಕು.

ಸ್ವತಃ ಪಿಎಚ್‌ಸಿಗಳು ರೋಗಪೀಡಿತ ಆಗಿರುವುದರಿಂದಲೇ ಜನರಿಗೆ ಅವುಗಳ ಕುರಿತು ಭಯ ಹಾಗೂ ಅಪನಂಬಿಕೆ. ಕೋವಿಡ್‌ ಲಕ್ಷಣಗಳಿದ್ದರೂ ತಪಾಸಣೆ ಮಾಡಿಸಿಕೊಳ್ಳಲು ಜನ ಹಿಂದೇಟು ಹಾಕಿರುವುದು, ಅದರಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವಿನ ಪ್ರಮಾಣ ಹೆಚ್ಚಿರುವುದು ಒಪ್ಪಲೇಬೇಕಾಗಿರುವ ಕಹಿಸತ್ಯ.

ರಾಜ್ಯ ಸರ್ಕಾರಕ್ಕೆ ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯನ್ನು ಸುಸ್ಥಿತಿಗೆ ತರುವ ನೈಜ ಇಚ್ಛಾಶಕ್ತಿ ಏನಾದರೂ ಇದ್ದರೆ ಮೊದಲು ಎಲ್ಲ ಗ್ರಾಮಗಳ ಆರೋಗ್ಯ ಸೌಲಭ್ಯದ ಸ್ಥಿತಿಗತಿ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಬೇಕು. ಎಲ್ಲೆಲ್ಲಿ, ಏನೇನು ಅಗತ್ಯವಿದೆ ಎನ್ನುವುದನ್ನು ಪಟ್ಟಿ ಮಾಡಬೇಕು. ಆ ಕೊರತೆಗಳನ್ನು ನೀಗಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು. ಹಾಸಿಗೆಗಳ ಸಾಮರ್ಥ್ಯವನ್ನು ಉನ್ನತೀಕರಿಸಬೇಕು. ಗುಡ್ಡಗಾಡು ಪ್ರದೇಶದ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಹತ್ತಿರದಲ್ಲಿ ಚಿಕಿತ್ಸಾ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದೃಷ್ಟಿಯಲ್ಲಿ ಅಕ್ಕಪಕ್ಕದ ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದ ನಾವು ಕಲಿಯುವುದು ಬೇಕಾದಷ್ಟಿದೆ.

ತಮಿಳುನಾಡಿನಲ್ಲಿ ಚಿಕಿತ್ಸೆ ಪಡೆಯಲು ಜನ ವಿಶ್ವಾಸದಿಂದ ಆರೋಗ್ಯ ಕೇಂದ್ರಗಳಿಗೆ ತೆರಳುತ್ತಾರೆ. ಆರೋಗ್ಯ ಕೇಂದ್ರಗಳ ಸಾಮರ್ಥ್ಯದ ಕುರಿತು ನಮ್ಮಲ್ಲೂ ಅಂತಹ ನಂಬಿಕೆ ಬೆಳೆಯುವಂತೆ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಕೇರಳದಲ್ಲಿ ಪ್ರತೀ ಐದು ಸಾವಿರ ಜನರಿಗೆ ಒಂದರಂತೆ ಆರೋಗ್ಯ ಕೇಂದ್ರವಿದೆ. ರಾಜ್ಯದಲ್ಲೂ ಪಿಎಚ್‌ಸಿಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು. ಆಂಬುಲೆನ್ಸ್‌ಗಳನ್ನೂ ಅಗತ್ಯಕ್ಕೆ ತಕ್ಕಂತೆ ಒದಗಿಸಬೇಕು.

ಟೆಲಿಮೆಡಿಸಿನ್‌ನ ಈ ಕಾಲಘಟ್ಟದಲ್ಲಿ ನರ್ಸ್‌ಗಳಿಗೆ ಸೂಕ್ತ ತರಬೇತಿ ನೀಡಿದರೆ ವೈದ್ಯರ ಕೊರತೆಯನ್ನು ತಕ್ಕಮಟ್ಟಿಗೆ ನೀಗಿಸಬಹುದು ಎನ್ನುವುದು ತಜ್ಞರ ಸಲಹೆ. ಆ ನಿಟ್ಟಿನಲ್ಲೂ ಸರ್ಕಾರ ಮುಕ್ತ ಮನಸ್ಸಿನಿಂದ ಯೋಚಿಸಬೇಕು. ಬಹುತೇಕ ಜಿಲ್ಲೆಗಳಲ್ಲಿರುವ ವೈದ್ಯಕೀಯ ಕಾಲೇಜುಗಳ ನೆರವನ್ನು ಗ್ರಾಮಾಂತರ ಭಾಗದ ಆರೋಗ್ಯ ವ್ಯವಸ್ಥೆ ಸುಧಾರಿಸುವ ದಿಸೆಯಲ್ಲಿ ಹೇಗೆಲ್ಲ ಪಡೆಯಬಹುದು ಎಂಬ ವಿಷಯವಾಗಿಯೂ ತಜ್ಞರ ಸಲಹೆಯನ್ನು ಪಡೆಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು