ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಸಂಹಿತೆ ರೂಪಿಸುವುದಕ್ಕೆ ಸಕಾಲ

Last Updated 7 ನವೆಂಬರ್ 2022, 19:31 IST
ಅಕ್ಷರ ಗಾತ್ರ

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಆಗ್ರಹವನ್ನು ಅಲ್ಲಿನ ಡಿಎಂಕೆ ನೇತೃತ್ವದ ಸರ್ಕಾರವು ಗಟ್ಟಿಗೊಳಿಸಿದೆ. ರವಿ ಅವರು, ಸಾಂವಿಧಾನಿಕವಾಗಿ ತಮಗೆ ಇರುವ ನಿಬಂಧನೆಗಳನ್ನು ಮೀರಿ ವರ್ತಿಸುತ್ತಿದ್ದಾರೆ ಎಂಬುದು ಸರ್ಕಾರದ ಆರೋಪ. ಸರ್ಕಾರವು ಬೆಂಬಲ ಯಾಚಿಸಿ ಸಮಾನಮನಸ್ಕ ಪಕ್ಷಗಳನ್ನು ಸಂಪರ್ಕಿಸಿದೆ. 2021ರ ಸೆಪ್ಟೆಂಬರ್‌ನಲ್ಲಿ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ರವಿ ಅವರು ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರದ ಜೊತೆ ಸಂಘರ್ಷದಲ್ಲಿ ತೊಡಗಿರುವ ಆರೋಪ ಹೊತ್ತಿದ್ದಾರೆ. ಅವರು ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಇಂತಹ ಆರೋಪ ಇರುವುದು ತಮಿಳುನಾಡಿನ ರಾಜ್ಯಪಾಲರ ವಿರುದ್ಧ ಮಾತ್ರವೇ ಅಲ್ಲ. ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಹಲವರು ಆಯಾ ಕಾಲಘಟ್ಟದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಆಜ್ಞಾನು ವರ್ತಿಗಳಂತೆ ನಡೆದುಕೊಂಡ ನಿದರ್ಶನಗಳು ಹಲವು ಇವೆ. ಪ್ರಸ್ತುತ ಕಾಲಘಟ್ಟದಲ್ಲಿ ಬಿಜೆಪಿಯ ವಿರೋಧ ಪಕ್ಷಗಳ ಆಡಳಿತ ಇರುವ ಬಹುತೇಕ ರಾಜ್ಯಗಳಲ್ಲಿ, ಅಲ್ಲಿನ ರಾಜ್ಯಪಾಲರು ರಾಜ್ಯ ಸರ್ಕಾರದ ಜೊತೆ ಸಂಘರ್ಷದಲ್ಲಿ ತೊಡಗಿದ್ದಾರೆ.

ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿಯು ಪಿ.ವಿ. ನರಸಿಂಹ ರಾವ್ ಆಡಳಿತದ ನಂತರದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ ಸಿಂಗ್ ಆಡಳಿತದ ಅವಧಿಯಲ್ಲಿ ಕಡಿಮೆ ಆಗಿತ್ತು. ಆದರೆ ಈಗ ರಾಜಭವನಗಳು ರಾಜಕೀಯವಾಗಿ ಬಹಳ ಸಕ್ರಿಯವಾಗಿವೆ, ಚುನಾಯಿತ ಸರ್ಕಾರಗಳ ಪಾಲಿಗೆ ವಿರೋಧಿಗಳಂತೆ ಬಹಿರಂಗವಾಗಿ ವರ್ತಿಸುತ್ತಿವೆ. ರಾಜ್ಯಪಾಲರ ಹುದ್ದೆಯಲ್ಲಿ ಇರುವವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿರುವುದರ ವಿರುದ್ಧ ಮುಖ್ಯಮಂತ್ರಿಗಳು ಧ್ವನಿ ಎತ್ತಿರುವುದರ ವಿಚಾರವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೌನವಾಗಿರುವುದು, ರಾಜ್ಯಪಾಲರಿಗೆ ಕೇಂದ್ರದ ಅವ್ಯಕ್ತ ಬೆಂಬಲ ಇರುವುದನ್ನು ಸೂಚಿಸುತ್ತದೆ.

ಪುದುಚೇರಿಯಲ್ಲಿ ಕಿರಣ್ ಬೇಡಿ, ಮಹಾರಾಷ್ಟ್ರದಲ್ಲಿ ಬಿ.ಎಸ್. ಕೋಶಿಯಾರಿ, ದೆಹಲಿಯಲ್ಲಿ ಅನಿಲ್ ಬೈಜಲ್ ಮತ್ತು ವಿ.ಕೆ.ಸಕ್ಸೇನಾ, ಪಶ್ಚಿಮ ಬಂಗಾಳದ ಹಿಂದಿನ ರಾಜ್ಯಪಾಲ ಜಗದೀಪ್ ಧನಕರ್ (ಈಗ ಇವರು ಉಪ ರಾಷ್ಟ್ರಪತಿ), ಕೇರಳದಲ್ಲಿ ಆರಿಫ್ ಮಹಮ್ಮದ್ ಖಾನ್, ತೆಲಂಗಾಣದಲ್ಲಿ ತಮಿಳಿಸಾಯಿ ಸೌಂದರರಾಜನ್, ಪಂಜಾಬ್‌ನಲ್ಲಿ ಭಂವರಿಲಾಲ್ ಪುರೋಹಿತ್ ಅವರು ರಾಜ್ಯಪಾಲರಾಗಿ ಚುನಾಯಿತ ಸರ್ಕಾರಕ್ಕೆ ಕಿರಿಕಿರಿ ಉಂಟುಮಾಡುವ ಇರಾದೆ ತಮಗೆ ಇದೆ ಎಂಬುದು ಎದ್ದು ಕಾಣುವಂತೆ ನಡೆದುಕೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರು ಸಾಂವಿಧಾನಿಕ ಸನ್ನಡತೆಯನ್ನು ಉಲ್ಲಂಘಿಸುವ ಹಂತಕ್ಕೆ ಹೋಗಿದ್ದೂ ಇದೆ. ಬಿಜೆಪಿಯ ವಿರೋಧ ಪಕ್ಷಗಳ ಆಡಳಿತ ಇರುವ ಬಹುತೇಕ ರಾಜ್ಯಗಳು ತಮ್ಮ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿವೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಹಾಗೂ ಕೆಲವು ಸಂದರ್ಭಗಳಲ್ಲಿ ಆರ್‌ಎಸ್‌ಎಸ್‌ ಮತ್ತು ಅದರ ಅಂಗಸಂಸ್ಥೆಗಳ ಆಜ್ಞೆಯಂತೆ ರಾಜಭವನ ವರ್ತಿಸಿದೆ ಎಂದು ಆರೋಪಿಸಿವೆ.

ಶಾಸನ ರಚನೆ ಹಾಗೂ ಆಡಳಿತದ ವಿಚಾರದಲ್ಲಿ ಇಲ್ಲದ ಅಧಿಕಾರ ಇದೆ ಎಂದು ರಾಜ್ಯಪಾಲರು ಭಾವಿಸುವುದಕ್ಕೆ ಒಂದು ಕಾರಣ ಇದೆ. ಸಂವಿಧಾನವು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ನಿಖರ ವಾಗಿ ಗುರುತಿಸಿಲ್ಲ. ಆದರೆ, ರಾಜ್ಯಪಾಲರ ಬಳಿ ಹೆಚ್ಚಿನ ಅಧಿಕಾರ ಇಲ್ಲ ಎಂಬುದು ಈಗ ಒಪ್ಪಿತ ಸಂಗತಿ. ಸರ್ಕಾರಿಯಾ ಆಯೋಗದ ಶಿಫಾರಸುಗಳನ್ನು ಗಾಳಿಗೆ ತೂರಿ, ಸಕ್ರಿಯ ರಾಜಕಾರಣಿಗಳನ್ನು ರಾಜ್ಯ‍ಪಾಲರ ನ್ನಾಗಿ ನೇಮಕ ಮಾಡಲಾಗುತ್ತಿದೆ. ಹೀಗೆ ನೇಮಕ ಆದವರು ತಮ್ಮ ರಾಜಕೀಯ ನಾಯಕರನ್ನು ಖುಷಿ ಪಡಿಸಲು ಹೆಚ್ಚು ಗಮನ ನೀಡುತ್ತಾರೆ. ವಿಕಾಸ ಹೊಂದಿರುವ ಪ್ರಜಾತಂತ್ರ ವ್ಯವಸ್ಥೆಯು ಸಂವಿಧಾನದ ಆಶಯಕ್ಕೆ ಅನುಗುಣವಾಗಿ, ಆರೋಗ್ಯಕರ ಪೂರ್ವನಿದರ್ಶನಗಳಿಗೆ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತದೆ. ಅದು ಲಿಖಿತ ಕಾನೂನು ಒಂದನ್ನೇ ಗಮನಿಸುವುದಿಲ್ಲ. ಆದರೆ ಈ ಬಗೆಯ ವರ್ತನೆಗಳನ್ನು ರಾಜಕೀಯ ಕಾರಣಗಳಿಗಾಗಿ ನೇಮಕ ಆದವರಿಂದ ಬಯಸಲು ಆಗುವುದಿಲ್ಲ. ರಾಜ್ಯಪಾಲರ ಅಧಿಕಾರ ಏನು ಹಾಗೂ ಅವರ ಹೊಣೆಗಾರಿಕೆಗಳು ಏನು ಎಂಬುದನ್ನು ಸಂಹಿತೆಯ ರೂಪದಲ್ಲಿ ವ್ಯಾಖ್ಯಾನಿಸಬೇಕಾದ ಅಗತ್ಯ ಇದೆ. ಆಗ ಅವರ ಅಧಿಕಾರವು ದುರ್ಬಳಕೆ ಆಗುವುದಿಲ್ಲ, ಅಪ ವ್ಯಾಖ್ಯಾನಕ್ಕೆ ತುತ್ತಾಗುವುದಿಲ್ಲ. ‘ರಾಜ್ಯಪಾಲ ಹುದ್ದೆಯಲ್ಲಿರುವವರು ನಿಷ್ಪಕ್ಷಪಾತಿ ಆಗಿರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸುಮಧುರ ಬಾಂಧವ್ಯ ಇರುವಂತೆ ನೋಡಿಕೊಳ್ಳಬೇಕು. ಅವರು ಕೇಂದ್ರದ ಏಜೆಂಟ್‌ ರೀತಿಯಲ್ಲಿ ವರ್ತಿಸಬಾರದು’ ಎಂದು ಸರ್ಕಾರಿಯಾ ಆಯೋಗ ಹೇಳಿರುವುದು ಇಲ್ಲಿ ಉ‌ಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT