ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಟೀಕೆಯನ್ನು ದೇಶದ್ರೋಹವೆಂದು ಪರಿಭಾವಿಸುವುದು ಕಳವಳಕಾರಿ

Last Updated 10 ಫೆಬ್ರುವರಿ 2020, 1:45 IST
ಅಕ್ಷರ ಗಾತ್ರ

‘ನಮ್ಮ ಇತಿಹಾಸವು ನಮ್ಮ ಇಂದಿನ ವ್ಯಕ್ತಿತ್ವವನ್ನು ಒಂದಿಷ್ಟರಮಟ್ಟಿಗೆ ರೂಪಿಸುತ್ತದೆ ಎಂಬುದು ಸತ್ಯ. ಆದರೆ, ನಾವು ಸದಾ ಇತಿಹಾಸದ ಬಂದಿಗಳಾಗಿ ಬದುಕಬಾರದು’ ಎಂಬ ಮಾತೊಂದು ಇದೆ. ನಮ್ಮ ಇಂದಿನ ಬದುಕನ್ನು ರೂಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿಇತಿಹಾಸದ ಅರಿವೂ ಇರಬೇಕಾದುದು ಅಪೇಕ್ಷಣೀಯ ಹೌದಾದರೂ ಇತಿಹಾಸದ ಹುಣ್ಣುಗಳನ್ನು ಕೆದಕುತ್ತ, ಹಿಂದೆ ಅನುಭವಿಸಿದ ನೋವುಗಳ ನೆನಪಿನಲ್ಲಿ ಸದಾ ಕೊರಗುತ್ತ ಕುಳಿತಿರಲಾಗದು. ಇಲ್ಲಿ ಉಲ್ಲೇಖಿಸಿದ ಮಾತಿನ ಅರ್ಥದ ಪರಿಧಿಯನ್ನು ವರ್ತಮಾನಕ್ಕೂ ವಿಸ್ತರಿಸಿದರೆ, ‘ಸದ್ಯದ ರಾಜಕೀಯ ಸಂಕಥನಗಳ ಅರಿವು ಅಗತ್ಯವಾದರೂ ಆ ಸಂಕಥನಗಳು ಕಟ್ಟುವ ಚೌಕಟ್ಟಿನೊಳಗೆ ಬಂದಿಗಳಾಗಿ ಬದುಕಬಾರದು’ ಎನ್ನುವ ಹೊಳಹು ಸಿಗುತ್ತದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸಿ ದೇಶದ ವಿವಿಧೆಡೆ ವಿಭಿನ್ನ ಸ್ವರೂಪದ ಹೋರಾಟಗಳು ನಡೆಯುತ್ತಿವೆ. ಆ ಹೋರಾಟಗಳು, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ರುಚಿಸುತ್ತಿಲ್ಲ. ಸಿಎಎ ವಿರೋಧಿಸಿ ಹೋರಾಟ ನಡೆಸುತ್ತಿರುವವರ ಬಗ್ಗೆ ಬಿಜೆಪಿಯ ನಾಯಕರು ಹಗುರವಾಗಿ ಮಾತನಾಡಿದ್ದೂ ಇದೆ. ಸಿಎಎ ವಿರೋಧಿ ಪ್ರತಿಭಟನೆಗಳನ್ನು ಕೆಲವರು ‘ರಾಷ್ಟ್ರ ವಿರೋಧಿ’ ಎಂಬಂತೆ ಚಿತ್ರಿಸಲು ಯತ್ನಿಸಿದ್ದೂ ಇದೆ.

ಕವಿ ಬಪ್ಪಾದಿತ್ಯ ಸರ್ಕಾರ್ ಅವರು ಸಿಎಎ ವಿರೋಧಿ ಪ್ರತಿಭಟನೆಗಳ ಕುರಿತು ಮೊಬೈಲ್‌ ಫೋನ್‌ ಮೂಲಕ ಮಾತನಾಡಿದ್ದನ್ನು ಕೇಳಿಸಿಕೊಂಡ ಮುಂಬೈನ ಟ್ಯಾಕ್ಸಿ ಚಾಲಕನೊಬ್ಬ, ಬಪ್ಪಾದಿತ್ಯ ಅವರನ್ನು ನೇರವಾಗಿ ಪೊಲೀಸ್ ಠಾಣೆಗೆ ಒಯ್ದ ಪ್ರಕರಣವು ಜನರು ಸದ್ಯದ ‘ರಾಜಕೀಯ ಸಂಕಥನಗಳ ಬಂದಿ’ಗಳಾದಾಗ ಸೃಷ್ಟಿಯಾಗಬಹುದಾದ ಎಡವಟ್ಟುಗಳಿಗೆ ಒಂದು ನಿದರ್ಶನವಾಗಿ ಕಾಣಿಸುತ್ತದೆ. ಪೊಲೀಸರು, ಬಪ್ಪಾದಿತ್ಯ ಅವರನ್ನು ಪ್ರಶ್ನಿಸಿದ್ದಾರೆ.ಅವರ ಸೈದ್ಧಾಂತಿಕ ನಿಲುವು, ಅವರು ಓದುವ ಪುಸ್ತಕಗಳು, ಅವರು ಬರೆಯುವ ಕವನಗಳು ಯಾವ ಬಗೆಯವು ಎಂಬ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.ಬಪ್ಪಾದಿತ್ಯ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ, ವಿವಾದಾತ್ಮಕ ಕಾಯ್ದೆಯೊಂದರ ಕುರಿತು ಮಾತನಾಡಿದ ಕಾರಣಕ್ಕೇ ನಾಗರಿಕರೊಬ್ಬರು ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತಿ, ವಿವರಣೆ ನೀಡಬೇಕಾದಂತಹ ಪರಿಸ್ಥಿತಿ ಒದಗಿರುವುದು ಕಳವಳಕಾರಿ ವಿದ್ಯಮಾನ.

ಸಿಎಎ ವಿರುದ್ಧ ಅಥವಾ ಸಿಎಎ ಬಗ್ಗೆ ಕಾರಿನಲ್ಲಿ ಮಾತನಾಡುತ್ತ ಸಾಗಿದ್ದು ಬಪ್ಪಾದಿತ್ಯ ಅವರ ಸ್ವಾತಂತ್ರ್ಯದ ಪರಿಧಿಯೊಳಗಿನ ವಿಚಾರ. ಒಂದು ಕಾಯ್ದೆಯ ಬಗ್ಗೆ ಅಥವಾ ಅದರ ವಿರುದ್ಧವಾಗಿ ಮಾತನಾಡುವುದು ಪೊಲೀಸ್ ಠಾಣೆಯ ಮೆಟ್ಟಿಲೇರಲು ಅರ್ಹವಾದ ಸಂಗತಿಯೇನೂ ಅಲ್ಲ. ‘ಬಪ್ಪಾದಿತ್ಯ ಅವರು ಕಮ್ಯುನಿಸ್ಟ್‌’ ಎಂದು ಟ್ಯಾಕ್ಸಿ ಚಾಲಕ, ಪೊಲೀಸರಲ್ಲಿ ಹೇಳಿದ್ದ ಎಂದು ವರದಿಯಾಗಿದೆ. ವ್ಯಕ್ತಿಯ ಸೈದ್ಧಾಂತಿಕ ನಿಲುವುಗಳು– ಅದು ಕಮ್ಯುನಿಸ್ಟ್‌ ಆಗಿರಲೀ ಆರ್‌ಎಸ್‌ಎಸ್‌ ಪರವಾಗಿರಲೀ– ಪೊಲೀಸ್‌ ಠಾಣೆಗೆ ದೂರಿನ ರೂಪದಲ್ಲಿ ಒಯ್ಯುವಂತಹವು ಅಲ್ಲವೇ ಅಲ್ಲ. ಆದರೂ, ಪ್ರಭಾವಿ ರಾಜಕೀಯ ಸಂಕಥನಗಳ ಚೌಕಟ್ಟಿನಿಂದ ಆಚೆ ನಿಂತು ಆಲೋಚಿಸದೇ ಇದ್ದರೆ, ಸೈದ್ಧಾಂತಿಕ ನಿಲುವುಗಳು ಕೂಡ ಪೊಲೀಸ್ ಠಾಣೆಯವರೆಗೆ ಬಂದು ನಿಲ್ಲುತ್ತವೆ.

ಕರ್ನಾಟಕದ ಬೀದರ್‌ನ ಶಾಹೀನ್ ಶಾಲೆಯಲ್ಲಿ ಪ್ರದರ್ಶನಗೊಂಡ ನಾಟಕವೊಂದರಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಕುರಿತು ಟೀಕೆ ಇತ್ತು ಎಂಬ ಆರೋಪದ ಕಾರಣಕ್ಕೆ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಇದರ ವಿಚಾರಣೆಯ ಭಾಗವಾಗಿ, ನಾಟಕದಲ್ಲಿ ಭಾಗಿಯಾಗಿದ್ದ ಮಕ್ಕಳನ್ನೂ ಪೊಲೀಸರು ಪ್ರಶ್ನಿಸಿದ್ದಾರೆ. ನಾಟಕದಲ್ಲಿ ಪ್ರಧಾನಿ ಕುರಿತು ಟೀಕೆಯ ಮಾತುಗಳು ಇದ್ದವು ಎನ್ನಲಾಗಿದೆ. ಹಾಗಿದ್ದರೂ ಅಲ್ಲಿ ದೇಶದ್ರೋಹದ ಮಾತುಗಳು ಏನಿದ್ದವು ಎಂಬುದು
ಸ್ಪಷ್ಟವಾಗುತ್ತಿಲ್ಲ.

‘ದೇಶದ್ರೋಹ ಎನ್ನಲಾದ ಕೃತ್ಯವು ಹಿಂಸಾತ್ಮಕ ಮಾರ್ಗದ ಮೂಲಕ ಸರ್ಕಾರವನ್ನು ಬುಡಮೇಲು ಮಾಡುವ ಉದ್ದೇಶ ಹೊಂದಿರಬೇಕು. ಅದು ಹಿಂಸೆಗೆ ಪ್ರಚೋದನೆ ನೀಡುವಂತೆ ಇರಬೇಕು, ಸಮಾಜದ ಶಾಂತಿಗೆ ಭಂಗ ತರುವಂತೆ ಇರಬೇಕು’ ಎಂದು ಕೇದಾರನಾಥ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ವ್ಯಕ್ತಿಯ ಟೀಕೆ ಅಥವಾ ನಿಂದನೆ ‘ದೇಶದ್ರೋಹ’ ಆಗುವುದಿಲ್ಲ. ಬೀದರ್‌ನಲ್ಲಿ ನಡೆದ ವಿದ್ಯಮಾನವು ‘ದೇಶದ್ರೋಹ’ ಪ್ರಕರಣದ ವ್ಯಾಪ್ತಿಗೆ ನಿಜಕ್ಕೂ ಬರುವಂಥದ್ದೇ ಎಂಬ ಪ್ರಶ್ನೆ ಇದೆ. ಸರ್ಕಾರವನ್ನು ಟೀಕಿಸುವುದನ್ನು ದೇಶದ್ರೋಹವೆಂದು ಪರಿಭಾವಿಸುವುದು ಹಾಗೂ ಒಂದು ಕಾಯ್ದೆಯು ದೇಶದ ಧರ್ಮನಿರಪೇಕ್ಷ ಪರಂಪರೆಗೆ ವಿರುದ್ಧವಾಗಿದೆ ಎಂದು ಅದರ ವಿರುದ್ಧ ದನಿಯೆತ್ತುವುದನ್ನು ದೇಶವಿರೋಧಿ ಕೃತ್ಯದ ರೀತಿಯಲ್ಲಿ ಕಾಣುವುದು… ಇವೆಲ್ಲ ನಿರ್ದಿಷ್ಟ ಚೌಕಟ್ಟುಗಳೊಳಗೆ ಬಂದಿಯಾದ ಮನಸ್ಸುಗಳ ಕೃತ್ಯಗಳಂತೆ ಕಾಣುತ್ತವೆ. ಈ ಪರಿಪಾಟ ಹೀಗೇ ಮುಂದುವರಿದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯ ಎದುರಾಗಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ವಿಚಾರದಲ್ಲಿ ನಾಗರಿಕರು, ಜನಪ್ರತಿನಿಧಿಗಳ ಜೊತೆ ಸರ್ಕಾರ ಕೂಡ ಎಚ್ಚರ ವಹಿಸಬೇಕಾದ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT