ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಕಾರಾಗೃಹದಲ್ಲಿ ‘ವಿಶೇಷ ಸವಲತ್ತು’: ನಿಗಾ ವ್ಯವಸ್ಥೆ ಬಿಗಿಯಾಗಲಿ

Published : 28 ಆಗಸ್ಟ್ 2024, 23:30 IST
Last Updated : 28 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಲನಚಿತ್ರ ನಟ ದರ್ಶನ್ ಅವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ‘ವಿಶೇಷ ಸವಲತ್ತು’ಗಳು ದೊರೆತಿರುವುದು ಕಾರಾಗೃಹ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಕೈಯಲ್ಲಿ ಸಿಗರೇಟ್ ಹಾಗೂ ಚಹಾ ಕಪ್ಪು ಹಿಡಿದ ದರ್ಶನ್‌, ಕೆಲವು ರೌಡಿಗಳೊಂದಿಗೆ ಲೋಕಾಭಿರಾಮವಾಗಿ ಹರಟುತ್ತಿರುವ ಫೋಟೊ ಹಾಗೂ ರೌಡಿಯೊಬ್ಬನ ಮಗನಿಗೆ ಜೈಲಿನಿಂದಲೇ ವಿಡಿಯೊ ಕರೆ ಮಾಡಿರುವ ದೃಶ್ಯಾವಳಿಯ ತುಣುಕು ಬಹಿರಂಗಗೊಂಡಿವೆ. ಇವುಗಳನ್ನು ಗಮನಿಸಿದರೆ, ಕೇಂದ್ರ ಕಾರಾಗೃಹವು ಮನರಂಜನಾ ಸ್ಥಳದ ಸ್ವರೂಪ ಪಡೆದುಕೊಂಡಂತೆ ಕಾಣಿಸುತ್ತಿದೆ. ಮೊಬೈಲ್‌ ಫೋನ್‌ ಜಾಮರ್‌ಗಳು ಹಾಗೂ ಸಿ.ಸಿ. ಟಿ.ವಿ. ಕ್ಯಾಮೆರಾಗಳು ನಿಷ್ಕ್ರಿಯವಾಗುವಷ್ಟರ ಮಟ್ಟಿಗೆ ಜೈಲಿನಲ್ಲಿನ ಕಾನೂನುಬಾಹಿರ ಚಟುವಟಿಕೆಗಳು ಮೇಲುಗೈ ಪಡೆದುಕೊಂಡಿವೆ. ಕೈದಿಗಳಲ್ಲಿ ಸುಧಾರಣೆ ತರುವ ಉದ್ದೇಶದ ಪರಿಸರ, ಕಾನೂನುಬಾಹಿರ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಂಡಿರುವುದು ದುರದೃಷ್ಟಕರ. ಜೈಲಿನೊಳಗಿನಿಂದಲೇ ದರ್ಶನ್ ವಿಡಿಯೊ ಕರೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಕುಳ್ಳ ಸೀನ ಎನ್ನುವ ರೌಡಿಶೀಟರ್‌ ಬಂದೂಕಿನಾಕಾರದ ಕೇಕ್ ಕತ್ತರಿಸಿ ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿತ್ರವೂ ಬಹಿರಂಗಗೊಂಡಿದೆ. ಈ ಫೋಟೊ ಮತ್ತು ವಿಡಿಯೊ ತುಣುಕು ‘ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ– 2022’ ನಿರ್ಬಂಧಿಸಿರುವ ಚಟುವಟಿಕೆಗಳಲ್ಲಿ ಕೈದಿಗಳು ತೊಡಗಿಕೊಳ್ಳಲು ಅವಕಾಶ ದೊರೆತಿರುವುದಕ್ಕೆ ಸಾಕ್ಷ್ಯದಂತಿವೆ. ರಾಜ್ಯದ ಬಹು ದೊಡ್ಡ ಹಾಗೂ ಸುರಕ್ಷಿತ ಕಾರಾಗೃಹದಲ್ಲಿ ರೌಡಿಶೀಟರ್‌ಗಳು ವಿಶೇಷ ಸವಲತ್ತುಗಳನ್ನು ಪಡೆಯುತ್ತಿರುವುದು ರಾಜ್ಯ ಸರ್ಕಾರಕ್ಕೆ, ವಿಶೇಷವಾಗಿ ಗೃಹ ಇಲಾಖೆಗೆ ಮುಖಭಂಗ ಆಗಬೇಕಾದ ಸಂಗತಿ. ಎಲ್ಲ ಕೈದಿಗಳನ್ನೂ ಸಮಾನವಾಗಿ ನಡೆಸಿಕೊಳ್ಳಬೇಕಾದ ಕಾರಾಗೃಹದಲ್ಲಿ ಕೆಲವರಿಗೆ ವಿಶೇಷ ಸವಲತ್ತುಗಳು ದೊರೆಯುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು 9 ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ. ಅವರಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಮತ್ತು ಅಧೀಕ್ಷಕ ಕೂಡ ಸೇರಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಆತನ ಸಹಚರರನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆರೋಪಿಗಳ ಸ್ಥಳಾಂತರ ಹಾಗೂ ಅಧಿಕಾರಿಗಳ ಅಮಾನತಿನಂತಹ ತಕ್ಷಣದ ಕ್ರಮಗಳ ಮೂಲಕ ಮುಜುಗರದಿಂದ ಪಾರಾಗಲು ಸರ್ಕಾರ ಪ್ರಯತ್ನಿಸಿದೆ.

ಹಣಬಲ ಹಾಗೂ ರಾಜಕೀಯ ಬಲ ಹೊಂದಿರುವವರಿಗೆ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸವಲತ್ತುಗಳು ದೊರೆತಿರುವುದು ಇದೇ ಮೊದಲೇನೂ ಅಲ್ಲ. ಬಹು ಕೋಟಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ, ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಆಪ್ತಗೆಳತಿ ವಿ.ಕೆ. ಶಶಿಕಲಾ ಸೇರಿದಂತೆ ಕೆಲವರು ಕಾರಾಗೃಹದಲ್ಲಿ ‘ವಿಶೇಷ ಸವಲತ್ತು’ಗಳ ಫಲಾನುಭವಿಗಳಾಗಿದ್ದುದರ ವರದಿಗಳು ಪ್ರಕಟವಾಗಿದ್ದವು. ಇಂಥ ಪ್ರಕರಣಗಳು ಬಹಿರಂಗಗೊಂಡಾಗ ಅಧಿಕಾರಿಗಳನ್ನು ಅಮಾನತುಗೊಳಿಸುವ ತಕ್ಷಣದ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆಯಾದರೂ ಕೆಲವರ ಪಾಲಿಗೆ ಕಾರಾಗೃಹಗಳು ಅತಿಥಿಗೃಹಗಳಾಗಿಯೇ ಉಳಿದುಬಂದಿವೆ. ಕಾರಾಗೃಹಗಳಲ್ಲಿ ಶಾಶ್ವತ ಸುಧಾರಣೆಯನ್ನು ತರುವುದಕ್ಕೆ ಯಾವ ಪಕ್ಷದ ನೇತೃತ್ವದ ಸರ್ಕಾರವೂ ಪ್ರಾಮಾಣಿಕವಾಗಿ ಪ್ರಯತ್ನಿಸಿದಂತಿಲ್ಲ. ಕೆಲವು ಕೈದಿಗಳು ಜೈಲಿನಲ್ಲಿ ತಮಗೆ ಬೇಕಾದ ಸವಲತ್ತುಗಳನ್ನೆಲ್ಲ ಪಡೆಯುವುದರ ಜೊತೆಗೆ, ಕಾರಾಗೃಹವನ್ನು ತಮ್ಮ ಕಾರ್ಯಾಚರಣೆಯ ಪಿತೂರಿಸ್ಥಳವನ್ನಾಗಿ ಬಳಸಿಕೊಂಡಿರುವ ವರದಿಗಳೂ ಇವೆ. ಸಿಗರೇಟು, ಮದ್ಯ, ಮಾದಕ ವಸ್ತುಗಳು ಹಾಗೂ ವಿವಿಧ ಸವಲತ್ತುಗಳು ಕಾರಾಗೃಹದಲ್ಲಿ ಖರೀದಿಗೆ ಲಭ್ಯ ಎನ್ನುವ ಸ್ಥಿತಿಯನ್ನು ಭ್ರಷ್ಟ ಅಧಿಕಾರಿಗಳು ಸೃಷ್ಟಿಸಿದ್ದಾರೆ. ಜೈಲಿನೊಳಗಿನ ವ್ಯಕ್ತಿ ಹೊರ ಜಗತ್ತಿನವರೊಂದಿಗೆ ವಿಡಿಯೊ ಕರೆ ಮಾಡಿ ಮಾತನಾಡಬಹುದು ಎನ್ನುವ ಕಲ್ಪನೆಯೇ ಆತಂಕ ಹುಟ್ಟಿಸುವಂತಹದ್ದು.

ಇದೇ ವರ್ಷದ ಏಪ್ರಿಲ್‌ನಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದರು. ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರಗಳ ಕುರಿತಂತೆ 2017ರಲ್ಲಿ ಅಧಿಕಾರಿಗಳ ನಡುವೆ ನಡೆದ ಶೀತಲಯುದ್ಧ ದೊಡ್ಡ ಸುದ್ದಿಯಾಗಿತ್ತು. ಇದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ದುರವಸ್ಥೆಯಷ್ಟೇ ಅಲ್ಲ. ಕಳೆದ ತಿಂಗಳು ಮಂಗಳೂರಿನ ಕಾರಾಗೃಹದ ಮೇಲೆ ದಾಳಿ ನಡೆಸಿದ್ದ ಪೊಲೀಸರು, 25 ಮೊಬೈಲ್‌ ಫೋನ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈಗ ದರ್ಶನ್‌ ಪ್ರಕರಣದ ಮೂಲಕ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳು ಮತ್ತೆ ಸುದ್ದಿಯಲ್ಲಿವೆ. ಕೈದಿಗಳ ಮಾನಸಿಕ ಪರಿವರ್ತನೆಗೆ ಪೂರಕವಾಗುವಂತೆ ಇರಬೇಕಾದ ಜೈಲಿನ ಪರಿಸರ, ಮನೋವಿಕಾರಗಳ ಪೋಷಣೆಗೆ ಅನುಕೂಲ ಒದಗಿಸುವಂತಿರುವುದು ಕಳವಳಕಾರಿ. ಈ ಕಾರಾಗೃಹವೂ ಸೇರಿದಂತೆ ರಾಜ್ಯದ ಎಲ್ಲ ಜೈಲುಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿ, ನಿರ್ಬಂಧಿತ ಚಟುವಟಿಕೆಗಳಿಗೆ ಅವಕಾಶ ಇಲ್ಲದಂತಹ ವಾತಾವರಣ ಸೃಷ್ಟಿಸಬೇಕು. ರಾಜಕೀಯ ಹಸ್ತಕ್ಷೇಪವೂ ಕಾರಾಗೃಹಗಳಲ್ಲಿ ಇಂತಹ ಚಟುವಟಿಕೆಗಳು ನಡೆಯಲು ಕಾರಣ ಎಂಬುದು ನಿರ್ವಿವಾದ. ಕೈದಿಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸಲು ಪ್ರಭಾವ ಬೀರುವಂತಹ ರಾಜಕಾರಣಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಧೈರ್ಯವನ್ನು ಸರ್ಕಾರ ತೋರಬೇಕು. ಅತ್ಯಾಧುನಿಕ ಸಿ.ಸಿ. ಟಿ.ವಿ. ಕ್ಯಾಮೆರಾಗಳ ಕಣ್ಗಾವಲು ಸೇರಿದಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಕಾರಾಗೃಹಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆ ಆಗಬೇಕು. ಕಣ್ಗಾವಲು ವ್ಯವಸ್ಥೆ ದುರ್ಬಳಕೆ ಆಗದಂತೆ ಕೇಂದ್ರೀಕೃತ ನಿಗಾ ವ್ಯವಸ್ಥೆಯನ್ನೂ ರೂಪಿಸಿ, ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಬದ್ಧತೆಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT