ಕಾಶ್ಮೀರ ತಳಮಳ ಅಂತ್ಯವಾಗದ ಅನಿಶ್ಚಯ

7

ಕಾಶ್ಮೀರ ತಳಮಳ ಅಂತ್ಯವಾಗದ ಅನಿಶ್ಚಯ

Published:
Updated:

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದೆ. 2008ರಲ್ಲಿ ಎನ್.ಎನ್. ವೊಹ್ರಾ  ಅವರು ರಾಜ್ಯದ ರಾಜ್ಯಪಾಲರಾಗಿ ನೇಮಕವಾದ ನಂತರ ನಾಲ್ಕನೇ ಬಾರಿಗೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ. ಕಳೆದ ಮೂರು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರದಿಂದ ಬಿಜೆಪಿ ಹೊರಬಂದಿದೆ. ಮೈತ್ರಿ ಸರ್ಕಾರದ ಮೂಲಕ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಯ ಗುರಿ ಸಾಧಿಸುವ ಆಶಯವನ್ನು ಪಿಡಿಪಿ- ಬಿಜೆಪಿ ಹೊಂದಿದ್ದವು. ಸೈದ್ಧಾಂತಿಕವಾಗಿ ಪೂರ್ಣ ಭಿನ್ನ ನಿಲುವುಗಳನ್ನು ಹೊಂದಿದ ಈ ಪಕ್ಷಗಳ ಮೈತ್ರಿಯನ್ನು ‘ಉತ್ತರ ಹಾಗೂ ದಕ್ಷಿಣ ಧ್ರುವಗಳ ಸಂಗಮ’ ಎಂದು ಆಗ ಪಿಡಿ‍‍ಪಿಯ ಮುಖ್ಯಸ್ಥರಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಬಣ್ಣಿಸಿದ್ದರು. ರಾಜ್ಯದಲ್ಲಿ ಶಾಂತಿ ನೆಲಸುವಂತೆ ಮಾಡುವ ವಿಸ್ತೃತ ಯತ್ನದ ಭಾಗ ಇದು ಎಂದೂ ಹೇಳಿಕೊಳ್ಳಲಾಗಿತ್ತು.  ಆದರೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ವಾಸ್ತವ ಸಂಗತಿ. ಇಂತಹ ಸಂದರ್ಭದಲ್ಲಿ ಮೈತ್ರಿ ಸರ್ಕಾರದಿಂದ ಹೊರನಡೆಯುವ ನಿರ್ಧಾರವನ್ನು ಬಿಜೆಪಿ ಪ್ರಕಟಿಸಿದ ರೀತಿಯೂ ಪಿಡಿಪಿಗೆ ಅಚ್ಚರಿಯದಾಗಿ ಪರಿಣಮಿಸುವಂತಾದದ್ದು ವಿಪರ್ಯಾಸ. ಕಾಶ್ಮೀರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತನ್ನ ಹೊಣೆಗಾರಿಕೆಯನ್ನು ಕೊಡವಿಕೊಳ್ಳುವ ಬಿಜೆಪಿಯ ಯತ್ನ ಇದು ಎಂಬಂಥ ಟೀಕೆಗಳು ವ್ಯಕ್ತವಾಗಿವೆ. ಹಾಗೆಯೇ 2019ರ ಸಾರ್ವತ್ರಿಕ ಚುನಾವಣೆಗೆ ಸನ್ನದ್ಧವಾಗುವ ಬಿಜೆಪಿಯ ಕಾರ್ಯತಂತ್ರದ ಭಾಗವೂ ಆಗಿದೆ ಎಂಬ ವ್ಯಾಖ್ಯಾನಗಳೂ ಕೇಳಿಬಂದಿವೆ. ಅಧಿಕಾರ ಹಂಚಿಕೆಯ ಅವಕಾಶವಾದಿ ರಾಜಕಾರಣದಲ್ಲಿ ರಾಜ್ಯದ ಸ್ಥಿತಿ ಮತ್ತಷ್ಟು ಅಧೋಗತಿಗಿಳಿದು ಶೋಚನೀಯವಾಗಿರುವುದು ವಿಷಾದನೀಯ. ಭಯೋತ್ಪಾದನಾ ಚಟುವಟಿಕೆಗಳ ಜೊತೆಗೇ ಬೀದಿಗಳಲ್ಲಿ ಜನರಿಂದ ಕಲ್ಲೆಸೆತದ ಪ್ರತಿಭಟನಾ ಪ್ರದರ್ಶನಗಳೂ ಹೆಚ್ಚುತ್ತಿರುವುದು ಆತಂಕಕಾರಿ. ಬುರ್ಹನ್ ವಾನಿ ಹತ್ಯೆಯ ನಂತರವಂತೂ ಪರಿಸ್ಥಿತಿ ವಿಷಮಿಸಿದೆ. ಕಠುವಾ ಬಾಲಕಿಯ ಅತ್ಯಾಚಾರ ಪ್ರಕರಣದ ವಿವಾದದಲ್ಲಿ, ಜಮ್ಮು ಮತ್ತು ಕಾಶ್ಮೀರ ಸಂಪುಟದ ಬಿಜೆಪಿಯ ಇಬ್ಬರು ಸಚಿವರು ರಾಜೀನಾಮೆ ನೀಡಬೇಕಾದ ಸ್ಥಿತಿಯೂ ಸೃಷ್ಟಿಯಾಯಿತು. ಮೈತ್ರಿ ಸರ್ಕಾರ ರಚನೆಯ ನಂತರ, ಧಾರ್ಮಿಕ ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ತೀವ್ರತರದಲ್ಲಿ ಧ್ರುವೀಕರಣಗೊಂಡಿದೆ. ರಾಜ್ಯದ ಜಮ್ಮು ಭಾಗ ಹಿಂದೂಗಳ ಭದ್ರಕೋಟೆಯಾಗಿದ್ದು ಬಿಜೆಪಿಯ ರಾಜಕೀಯ ನೆಲೆಯಾಗಿದೆ. ಕಾಶ್ಮೀರದ ಭಾಗದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆ ಕಳೆದ ವಾರ ವರದಿ ಬಿಡುಗಡೆ ಮಾಡಿ ಅಂತರರಾಷ್ಟ್ರೀಯ ತನಿಖೆಗೆ ಸಲಹೆ ಮಾಡಿತ್ತು. ಜೊತೆಗೆ ಜನಸಮೂಹದ ಮೇಲೆ ಪೆಲೆಟ್ ಬಂದೂಕುಗಳ ಬಳಕೆ ಸೇರಿದಂತೆ ಪ್ರತಿಭಟನಾಕಾರರ ಮೇಲೆ ತೀವ್ರ ಬಲ ಬಳಕೆ ಮಾಡುವುದರ ಬಗ್ಗೆ ಭಾರತೀಯ ಭದ್ರತಾ ಪಡೆಗಳನ್ನೂ ಟೀಕಿಸಲಾಗಿತ್ತು. ವರದಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಭಾರತ ಸರ್ಕಾರ ವರದಿಯನ್ನು ತಿರಸ್ಕರಿಸಿತ್ತು. ‘ಈ ವರದಿ ದೋಷಪೂರ್ಣವಾದದ್ದು, ದುರುದ್ದೇಶಪೂರಿತವಾದದ್ದು’ ಎಂದೂ ಟೀಕಿಸಿತ್ತು. ವರದಿ ಬಿಡುಗಡೆಯಾದ ದಿನವೇ ಶುಜಾತ್ ಬುಖಾರಿ ಅವರ ಹತ್ಯೆಯ ದುರದೃಷ್ಟಕರ ಘಟನೆ ನಡೆದುಹೋಯಿತು. ರಂಜಾನ್ ಪ್ರಯುಕ್ತ ಜಾರಿಯಲ್ಲಿದ್ದ ಕದನವಿರಾಮದ ಸಂದರ್ಭದಲ್ಲೂ ಹಿಂಸಾಚಾರ ಹಾಗೂ ಸಾವುನೋವುಗಳು ತಪ್ಪಲಿಲ್ಲ. ಕದನವಿರಾಮದ ಬಗ್ಗೆ ಬಿಜೆಪಿ ನಾಯಕತ್ವದಲ್ಲಿ ವಿಭಿನ್ನ ಅಭಿಪ್ರಾಯಗಳಿದ್ದದ್ದೂ ನಿಜ. ಇಷ್ಟರಲ್ಲಾಗಲೇ ಬಿಜೆಪಿ–ಪಿಡಿಪಿ ಬಾಂಧವ್ಯವೂ ಕುಸಿಯಲಾರಂಭಿಸಿತ್ತು. ಮೈತ್ರಿ ಸರ್ಕಾರದಿಂದಾಗಿ ಬೆಂಬಲದ ನೆಲೆ ಕಳೆದುಹೋಗುವುದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದು ಪಿಡಿಪಿಗೂ ಸಾಧ್ಯವಿರಲಿಲ್ಲ. ಜನಸಾಮಾನ್ಯರ ಅಳಲುಗಳಿಗೆ ಸ್ಪಂದಿಸದ ಪಿಡಿಪಿಯ ವೈಫಲ್ಯವೂ ಎದ್ದುಕಾಣುವಂತಿತ್ತು. ‘ತೋಳ್ಬಲದ ಭದ್ರತಾ ನೀತಿ’ಯ ಬದಲಿಗೆ ಮಾನವೀಯ ನೀತಿಗಳ ಬಗ್ಗೆ ಈಗ ಮೆಹಬೂಬಾ ಮುಫ್ತಿ ಮಾತನಾಡುತ್ತಿರುವುದು ತಡವಾಯಿತು. ಮೆಹಬೂಬಾ ಅವರ ಪ್ರಭಾವವೂ ಕ್ಷೀಣಿಸಿರುವುದು ಪ್ರತ್ಯೇಕತಾವಾದ ಹೆಚ್ಚಳಕ್ಕೆ ಇಂಬು ನೀಡುವಂತಾಗಬಹುದು. ಇದು ಅಪಾಯಕಾರಿ. ಇಂತಹ ಸಂದರ್ಭದಲ್ಲಿ, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತದಿಂದಾಗಿ ಕೇಂದ್ರಕ್ಕೆ ವಿಸ್ತೃತ ಅಧಿಕಾರ ದೊರೆಯಲಿದೆ. ಆದರೆ ರಾಜಕೀಯ ಬಿಕ್ಕಟ್ಟು ತೀವ್ರವಾಗಿದ್ದಂತಹ  90ರ ದಶಕದ ಸ್ಥಿತಿ ರಾಜ್ಯದಲ್ಲಿ ಮರುಕಳಿಸಬಾರದು ಎಂಬ ಎಚ್ಚರಿಕೆ ಅಗತ್ಯ. ರಾಜ್ಯದಲ್ಲಿ  ಕಾನೂನು ಪಾಲನೆಯನ್ನು ಸುಸ್ಥಿತಿಗೆ ತರುವುದೇ ಈಗ ರಾಜ್ಯಪಾಲರಿಗೆ ಇರುವ ಮೊದಲ ಸವಾಲು. ಜೊತೆಗೆ, ಜೂನ್ 28ರಿಂದ ಆಗಸ್ಟ್ 26ರವರೆಗೆ ನಡೆಯಲಿರುವ ಅಮರನಾಥ ಯಾತ್ರೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದಂತಹ  ಸವಾಲನ್ನೂ ಎದುರಿಸಬೇಕಾಗಿದೆ. ಆದಷ್ಟು ಬೇಗ ಚುನಾವಣೆಗಳನ್ನು ನಡೆಸಿ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಚಾಲನೆ ನೀಡುವುದೂ ಮುಖ್ಯವಾಗಬೇಕು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !