ಶುಕ್ರವಾರ, ಸೆಪ್ಟೆಂಬರ್ 18, 2020
28 °C

ಕನ್ನಡ–ಸಂಸ್ಕೃತಿ ಇಲಾಖೆಗೆ ಕಾಯಕಲ್ಪದ ಅಗತ್ಯ ಇದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಹಾಗೂ ಆರ್ಥಿಕ ನೆರವು ಪಡೆಯುತ್ತಿರುವ ಕೆಲವು ಸಂಸ್ಥೆಗಳು ಯಾವುದೇ ಕಾರ್ಯಕ್ರಮ ನಡೆಸದೆ ಸರ್ಕಾರವನ್ನು ವಂಚಿಸುತ್ತಿವೆ. ಇದನ್ನು ತಡೆಯಲು ಸಂಘ– ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ– ಸಂಸ್ಕೃತಿ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ಪ್ರಕಟಿಸಿರುವುದು ಸಾಂಸ್ಕೃತಿಕ ವಲಯದಲ್ಲಿ ಒಂದಿಷ್ಟು ಅಚ್ಚರಿಯನ್ನೂ, ಬಹಳಷ್ಟು ಅನುಮಾನಗಳನ್ನೂ ಉಂಟುಮಾಡಿದೆ. ‘ಹಲವು ಸಂಘ– ಸಂಸ್ಥೆಗಳು ಲೆಟರ್‌ಹೆಡ್‌ನಲ್ಲಿ ಮಾತ್ರ ಇದ್ದು ಯಾವ ಕಾರ್ಯಕ್ರಮವನ್ನೂ ಮಾಡದೆ ಅನುದಾನ ಪಡೆದುಕೊಳ್ಳುತ್ತಿವೆ. ಇಂತಹ ಸಂಘ– ಸಂಸ್ಥೆಗಳಿಗೆ ಅನುದಾನ ನೀಡುವ ಬದಲು ಪ್ರತಿ ತಾಲ್ಲೂಕಿನಲ್ಲೂ ಕರ್ನಾಟಕ ಸಂಸ್ಕೃತಿ ಎನ್ನುವ ಹೊಸ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಸ್ಥಳೀಯ ಪ್ರತಿಭೆಗಳನ್ನು ವಾರ್ಷಿಕ ಪ್ರಶಸ್ತಿಗೆ ಪರಿಗಣಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಪ್ರದಾಯಿಕ ಕಾರ್ಯವೈಖರಿಯನ್ನು ಬದಲಾಯಿಸಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು’ ಎಂದೂ ಸಚಿವರು ಪ್ರಕಟಿಸಿದ್ದಾರೆ. ಯಾವುದೇ ಸಚಿವ ತನ್ನ ಇಲಾಖೆಗೆ ಚುರುಕು ಮುಟ್ಟಿಸಲು, ಹೊಸ ಉಪಕ್ರಮಗಳನ್ನು ಕೈಗೊಳ್ಳುವುದು ಸ್ವಾಗತಾರ್ಹ. ಇದರಿಂದ ಇಲಾಖೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಬೇಕು. ಸಚಿವರ ಹೇಳಿಕೆಯನ್ನು ಗಮನಿಸಿದರೆ, ಅದರಲ್ಲಿ ಇಲಾಖೆಗೆ ಹೊಸ ಸ್ಪರ್ಶ ನೀಡುವ ಯಾವ ಆಲೋಚನೆಯೂ ಕಾಣಿಸುತ್ತಿಲ್ಲ. ಈಗ ಇರುವ ಕೇಂದ್ರೀಕೃತ ಅನುದಾನ ವ್ಯವಸ್ಥೆ ಹಾಗೂ ಅದರ ದುರ್ಬಳಕೆ ತಡೆಯುವ ಪ್ರಯತ್ನಕ್ಕೂ ‘ಕರ್ನಾಟಕ ಸಂಸ್ಕೃತಿ’ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ಸ್ಪಷ್ಟೀಕರಣವನ್ನೇನೋ ಸಚಿವರು ಕೊಟ್ಟಿದ್ದಾರೆ. ಆದರೆ, ಇಲಾಖೆಯ ಕಾಯಕಲ್ಪಕ್ಕೆ ಕೈಗೊಳ್ಳಬಹುದಾದ ನಿರ್ದಿಷ್ಟ ಕ್ರಮಗಳನ್ನು ಅವರು ಸ್ಪಷ್ಟಪಡಿಸಿಲ್ಲ. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹೊಸ ಪ್ರತಿಭೆಗಳ ಶೋಧಕ್ಕೆ ‘ಕರ್ನಾಟಕ ಸಂಸ್ಕೃತಿ’ ಕಾರ್ಯಕ್ರಮ ನೆರವಾಗಬಹುದು. ಆದರೆ ಹಾಗೆ ಬೆಳಕಿಗೆ ಬಂದ ಪ್ರತಿಭೆಗಳು ನಮ್ಮ ಸಾಂಸ್ಕೃತಿಕ ಸಂಪತ್ತಾಗಿ ಬೆಳೆಯಬೇಕಾದರೆ, ಸರ್ಕಾರದ ಹಿಡಿತವಿಲ್ಲದ ಸ್ವತಂತ್ರ ಮತ್ತು ಸಂಘಟಿತ ಸಾಂಸ್ಕೃತಿಕ ವಾತಾವರಣವೊಂದು ಕ್ರಿಯಾಶೀಲವಾಗಿ ಇರಬೇಕಾಗುತ್ತದೆ. ಈ ಕ್ರಿಯಾಶೀಲ ಸಾಂಸ್ಕೃತಿಕ ವಾತಾವರಣ ಆರೋಗ್ಯಪೂರ್ಣವಾಗಿ ಉಳಿದುಕೊಳ್ಳಲು ಸರ್ಕಾರದ ನೆರವು ಬೇಕು. ಇಂತಹ ವಾತಾವರಣ ಸೃಷ್ಟಿಸುವ ಸಂಘ–ಸಂಸ್ಥೆಗಳಿಗೆ ಸರ್ಕಾರ ನೆರವು ಕೊಡುವಾಗ, ಅದನ್ನೊಂದು ಶಾಶ್ವತ ವ್ಯವಸ್ಥೆ ಎಂದುಕೊಳ್ಳಬೇಕಾಗಿಲ್ಲ. ಪ್ರತಿವರ್ಷ ಅವುಗಳ ಕಾರ್ಯಕ್ರಮಗಳನ್ನು ಗಮನಿಸಿ, ಪೂರಕ ನೆರವು ನೀಡಿದರೂ ಸಾಕು. ನೀಡಿದ ನೆರವಿಗೆ ಸಂಬಂಧಿಸಿ ಲೆಕ್ಕಪತ್ರ ತಪಾಸಣೆಯೂ ಕಡ್ಡಾಯವಾಗಲಿ.

ಕಲೆ, ಸಂಸ್ಕೃತಿ, ಸಾಹಿತ್ಯದ ಹೆಸರಿನಲ್ಲಿ ಅನುದಾನ ಪಡೆದು ವಂಚಿಸುತ್ತಿರುವ ಸಂಸ್ಥೆಗಳು ಯಾವುವು, ವಂಚನೆಗೆ ನೆರವಾದ ಅಧಿಕಾರಿಗಳು ಯಾರು, ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆಯೇ, ಇಂತಹ ಲೆಟರ್‌ಹೆಡ್‌ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಏಕೆ ಸೇರಿಸಿಲ್ಲ– ಇವೇ ಮುಂತಾದ ಪ್ರಶ್ನೆಗಳು ಸಚಿವರ ಹೇಳಿಕೆಯ ಹಿನ್ನೆಲೆಯಲ್ಲಿ ಸಹಜವಾಗಿಯೇ ಉದ್ಭವಿಸುತ್ತವೆ. ಕೆಲವು ಸಂಘ– ಸಂಸ್ಥೆಗಳು ಒಂದೇ ಕಾರ್ಯಕ್ರಮಕ್ಕೆ ಎರಡು ಇಲಾಖೆಗಳಿಂದ ಅನುದಾನ ಪಡೆಯುತ್ತಿದ್ದರೆ, ಅದನ್ನು ತಡೆಯಲು ನಿಯಮಗಳಿಗೆ ತಿದ್ದುಪಡಿ ತರಲಿ. ಲೆಟರ್‌ಹೆಡ್‌ ಸಂಸ್ಥೆಗಳು ಕನ್ನಡ– ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ನೆರವಿಲ್ಲದೆ ಅನುದಾನ ಪಡೆಯಲು ಸಾಧ್ಯವಿಲ್ಲ ಎನ್ನುವುದು ಗುಟ್ಟಿನ ಸಂಗತಿಯಲ್ಲ. ‘ಕರ್ನಾಟಕ ಸಂಸ್ಕೃತಿ’ ಕಾರ್ಯಕ್ರಮ ವ್ಯವಸ್ಥೆಯಲ್ಲಿ ಕಂದಾಯ ಅಧಿಕಾರಿಗಳೇ ಎಲ್ಲವನ್ನೂ ನಿರ್ಧರಿಸುತ್ತಾರಾದರೆ, ಅಲ್ಲೂ ಭ್ರಷ್ಟಾಚಾರ ನಡೆಯುವುದಿಲ್ಲ ಎಂಬುದಕ್ಕೆ ಖಾತರಿ ಏನಿದೆ?  ‘ಕಾರ್ಯಕ್ರಮ ಮಾಡದಿದ್ದರೂ ಅರ್ಜಿ ಸಲ್ಲಿಸಿ, ಹಣ ನೀಡುವಂತೆ ಕೆಲವು ಸಂಘ–ಸಂಸ್ಥೆಗಳು ಒತ್ತಾಯಿಸುತ್ತಿವೆ. ಇಂತಹ ಸಂಸ್ಥೆಗಳು ಲೋಕಾಯುಕ್ತದಲ್ಲಿ ನನ್ನ ಹಾಗೂ ಇಲಾಖೆಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿವೆ’ ಎಂದು ಸಚಿವರು ಹೇಳಿರುವುದಂತೂ ಗಂಭೀರ ವಿಷಯ. ಬ್ಲ್ಯಾಕ್‌ಮೇಲ್‌ ಮಾಡುವವರ ವಿರುದ್ಧ ಕಾನೂನಿನ ಅನುಸಾರ ಕ್ರಮ ಕೈಗೊಳ್ಳಲಿ. ಕನ್ನಡ– ಸಂಸ್ಕೃತಿ ಇಲಾಖೆಯ ನೈಜ ಸಮಸ್ಯೆಗಳೇನು ಎನ್ನುವುದು ಸಚಿವರ ಅರಿವಿಗೆ ಬಂದಂತೆ ಕಾಣುವುದಿಲ್ಲ. ಎರಡು–ಮೂರು ಜಿಲ್ಲೆಗಳಿಗೆ ಒಬ್ಬರೇ ಸಹಾಯಕ ನಿರ್ದೇಶಕರು ಪ್ರಭಾರಿಯಾಗಿ ಕೆಲಸ ಮಾಡುವುದು, ನಾಲ್ಕು ಅಕಾಡೆಮಿಗಳನ್ನು ಒಬ್ಬರೇ ರಿಜಿಸ್ಟ್ರಾರ್‌ ನಿರ್ವಹಿಸುವುದು ಮುಂತಾದ ‘ಪವಾಡ’ಗಳು ನಡೆಯುತ್ತಿರುವ ಕನ್ನಡ– ಸಂಸ್ಕೃತಿ ಇಲಾಖೆಗೆ ಅಗತ್ಯ ಸಿಬ್ಬಂದಿ ಒದಗಿಸಿ ಕಾಯಕಲ್ಪ ಮಾಡುವ ಅಗತ್ಯವಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯು 2016ರಲ್ಲಿ ನೀಡಿದ ಸಾಂಸ್ಕೃತಿಕ ನೀತಿಯನ್ನು ಸಚಿವ ಸಂಪುಟ ಒಪ್ಪಿಕೊಂಡು, ಗೆಜೆಟ್‌ ಅಧಿಸೂಚನೆಯಾಗಿ ಒಂದೂವರೆ ವರ್ಷ ಉರುಳಿದೆ. ಕನ್ನಡ– ಸಂಸ್ಕೃತಿ ಇಲಾಖೆಯನ್ನು ನಾಲ್ಕು ವಿಭಾಗಗಳಾಗಿ ವಿಕೇಂದ್ರೀಕರಣ ಮಾಡಲು ಈ ಸಮಿತಿ ಸಲಹೆ ನೀಡಿದೆ. ಇಲಾಖೆಯ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಯಾಗಲು ಹಲವು ಶಿಫಾರಸುಗಳನ್ನೂ ಮಾಡಿದೆ. ಈ ವರದಿಯನ್ನು ತಕ್ಷಣ ಜಾರಿಗೆ ತರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು