ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿತ್ತೂರು ಕರ್ನಾಟಕ’ ಹೆಸರೊಂದೇ ಬದಲಾದರೆ ಸಾಕೇ?‘ಹಿಂದುಳಿದ’ ಹಣೆಪಟ್ಟಿ ಅಳಿಸಿಹಾಕಿ

Last Updated 25 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

ಮುಂಬೈ ಕರ್ನಾಟಕ ಪ್ರಾಂತ್ಯಕ್ಕೆ ಶೀಘ್ರ ‘ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಮುಂಬೈ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದ ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಗಳನ್ನೊಳಗೊಂಡ ಪ್ರದೇಶವನ್ನು ಇದುವರೆಗೆ ‘ಮುಂಬೈ ಕರ್ನಾಟಕ’ ಎಂದೇ ಗುರುತಿಸುತ್ತಾ ಬರಲಾಗಿದೆ. ಈಗ ಆ ಪ್ರದೇಶದ ಹೆಸರನ್ನು ನಾಡಿನ ಅಸ್ಮಿತೆಯೊಂದಿಗೆ ಜೋಡಿಸಿ, ‘ಕಿತ್ತೂರು ಕರ್ನಾಟಕ’ ಎಂದು ಬದಲಾವಣೆ ಮಾಡಲು ಹೊರಟಿರುವುದರಿಂದ ಜನರನ್ನು ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಬೆಸೆಯಲು ಸಾಧ್ಯವಾಗುವುದೇನೋ ನಿಜ. ಆದರೆ, ಬರೀ ಹೆಸರು ಬದಲಾವಣೆಯಿಂದ ಅಲ್ಲಿನ ಜನರ ಸ್ಥಿತಿಗತಿಯಲ್ಲಿ ಯಾವ ಬದಲಾವಣೆಯೂ ಆಗಲಾರದು. ಇದಕ್ಕೆ ತಕ್ಕ ಉದಾಹರಣೆ, ಹೈದರಾಬಾದ್‌ ಕರ್ನಾಟಕ ಪ್ರದೇಶದ ಹೆಸರು ‘ಕಲ್ಯಾಣ ಕರ್ನಾಟಕ’ ಎಂದು ಬದಲಾದದ್ದು. ಎರಡು ವರ್ಷಗಳಿಂದ ಆ ಪ್ರದೇಶ ಹೆಸರಿನಲ್ಲಷ್ಟೇ ‘ಕಲ್ಯಾಣ’ವನ್ನು ಅಂಟಿಸಿಕೊಂಡು ಕುಳಿತಿದ್ದು, ಮರುನಾಮಕರಣದ ನಂತರವೂ ಅಲ್ಲಿ ಹೇಳಿಕೊಳ್ಳುವಂತಹ ಮಹತ್ವದ ಕಲ್ಯಾಣ ಕೆಲಸಗಳೇನೂ ಆಗಿಲ್ಲ. ಬದಲಾವಣೆ ಎನ್ನುವುದು ಅಭಿವೃದ್ಧಿ ಚಟುವಟಿಕೆಗಳಲ್ಲಿ ವ್ಯಕ್ತವಾಗದೇ ಹೋದಾಗ ಅಂತಹ ಕೆಲಸ ದೊಡ್ಡಸ್ತಿಕೆ ಪ್ರದರ್ಶನದ ಕಸರತ್ತಾಗಿ ಗೋಚರಿಸುವುದೇ ವಿನಾ ಹೆಚ್ಚಿನದೇನನ್ನೂ ಸಾಧಿಸುವುದಿಲ್ಲ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವಾಗ ‘ಕಿತ್ತೂರು ಕರ್ನಾಟಕ’ ನಾಮಕರಣದ ಘೋಷಣೆ ಹೊರಬಿದ್ದಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಅಡಕವಾಗಿದೆ ಎನ್ನುವ ಮಾತುಗಳಲ್ಲಿ ಕೂಡ ಹುರುಳಿಲ್ಲದೇ ಇಲ್ಲ.

ನಾಮಕರಣ, ಪುನರ್‌ ನಾಮಕರಣಗಳ ಮೂಲಕ ಜನರ ಗಮನಸೆಳೆಯುವ ಪ್ರಯತ್ನಗಳು ಕರ್ನಾಟಕಕ್ಕೆ ಸೀಮಿತವಲ್ಲ. ದೇಶದ ವಿವಿಧ ಭಾಗಗಳಲ್ಲಿ ಊರುಗಳ ಹೆಸರುಗಳನ್ನು ಬದಲಿಸುವ, ಕ್ರೀಡಾಂಗಣ ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಮರುನಾಮಕರಣ ಮಾಡುವ ರಾಜಕಾರಣ ನಡೆಯುತ್ತಿದೆ. ನಾಮಕರಣ ಪ್ರಹಸನಗಳಿಂದ ಸರ್ಕಾರದ ಸಮಯ ಮತ್ತು ಸಂಪನ್ಮೂಲಗಳು ಪೋಲು ಆಗುವವೇ ವಿನಾ ಜನಸಾಮಾನ್ಯರಿಗೆ ಯಾವ ಉಪಯೋಗವೂ ಇಲ್ಲ. ಸರ್ಕಾರವೊಂದು ತನ್ನ ಸಾಧನೆಗಳ ಮೂಲಕ ಜನರ ಗಮನಸೆಳೆಯಬೇಕೇ ವಿನಾ ಹೆಸರು ಬದಲಾವಣೆಯ ರಾಜಕಾರಣದಿಂದಲ್ಲ. ಆಡಳಿತದ ವೈಫಲ್ಯವನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆಯ ಭಾಗವಾಗಿಯೂ ಕೆಲವೊಮ್ಮೆ ಇಂತಹ ಕಸರತ್ತುಗಳು ನಡೆಯುವುದುಂಟು. ‘ಕಲ್ಯಾಣ ಕರ್ನಾಟಕ’ ಎಂದು ಕರೆದ ಮಾತ್ರಕ್ಕೆ ಕಲ್ಯಾಣದ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈಭವ ಮರುಕಳಿಸುವುದಿಲ್ಲ. ಹಾಗೆಯೇ ಮುಂಬೈ ಕರ್ನಾಟಕ ಪ್ರಾಂತ್ಯವನ್ನು ‘ಕಿತ್ತೂರು ಕರ್ನಾಟಕ’ ಎಂದು ಹೆಸರಿಸಿದ ಮಾತ್ರಕ್ಕೆ ಆ ಭಾಗದ ಸಾಮಾಜಿಕ ಸ್ಥಿತಿಗತಿ ಬದಲಾಗುವುದಿಲ್ಲ.

ಕಲ್ಯಾಣ ಕರ್ನಾಟಕದಷ್ಟು ಅಲ್ಲದಿದ್ದರೂ ಮುಂಬೈ ಕರ್ನಾಟಕ ಕೂಡ ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವುದನ್ನು ಯಾರೂ ಅಲ್ಲಗಳೆಯಲಾರರು. ಅದರಲ್ಲೂ ತುಂಬಾ ಸೂಕ್ಷ್ಮ ಎನ್ನಬಹುದಾದ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡದ ಹಳ್ಳಿಗಳು ಅಭಿವೃದ್ಧಿಯಿಂದ ವಂಚಿತವಾಗಿರುವುದು ಕಳವಳ ಉಂಟುಮಾಡುವ ಸಂಗತಿ. ಗಡಿಭಾಗದಲ್ಲಿ ಕನ್ನಡದ ವಾತಾವರಣವು

ಎದ್ದು ಕಾಣುವಂತೆ ಮಾಡಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗದಿರುವುದು ವಿಷಾದದ ಸಂಗತಿ. ಬರ ಮತ್ತು ಮಹಾಪೂರ ಎರಡರ ಹೊಡೆತಕ್ಕೂ ಸಿಲುಕಿ ನಲುಗಿದ ಪ್ರದೇಶ ಕೂಡ ಇದಾಗಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಭೀಮಾ ಮೊದಲಾದ ನದಿಗಳ ದಂಡೆ ಪ್ರದೇಶಗಳು ಪದೇ ಪದೇ ಮಹಾಪೂರದ ಸಂಕಷ್ಟ ಅನುಭವಿಸುತ್ತಲೇ ಇದ್ದರೂ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಹಾಗೆಯೇ ಬರದಿಂದ ತತ್ತರಿಸಿದ ಪ್ರದೇಶಗಳೂ ಈ ಪ್ರಾಂತ್ಯದಲ್ಲಿವೆ. ನೀರಾವರಿ ಸೌಲಭ್ಯ ಒದಗಿಸುವುದೂ ಸೇರಿದಂತೆ ಈ ಭಾಗದ ದಶಕಗಳ ಹಿಂದಿನ ಹಲವು ಬೇಡಿಕೆಗಳು ಇನ್ನೂ ಕಡತಗಳಲ್ಲೇ ಉಳಿದಿವೆ. ಸುವರ್ಣಸೌಧವನ್ನು ನಿರ್ಮಿಸಲು ರಾಜ್ಯ ಸರ್ಕಾರ ತೋರಿದ ಉತ್ಸಾಹವು ಆಡಳಿತ ವಿಕೇಂದ್ರೀಕರಣದ ವಿಚಾರದಲ್ಲಿ ಕಾಣುತ್ತಿಲ್ಲ. ವಿಧಾನಸೌಧವನ್ನು ಹೋಲುವಂತಹಕಟ್ಟಡವನ್ನು ಈ ಭಾಗದಲ್ಲಿ ನಿರ್ಮಿಸಿದ ಮಾತ್ರಕ್ಕೆ ಆಡಳಿತವೇನೂ ಇಲ್ಲಿನ ಜನರ ಮನೆಬಾಗಿಲಿಗೆ ತಲುಪಿದಂತಾಗಲಿಲ್ಲ. ಮುಂಬೈ ಕರ್ನಾಟಕ ಪ್ರಾಂತ್ಯದ ಕುರಿತು ಮುಖ್ಯಮಂತ್ರಿಯವರಿಗೆ ನೈಜ ಕಳಕಳಿ ಏನಾದರೂ ಇದ್ದರೆ ಗಡಿಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ತ್ವರಿತಗತಿಯಲ್ಲಿ ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕು. ಸುವರ್ಣ ಸೌಧವನ್ನು ಬಳಸಿಕೊಂಡು ಆಡಳಿತ ವಿಕೇಂದ್ರೀಕರಣದ ಕಡೆಗೂ ದಿಟ್ಟಹೆಜ್ಜೆ ಇರಿಸಬೇಕು. ನೀರಾವರಿ ಸೌಲಭ್ಯ ಒದಗಿಸುವ ಕುರಿತಾದ ದಶಕಗಳ ಹಿಂದಿನ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸಬೇಕು. ಅಭಿವೃದ್ಧಿ ಚಟುವಟಿಕೆಗಳು ಜರಡಿಯಿಂದ ಬಿದ್ದ ನೀರಿನಂತೆ ರಾಜ್ಯದ ಎಲ್ಲೆಡೆಯೂ ಸಮಾನವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ‘ಹಿಂದುಳಿದ’ ಹಣೆಪಟ್ಟಿಯನ್ನು ಹೀಗೆ ಅಭಿವೃದ್ಧಿ ಅಸ್ತ್ರದಿಂದ ಅಳಿಸಿ ಹಾಕಿದರೆ ಮರು ನಾಮಕರಣದಂತಹ ಚಟುವಟಿಕೆಗಳಿಗೂ ಅರ್ಥ ಬರುತ್ತದೆ. ಇಲ್ಲದಿದ್ದರೆ ಯಾವುದೇ ಪ್ರಾಂತ್ಯದ ಹೆಸರಿನ ಬದಲಾವಣೆ ಎನ್ನುವುದು ಕೇವಲ ಭಾವನೆಯನ್ನು ಬಡಿದೆಬ್ಬಿಸುವ, ತೋರಿಕೆಯ ವ್ಯರ್ಥ ಕಸರತ್ತಾಗಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT