ಸೋಮವಾರ, ಮಾರ್ಚ್ 8, 2021
27 °C

ಮಹಾಮಳೆಗೆ ಕೊಡಗು ತತ್ತರ ಪರಿಹಾರ ಕಾರ್ಯ ಚುರುಕಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ಕೊಡಗು ಜಿಲ್ಲೆ ತತ್ತರಿಸಿದೆ. ಬೆಟ್ಟಗುಡ್ಡಗಳು ಕುಸಿಯುತ್ತಿವೆ. ರಸ್ತೆಗಳು ಕೊಚ್ಚಿಹೋಗಿವೆ. ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತವಾಗಿದೆ. ಜಿಲ್ಲೆಯ ವಿವಿಧ ಪ್ರದೇಶಗಳ ನಡುವೆ ಸಂಪರ್ಕ ಕಡಿದುಹೋಗಿದೆ. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಗುಡ್ಡ ಕುಸಿತ, ಮನೆಗಳ ಕುಸಿತದಿಂದ ಮಣ್ಣಲ್ಲಿ ಸಿಲುಕಿರುವವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. 11 ಸಾವಿರಕ್ಕೂ ಹೆಚ್ಚು ಮನೆಗಳು ಮುರಿದುಬಿದ್ದಿವೆ. ಅಮೂಲ್ಯ ಜೀವಹಾನಿಯೂ ಆಗಿದೆ. ಗುಡ್ಡಗಳ ಕುಸಿತದಿಂದ ಗ್ರಾಮಗಳೇ ಮಾಯವಾಗಿವೆ. ಮಳೆಯ ಸಂತ್ರಸ್ತರಿಗೆ ನೆರವಾಗಲು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮಳೆಯಿಂದ ಜಾನುವಾರುಗಳು, ಇತರ ಪ್ರಾಣಿಗಳೂ ಕಂಗಾಲಾಗಿವೆ. ಅವುಗಳ ಸುರಕ್ಷತೆಗೂ ಕ್ರಮ ಕೈಗೊಳ್ಳಬೇಕಿದೆ. ಅಪಾಯಕಾರಿ ಸ್ಥಳದಲ್ಲಿ ಇರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರುವ ಕೆಲಸಗಳು ಇನ್ನಷ್ಟು ಬಿರುಸು ಪಡೆಯಬೇಕು. ಯೋಧರು ಹಾಗೂ ಇನ್ನಿತರ ರಕ್ಷಣಾ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಹಗಲಿರುಳು ಕೆಲಸ ಮಾಡುತ್ತಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮಡಿಕೇರಿಯಲ್ಲಿಯೇ ತಂಗಿದ್ದು ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಅವರೂ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ‘ನಿಮ್ಮ ಜೊತೆಗೆ ನಾವಿದ್ದೇವೆ’ ಎಂದು ಧೈರ್ಯ ತುಂಬಿದ್ದಾರೆ. ಜೊತೆಗೆ ಕೊಡಗಿನ ಜನರಿಗಾಗಿ ಇಡೀ ಕರುನಾಡು ಮರುಗಿದೆ. ನೆರವಿನ ಮಹಾಪೂರವನ್ನೇ ಹರಿಸಿದೆ. ಯಾವುದೇ ಪ್ರದೇಶ ಸಂಕಷ್ಟಕ್ಕೆ ಸಿಲುಕಿದಾಗ ನೆರವಿಗೆ ಧಾವಿಸುವುದು ಸಹಜ. ಅಂತಹ ಕಾರ್ಯವನ್ನು ಸರ್ಕಾರವೂ ಮಾಡುತ್ತಿದೆ. ಜನರೂ ಮಾಡುತ್ತಿದ್ದಾರೆ. ಪರಿಹಾರ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕು. ಈ ಕೆಲಸಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಾಗರಿಕ ಸಂಘಟನೆಗಳನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಜನ ಹತಾಶರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಪರಿಹಾರ ವಿತರಣೆಯೂ ಸಮರ್ಪಕವಾಗಿ ಆಗಬೇಕು. ಪರಿಹಾರ ಸಾಮಗ್ರಿ ಸಂಗ್ರಹ ಮತ್ತು ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಹಾಗೂ ದುರುಪಯೋಗ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ರಾಜ್ಯ ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರವೂ ನೆರವಿಗೆ ಬರಬೇಕು. ಜನರ ಸಂಕಷ್ಟವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು.

ನಲುಗಿರುವ ಕೊಡಗಿನ ಜನರಿಗೆ ತಕ್ಷಣಕ್ಕೆ ವ್ಯವಸ್ಥೆ ಕಲ್ಪಿಸುವುದು ಮತ್ತು ಅವರ ಬದುಕನ್ನು ಸಹನೀಯಗೊಳಿಸುವುದು ಆದ್ಯತೆಯಾಗಬೇಕು. ಆದರೆ ಶಾಶ್ವತ ಕ್ರಮಗಳ ಬಗ್ಗೆಯೂ ಸರ್ಕಾರ ಗಮನ ನೀಡಬೇಕು. ಈ ಬಾರಿ ಹೆಚ್ಚಿನ ಮಳೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ವರ್ಷಗಳೇ ಬೇಕಾಗಬಹುದು. ಇದನ್ನು ಸರಿಪಡಿಸುವಾಗ, ಇಂತಹ ಪರಿಸ್ಥಿತಿ ಮತ್ತೆ ಎದುರಾಗದ ರೀತಿಯಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನುಷ್ಯನ ಪಾಲೆಷ್ಟು ಮತ್ತು ಪ್ರಕೃತಿಯ ಪಾಲೆಷ್ಟು ಎನ್ನುವುದರ ಬಗ್ಗೆ ಅಧ್ಯಯನ ನಡೆಸಬೇಕಿದೆ. ಈ ಸ್ಥಿತಿಗೆ ಮಳೆ ಒಂದೇ ಕಾರಣವಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಾವು ನಡೆಸುವ ವಿವೇಚನಾರಹಿತವಾದ ಚಟುವಟಿಕೆಗಳ ಪಾಲೂ ಇದರಲ್ಲಿ ಇದೆ. ಅರಣ್ಯ ನಾಶ, ನದಿಗಳಲ್ಲಿ ಮರಳುಗಾರಿಕೆ, ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯದಲ್ಲಿ ಅಕ್ರಮ ಚಟುವಟಿಕೆಗಳು, ಅಕ್ರಮ ಕಟ್ಟಡ ನಿರ್ಮಾಣ, ನಾಲ್ಕಾರು ವರ್ಷ ಮಳೆ ಕಡಿಮೆಯಾಗಿದೆ ಎಂದು ಗುಡ್ಡ ಬೆಟ್ಟಗಳನ್ನೂ ಬಿಡದೆ ಮನೆ ಕಟ್ಟಿಕೊಂಡಿದ್ದು, ಅರಣ್ಯವನ್ನು ಇತರ ಉದ್ದೇಶಗಳಿಗೆ ಬಳಸಿದ್ದು... ಎಲ್ಲವೂ ಈ ಸ್ಥಿತಿಗೆ ಕಾರಣ ಆಗಿರಬಹುದು. ಬೆಟ್ಟಗುಡ್ಡಗಳ ಮೇಲಿದ್ದ ಮರಗಳನ್ನು ಕತ್ತರಿಸಿ ಮನೆಯನ್ನೋ, ಪ್ರವಾಸಿಗರಿಗಾಗಿ ವಸತಿಗೃಹವನ್ನೋ ನಿರ್ಮಿಸಿ ಈಗ ಎಲ್ಲ ತಪ್ಪನ್ನೂ ಮಳೆಯ ಮೇಲೆ ಹೊರಿಸುವುದು ಸರಿಯೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮನುಷ್ಯ ಎಷ್ಟೇ ದೊಡ್ಡವನಾದರೂ ಪ್ರಕೃತಿ ಮನುಷ್ಯನಿಗಿಂತ ದೊಡ್ಡದು. ನಾವು ಎಚ್ಚೆತ್ತುಕೊಳ್ಳಲು ಇದು ಸಕಾಲ. ಈಗಲಾದರೂ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದೆ ಇನ್ನೂ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು