ಮಂಗಳವಾರ, ಆಗಸ್ಟ್ 20, 2019
27 °C

ಕುಲಭೂಷಣ್ ಪ್ರಕರಣ: ಮಹತ್ವದ ಜಯ ಸಾಗಬೇಕಾದ ಹಾದಿ ಬಹುದೀರ್ಘ

Published:
Updated:
Prajavani

ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ವಿಧಿಸಿರುವ ಮರಣದಂಡನೆಗೆ ತಡೆಯಾಜ್ಞೆ ನೀಡಿರುವ ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪು, ಭಾರತದ ಪಾಲಿಗೆ ಮಹತ್ವದ್ದು. ಜಾಧವ್ ಅವರನ್ನು ಗೂಢಚರ್ಯೆ ನಡೆಸಿದ ಹಾಗೂ ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಆರೋಪದಡಿ ಪಾಕಿಸ್ತಾನ 2016ರಲ್ಲಿ ಬಂಧಿಸಿತ್ತು. ನಂತರ ಅವರ ಮೇಲಿನ ಆರೋಪಗಳ ಕುರಿತ ವಿಚಾರಣೆಯನ್ನು ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವೊಂದು ನಡೆಸಿ, ಅವರಿಗೆ ಮರಣದಂಡನೆ ವಿಧಿಸಿತ್ತು. ಆದರೆ, ಜಾಧವ್ ಅವರು ಗೂಢಚರ ಅಲ್ಲ, ಇರಾನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರನ್ನು ಪಾಕಿಸ್ತಾನ ಅಪಹರಿಸಿದೆ ಎಂದು ಭಾರತ ಸ್ಪಷ್ಟವಾಗಿ ಹೇಳುತ್ತ ಬಂದಿದೆ.

ಜಾಧವ್ ಅವರಿಗೆ ಭಾರತದ ರಾಜತಾಂತ್ರಿಕ ನೆರವು ಪಡೆಯುವ ಅವಕಾಶವನ್ನು ಪಾಕಿಸ್ತಾನವು ಕಲ್ಪಿಸಿಲ್ಲ. ಅವರು ಭಾರತದ ಪ್ರಜೆಯಾಗಿದ್ದರೂ ಅವರ ಬಂಧನದ ಕುರಿತ ಮಾಹಿತಿಯನ್ನು ಪಾಕಿಸ್ತಾನವು ಭಾರತಕ್ಕೆ ನೀಡಲಿಲ್ಲ. ಇದು ವಿಯೆನ್ನಾ ಒಪ್ಪಂದದ ಉಲ್ಲಂಘನೆ. ಜಾಧವ್ ಅವರಿಗೆ ಕಾನೂನಿನ ಅಡಿ ಸಿಗುವ ಹಕ್ಕುಗಳ ಬಗ್ಗೆ ಕೂಡ ಪಾಕಿಸ್ತಾನ ಮಾಹಿತಿ ಕೊಟ್ಟಿಲ್ಲ ಎಂದು ಭಾರತದ ಪರ ವಕೀಲರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ರದ್ದು ಮಾಡುವಂತೆ ಸೂಚಿಸಬೇಕು ಎಂಬುದು ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದ ಮುಂದೆ ಇರಿಸಿದ್ದ ಕೋರಿಕೆ ಆಗಿತ್ತು. ಆದರೆ, ‘ಜಾಧವ್ ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ನೀಡದೆ, ಅವರ ಬಂಧನದ ಬಗ್ಗೆ ಭಾರತಕ್ಕೆ ತಿಳಿಸದೆ ಪಾಕಿಸ್ತಾನ ತಪ್ಪು ಮಾಡಿದೆ.

ಜಾಧವ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಪಾಕಿಸ್ತಾನ ಪುನರ್‌ ಪರಿಶೀಲನೆಗೆ ಒಳಪಡಿಸಬೇಕು’ ಎಂದು ನ್ಯಾಯಾಲಯ ಈಗ ಹೇಳಿರುವುದು ಭಾರತದ ವಾದಕ್ಕೆ ಸಿಕ್ಕಿರುವ ಬಹುದೊಡ್ಡ ಜಯ; ಆದರೆ ಪೂರ್ಣ ಜಯ ಅಲ್ಲ. ಅಂತರರಾಷ್ಟ್ರೀಯ ವೇದಿಕೆಯೊಂದರಲ್ಲಿ ಇಷ್ಟು ದೊಡ್ಡ ಜಯ ದೊರೆತಿದೆಯಾದರೂ, ಜಾಧವ್ ಅವರನ್ನು ಭಾರತಕ್ಕೆ ಪುನಃ ಕರೆತರುವ ವಿಚಾರದಲ್ಲಿ ಸಾಗಬೇಕಾದ ದಾರಿ ಬಹುದೀರ್ಘವಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಶಿಕ್ಷೆಯನ್ನು ರದ್ದು ಮಾಡಬೇಕು ಎಂದು ಭಾರತ ಇರಿಸಿದ್ದ ಮನವಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯ ಪುರಸ್ಕರಿಸಿಲ್ಲ. ಅದು, ಶಿಕ್ಷೆಯ ಜಾರಿಗೆ ತಡೆ ನೀಡಿದೆಯಷ್ಟೆ. ‘ಜಾಧವ್ ಪಾಕಿಸ್ತಾನದಲ್ಲೇ ಇರುತ್ತಾರೆ, ಅವರನ್ನು ಪಾಕಿಸ್ತಾನದ ಕಾನೂನಿಗೆ ಅನುಗುಣವಾಗಿ ನೋಡಿಕೊಳ್ಳಲಾಗುತ್ತದೆ’ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ. ಅಂತರರಾಷ್ಟ್ರೀಯ ನ್ಯಾಯಾಲಯದ ಸೂಚನೆಯಂತೆ ಪಾಕಿಸ್ತಾನವು ಮರಣದಂಡನೆಯ ಪುನರ್‌ ಪರಿಶೀಲನೆ ನಡೆಸಿ, ತಾನು ಶಿಕ್ಷೆ ವಿಧಿಸಿದ ಕ್ರಮ ಸರಿಯಾಗಿಯೇ ಇದೆ ಎಂದು ಹೇಳಿಕೊಂಡರೆ  ಕೈಗೊಳ್ಳಬೇಕಿರುವ ಕಾನೂನು ಕ್ರಮಗಳ ಬಗ್ಗೆಯೂ ಭಾರತ ಆಲೋಚಿಸಬೇಕು.

‘ಜಾಧವ್‌ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯವು ಪಾಕಿಸ್ತಾನಕ್ಕೆ ಸೂಚಿಸುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ತನ್ನಿಂದ ಅನುಷ್ಠಾನಕ್ಕೆ ತರಲು ಸಾಧ್ಯವಾಗದ ಆದೇಶಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯ ನೀಡುವುದಿಲ್ಲ’ ಎಂದು ರಾಜತಾಂತ್ರಿಕ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಈ ಮಾತು ಅಂತರರಾಷ್ಟ್ರೀಯ ನ್ಯಾಯಾಲಯದ ಮಿತಿಯನ್ನು ಸ್ಪಷ್ಟಪಡಿಸುತ್ತದೆ. ಇದರ ಜೊತೆಯಲ್ಲೇ ಪಾಕಿಸ್ತಾನದ ಬಗ್ಗೆಯೂ ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆ ದುರ್ಬಲವಾಗಿ ಇರುವ ಪಾಕಿಸ್ತಾನದಲ್ಲಿನ ವಿವಿಧ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಹಲವು ಸಂದರ್ಭಗಳಲ್ಲಿ ಪ್ರಶ್ನೆಗಳನ್ನು ಎತ್ತಿದೆ ಎನ್ನುವುದನ್ನು ಮರೆಯುವಂತೆ ಇಲ್ಲ.

ಅಂತರರಾಷ್ಟ್ರೀಯ ನ್ಯಾಯಾಲಯದ ಸೂಚನೆಯನ್ನು ಪಾಕಿಸ್ತಾನ ಉಲ್ಲಂಘಿಸುವ ಸಾಧ್ಯತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ಣಯವನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪಾಲಿಸಬೇಕಿರುವುದು ಒಪ್ಪಿತ ನಿಯಮ. ನಿರ್ಣಯದ ಉಲ್ಲಂಘನೆ ಆದಲ್ಲಿ, ಅದನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಗಮನಕ್ಕೆ ತರಬಹುದು. ನಿರ್ಣಯದ ಪಾಲನೆ ಆಗುವಂತೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವ ಅಧಿಕಾರ ಭದ್ರತಾ ಸಮಿತಿಗೆ ಇದೆ.

ಈ ಪ್ರಕರಣದಲ್ಲಿ ಪಾಕಿಸ್ತಾನವು ‘ಜಾಧವ್ ಅವರಿಗೆ ವಿಧಿಸಿರುವ ಮರಣದಂಡನೆಯನ್ನು ಪುನರ್ ಪರಿಶೀಲಿಸುವುದಿಲ್ಲ’ ಎಂದು ಹೇಳುವ ಸಾಧ್ಯತೆ ಕಡಿಮೆ. ಆದರೆ, ಪುನರ್‌ ಪರಿಶೀಲನೆಗೆ ಒಳಪಡಿಸಿದ ಮಾತ್ರಕ್ಕೆ ಜಾಧವ್ ಅವರ ಬಿಡುಗಡೆ ಆಗಿಬಿಡುವುದಿಲ್ಲ. ಅವರು ಪುನಃ ಭಾರತಕ್ಕೆ ಮರಳಬೇಕು ಎಂದಾದರೆ, ಅವರಿಗೆ ಪಾಕಿಸ್ತಾನದ ನ್ಯಾಯಾಲಯದಲ್ಲಿ ತಮ್ಮ ಪರ ವಾದ ಮಂಡಿಸಲು ಅತ್ಯುತ್ತಮ ವಕೀಲರ ನೆರವು ಬೇಕಾಗುತ್ತದೆ. ಈಗ ಜಾಧವ್ ಅವರಿಗೆ ರಾಜತಾಂತ್ರಿಕ ನೆರವನ್ನು ಒದಗಿಸಲು ಸಿಕ್ಕಿರುವ ಅವಕಾಶ ಬಳಸಿ, ಅವರಿಗೆ ವಕೀಲರ ನೆರವನ್ನೂ ಒದಗಿಸುವ ಕೆಲಸ ಆಗಬೇಕು.

Post Comments (+)