ಶನಿವಾರ, ಜುಲೈ 24, 2021
25 °C

ಕೆರೆಗಳ ಒತ್ತುವರಿ ತೆರವಿಗೆ ಅಲಕ್ಷ್ಯ – ಹೈಕೋರ್ಟ್‌ನಿಂದ ಖಡಕ್‌ ಆದೇಶ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೆರೆಗಳ ಅತಿಕ್ರಮಣವನ್ನು ತೆರವುಗೊಳಿಸಿ ಎಂದು ಸರ್ಕಾರಕ್ಕೆ ಕರ್ನಾಟಕದ ಹೈಕೋರ್ಟ್ ಮತ್ತೊಮ್ಮೆ ನಿರ್ದೇಶನ ನೀಡಿದೆ. ಜಲಮೂಲಗಳ ರಕ್ಷಣೆಗೆ ಸಂಬಂಧಿಸಿದಂತೆ ಈ ನ್ಯಾಯಾಲಯ ಮತ್ತೆ ಮತ್ತೆ ಆದೇಶಗಳನ್ನು, ನಿರ್ದೇಶನಗಳನ್ನು ನೀಡುತ್ತಲೇ ಬಂದಿದೆ. ಕಳೆದ ವರ್ಷ ಅದು ರಾಜ್ಯದ ಎಲ್ಲ ಕೆರೆಗಳ ಸ್ಥಿತಿಗತಿಯ ವಿವರವಾದ ಸಮೀಕ್ಷೆಯನ್ನು ನಡೆಸುವಂತೆ ಹೇಳಿತ್ತು. ರಾಜ್ಯದ ಇತರ ಜಲಾಶಯಗಳ ಸ್ಥಿತಿ ಹಾಗಿರಲಿ, ಬೆಂಗಳೂರಿನದೇ ಜಲತಾಣಗಳ ಅರ್ಧದಷ್ಟನ್ನೂ ಸಮೀಕ್ಷೆ ಮಾಡಿಲ್ಲವೇಕೆ ಎಂದು ಕೇಳಿತ್ತು. ಕಳೆದ ಆರು ತಿಂಗಳಲ್ಲಿ ಇದೇ ವಿಷಯ ಕುರಿತು ನ್ಯಾಯಾಂಗ ಮೂರು ಬಾರಿ ಚಾಟಿ ಎತ್ತಬೇಕಾಗಿ ಬಂದಿದೆ ಎಂದರೆ ಕೆರೆಗಳನ್ನು ಸುಸ್ಥಿತಿಗೆ ತರುವುದಕ್ಕೆ ಮುಂಚೆ ಆಡಳಿತಯಂತ್ರದ ದುಃಸ್ಥಿತಿಯನ್ನು ರಿಪೇರಿ ಮಾಡಬೇಕಾದ ಅಗತ್ಯ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ. ರಾಜ್ಯದ ಬಹುತೇಕ ಎಲ್ಲ ಕೆರೆ-ಜಲಾಶಯಗಳೂ ದೀರ್ಘಕಾಲದ ನಿರ್ಲಕ್ಷ್ಯದಿಂದಾಗಿ ಅವನತಿಯತ್ತ ಸಾಗುತ್ತಿವೆ. ಜನವಸತಿಯಿಂದ ದೂರವಿರುವ ಕೆರೆಗಳೇನೊ ನೈಸರ್ಗಿಕ ಕಾರಣಗಳಿಂದಾಗಿ ಹೂಳು ತುಂಬಿಯೊ, ಜಲಕಳೆಗಳ ದಾಳಿಗೆ ತುತ್ತಾಗಿಯೊ ಆಟದ ಮೈದಾನಗಳಂತಾದರೆ ನಗರಗಳ ಮಧ್ಯೆ ಇರುವ ಕೆರೆಗಳಿಗೆ ಮನುಷ್ಯರಿಂದಾಗಿಯೇ ಇನ್ನೂ ಹತ್ತಾರು ಕಂಟಕಗಳು ವಕ್ಕರಿಸಿರುತ್ತವೆ. ಕಟ್ಟಡಗಳ ಭಗ್ನಾವಶೇಷಗಳ ಸುರಿಗುಂಡಿಗಳಾಗಿ, ಚರಂಡಿ ನೀರಿನ ರೊಚ್ಚೆದ್ರವ್ಯಗಳ ಮಡುಗಳಾಗಿ, ಕ್ರೀಡಾಂಗಣಗಳಾಗಿ, ಬಸ್‌ ನಿಲ್ದಾಣಗಳಾಗಿ ಇಲ್ಲವೆ ಒತ್ತುವರಿಯ ಮೂಲಕ ಸರ್ಕಾರದ ಮತ್ತು ಖಾಸಗಿಯವರ ಕಟ್ಟಡಗಳ ಆಡುಂಬೊಲವಾಗಿ ಕೂತಿವೆ. ಅಳಿದುಳಿದ ಕೆರೆಗಳನ್ನಾದರೂ ರಕ್ಷಿಸಿಕೊಳ್ಳಬೇಕೆಂದರೆ ಆದ್ಯತೆಯ ಮೇರೆಗೆ ಒತ್ತುವರಿಯನ್ನು ತೆರವುಗೊಳಿಸಿ, ಬಫರ್‌ ಝೋನ್‌ಗಳನ್ನು ಅಂದರೆ ರಕ್ಷಾಪಟ್ಟಿಯನ್ನು ಹೊಸದಾಗಿ ರೂಪಿಸಬೇಕಾಗುತ್ತದೆ. ಖಾಸಗಿ ಅತಿಕ್ರಮಗಳನ್ನು ತೆರವುಗೊಳಿಸು
ವಲ್ಲಿ ಕಾನೂನಿನ ಜಂಜಾಟಗಳು, ಅನುಕೂಲಸ್ಥರ ಒತ್ತಡಗಳು ಅಡ್ಡ ಬರುತ್ತಿರುತ್ತವೆ. ಕೆಲವು ಕೆರೆಗಳ ಸುತ್ತ ಸರ್ಕಾರವೇ ಕೊಳೆಗೇರಿ ನಿವಾಸಿಗಳಿಗೆ ವಸತಿ ಕಲ್ಪಿಸಿದ್ದರಿಂದ ಅವರಿಗೆ ಬದಲಿ ನಿವೇಶನಗಳನ್ನು ನೀಡದ ವಿನಾ ಖಾಲಿ ಮಾಡಿಸಲಾಗದು. ಇವೆಲ್ಲ ನಿಧಾನ ನಡೆಗಳ ನಡುವೆ ‘ಸರ್ಕಾರಿ ನಿರ್ಮಿತಿ
ಗಳನ್ನಾದರೂ ಮೊದಲು ತ್ವರಿತವಾಗಿ ತೆರವುಗೊಳಿಸಿ’ ಎಂದು ಹೈಕೋರ್ಟ್‌ ಈ ಹಿಂದೆಯೇ ಹೇಳಿತ್ತು. ಅದಕ್ಕೂ ಸರ್ಕಾರ ಮೀನ–ಮೇಷ ಎಣಿಸುತ್ತಿದೆ ಎಂದರೆ ಏನನ್ನೋಣ? ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಕಳೆದ ವರ್ಷ ಜನವರಿ ತಿಂಗಳಲ್ಲಿ, ಕೇರಳದ ಕೊಚ್ಚಿಯ ಸಮೀಪ ನೀರಿನ ತಡಿಯಲ್ಲಿ ನಿರ್ಮಿಸಿದ್ದ ಬಹುಅಂತಸ್ತಿನ ಐದು ಐಷಾರಾಮಿ ಕಟ್ಟಡಗಳನ್ನು ಸ್ಫೋಟಿಸಿ ಬೀಳಿಸಿದಾಗ ನಮ್ಮ ಕಾನೂನುಗಳ ಶಕ್ತಿ ರಾಷ್ಟ್ರದ ಗಮನಕ್ಕೆ ಬಂದಿತ್ತು. ಜಲತಾಣಗಳ ವಿಷಯದಲ್ಲಿ ಅಂಥ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅನಿವಾರ್ಯ ಬರುತ್ತಿದೆ ಎಂಬುದನ್ನು ಅದು ಸಾರಿ ಹೇಳುವಂತಿತ್ತು. ಕರ್ನಾಟಕ ಸರ್ಕಾರ ಕೂಡ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟು ತಾನೇ ಕಟ್ಟಿಸಿದ ಅನಧಿಕೃತ ಕಟ್ಟಡಗಳನ್ನು ತಾನೇ ಮುಂದಾಗಿ ಕೆಡವಿ ಕೆರೆಯಂಚುಗಳನ್ನು ತೆರವು ಮಾಡಬೇಕಿತ್ತು. ಖಾಸಗಿ ಒತ್ತುವರಿದಾರರಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಬೇಕಿತ್ತು. ಕೆರೆಗಳ ಉಳಿವಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ದಕ್ಷ ಸರ್ಕಾರಿ ಅಧಿಕಾರಿಗಳಿಗೂ ಬೆಂಬಲ ಸಿಕ್ಕಂತಾಗುತ್ತಿತ್ತು. ಎಂದೋ ಆಗಬೇಕಿದ್ದ ಈ ಕಾರ್ಯಾಚರಣೆಗೆಂದು ಜನರು ಪದೇ ಪದೇ ನ್ಯಾಯಾಂಗದ ಮೆಟ್ಟಿಲನ್ನು ಏರಬೇಕಾಗುತ್ತಿರಲಿಲ್ಲ. ಆಸಕ್ತ ಅಧಿಕಾರಿಗಳು ನ್ಯಾಯಾಂಗದ ನಿರ್ದೇಶನಕ್ಕಾಗಿ ಎದುರು ನೋಡಬೇಕಾಗಿರಲಿಲ್ಲ.

ನಾಡಿನ ಜಲಮೂಲಗಳ ಬಗ್ಗೆ ಜನರಲ್ಲಿ ಅಪಾರ ಕಳಕಳಿ ಇದೆ. ವಿಜ್ಞಾನಿಗಳು, ಪರಿಸರಾಸಕ್ತ ಜನಸಾಮಾನ್ಯರು, ನಿವೃತ್ತ ಸರ್ಕಾರಿ ಅಧಿಕಾರಿಗಳು, ಕೆರೆಗಳ ನೆರೆಯಲ್ಲಿರುವ ಜಲಪ್ರೇಮಿಗಳು ನಮ್ಮ ಕೆರೆಗಳ ದುಃಸ್ಥಿತಿಯನ್ನು ಕುರಿತು ಆಗಾಗ ಸರ್ಕಾರವನ್ನು ಹಾಗೂ ಮಹಾನಗರಪಾಲಿಕೆಯನ್ನು ಎಚ್ಚರಿಸುತ್ತಲೇ ಇದ್ದುದು, ಪದೇಪದೇ ನ್ಯಾಯಾಲಯಗಳ ಬಾಗಿಲು ತಟ್ಟುತ್ತಿರುವುದು, ತಾವೇ ಮುಂದಾಗಿ ಕೆರೆಗಳ ಜೀರ್ಣೋದ್ಧಾರಕ್ಕೆ ಟೊಂಕ ಕಟ್ಟುತ್ತಿರುವುದು ಇವೆಲ್ಲ ನಮಗೆ ಗೊತ್ತೇ ಇದೆ. ಜನಸಮುದಾಯಕ್ಕಿರುವ ಈ ಕಾಳಜಿಯನ್ನು ನ್ಯಾಯಾಂಗವೂ ಮತ್ತೆ ಮತ್ತೆ ಎತ್ತಿ ತೋರಿಸುತ್ತಿದೆ. ಬೆಂಗಳೂರಿನ ಕೆರೆಗಳ ಸ್ಥಿತಿಗತಿಯ ಸಮೀಕ್ಷೆಗೆ ರಾಷ್ಟ್ರೀಯ ಪರಿಸರ ತಾಂತ್ರಿಕ ಸಂಶೋಧನಾ ಸಂಸ್ಥೆ (ನೀರಿ) ಪರಿಣತರನ್ನೂ ಅದು ಕರೆಸಿತ್ತು. ಹಿಂದಿನ ‘ಕೆರೆ ಅಭಿವೃದ್ಧಿ ಪ್ರಾಧಿಕಾರ’ವಾಗಲೀ ಅದರ ಹೊಸ ರೂಪವೆನಿಸಿದ ‘ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ವಾಗಲೀ ಅಭಿವೃದ್ಧಿಯ ದಾಂಗುಡಿಯಿಂದ ಕೆರೆಗಳನ್ನು ಬಚಾವು ಮಾಡಲಾರದೆಂದು ಒಂದು ತಿಂಗಳ ಹಿಂದಷ್ಟೇ ಅದು ಕೆರೆ-ಜಲಾಶಯಗಳ ರಕ್ಷಣೆಗೆಂದು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ಆದೇಶ ನೀಡಿತ್ತು. ಸರ್ಕಾರೇತರ ಪ್ರತಿನಿಧಿಗಳೂ ಅದರಲ್ಲಿರಬೇಕೆಂದು ಹೇಳಿತ್ತು. ಜಲಮೂಲ ರಕ್ಷಣೆಯ ಹೊಣೆ ಹೊತ್ತ ನಾನಾ ಸರ್ಕಾರಿ ಇಲಾಖೆಗಳ ಕಾರ್ಯವೈಖರಿಯ ಮೇಲ್ವಿಚಾರಣೆ ಮಾಡುವಷ್ಟು ಈ ಸಮಿತಿ ಪ್ರಬಲವಾಗಿರಬೇಕೆಂದು ಕೂಡ ಈಗ ಹೇಳಿದೆ. ಸರ್ಕಾರದ ಸ್ಪಂದನ ಸಾಲುತ್ತಿಲ್ಲವೆಂದು ‘ಈಗಿರುವ ಭೂಕಂದಾಯ ಕಾಯ್ದೆಯನ್ನು ಬಿಗಿಯಾಗಿ ಅನುಷ್ಠಾನಕ್ಕೆ ತಂದು ಕೆರೆಯಂಚುಗಳನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಿ’ ಎಂತಲೂ ಹೇಳಿದೆ. ತನ್ನದೇ ಆಜ್ಞೆಗಳೆಲ್ಲ ನೀರಲ್ಲಿ ಹೋಮ ಮಾಡಿದಂತಾಗುತ್ತಿರುವಾಗ ಇನ್ನೆಷ್ಟು ಬಾರಿ, ಇನ್ನೆಷ್ಟು ಬಲವಾಗಿ ನ್ಯಾಯಾಂಗ ಹೀಗೆ ಚಾಟಿ ಬೀಸುತ್ತಿರಬೇಕೊ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು