ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕಚ್ಚಾ ತೈಲ ದರ ಇಳಿಕೆಯ ಲಾಭ ಜನರಿಗೆ ದೊರೆಯಲಿ

ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನವನ್ನು ತನ್ನ ವರಮಾನ ಹೆಚ್ಚಳಕ್ಕೆ ಸರ್ಕಾರ ಬಳಸಿಕೊಂಡು, ಬಳಕೆದಾರರ ಹಿತ ಕಡೆಗಣಿಸಿರುವುದು ಸಮರ್ಥನೀಯವಲ್ಲ
Last Updated 19 ಮಾರ್ಚ್ 2020, 3:47 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಆದರೆ, ಕುಸಿತದ ಪ್ರಯೋಜನವು ಗ್ರಾಹಕರಿಗೆ ವರ್ಗಾವಣೆ ಆಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ.ತೈಲ ದರ 20 ವರ್ಷಗಳ ಹಿಂದಿನ ಕನಿಷ್ಠ ಮಟ್ಟವಾದ ಪ್ರತಿ ಬ್ಯಾರಲ್‌ಗೆ 30 ಡಾಲರ್‌ ಆಸುಪಾಸಿಗೆ ಇಳಿದಿದೆ. ಇದರಿಂದ ಇಂಧನಗಳ ಮಾರಾಟ ದರವು ನಮ್ಮಲ್ಲಿ ಪ್ರತಿ ಲೀಟರ್‌ಗೆ ₹ 10ರಿಂದ ₹ 12ರವರೆಗೆ ಕಡಿಮೆ ಆಗಬೇಕಾಗಿತ್ತು. ಆದರೆ, ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಸರ್ಕಾರ ಮನಸ್ಸು ಮಾಡಿಲ್ಲ. ತನ್ನ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಪ್ರತಿ ಲೀಟರ್‌ಗೆ ₹ 3ರಂತೆ ಎಕ್ಸೈಸ್‌ ಸುಂಕ ಹೆಚ್ಚಿಸಿದೆ.ಸರ್ಕಾರದ ಹಣಕಾಸು ಪರಿಸ್ಥಿತಿ ಉತ್ತಮವಾಗಿ ಇಲ್ಲದಿರುವುದೇ ಇದಕ್ಕೆ ಕಾರಣ.

ಇದರಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹ 39 ಸಾವಿರ ಕೋಟಿ ವರಮಾನ ಸಿಗಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಭಾರಿ ಇಳಿಕೆಯಾಗಿರುವುದರಿಂದ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿಮೆ ಆಗಲಿದೆ ಎಂದು ಜನ ನಿರೀಕ್ಷಿಸಿದ್ದರು. ಆದರೆ, ಆ ನಿರೀಕ್ಷೆಯು ಸದ್ಯದ ಮಟ್ಟಿಗಂತೂ ಹುಸಿಯಾಗಿದೆ. 2014ರಿಂದ 2016ರ ವರೆಗಿನ ಅವಧಿಯಲ್ಲಿ ಸರ್ಕಾರ 9 ಬಾರಿ ಎಕ್ಸೈಸ್‌ ಸುಂಕ ಹೆಚ್ಚಿಸಿ, ದರ ಇಳಿಕೆಗೆ ಇದ್ದ ಅವಕಾಶಗಳನ್ನು ತಪ್ಪಿಸಿತ್ತು. ಈಗಲೂ ಅದೇ ಹಾದಿಯಲ್ಲಿ ಸಾಗುವ ಸೂಚನೆ ದೊರೆತಿರುವುದು ದುರದೃಷ್ಟಕರ. ಕಚ್ಚಾ ತೈಲ ದರ ಕುಸಿತದ ಪ್ರಯೋಜನವು ನ್ಯಾಯೋಚಿತವಾಗಿ ಬಳಕೆದಾರರಿಗೆ ವರ್ಗಾವಣೆ ಆಗಬೇಕು.

ಡೀಸೆಲ್‌ ಮತ್ತು ಪೆಟ್ರೋಲ್‌ ದರವನ್ನು ಸರ್ಕಾರವು ಕೆಲವು ವರ್ಷಗಳ ಹಿಂದೆ ನಿಯಂತ್ರಣಮುಕ್ತಗೊಳಿಸಿದಾಗ, ಮಾರು
ಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಾದರೆ ಅದರ ಪ್ರಯೋಜನವು ಗ್ರಾಹಕರಿಗೆ ವರ್ಗಾವಣೆ ಆಗಲಿದೆ ಎಂದು ಭರವಸೆ ನೀಡಿತ್ತು. ಆದರೆ, ಆ ಭರವಸೆ ಮತ್ತೆ ಮತ್ತೆ ಹುಸಿಯಾಗುತ್ತಿದೆ. ಜನರ ದೈನಂದಿನ ಖರ್ಚು ಮತ್ತು ಹೊರೆಗಿಂತ ಸರ್ಕಾರಕ್ಕೆ ತನ್ನ ಹಣಕಾಸು ಲೆಕ್ಕಪತ್ರಗಳೇ ಮುಖ್ಯವಾಗಿರುವುದು ಅದರ ನಡೆಯಿಂದಲೇ ಗೊತ್ತಾಗುತ್ತದೆ.

ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟದಲ್ಲಿಯೇ ಇರುವುದರಿಂದ ಹಣದುಬ್ಬರವು ಇಳಿಕೆಯಾಗುವ ಸಾಧ್ಯತೆ ದೂರವಾಗಿದೆ. ಹಾಗಾಗಿ, ಮುಂಬರುವ ದಿನಗಳಲ್ಲೂ ಬಳಕೆದಾರರ ಬವಣೆ ಹೆಚ್ಚುವ ಸಂಭವವೇ ಅಧಿಕ. ದರ ಇಳಿಕೆಯ ಹಕ್ಕೊತ್ತಾಯವು ಬಳಕೆದಾರರ ಮತ್ತು ಒಟ್ಟಾರೆ ಆರ್ಥಿಕತೆಯ ಹಿತದೃಷ್ಟಿಯಿಂದ ಯುಕ್ತವಾಗಿದೆ. ಜನರ ಕಿಸೆಯಿಂದ ಹಣ ಕಸಿಯುವ ಪ್ರವೃತ್ತಿಯನ್ನು ಸರ್ಕಾರವು ಸದ್ಯದ ಕೊರೊನಾ–2 ಬಿಕ್ಕಟ್ಟಿನ ಸಂದರ್ಭದಲ್ಲಾದರೂ ಕೈಬಿಟ್ಟು, ಔದಾರ್ಯ ತೋರಬೇಕಿತ್ತು. ಕಚ್ಚಾ ತೈಲದ ದರ 20 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿರುವಾಗಲೂ ದೇಶದಲ್ಲಿ ಪೆಟ್ರೋಲ್‌ ದರ ₹ 70ರ ಆಸುಪಾಸಿನಲ್ಲಿ ಇರುವುದು ಒಪ್ಪತಕ್ಕದ್ದಲ್ಲ. ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸದಿರಲು ಸಮರ್ಥನೀಯ ಕಾರಣಗಳು ಇಲ್ಲ.ಕೊರೊನಾ–2 ವೈರಸ್‌ ಎಲ್ಲೆಡೆ ಆತಂಕ ಸೃಷ್ಟಿಸಿದೆ.

ಅದರಿಂದ ಆರ್ಥಿಕತೆಯ ಮೇಲೂ ಅಡ್ಡಪರಿಣಾಮ ಉಂಟಾಗುವ ಭೀತಿ ಆವರಿಸಿದೆ. ಇಂತಹ ಕಷ್ಟಕರಕಾಲಘಟ್ಟದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಸುವ ಮೂಲಕ, ಮಾರುಕಟ್ಟೆಗೆ ಆಗಿರುವ ಗಾಯಕ್ಕೆ ಮುಲಾಮು ಸವರುವ ಕೆಲಸ ಮಾಡಬಹುದಿತ್ತು. ವೈರಸ್‌ ಹಾವಳಿಯಿಂದಾಗಿ ದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮಂಕು ಕವಿಯತೊಡಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕು ಮತ್ತು ಸೇವೆಗಳ ಬಳಕೆ ಏರಿಕೆಯಾಗಿ ಬೇಡಿಕೆ ಹೆಚ್ಚಳಗೊಂಡರೆ ಆರ್ಥಿಕತೆಯು ಆ ಮಟ್ಟಿಗೆ ಚೇತರಿಕೆ ಕಾಣಲಿದೆ. ಚೇತರಿಕೆಗೆ ಇಂಬು ನೀಡಲು ಮತ್ತು ಜನರಿಗೆ ಹಿತಾನುಭವ ಕಲ್ಪಿಸಲು ಬಳಸಿಕೊಳ್ಳಬಹುದಾಗಿದ್ದ ಅವಕಾಶವನ್ನು ಸರ್ಕಾರ ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT