ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ತಗ್ಗಿದ ಹಣದುಬ್ಬರದ ಅಬ್ಬರ: ಆರ್‌ಬಿಐಗೆ ಈಗ ಮುಂಗಾರಿನ ಸವಾಲು

Published 13 ಜೂನ್ 2023, 19:29 IST
Last Updated 13 ಜೂನ್ 2023, 19:29 IST
ಅಕ್ಷರ ಗಾತ್ರ

ಕಡಿಮೆ ಪ್ರಮಾಣದ ಆರ್ಥಿಕ ಬೆಳವಣಿಗೆ ದರವು ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕ ವ್ಯವಸ್ಥೆಗಳ ಪಾಲಿಗೆ ಅಪೇಕ್ಷಣೀಯ ಅಲ್ಲವೇ ಅಲ್ಲ. ಕಡಿಮೆ ಪ್ರಮಾಣದ ಬೆಳವಣಿಗೆಯು ಜನರ ಆರ್ಥಿಕ ಶಕ್ತಿಯನ್ನು ಕುಂದಿಸುತ್ತದೆ. ಕಡಿಮೆ ಪ್ರಮಾಣದ ಬೆಳವಣಿಗೆಯ ರೀತಿಯಲ್ಲಿಯೇ, ಜನರ ಬದುಕನ್ನು ಅಸಹನೀಯ ಆಗಿಸುವುದು ಹಣದುಬ್ಬರದ ಸಮಸ್ಯೆ. ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ 2022ರ ಮೇ ತಿಂಗಳ ನಂತರದಲ್ಲಿ ರೆಪೊ ದರವನ್ನು ಹೆಚ್ಚಿಸುತ್ತ ಬಂದಿದೆ. ರೆಪೊ ದರವು ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಶೇಕಡ 4ರಷ್ಟು ಇದ್ದಿದ್ದು, ಈಗ ಶೇ 6.5ರ ಮಟ್ಟದಲ್ಲಿ ಇದೆ. ರೆಪೊ ದರವನ್ನು ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಕಳೆದ ಎರಡು ಸಭೆಗಳಲ್ಲಿ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. ರೆಪೊ ದರದಲ್ಲಿ ಮಾಡಿರುವ ಹೆಚ್ಚಳವು ಫಲ ನೀಡುತ್ತಿರುವ ಕಾರಣದಿಂದಾಗಿ, ಎಂಪಿಸಿ ಈ ನಿರ್ಧಾರಕ್ಕೆ ಬಂದಿರಬಹುದು. ಈ ತೀರ್ಮಾನವು ಸರಿಯಾಗಿಯೇ ಇದೆ. ಆರ್‌ಬಿಐ ನಿಗದಿ ಮಾಡಿಕೊಂಡಿರುವ ಗರಿಷ್ಠ ಮಿತಿಯನ್ನು (ಶೇ 6) ಮೀರಿ ನಿಂತಿದ್ದ ಚಿಲ್ಲರೆ ಹಣದುಬ್ಬರ ದರವು ಈಗ ಎರಡು ತಿಂಗಳುಗಳಿಂದ ಶೇ 6ಕ್ಕಿಂತ ಕಡಿಮೆ ಆಗಿದೆ. ಅಲ್ಲದೆ, ಮೇ ತಿಂಗಳಲ್ಲಿ ಶೇ 4.25ಕ್ಕೆ ಇಳಿಕೆಯಾಗಿದೆ. ದೇಶದ ಜಿಡಿಪಿ ಬೆಳವಣಿಗೆ ದರವು ಉತ್ತಮ ಮಟ್ಟದಲ್ಲಿ ಇರುವ ಸಂದರ್ಭದಲ್ಲಿ, ಹಣದುಬ್ಬರವು ಇಳಿಕೆ ಕಂಡಿರುವದಕ್ಕಿಂತ ಹೆಚ್ಚು ಸಮಾಧಾನಕರ ಸುದ್ದಿ ಆರ್‌ಬಿಐ ಪಾಲಿಗೆ ಇನ್ನೊಂದು ಇರಲಾರದು.

ದೇಶದ ಬ್ಯಾಂಕಿಂಗ್ ವಲಯದ ನಿಯಂತ್ರಕ ಆಗಿರುವ ಆರ್‌ಬಿಐ ಮೇಲಿರುವ ಮಹತ್ವದ ಹೊಣೆಗಾರಿಕೆಗಳ ಪೈಕಿ ಪ್ರಮುಖವಾದುದು ದೇಶದಲ್ಲಿ ಬೆಲೆ ಸ್ಥಿರತೆಯನ್ನು ಸಾಧಿಸುವುದು. ಆದರೆ ಒಂದು ಹಂತದಲ್ಲಿ, ಚಿಲ್ಲರೆ ಹಣದುಬ್ಬರ ಪ್ರಮಾಣವು ಕೈಮೀರಿ ಬೆಳೆದಿತ್ತು. ಆರ್‌ಬಿಐ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸೋತಿತ್ತು. ಈಗ ಸತತ ಮೂರು ತಿಂಗಳುಗಳಲ್ಲಿ (ಮಾರ್ಚ್‌, ಏಪ್ರಿಲ್‌ ಮತ್ತು ಮೇ) ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಕಡಿಮೆ ಇದೆ. ಆದರೆ ಇನ್ನು ಮುಂದೆ ಎಲ್ಲವೂ ಸರಿಹೋಗಲಿದೆ ಎಂಬ ಸ್ಥಿತಿ ಇಲ್ಲ. ಇದನ್ನು ಹಲವು ತಜ್ಞರು ಹೇಳಿದ್ದಾರೆ ಕೂಡ. ಎಲ್‌ ನಿನೊ ಪರಿಣಾಮದಿಂದಾಗಿ ಮುಂಗಾರು ಮಳೆಯು ಹದ ತಪ್ಪಿದರೆ ಕೃಷಿ ಅರ್ಥ ವ್ಯವಸ್ಥೆಯ ಚಟುವಟಿಕೆಗಳಿಗೆ ಅಡ್ಡಿ ಉಂಟಾಗುತ್ತದೆ. ಮುಂಗಾರು ಮಳೆಯು ವಾಡಿಕೆಯಂತೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದರೂ, ಮುಂಗಾರು ಮಳೆಯ ಬಗ್ಗೆ ವರದಿ ನೀಡುವ ಕೆಲವು ಖಾಸಗಿ ಸಂಸ್ಥೆಗಳು ವಾಡಿಕೆ ಮಳೆ ಆಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಮುಂಗಾರು ಕುರಿತ ಸ್ಪಷ್ಟ ಚಿತ್ರಣವೊಂದು ಇನ್ನು ಕೆಲವು ದಿನಗಳಲ್ಲಿ ಲಭ್ಯವಾಗಬಹುದು.

ಅಂತರರಾಷ್ಟ್ರೀಯ ಮಟ್ಟದಲ್ಲಿನ ಅಸ್ಥಿರತೆ ಕೂಡ ದೇಶದಲ್ಲಿ ಬೆಲೆ ಸ್ಥಿರತೆಗೆ ಸವಾಲಾಗಿ ಪರಿಣಮಿಸಬಹುದು. ಸದ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ತುಟ್ಟಿಯಾಗಿಲ್ಲ. ಆದರೆ, ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳ ಪೈಕಿ ಪ್ರಮುಖ ದೇಶವಾಗಿರುವ ಸೌದಿ ಅರೇಬಿಯಾ, ಉತ್ಪಾದನೆಯನ್ನು ಜುಲೈ ತಿಂಗಳಿಗೆ ಅನ್ವಯವಾಗುವಂತೆ ದಿನಕ್ಕೆ 10 ಲಕ್ಷ ಬ್ಯಾರೆಲ್‌ಗಳಷ್ಟು ಕಡಿಮೆ ಮಾಡುವುದಾಗಿ ಹೇಳಿದೆ. ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಹೆಚ್ಚಿಸುವುದು ಇದರ ಉದ್ದೇಶ ಎಂಬುದು ಸ್ಪಷ್ಟ. ಈ ಕ್ರಮದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಆದಲ್ಲಿ, ಅದು ಕೂಡ ದೇಶದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡಬಹುದು. ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರಣದಿಂದಾಗಿ ಕೇಂದ್ರ ಸರ್ಕಾರವು ಈಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆಗೆ ಅವಕಾಶ ನೀಡುತ್ತಿಲ್ಲ. ಇದು ಕೂಡ ಚಿಲ್ಲರೆ ಹಣದುಬ್ಬರ ನಿಯಂತ್ರಣದಲ್ಲಿ ನೆರವಿಗೆ ಬಂದಿರುತ್ತದೆ. ಆದರೆ, ಕಚ್ಚಾ ತೈಲದ ಬೆಲೆ ಏರಿಕೆ ಆದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಆಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅಮೆರಿಕ ಹಾಗೂ ಯುರೋಪಿನ ಅರ್ಥ ವ್ಯವಸ್ಥೆಗಳು ಆರ್ಥಿಕ ಹಿಂಜರಿತದ ಭೀತಿಯಿಂದ ಇನ್ನೂ ಹೊರಬಂದಿಲ್ಲ. ಜರ್ಮನಿಯು ಆರ್ಥಿಕ ಹಿಂಜರಿತಕ್ಕೆ ಈಗಾಗಲೇ ಜಾರಿದೆ. ಇದರ ಪರಿಣಾಮವು ಭಾರತದ ಮೇಲೆ ಯಾವ ಬಗೆಯಲ್ಲಿ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇವೆಲ್ಲ ಏನೇ ಇದ್ದರೂ, ದೇಶದ ಜಿಡಿಪಿ ಬೆಳವಣಿಗೆ ಆಶಾದಾಯಕ ಮಟ್ಟದಲ್ಲಿರುವುದು ಹಾಗೂ ಹಣದುಬ್ಬರ ಇಳಿಕೆಯು ವಿಶ್ವಾಸ ಹೆಚ್ಚಿಸುವಂತಹವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT