ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭಾರತದ ಅಥ್ಲೆಟಿಕ್ಸ್‌ಗೆ ಹೊಳಪುತಂದ ನೀರಜ್ ಸಾಧನೆ

Last Updated 25 ಜುಲೈ 2022, 19:30 IST
ಅಕ್ಷರ ಗಾತ್ರ

ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ನೀರಜ್ ಚೋಪ್ರಾ ಮತ್ತೊಮ್ಮೆ ಈಡೇರಿಸಿದ್ದಾರೆ. ಅಮೆರಿಕದಲ್ಲಿ ನಡೆದ ವಿಶ್ವ ಅಥ್ಲೆಟಿಕ್‌ ಕೂಟದ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ. ಈ ಕೂಟದ ಇತಿಹಾಸದಲ್ಲಿ ಭಾರತಕ್ಕೆ ಒಲಿದ ಎರಡನೇ ಮತ್ತು ಪುರುಷರ ವಿಭಾಗದ ಮೊದಲನೇ ಪದಕ. ಅಲ್ಲದೆ, ಸಾರ್ವಕಾಲಿಕ ಶ್ರೇಷ್ಠ ಸಾಧನೆಯೂ ಹೌದು. ಹತ್ತೊಂಬತ್ತು ವರ್ಷಗಳ ಹಿಂದೆ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು. ವಿಶ್ವ ಅಥ್ಲೆಟಿಕ್ ಕೂಟವೂ ಒಲಿಂಪಿಕ್ಸ್‌ನಷ್ಟೇ ಪ್ರತಿಷ್ಠಿತ ಸ್ಪರ್ಧಾಕಣ. ಜಗತ್ತಿನ ಟ್ರ್ಯಾಕ್‌ ಮತ್ತು ಫೀಲ್ಡ್‌ನ ಘಟಾನುಘಟಿ ಅಥ್ಲೀಟ್‌ಗಳು ಈ ಕಣದಲ್ಲಿರುತ್ತಾರೆ. ಈ ಕೂಟಕ್ಕಾಗಿಯೇ ಹಗಲಿರುಳು ಶ್ರಮಿಸಿ ಬಂದಿರುತ್ತಾರೆ. ಅಂತಹವರ ನಡುವೆ ಪದಕ ಗೆಲ್ಲುವುದು ಭಾರತದ ಅಥ್ಲೀಟ್‌ಗಳ ಮಟ್ಟಿಗೆ ಜೀವಮಾನದ ಕನಸೇ ಸರಿ. ಈ ಸವಾಲನ್ನು ಯಶಸ್ವಿಯಾಗಿ ಮೀರಿ ನಿಂತ ಶ್ರೇಯ ನೀರಜ್‌ ಅವರದ್ದು. ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು, ದಾಖಲೆ ನಿರ್ಮಿಸಿದ್ದರು. ಒಲಿಂಪಿಕ್ಸ್‌ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯನೆಂಬ ಹೆಗ್ಗಳಿಕೆಯಿಂದಾಗಿ ಹಣ ಮತ್ತು ಜನಪ್ರಿಯತೆ ಪ್ರವಾಹೋಪಾದಿಯಲ್ಲಿ ಹರಿದುಬಂದಿತ್ತು. ಅಲ್ಲಿಂದ ಈಚೆಗೆ ಅವರ ಬಗೆಗೆ ನಿರೀಕ್ಷೆಗಳು ಹೆಚ್ಚಾದವು. ಯಾವುದೇ ಸ್ಪರ್ಧೆಯಲ್ಲಿ ಅವರು ಕಣಕ್ಕಿಳಿದರೂ ಕ್ರೀಡಾಭಿಮಾನಿಗಳ ನಿರೀಕ್ಷೆಯ ನೋಟವು ಚಿನ್ನದ ಪದಕದತ್ತ ಇರುತ್ತಿತ್ತು. ಇಂತಹ ನಿರೀಕ್ಷೆಗಳ ಮೂಟೆಯನ್ನು ಹೆಗಲ ಮೇಲೆ ಹೊತ್ತು, ಹಣ–ಕೀರ್ತಿ ತಲೆಗೇರದಂತೆ ಎಚ್ಚರ ವಹಿಸುತ್ತ ವಿಶ್ವ ಕೂಟದಲ್ಲಿ ಪದಕಕ್ಕೆ ಕೊರಳೊಡ್ಡುವುದು ಸುಲಭವೇನಲ್ಲ. ಈ ಸಾಧನೆಯು ಅವರ ಸ್ಥಿರತೆ, ಏಕಾಗ್ರತೆ ಮತ್ತು ಬದ್ಧತೆಯ ಪ್ರತೀಕವೂ ಹೌದು. ಆದ್ದರಿಂದಲೇ ಒಲಿಂಪಿಕ್ಸ್‌ನಲ್ಲಿ ಅವರು ಪಡೆದ ಚಿನ್ನದ ಪದಕಕ್ಕೆ ಇರುವಷ್ಟೇ ತೂಕ ಈ ಬೆಳ್ಳಿಗೂ ಇದೆ. ಏಕೆಂದರೆ, ಟೋಕಿಯೊದಲ್ಲಿ ಅವರು 87.58 ಮೀಟರ್ಸ್ ದೂರ ಎಸೆತದ ಸಾಧನೆ ಮಾಡಿದ್ದರು. ವಿಶ್ವ ಕೂಟದಲ್ಲಿ ಅದಕ್ಕಿಂತಲೂ ಹೆಚ್ಚು (88.13 ಮೀಟರ್ಸ್) ದೂರ ಎಸೆದರು. ಅವರ ಪ್ರತಿಸ್ಪರ್ಧಿ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ 90.54 ಮೀಟರ್ಸ್ ಸಾಧನೆ ಮಾಡಿ ಚಿನ್ನ ಬಾಚಿಕೊಂಡರು.

ಪದಕ ಸಾಧನೆಯಾಚೆ ನೀರಜ್ ವ್ಯಕ್ತಿತ್ವವೂ ಇಲ್ಲಿ ಮುಖ್ಯ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರದ ಈ ಅವಧಿಯಲ್ಲಿ ತಮ್ಮ ಏಕಾಗ್ರತೆಯನ್ನು ಉಳಿಸಿಕೊಂಡು ಸಾಮರ್ಥ್ಯ ವೃದ್ಧಿಸಿಕೊಂಡಿರುವುದು ಯುವ ಸಮೂಹಕ್ಕೆ ದಾರಿದೀಪ. ಗೆದ್ದಾಗ ಹಿಗ್ಗದೆ, ಹಿನ್ನಡೆಯಾದಾಗ ಕುಗ್ಗದೆ ಸಾಧನೆಯತ್ತ ಮುನ್ನುಗ್ಗುವ ಅವರ ಪರಿ ಅನುಕರಣೀಯ. ಅವರ ಸಾಧನೆಯಿಂದಾಗಿ ದೇಶದ ಯುವಪ್ರತಿಭೆಗಳು ಅಥ್ಲೆಟಿಕ್ಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಈ ವಿಶ್ವ ಕೂಟವೇ ಇದಕ್ಕೊಂದು ಉತ್ತಮ ಉದಾಹರಣೆ. ಈ ಬಾರಿ ಭಾರತ ತಂಡದ್ದು ಗಮನಾರ್ಹ ಸಾಧನೆ. ಒಟ್ಟು ಏಳು ಸ್ಪರ್ಧೆಗಳಲ್ಲಿ ಭಾರತದ ಅಥ್ಲೀಟ್‌ಗಳು ಫೈನಲ್ ತಲುಪಿದ್ದರು. ಪುರುಷರ ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್, 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಬ್ಳೆ, ಮಹಿಳೆಯರ ಜಾವೆಲಿನ್ ಥ್ರೋನಲ್ಲಿ ಅನುರಾಣಿ, ಟ್ರಿಪಲ್ ಜಂಪ್‌ನಲ್ಲಿ ಎಲ್ಡೋಸಾ ಪಾಲ್, ಪುರುಷರ ಜಾವೆಲಿನ್‌ನಲ್ಲಿ ರೋಹಿತ್ ಯಾದವ್ ಹಾಗೂ ಪುರುಷರ 4X400 ಮೀಟರ್ಸ್ ರಿಲೆಯಲ್ಲಿ ಭಾರತ ಫೈನಲ್‌ನಲ್ಲಿ ಹೆಜ್ಜೆಗುರುತು ಮೂಡಿಸಿತು. ಭಾರತದ ಕ್ರೀಡಾಪಟುಗಳ ಈ ಸಾಧನೆಯು ದೇಶದ ಅಥ್ಲೆಟಿಕ್ಸ್‌ ಕ್ಷೇತ್ರದ ಬೆಳವಣಿಗೆಯ ದಿಕ್ಸೂಚಿಯೂ ಹೌದು. ಯಾವುದೇ ಕ್ರೀಡೆಯು ಜನಪ್ರಿಯವಾಗಿ ಯುವಸಮೂಹವನ್ನು ಆಕರ್ಷಿಸಬೇಕಾದರೆ ಅದರಲ್ಲಿ ತಾರೆಗಳಿರಬೇಕು ಎಂಬ ಮಾತಿದೆ. ಇದೀಗ ಭಾರತದ ಅಥ್ಲೆಟಿಕ್ಸ್‌ಗೆ ನೀರಜ್ ಚೋಪ್ರಾ ಎಂಬ ಧ್ರುವತಾರೆ ಸಿಕ್ಕಿದ್ದಾರೆ. ಈ ನಕ್ಷತ್ರದ ಬೆಳಕಲ್ಲಿ ಮತ್ತಷ್ಟು ಪ್ರತಿಭೆಗಳ ಹೊಳಪು ಹೊರಹೊಮ್ಮುವಂತಹ ವಾತಾವರಣ ಮತ್ತು ಸೌಲಭ್ಯಗಳು ನಿರ್ಮಾಣವಾಗಬೇಕು. ಗೆದ್ದಾಗಲಷ್ಟೇ ಸನ್ಮಾನ ಮಾಡಿ ಪ್ರಚಾರ ಪಡೆಯಲು ಮುನ್ನುಗ್ಗುವ ರಾಜಕಾರಣಿಗಳು, ಅಧಿಕಾರ ವರ್ಗವು, ಪ್ರತಿಭೆ ಗಳನ್ನು ಗುರುತಿಸಿ ಪೋಷಿಸುವ ಕೆಲಸಕ್ಕೆ ಮುಂದಾಗಬೇಕು. ಆಗಲೇ ನೀರಜ್ ಸಾಧನೆಯ ಮೌಲ್ಯ ನೂರ್ಮಡಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT