ಮಂಗಳವಾರ, ನವೆಂಬರ್ 19, 2019
22 °C

ಕೆಪಿಎಲ್ ಮೋಸದಾಟ: ಕಳಂಕ ತೊಳೆದು ಕ್ರಿಕೆಟ್‌ ಘನತೆ ಉಳಿಸಿ

Published:
Updated:
Prajavani

ಕರ್ನಾಟಕದ ಕ್ರಿಕೆಟ್‌ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ನೂರಾರು ಸುಂದರ ನೆನಪುಗಳು ಕಣ್ಣ ಮುಂದೆ ಹಾದುಹೋಗುತ್ತವೆ. ದೇಶದಲ್ಲಿ ಕ್ರಿಕೆಟ್‌ ಜನಪ್ರಿಯತೆಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ರಾಜ್ಯದ ಕ್ರಿಕೆಟಿಗರ ಕೊಡುಗೆಯೂ ಮಹತ್ವದ್ದು. ಆದರೆ, ಇದೀಗ ಬಯಲಾಗಿರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳು ರಾಜ್ಯದ ಘನತೆಗೆ ಕುಂದು ತಂದಿರುವುದು ನಿಜ.

ಬಳ್ಳಾರಿ ಟಸ್ಕರ್ಸ್‌ ತಂಡದ ನಾಯಕ ಸಿ.ಎಂ. ಗೌತಮ್ ಮತ್ತು ಅವರ ಸಹಆಟಗಾರ ಅಬ್ರಾರ್‌ ಖಾಜಿ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಐದು ವರ್ಷಗಳ ಹಿಂದೆ ಕರ್ನಾಟಕವು ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದಾಗ ತಂಡದಲ್ಲಿ ಗೌತಮ್ ವಿಕೆಟ್‌ ಕೀಪರ್‌ ಆಗಿದ್ದರು. ಅಂತಹ ಆಟಗಾರ ಬಂಧನಕ್ಕೆ ಒಳಗಾಗಿರುವುದು ಕ್ರಿಕೆಟ್ ವಲಯದಲ್ಲಿ ಆಘಾತ ಮೂಡಿಸಿದೆ. ಅವರು ಎರಡು ವರ್ಷಗಳ ಹಿಂದೆ ಫಾರ್ಮ್‌ ಕೊರತೆಯಿಂದಾಗಿ ರಾಜ್ಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಈ ಋತುವಿನಲ್ಲಿ ಗೋವಾ ತಂಡಕ್ಕೆ ಆಡುತ್ತಿದ್ದಾರೆ. ಅಬ್ರಾರ್ ಕೂಡ ಕರ್ನಾಟಕ ತಂಡದಲ್ಲಿ ಆಡಿದವರು.

ಸದ್ಯ ಮಿಜೋರಾಂ ತಂಡ ಪ್ರತಿನಿಧಿಸುತ್ತಿದ್ದಾರೆ. ಆಗಸ್ಟ್ 31ರಂದು ಮೈಸೂರಿನಲ್ಲಿ ನಡೆದಿದ್ದ ಕೆಪಿಎಲ್ ಫೈನಲ್‌ನಲ್ಲಿ ಗೌತಮ್ ನಾಯಕತ್ವದ ಬಳ್ಳಾರಿ ಟಸ್ಕರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್ ಎದುರು ಎಂಟು ರನ್‌ಗಳಿಂದ ಸೋತಿತ್ತು. ಅದರ ನಂತರ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕವು ನೀಡಿದ್ದ ಮಾಹಿತಿಯ ಮೇರೆಗೆ ತನಿಖೆ ಆರಂಭಿಸಿದ್ದ ಸಿಸಿಬಿ (ಕೇಂದ್ರ ಅಪರಾಧ ದಳ) ಸೆಪ್ಟೆಂಬರ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡದ ಮಾಲೀಕ ಅಲಿ ಅಶ್ಫಾಕ್ ದಾರ್‌ ಅವರನ್ನು ಬಂಧಿಸಿತ್ತು. ಹಲವು ಆಟಗಾರರನ್ನು ವಿಚಾರಣೆಗೆ ಒಳಪಡಿಸಿತ್ತು. ಕೆಎಸ್‌ಸಿಎ ಚುನಾವಣೆಗೂ ಮುನ್ನವೇ ಈ ಘಟನೆ ನಡೆದಿತ್ತು. ಅಕ್ಟೋಬರ್ 5ರಂದು ರೋಜರ್‌ ಬಿನ್ನಿ ಅಧ್ಯಕ್ಷತೆಯ ಬಳಗವು ಅಧಿಕಾರ ವಹಿಸಿಕೊಂಡಿತು. ಪೊಲೀಸರು ಇತ್ತೀಚೆಗೆ ಬೆಂಗಳೂರು ಬ್ಲಾಸ್ಟರ್ಸ್ ಆಟಗಾರ ಎಂ. ವಿಶ್ವನಾಥನ್ ಮತ್ತು ಕೋಚ್ ವಿನೂಪ್ರಸಾದ್ ಅವರನ್ನು ಬಂಧಿಸಿದ್ದರು. ಆದರೆ, ಈಗ ಇಬ್ಬರು ಪ್ರಮುಖ ಆಟಗಾರರ ಬಂಧನದಿಂದಾಗಿ, ಮೋಸದಾಟದಲ್ಲಿ ಫ್ರ್ಯಾಂಚೈಸ್‌ ಒಳಗಿನವರು, ಕೆಎಸ್‌ಸಿಎ ಒಳಗಿನವರು ಮತ್ತು ಹೊರಗಿನ ಕೆಲವು ಶಕ್ತಿಗಳ ಕೈವಾಡ ಇರಬಹುದೆಂಬ ಶಂಕೆಯೂ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ದೇಶಿ ಕ್ರಿಕೆಟ್‌ ಮತ್ತು ಪ್ರೊ ಲೀಗ್‌ಗಳಲ್ಲಿ ಆಡುವ ಆಟಗಾರರಿಗೆ ಉತ್ತಮ ಆದಾಯ ಇರುತ್ತದೆ. ಆದರೂ ಇಂತಹ ಆಮಿಷಗಳಿಗೆ ಒಳಗಾಗುತ್ತಿರುವುದು ಏಕೆ, ಇದಕ್ಕೆ ಹಣವೊಂದೇ ಕಾರಣವೆ, ಇಲ್ಲದಿದ್ದರೆ ಇನ್ನೇನಾದರೂ ಒತ್ತಡಗಳು ಇರಬಹುದೇ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ. ಇದರ ಹಿಂದೆ ಇರುವ ನಿಜವಾದ ಸೂತ್ರಧಾರರನ್ನು ಪತ್ತೆಹಚ್ಚಬೇಕಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿಯೊಬ್ಬರನ್ನು ಎತ್ತಂಗಡಿ ಮಾಡಿಸುವ ಹುನ್ನಾರ ನಡೆದಿತ್ತು ಎಂಬ ಮಾತು ಕ್ರಿಕೆಟ್‌ ವಲಯದಲ್ಲಿ ಕೇಳಿಬಂದಿತ್ತು. ಇದು ನಿಜವೇ ಆಗಿದ್ದಲ್ಲಿ, ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.

ಕಳೆದ ಆಗಸ್ಟ್‌ನಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಟೂರ್ನಿಯಲ್ಲೂ ಮೋಸದಾಟ ಬೆಳಕಿಗೆ ಬಂದಿತ್ತು. ಅದಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ತಂಡವೊಂದರ ಸಹಮಾಲೀಕ ವಿ.ಬಿ. ಚಂದ್ರಶೇಖರ್ ಅವರು ಬೆಟ್ಟಿಂಗ್ ಜಾಲದ ಜೊತೆ ನಂಟು ಹೊಂದಿದ್ದರೆಂಬ ಮಾತು ಕೇಳಿಬಂದಿತ್ತು. 2013ರಲ್ಲಿ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದಿತ್ತು. ಆಗ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ ತಂಡಗಳ ಕೆಲ ಅಧಿಕಾರಿಗಳೇ ಹಗರಣದಲ್ಲಿ ಶಾಮೀಲಾಗಿದ್ದರು. ಇದರಿಂದಾಗಿ ಲೀಗ್ ಟೂರ್ನಿಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ. ಗ್ರಾಮಾಂತರ ಮತ್ತು ಯುವಪ್ರತಿಭೆಗಳಿಗೆ ಕೆಪಿಎಲ್ ಅವಕಾಶದ ವೇದಿಕೆ ಎಂದು ಬಿಂಬಿತವಾಗಿದೆ.

ಇಂತಹ ಟೂರ್ನಿಯು ಮೋಸದಾಟದ ವೇದಿಕೆಯಾಗುವುದನ್ನು ತಡೆಯುವ ಸವಾಲು ರೋಜರ್ ಬಿನ್ನಿ ಅವರ ಮುಂದಿದೆ. ಇಲ್ಲಿಯವರೇ ಆದ ಬ್ರಿಜೇಶ್ ಪಟೇಲ್ ಸದ್ಯ ಐಪಿಎಲ್ ಆಡಳಿತ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಫ್ರ್ಯಾಂಚೈಸ್‌ ಆಧಾರಿತ ಕ್ರಿಕೆಟ್‌ ಲೀಗ್‌ಗಳಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.

ಪ್ರತಿಕ್ರಿಯಿಸಿ (+)