ಬುಧವಾರ, ನವೆಂಬರ್ 25, 2020
21 °C

ಸಂಪಾದಕೀಯ | ಹಂಪಿ ಪರಿಸರದಲ್ಲಿ ಗಣಿಗಾರಿಕೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ವಿಶ್ವಪ್ರಸಿದ್ಧ ಹಂಪಿಯ ಪರಿಸರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯು ಸ್ಥಳೀಯ ಆಡಳಿತದ ವೈಫಲ್ಯ ಹಾಗೂ ಇತಿಹಾಸದ ಬಗೆಗಿನ ನಿರ್ಲಕ್ಷ್ಯದ ಫಲ. ಸ್ಮಾರಕಗಳು ಹಾಗೂ ಜೀವವೈವಿಧ್ಯದ ರಕ್ಷಣೆಗಾಗಿ ಗಣಿಗಾರಿಕೆಯನ್ನು ತಕ್ಷಣದಿಂದಲೇ ನಿಲ್ಲಿಸಲು ಸರ್ಕಾರ ಮುಂದಾಗಬೇಕಿದೆ. ಹಂಪಿಗೆ ಹೊಂದಿಕೊಂಡಂತೆ ಇರುವ ಕಾಳಘಟ್ಟ ಹಾಗೂ ಧರ್ಮದಗುಡ್ಡ ಸಮೀಪದ ಬೆಟ್ಟಗುಡ್ಡಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು, ಆ ಪರಿಸರದಲ್ಲಿರುವ ವಿಜಯನಗರ ಸಾಮ್ರಾಜ್ಯದ ಪಳೆಯುಳಿಕೆ, ಸ್ಮಾರಕಗಳಿಗೆ ಕಂಟಕಪ್ರಾಯವಾಗಿದೆ. ಹಂಪಿಯ ಸುತ್ತಮುತ್ತಲಿನ ಗುಡ್ಡಗಾಡು ಪರಿಸರದಲ್ಲಿ ಚಿರತೆ, ಕರಡಿ, ನವಿಲು ಸೇರಿದಂತೆ ವಿವಿಧ ಜಾತಿಯ ಪ್ರಾಣಿ–ಪಕ್ಷಿಗಳು ನೆಲೆಸಿದ್ದು, ಅವುಗಳ ಆವಾಸಸ್ಥಾನಕ್ಕೂ ಗಣಿಗಾರಿಕೆ ಅಪಾಯವನ್ನೊಡ್ಡಿದೆ. ಹಂಪಿ, ಕರ್ನಾಟಕದ ಹೆಮ್ಮೆ ಮಾತ್ರವಲ್ಲ, ಭಾರತೀಯ ಕಲಾ ಪರಂಪರೆ ಮತ್ತು ಸಂಸ್ಕೃತಿಯ ಅಪೂರ್ವ ನಿಧಿಯೂ ಹೌದು. ಈ ಕಲಾಸಂಪತ್ತನ್ನು ಸಂರಕ್ಷಿಸಿ ಉಳಿಸಿಕೊಳ್ಳುವ ಹೊಣೆಗಾರಿಕೆಯಲ್ಲಿ ಯಾವುದೇ ಲೋಪ ಸಲ್ಲದು. ಸ್ಮಾರಕಗಳನ್ನು ವಿರೂಪಗೊಳಿಸುವ ಕ್ರಿಯೆ, ಸಂಸ್ಕೃತಿಯ ಮೇಲೆ ನಡೆಯುವ ಹಲ್ಲೆಯೂ ಹೌದು. ಹಂಪಿಯಲ್ಲಿನ ಸ್ಮಾರಕಗಳನ್ನು ರಾಷ್ಟ್ರೀಯ ಸ್ಮಾರಕಗಳೆಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಘೋಷಿಸಿದೆ. ಯುನೆಸ್ಕೊದ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿಯೂ ಹಂಪಿ ಸ್ಥಾನ ಪಡೆದಿದೆ. ಹಾಗಾಗಿಯೇ ಹಂಪಿಯಲ್ಲಿನ ಸ್ಮಾರಕಗಳಿಗೆ ಧಕ್ಕೆಯಾದರೆ ಅದು ವಿಶ್ವದ ಗಮನಸೆಳೆಯುತ್ತದೆ. ಆ ಸ್ಮಾರಕಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತಿರಲು, ಹಂಪಿಯ ಸುತ್ತಮುತ್ತಲಿನ ಪ್ರದೇಶವನ್ನು ‘ಕೋರ್‌ ಜೋನ್‌’ ಎಂದು ಗುರುತಿಸಲಾಗಿದೆ. ಪುರಾತನ ಕಾಲದ ಗುಹೆಗಳು, ಶಾಸನಗಳು, ಸ್ಮಾರಕಗಳು ಆ ಪರಿಸರ ದಲ್ಲಿವೆ. ಈ ಸಂರಕ್ಷಿತ ಪ್ರದೇಶದಲ್ಲಿ ಗಣಿಗಾರಿಕೆ, ನಿರ್ಮಾಣ ಚಟುವಟಿಕೆ ಅಥವಾ ಕಾಮಗಾರಿಗಳಿಗೆ ಅವಕಾಶವಿಲ್ಲ. ಹೀಗಿದ್ದರೂ ‘ಕೋರ್‌ ಜೋನ್‌’ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು, ಅದರ ಬಗ್ಗೆ ಸ್ಥಳೀಯ ಆಡಳಿತವು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿರುವುದು ಆಶ್ಚರ್ಯಕರ. ಈ ಗಣಿಗಾರಿಕೆಯು ‘ಯುನೆಸ್ಕೊ ಮಾರ್ಗಸೂಚಿ’ಯ ಸ್ಪಷ್ಟ ಉಲ್ಲಂಘನೆ.

ಮಳೆ–ಪ್ರವಾಹದಂತಹ ಪ್ರಾಕೃತಿಕ ಏರುಪೇರುಗಳಿಂದಲೂ ಹಂಪಿಯ ಸ್ಮಾರಕಗಳು ಅಪಾಯ ಎದುರಿಸುತ್ತಿವೆ. ಇದರ ಜೊತೆಗೆ ನಿಧಿಗಳ್ಳರ ಕಾಟವೂ ಸೇರಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಸ್ಮಾರಕಗಳನ್ನು ರಕ್ಷಿಸಲು ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ ಎಂದು ಪ್ರವಾಸೋದ್ಯಮ ಸಚಿವರು ಇತ್ತೀಚೆಗೆ ಹೇಳಿದ್ದರು. ಈಗ ನೋಡಿದರೆ, ಪಾರಂಪರಿಕ ಸ್ಮಾರಕಗಳನ್ನು ಹೊಸತಾಗಿ ಗುರುತಿಸಿ ಉಳಿಸುವುದಿರಲಿ, ಇರುವ ಸ್ಮಾರಕಗಳನ್ನು ರಕ್ಷಿಸಿಕೊಳ್ಳುವುದೇ ಸರ್ಕಾರಕ್ಕೆ ಪ್ರಯಾಸವಾದಂತಿದೆ. ಹಂಪಿಯ ಪರಿಸರದಲ್ಲಿ ಗಣಿಗಾರಿಕೆ ನಡೆಯುವ ಬಗ್ಗೆ ಪದೇ ಪದೇ ವರದಿಗಳು ಪ್ರಕಟ ವಾಗುತ್ತಿವೆ. ಆನೆಗೊಂದಿ, ಅಂಜನಾದ್ರಿ ಪರ್ವತ ಮತ್ತು ಪಂಪಾ ಸರೋವರದ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಎರಡು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಮಲ್ಲಾಪುರ ಗ್ರಾಮದ ಪರಿಸರದಲ್ಲಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಕಲ್ಲು ಕಂಬಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ಕಳೆದ ತಿಂಗಳು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈಗ ಕಾಳಘಟ್ಟ, ಧರ್ಮದಗುಡ್ಡದ ಪರಿಸರದಲ್ಲಿ ಗಣಿಗಾರಿಕೆ ನಡೆಯುತ್ತಿರುವುದಾಗಿ ವರದಿ ಪ್ರಕಟಗೊಂಡಿದೆ. ಗಣಿಗಾರಿಕೆ ಸ್ಥಳದಲ್ಲಿ ನಡೆಯುವ ದೊಡ್ಡ ಸ್ಫೋಟಗಳಲ್ಲಿ ಸಿಡಿಯುವ ಕಲ್ಲಿನ ಚೂರುಗಳು ಹೊಲಗಳಿಗೂ ಬಂದು ಬೀಳುತ್ತಿವೆ ಎಂದು ರೈತರು ದೂರಿದ್ದಾರೆ. ಹಂಪಿಯ ಸ್ಮಾರಕ ಗಳನ್ನು ರಕ್ಷಿಸಲು ‘ಹಂಪಿ ಪ್ರಾಧಿಕಾರ’ ಅಸ್ತಿತ್ವದಲ್ಲಿದೆ. ಗುಡ್ಡಗಾಡು ಪ್ರದೇಶಗಳ ರಕ್ಷಣೆಗೆ ಅರಣ್ಯ ಇಲಾಖೆಯಿದೆ. ಆದರೆ, ಇಲಾಖೆಗಳ ನಡುವಣ ಸಮನ್ವಯದ ಕೊರತೆಯಿಂದಾಗಿ ಕಾನೂನುಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಹಂಪಿಯ ಸ್ಮಾರಕಗಳು ಹಾಗೂ ಜೀವವೈವಿಧ್ಯಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಆಸ್ಪದ ಕಲ್ಪಿಸುವ ಅದಕ್ಷ ಹಾಗೂ ಲಜ್ಜೆಗೇಡಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಸ್ಮಾರಕಗಳ ಚಾರಿತ್ರಿಕ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆಯಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು