ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನೋಟು ರದ್ದತಿಯ ನೆನಪು- ಏಕಪಕ್ಷೀಯ ತೀರ್ಮಾನದ ಮಿತಿ

Last Updated 15 ನವೆಂಬರ್ 2021, 21:30 IST
ಅಕ್ಷರ ಗಾತ್ರ

ದೇಶದಲ್ಲಿ ₹1,000 ಹಾಗೂ ₹500 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ತೀರ್ಮಾನಕ್ಕೆ ಐದು ವರ್ಷಗಳು ಸಂದಿವೆ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರವನ್ನು ರಾತ್ರಿ ಎಂಟು ಗಂಟೆಯ ಸುಮಾರಿಗೆ ಪ್ರಕಟಿಸಿದ್ದರು. ಆದರೆ, ಮೋದಿ ಅವರ ಮಹತ್ವಾಕಾಂಕ್ಷೆಯ ಈ ತೀರ್ಮಾನವು ದೇಶದ ಅರ್ಥ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಒಳಿತು ಮಾಡಿದೆ ಎನ್ನಲು ಇದುವರೆಗೂ ಆಧಾರಗಳು ಸಿಕ್ಕಿಲ್ಲ. ಅದರ ಬದಲಾಗಿ, ಈ ಮಹತ್ವದ ನಿರ್ಧಾರವು ಅರ್ಥ ವ್ಯವಸ್ಥೆಗೆ ಕೆಡುಕು ಉಂಟುಮಾಡಿದೆ ಎಂದು ಹೇಳಲು ಬಹಳಷ್ಟು ಆಧಾರಗಳು ಇವೆ. ಅರ್ಥ ವ್ಯವಸ್ಥೆಯನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ರಾಮಬಾಣ ನೋಟು ರದ್ದತಿ ಎಂದು ಆ ಸಂದರ್ಭದಲ್ಲಿ ಆಳುವ ವರ್ಗವು ಪ್ರತಿಪಾದಿಸಿತ್ತು. ಆದರೆ, ವಾಸ್ತವದಲ್ಲಿ ಅದು ವಿಷದ ಬಾಣವಾಗಿ ಪರಿಣಮಿಸಿದೆ. ಐದು ವರ್ಷಗಳ ಹಿಂದಿನ ತೀರ್ಮಾನದ ಕೆಟ್ಟ ಪರಿಣಾಮಗಳು ಇಂದಿಗೂ ಅನುಭವಕ್ಕೆ ಬರುತ್ತಿವೆ. ನೋಟು ರದ್ದತಿಯ ತೀರ್ಮಾನ ಕೈಗೊಂಡ ಹಿಂದಿನ ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 8ರಷ್ಟು ಇತ್ತು. ಅದು ಈ ತೀರ್ಮಾನದ ನಂತರದಲ್ಲಿ ಕುಸಿತ ಕಂಡಿತು. ನಂತರದಲ್ಲಿ, ಆ ಮಟ್ಟಕ್ಕೆ ತಲುಪಿಲ್ಲ. ಈಗ ಒಂದೂವರೆ ವರ್ಷದಲ್ಲಿ ಅರ್ಥ ವ್ಯವಸ್ಥೆಯ ಕುಸಿತಕ್ಕೆಕೋವಿಡ್‌ ಕೂಡ ಕಾರಣವಾಗಿದೆ ಎಂಬುದು ನಿಜ. ಆದರೆ, ಅರ್ಥ ವ್ಯವಸ್ಥೆಯ ಕುಸಿತಕ್ಕೆ ನೋಟು ರದ್ದತಿ ಕೂಡ ಕಾರಣವಾಗಿದ್ದನ್ನು ಅಲ್ಲಗಳೆಯಲಾಗದು. ನೋಟು ರದ್ದತಿ ತೀರ್ಮಾನವು ಅರ್ಥ ವ್ಯವಸ್ಥೆಯಲ್ಲಿ ಬಹುದೊಡ್ಡ ಪಾಲು ಹೊಂದಿದ್ದ ಅಸಂಘಟಿತ ವಲಯ ಬಹುಪಾಲು ಕುಸಿದುಬೀಳಲು ಕಾರಣವಾಯಿತು. ನಗದು ಕೊರತೆಯ ಕಾರಣದಿಂದಾಗಿ, ಸಣ್ಣ ಪ್ರಮಾಣದ ಸಹಸ್ರಾರು ಉದ್ಯಮಗಳು ಕಣ್ಣು ಮುಚ್ಚಿದವು. ನಗದು ಕೊರತೆಯ‍ಪರಿಣಾಮವನ್ನು ಬಹುಕಾಲ ತಡೆದುಕೊಳ್ಳುವ ಶಕ್ತಿ ಅವುಗಳಿಗೆ ಇರಲಿಲ್ಲ. ನಗದು ಲಭ್ಯತೆಯ ಕೊರತೆ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮವಾಗಿ ಸಂಘಟಿತ ವಲಯ ಕೂಡ ಪೆಟ್ಟು ತಿನ್ನಬೇಕಾಯಿತು.

ನೋಟು ರದ್ದತಿಯು ಕಪ್ಪುಹಣವನ್ನು ವ್ಯವಸ್ಥೆಯಿಂದ ಹೊರಹಾಕುತ್ತದೆ ಎಂದು‍ಪ್ರಧಾನಿಯವರು ಹೇಳಿದ್ದರು. ನೋಟು ರದ್ದತಿಯಿಂದ ಆದ ನೋವನ್ನು ಜನ ಐವತ್ತು ದಿನಗಳವರೆಗೆ ಸಹಿಸಿಕೊಳ್ಳಬೇಕು, ಆಗ ‘ನಿಮ್ಮ ಕನಸಿನ ಭಾರತ’ವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದೂ ಅವರು ಭಾವುಕರಾಗಿ ಹೇಳಿದ್ದರು. ಆದರೆ, ಅಂಥದ್ದೊಂದು ಭಾರತ ನಿರ್ಮಾಣ ಆಯಿತೇ? ಅಥವಾ ಅದು ಇದುವರೆಗೂ ಕನಸಾಗಿಯೇ ಉಳಿದಿದೆಯೇ? ಉತ್ತರ ಬಹುತೇಕರಿಗೆ ಗೊತ್ತಿದೆ. ಕಪ್ಪುಹಣ ಇಟ್ಟುಕೊಂಡಿದ್ದವರಿಗೆ ಅದನ್ನು ಸಕ್ರಮಗೊಳಿಸಿಕೊಳ್ಳಲು ಒಂದು ಮಾರ್ಗ ಸಿಕ್ಕಿತು ಎನ್ನುವ ಆರೋಪವು ಹಠಾತ್ ನೋಟು ರದ್ದತಿ ತೀರ್ಮಾನದ ಬಗ್ಗೆ ಇದೆ. ಚಲಾವಣೆಯಲ್ಲಿ ಇರುವ ನಗದು ಮತ್ತು ಜಿಡಿಪಿ ನಡುವಿನ ಅನುಪಾತವು 2016–17ರಲ್ಲಿ ಶೇಕಡ 8.7ರಷ್ಟು ಇತ್ತು. ಇದು 2020–21ರಲ್ಲಿ ಶೇ 15ರ ಸುಮಾರಿಗೆ ಹೆಚ್ಚಳವಾಗಿದೆ. ಅಂದರೆ, ನಗದು ಬಳಕೆ ಜಾಸ್ತಿ ಆಗಿದೆ. ನೋಟು ರದ್ದತಿಯ ಕಾರಣದಿಂದಾಗಿ ತೆರಿಗೆ ಸಂಗ್ರಹವೇನೂ ಹೆಚ್ಚಾಗಿಲ್ಲ. ತೆರಿಗೆ ಪಾವತಿಯ ಪ್ರಮಾಣದಲ್ಲಿಯೂ ಏರಿಕೆ ಆಗಿಲ್ಲ. ಕಪ್ಪುಹಣದ‍ಪ್ರಮಾಣ ಕಡಿಮೆ ಆಗಿರುವ ಬಗ್ಗೆ ಸ್ಪಷ್ಟ ಆಧಾರಗಳು ಇಲ್ಲ. ನೋಟು ರದ್ದತಿ ತೀರ್ಮಾನ ಕೈಗೊಂಡ ತುಸು ಕಾಲದ ನಂತರದಲ್ಲಿ ಸರ್ಕಾರವು ಈ ತೀರ್ಮಾನದ ಉದ್ದೇಶವು ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು, ನಗದು ರಹಿತ ವಹಿವಾಟುಗಳನ್ನು ಹೆಚ್ಚು ಮಾಡುವುದಾಗಿತ್ತು ಎಂದು ಹೇಳಿತು. 2016ರ ನಂತರದಲ್ಲಿ ದೇಶದಲ್ಲಿ ಡಿಜಿಟಲ್ ವಹಿವಾಟಿನ ಪ್ರಮಾಣವು ಹೆಚ್ಚಳ ಆಗಿರುವುದು ನಿಜ. ಆದರೆ, ಅದಕ್ಕೆ ಕಾರಣ ಕೋವಿಡ್‌–19 ಸಾಂಕ್ರಾಮಿಕ ಸೃಷ್ಟಿಸಿದ ಸಮಸ್ಯೆಗಳು, ದೇಶದಲ್ಲಿ ಮೊಬೈಲ್ ಬ್ರಾಡ್‌ಬ್ಯಾಂಡ್‌ ಸೇವೆಗಳು ವ್ಯಾಪಕವಾಗಿ ಲಭ್ಯವಾಗಿದ್ದು ಮತ್ತು ಯುಪಿಐನಂತಹ ಗ್ರಾಹಕಸ್ನೇಹಿ ವ್ಯವಸ್ಥೆಗಳು ಬಂದಿದ್ದು. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ನೋಟು ರದ್ದತಿಯಂತಹ ತೀರ್ಮಾನಗಳನ್ನು ಹಠಾತ್‌ ಎಂದು ಕೈಗೊಳ್ಳಬೇಕಿತ್ತೇ?

ನೋಟು ರದ್ದತಿಯ ತೀರ್ಮಾನವು ಹಲವು ಕಾರಣಗಳಿಂದಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ಅದನ್ನು ಜಾರಿಗೆ ತಂದ ತಪ್ಪು ಬಗೆಯು ಕೂಡ ಆ ಕಾರಣಗಳಲ್ಲಿ ಒಂದು. ಅಲ್ಪಾವಧಿಯ ಹಾಗೂ ದೀರ್ಘಾವಧಿಯಪರಿಣಾಮಗಳು ಏನಿರುತ್ತವೆ ಎಂಬ ಅಧ್ಯಯನವೇ ಇಲ್ಲದೆಈ ಒಂದು ತೀರ್ಮಾನವನ್ನು ಕೈಗೊಳ್ಳಲಾಯಿತು ಎಂಬ ಮಾತು ಇದೆ. ನೋಟು ರದ್ದತಿಯ ನಿರ್ಧಾರ ಕೈಗೊಳ್ಳುವ ಮೊದಲು ಭಾರತೀಯ ರಿಸರ್ವ್‌ ಬ್ಯಾಂಕ್ ಜೊತೆ ಚರ್ಚೆ ನಡೆದಿರಲಿಲ್ಲ. ಸರ್ಕಾರದ ತೀರ್ಮಾನವನ್ನು ಬೆಂಬಲಿಸುವಂತೆ ಆರ್‌ಬಿಐಗೆ ಹೇಳಲಾಯಿತು. ಅದನ್ನು ಪಾಲಿಸಿದ ಆರ್‌ಬಿಐ ತನ್ನ ವಿಶ್ವಾಸಾರ್ಹತೆಗೇ ಧಕ್ಕೆ ತಂದುಕೊಂಡಿತು. ನೋಟು ರದ್ದತಿಯ ತೀರ್ಮಾನವನ್ನು ಸರ್ಕಾರದಲ್ಲಿನ ಎಲ್ಲರೂ ಒಟ್ಟಾಗಿ ತೆಗೆದುಕೊಂಡಿದ್ದರು ಎನ್ನಲೂ ಸಾಧ್ಯವಿಲ್ಲ. ಇಡೀ ತೀರ್ಮಾನವನ್ನು ಒಬ್ಬ ವ್ಯಕ್ತಿ ಅಥವಾ ಇಬ್ಬರು ಕೈಗೊಂಡರು. ಈ ತೀರ್ಮಾನ ಕೈಗೊಂಡ ವ್ಯಕ್ತಿಗಳಿಗೆ ಇಂತಹ ತೀರ್ಮಾನವನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ಅನುಭವ ಅಥವಾ ಪರಿಣತಿ ಇರಲಿಲ್ಲ. ಇಡೀ ತೀರ್ಮಾನವು ಏಕಪಕ್ಷೀಯವಾಗಿತ್ತು. ಈ ತೀರ್ಮಾನದ ಪರಿಣಾಮವಾಗಿ ಬಡವರು ನೋವು ಅನುಭವಿಸಬೇಕಾಯಿತು. ಕಲ್ಪನೆಗಳಲ್ಲಿ ಮಾತ್ರ ಸುಂದರವಾಗಿ ಕಾಣಿಸುವ ಆಲೋಚನೆಯೊಂದಕ್ಕೆ ಅವರು ಬೆಲೆ ತೆರಬೇಕಾಯಿತು. ಅದರ ಸಂಕಟವನ್ನು ಅರ್ಥ ವ್ಯವಸ್ಥೆಯು ಇಂದಿಗೂ ಅನುಭವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT