ಪೆಟ್ರೋಲ್‌: ತೆರಿಗೆ ಹೊರೆ ತಗ್ಗಲಿ, ಪರ್ಯಾಯಗಳ ಬಳಕೆ ಉತ್ತೇಜಿಸಿ

7

ಪೆಟ್ರೋಲ್‌: ತೆರಿಗೆ ಹೊರೆ ತಗ್ಗಲಿ, ಪರ್ಯಾಯಗಳ ಬಳಕೆ ಉತ್ತೇಜಿಸಿ

Published:
Updated:
Deccan Herald

ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳ ನಾಗಾಲೋಟದ ಏರಿಕೆಯು ದಿಗಿಲು ಮೂಡಿಸುತ್ತಿದೆ. ಎರಡು ವಾರಗಳಿಂದೀಚೆಗಂತೂ ದರ ಮಟ್ಟ ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದೆ. ಇದರಿಂದಾಗಿ ಚಿಲ್ಲರೆ ಮತ್ತು ಸಗಟು ಹಣದುಬ್ಬರವೂ ಏರಿಕೆಯಾಗಲಿದೆ. ದಿನಬಳಕೆಯ ಅವಶ್ಯಕ ಸರಕುಗಳ ಬೆಲೆಗಳೂ ಗಗನಾಭಿಮುಖಿಯಾಗಲಿವೆ. ಜನಜೀವನ ಮತ್ತು ಆರ್ಥಿಕತೆ ಅಸ್ತವ್ಯಸ್ತಗೊಳ್ಳಲಿದೆ. ಇಂಧನ ದರ ಏರಿಕೆ ವಿರೋಧಿಸಿ ಇಂದು (ಸೋಮವಾರ) ನಡೆಯಲಿರುವ ಭಾರತ್‌ ಬಂದ್‌ನಿಂದಾಗಿಯೂ ಅರ್ಥವ್ಯವಸ್ಥೆಗೆ ನಷ್ಟದ ಹೊಡೆತ ಬೀಳಲಿದೆ. ಪ್ರತಿದಿನ ದರ ಪರಿಷ್ಕರಣೆ ಮಾಡುವ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರದ ದುಬಾರಿ ಏರಿಕೆ ಇದಾಗಿದೆ. ಡಾಲರ್‌ ಎದುರು ರೂಪಾಯಿ ಬೆಲೆಯ ನಿರಂತರ ಅಪಮೌಲ್ಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆ, ಅಮೆರಿಕವು ವಿಧಿಸಲಿರುವ ಆರ್ಥಿಕ ದಿಗ್ಬಂಧನದ ಕಾರಣಕ್ಕೆ ಇರಾನ್‌ ತೈಲ ಉತ್ಪಾದನೆ ಇಳಿಕೆ ಮುಂತಾದ ವಿದ್ಯಮಾನಗಳು ದರ ಏರಿಕೆಗೆ ತುಪ್ಪ ಸುರಿದಿವೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದು ದೇಶವಾಗಿದೆ. ದೇಶಿ ಇಂಧನ ಬಳಕೆಯ ಶೇ 80ರಷ್ಟಕ್ಕೆ ಈ ಆಮದನ್ನೇ ನೆಚ್ಚಿಕೊಳ್ಳಲಾಗಿದೆ. ತೈಲ ದರ ಏರಿಕೆ ಮತ್ತು ಆಮದು ಮೇಲಿನ ಅತಿಯಾದ ಅವಲಂಬನೆಯ ಕಾರಣಕ್ಕೆ ದೇಶದ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ 1.9ರಿಂದ ಶೇ 2.6ಕ್ಕೆ ಏರಿಕೆಯಾಗುತ್ತಿದೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಪೆಟ್ರೋಲ್‌ ಮೇಲಿನ ಎಕ್ಸೈಸ್‌ ಡ್ಯೂಟಿ ಹೊರೆ ₹ 19.48 ರಷ್ಟು (ಶೇ 105) ಇದೆ. ಡೀಸೆಲ್‌ ಹೊರೆ ಶೇ 331ರಷ್ಟಿದೆ. ಕೇಂದ್ರದ ಬೊಕ್ಕಸ ಭರ್ತಿ ಮಾಡುವ ತೆರಿಗೆ ವರಮಾನದಲ್ಲಿ ಶೇ 36ರಷ್ಟು ಪಾಲು ಪೆಟ್ರೋಲಿಯಂ ವಲಯದಿಂದಲೇ ಬರುತ್ತದೆ. ರಾಜ್ಯಗಳಲ್ಲಿನ ಮಾರಾಟ ತೆರಿಗೆ ಅಥವಾ ವ್ಯಾಟ್‌ ದರ ಶೇ 16 ರಿಂದ (ಗೋವಾ) ಶೇ 39.5ರವರೆಗೆ (ಮಹಾರಾಷ್ಟ್ರ) ಇದೆ. ರಾಜ್ಯಗಳ ತೆರಿಗೆ ವರಮಾನದಲ್ಲಿ ಇಂಧನಗಳ ಪಾಲು ಶೇ 20ರಷ್ಟು ಇದೆ. ತೈಲ ದರ ಹೆಚ್ಚುತ್ತಿದ್ದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಹೆಚ್ಚುವರಿ ವರಮಾನ ಹರಿದು ಬರುತ್ತಿದೆ. ಇದೇ ಕಾರಣಕ್ಕೆ ಸರ್ಕಾರಗಳು ತೆರಿಗೆ ಕಡಿತಕ್ಕೆ ಹಿಂದೇಟು ಹಾಕುತ್ತಿವೆ. ತೈಲೋತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲಾಗಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕ್ರಮವಾಗಿ ಎಕ್ಸೈಸ್‌ ಡ್ಯೂಟಿ ಮತ್ತು ಮಾರಾಟ ತೆರಿಗೆಯನ್ನು ತಗ್ಗಿಸುವ ಅನಿವಾರ್ಯವೇ ಎದುರಾಗಿಲ್ಲ.

ಇಂಧನಗಳ ಮೇಲಿನ ತೆರಿಗೆಗಳೇ ಈಗ ದೊಡ್ಡ ಹೊರೆಯಾಗಿ ಪರಿಣಮಿಸಿವೆ. ಕಚ್ಚಾ ತೈಲ ದರಗಳಿಗೆ ತಕ್ಕಂತೆ ಇಂಧನಗಳ ದರ ಪರಿಷ್ಕರಿಸುವ ಸುಧಾರಣಾ ನೀತಿಯನ್ನು ನಾವೀಗ ಅಳವಡಿಸಿಕೊಂಡಿದ್ದೇವೆ. 2012ರಲ್ಲಿ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ ಆಸುಪಾಸಿನಲ್ಲಿದ್ದ ಕಚ್ಚಾ ತೈಲದ ಬೆಲೆ 2015ರಲ್ಲಿ ಸರಾಸರಿ 40 ಡಾಲರ್‌ವರೆಗೆ ಕುಸಿದಿತ್ತು. ಅದರಿಂದ ಬಳಕೆದಾರರಿಗೇನೂ ಪ್ರಯೋಜನ ಆಗಿರಲಿಲ್ಲ. ಆಗ ವಿಧಿಸಿದ್ದ ಗರಿಷ್ಠ ಪ್ರಮಾಣದ ತೆರಿಗೆ ದರ ಈಗಲೂ ಮುಂದುವರೆದಿರುವುದೇ ಬಿಕ್ಕಟ್ಟಿನ ಮೂಲ. ಇದಕ್ಕೆ ಬಳಕೆದಾರರು ಭಾರಿ ಬೆಲೆ ತೆರುತ್ತಿದ್ದಾರೆ. ಯಾವುದೇ ಮಾನದಂಡದಿಂದ ನೋಡಿದರೂ ಈ ಪ್ರಮಾಣದ ತೆರಿಗೆ ಹೊರೆಯು ಸಮರ್ಥನೀಯವಲ್ಲ. ಹಾಗೆಯೇ ತೈಲೋತ್ಪನ್ನಗಳ ಮೇಲಿನ ಅವಲಂಬನೆ ತಗ್ಗಿಸಲು ಪರ್ಯಾಯ ಇಂಧನಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡಬೇಕಾಗಿದೆ. ವಿದ್ಯುತ್‌ಚಾಲಿತ ಮತ್ತು ಹೈಬ್ರಿಡ್‌ ಕಾರ್‌ಗಳ ತಯಾರಿಕೆ, ಬಳಕೆಗೆ ವ್ಯಾಪಕ ಉತ್ತೇಜನಾ ಕ್ರಮಗಳನ್ನೂ ಆದ್ಯತೆ ಮೇರೆಗೆ ಕೈಗೊಳ್ಳಬೇಕಾಗಿದೆ. ತೆರಿಗೆ ಕಡಿತ ಮಾಡಿದರೆ ವಿತ್ತೀಯ ಕೊರತೆ ಹೆಚ್ಚಲಿದೆ ಎನ್ನುವ ಸರ್ಕಾರದ ವಾದವು ಮನವರಿಕೆ ಆಗುವಂಥದ್ದಲ್ಲ. ಬಾಹ್ಯ ವಿದ್ಯಮಾನಗಳ ನೆಪ ಹೇಳಿ ಸರ್ಕಾರಗಳು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಳಕೆದಾರರ ಬವಣೆ ದೂರ ಮಾಡಲು ಮತ್ತು ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರವು ತೆರಿಗೆ ಕಡಿತದ ಬಗ್ಗೆ ತಕ್ಷಣಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ರಾಜ್ಯ ಸರ್ಕಾರಗಳೂ ಇದನ್ನು ಅನುಸರಿಸಬೇಕು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !