ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆನ್‌ಲೈನ್‌ ಮಾಧ್ಯಮ ನಿಯಂತ್ರಣ ವಿಸ್ತೃತ ಚರ್ಚೆ ಆಗಬೇಕಿದೆ

Last Updated 12 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಶ್ನಾತೀತವೂ ಅಲ್ಲ, ಎಣೆಯಿಲ್ಲದ್ದೂ ಅಲ್ಲ. ಸಕಾರಣಗಳ ನಿರ್ಬಂಧವು ಈ ಸ್ವಾತಂತ್ರ್ಯಕ್ಕೆ ಇದೆ. ಭಾರತದ ನೆಲದಿಂದ ಕಾರ್ಯನಿರ್ವಹಿಸುವ ಯಾವುದೇ ಮಾಧ್ಯಮ– ಮುದ್ರಣ, ಎಲೆಕ್ಟ್ರಾನಿಕ್‌ ಅಥವಾ ಡಿಜಿಟಲ್‌– ಸಕಾರಣಗಳ ನಿರ್ಬಂಧಗಳನ್ನು ಒಪ್ಪಿಯೇ ಕಾರ್ಯನಿರ್ವಹಿಸಬೇಕು. ಮುದ್ರಣ ಮಾಧ್ಯಮದ ಮೂಲಕ ಜನ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವಾಗ, ಈ ನಿರ್ಬಂಧಗಳ ಎಲ್ಲೆಗಳನ್ನು ಮೀರಿದರೆ, ಅದನ್ನು ನಿಯಂತ್ರಿಸುವುದು ಪ್ರಭುತ್ವಕ್ಕೆ ಕಷ್ಟವಲ್ಲ. ಕಾನೂನಿಗೆ ಅನುಗುಣವಾಗಿ ನೋಂದಣಿ ಆಗುವ ಮುದ್ರಣ ಮಾಧ್ಯಮ ಸಂಸ್ಥೆಗಳು ಎಲ್ಲಿಂದ ಕಾರ್ಯ ನಿರ್ವಹಿಸುತ್ತವೆ, ಅವುಗಳ ಸಾಂಸ್ಥಿಕ ರಚನೆ ಏನಿದೆ ಎಂಬ ವಿವರಗಳು ಸರ್ಕಾರದ ಕೈಯಲ್ಲಿರುತ್ತವೆ. ಆ ವಿವರ ಬಳಸಿ, ಕಾನೂನಿನ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬಹುದು. ಇದೇ ಮಾತನ್ನು, ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ ಅನ್ವಯಿಸಬಹುದು. ಹೊಸ ಕಾಲದ ಆನ್‌ಲೈನ್‌ ಮಾಧ್ಯಮಕ್ಕೆ ಬಹುದೊಡ್ಡ ಜನಸಮೂಹವನ್ನು ತಲುಪುವ ಶಕ್ತಿ ಇದೆ. ಆದರೆ, ಈ ಮಾಧ್ಯಮದ ನಿಯಂತ್ರಣಕ್ಕೆ ದೇಶದಲ್ಲಿ ಪ್ರತ್ಯೇಕ ಕಾನೂನು ಇಲ್ಲ. ಅನಿಯಂತ್ರಿತವಾದ ಯಾವುದೇ ಸಾಧನದ ದುರ್ಬಳಕೆಗೆ ಅವಕಾಶ ಇರುತ್ತದೆ. ಹಾಗಾಗಿ, ಅದನ್ನು ನಿಯಂತ್ರಣಕ್ಕೆ ಒಳಪಡಿಸಬೇಕು, ಅದು ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು ಎಂಬ ವಾದ ಇದೆ. ಸುದರ್ಶನ್ ನ್ಯೂಸ್ ಹೆಸರಿನ ಟಿ.ವಿ. ವಾಹಿನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ, ‘ಡಿಜಿಟಲ್ ಮಾಧ್ಯಮವನ್ನು ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯವಿದೆ’ ಎಂಬ ಪ್ರಮಾಣಪತ್ರ ಸಲ್ಲಿಸಿತ್ತು. ಭಾರತದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ದ್ವೇಷ ಹರಡಲು ಯತ್ನಿಸಿದ ನಿದರ್ಶನಗಳಿವೆ, ವ್ಯಕ್ತಿಯ ಘನತೆಗೆ ಕುಂದು ತರುವ ರೀತಿಯಲ್ಲಿ ಬರಹ ಪ್ರಕಟಿಸಿದ ನಿದರ್ಶನಗಳೂ ಇವೆ.

ಆದರೆ, ಆನ್‌ಲೈನ್‌ ಮಾಧ್ಯಮದ ಮೂಲಕ ಅತ್ಯಂತ ವೃತ್ತಿಪರವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ತಂಡಗಳೂ ಇವೆ. ದೇಶದ ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿರುವ ಗುಂಪುಗಳೂ ಆನ್‌ಲೈನ್‌ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿವೆ. ದೇಶದ ಮುದ್ರಣ ಮಾಧ್ಯಮದ ನಡವಳಿಕೆಗಳ ಮೇಲೆ ನಿಗಾ ಇರಿಸಲು ಭಾರತೀಯ ಪತ್ರಿಕಾ ಮಂಡಳಿ ಎಂಬ ಶಾಸನಬದ್ಧ ಸಂಸ್ಥೆ ಇದೆ. ಎಲೆಕ್ಟ್ರಾನಿಕ್ ಮಾಧ್ಯಮದ ವಿಚಾರವಾಗಿ ಇಂತಹ ಶಾಸನಬದ್ಧ ಸಂಸ್ಥೆ ಇಲ್ಲ. ಪತ್ರಿಕಾ ಮಂಡಳಿಯ ವ್ಯಾಪ್ತಿಯನ್ನು ಹಿಗ್ಗಿಸಿ, ಸುದ್ದಿ ಪ್ರಸಾರ ಮಾಡುವ ಎಲೆಕ್ಟ್ರಾನಿಕ್ ಮಾಧ್ಯಮವನ್ನೂ ಮಂಡಳಿಯ ವ್ಯಾಪ್ತಿಗೆ ತರಬೇಕು ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆಂದೇ ಪ್ರತ್ಯೇಕ ಶಾಸನಬದ್ಧ ಸಂಸ್ಥೆಯೊಂದನ್ನು ಹುಟ್ಟುಹಾಕಬೇಕು ಎಂಬ ಆಗ್ರಹ ಇದೆ. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ವಾಸ್ತವ ಹೀಗಿರುವಾಗ, ಸಾಮಾಜಿಕ ಜಾಲತಾಣಗಳು, ಜನಪ್ರಿಯವಾಗುತ್ತಿರುವ ಒಟಿಟಿ ವೇದಿಕೆಗಳೂ ಸೇರಿದಂತೆ ಎಲ್ಲ ಬಗೆಯ ಆನ್‌ಲೈನ್‌ ಮಾಧ್ಯಮಗಳ ಮೇಲೆ ನಿಯಂತ್ರಣ ವಿಧಿಸಲು ಸಾಧ್ಯವಾಗುವ ಕ್ರಮವೊಂದನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಆನ್‌ಲೈನ್‌ ವೇದಿಕೆಗಳಿಗೆ ಸಂಬಂಧಿಸಿದ ನಿಯಂತ್ರಣ ಯಾವ ಬಗೆಯಲ್ಲಿ ಇರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದಕ್ಕೆ ಸಂಬಂಧಿಸಿದ ನಿಯಮ ರೂಪಿಸುವಾಗ ಸರ್ಕಾರ ಎಚ್ಚರಿಕೆಯಿಂದ ಇರುವುದು ಅಗತ್ಯ. ಅಂತೆಯೇ, ಅದು ದಮನಕಾರಿ ಉದ್ದೇಶಗಳಿಗೆ ಬಳಕೆಯಾಗಬಾರದು. ಒಟಿಟಿ ವೇದಿಕೆಗಳಲ್ಲಿ ಮುಕ್ತ ಅಭಿವ್ಯಕ್ತಿಗೆ ಈಗ ಹೆಚ್ಚಿನ ಅವಕಾಶ ಇದೆ. ಕಾಫಿರ್, ಲೈಲಾದಂತಹ ವೆಬ್ ಸರಣಿಗಳು ಸಾಮಾಜಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಿರುವ, ಆಡಳಿತ ಪಕ್ಷಕ್ಕೆ ಹತ್ತಿರವಾಗಿರುವ ಕೆಲವು ಸಂಘಟನೆಗಳಿಗೆ ಅಪಥ್ಯವಾಗಿದ್ದವು ಎಂಬ ವರದಿಗಳಿವೆ. ಕೆಲವು ಪತ್ರಕರ್ತರು ಆನ್‌ಲೈನ್‌ ವೇದಿಕೆಗಳ ಮೂಲಕವೇ ತನಿಖಾ ವರದಿಗಳನ್ನು ಪ್ರಕಟಿಸಿದ್ದೂ ಇದೆ ಎಂಬುದು ಇಲ್ಲಿ ಗಮನಾರ್ಹ. ಈಗ ಇಂತಹ ಮಾಧ್ಯಮಗಳನ್ನು ನಿಯಂತ್ರಿಸಲು ಮುಂದಾಗಿರುವ ಕೇಂದ್ರವು ಅದನ್ನು ಯಾವ ರೀತಿಯಲ್ಲಿ ಜಾರಿಗೆ ತರುತ್ತದೆ ಎಂಬುದು ಕುತೂಹಲಕರ. ಡಿಜಿಟಲ್ ಮಾಧ್ಯಮಕ್ಕೆ ದೇಶದ ಗಡಿಗಳ ಹಂಗಿಲ್ಲ. ವಿದೇಶಗಳಿಂದ ಕೂಡ ಕಾರ್ಯ ನಿರ್ವಹಿಸುವ ಈ ಮಾಧ್ಯಮವು ಭಾರತದ ಕಾನೂನು ಪಾಲಿಸುವಂತೆ ಮಾಡುವುದು ಸುಲಭವಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವ ಕೋಟ್ಯಂತರ ಜನರ ಮೇಲೆ ಕಣ್ಣಿಡುವುದು ಕಷ್ಟಸಾಧ್ಯ ಕೆಲಸ. ಆನ್‌ಲೈನ್‌ ಮಾಧ್ಯಮವು ಹೊಸ ಕಾಲದ ಮಾಧ್ಯಮ. ಅದನ್ನು ಯುವ ಪೀಳಿಗೆ ಹೆಚ್ಚೆಚ್ಚು ಬಳಸುತ್ತಿದೆ. ಈ ಮಾಧ್ಯಮ ವ್ಯಾಪ್ತಿ ವಿಸ್ತರಿಸುತ್ತಲೇ ಇದೆ. ಹೀಗಾಗಿ,ಈಗ ತರಲು ಉದ್ದೇಶಿಸಿರುವ ನಿಯಂತ್ರಣ ಕ್ರಮಗಳ ಬಗ್ಗೆ ಸಂಸತ್ತು ಸೇರಿದಂತೆ ಸಾರ್ವಜನಿಕವಾಗಿ ವಿಸ್ತೃತ ಚರ್ಚೆಗಳು ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT