ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಭಯೋತ್ಪಾದಕರ ಪಟ್ಟಿ ಪಾಕ್‌ ನಡೆ ಕಳವಳಕಾರಿ

Last Updated 25 ಏಪ್ರಿಲ್ 2020, 2:56 IST
ಅಕ್ಷರ ಗಾತ್ರ

ಪಾಕಿಸ್ತಾನವು ‘ನಿರ್ಬಂಧಿತ ವ್ಯಕ್ತಿಗಳ ಪಟ್ಟಿ’ಯಿಂದ ಅಂದಾಜು 3,800 ಜನರ ಹೆಸರನ್ನು ಕಳೆದ 18 ತಿಂಗಳುಗಳ ಅವಧಿಯಲ್ಲಿ ಕೈಬಿಟ್ಟಿದೆ. ಇದರಲ್ಲಿ 1,800 ಜನರ ಹೆಸರನ್ನು ಈ ಮಾರ್ಚ್‌ ನಂತರ ಕೈಬಿಡಲಾಗಿದೆ. ಇದು ಭಾರತ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಕಳವಳ ಮೂಡಿಸುವ ವಿಚಾರ. ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇರುವ ತನ್ನ ದೀರ್ಘಕಾಲದ ತಂತ್ರಕ್ಕೆ ಪಾಕಿಸ್ತಾನ ಮೊರೆಹೋದಂತೆ ಅನಿಸುತ್ತಿದೆ. ಪಾಕಿಸ್ತಾನದ ಭಯೋತ್ಪಾದಕರ ಈ ಪಟ್ಟಿಯಲ್ಲಿ 2018ರ ಅಕ್ಟೋಬರ್‌ನಲ್ಲಿ 7,600 ಹೆಸರುಗಳು ಇದ್ದವು. 18 ತಿಂಗಳುಗಳ ಅವಧಿಯಲ್ಲಿ ಈ ಸಂಖ್ಯೆಯಲ್ಲಿ ಅರ್ಧದಷ್ಟು ಕಡಿಮೆ ಆಗಿದೆ ಎಂದು ವರದಿಯಾಗಿದೆ. ಪಟ್ಟಿಯಿಂದ ಹೆಸರುಗಳನ್ನು ತೆಗೆದಿರುವ ಮಾತ್ರಕ್ಕೇ ಅದನ್ನು ವಿರೋಧಿಸಬೇಕಾಗಿಲ್ಲ.

ಹೆಸರುಗಳನ್ನು ತೆಗೆದಿರುವುದಕ್ಕೆ ಸಕಾರಣಗಳು ಇದ್ದಿರಬಹುದು. ಕೆಲವರು ಭಯೋತ್ಪಾದಕ ಚಟುವಟಿಕೆಗಳಿಂದ ಹಿಂದೆ ಸರಿದಿದ್ದಿರಬಹುದು. ಕೆಲವರ ಹೆಸರುಗಳು ಆ ಪಟ್ಟಿಗೆ ತಪ್ಪಾಗಿ ಸೇರಿಹೋಗಿದ್ದ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗದು. ಹಾಗಾಗಿ, ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ‘ನಿರ್ಬಂಧಿತ ವ್ಯಕ್ತಿಗಳ ಪಟ್ಟಿ’ಯಿಂದ ಕೆಲವು ಹೆಸರುಗಳನ್ನು ತೆಗೆದಿದ್ದರೆ, ಅದನ್ನು ಆಕ್ಷೇಪಿಸಲು ಸಾಧ್ಯವಿಲ್ಲ. ಆದರೆ, ಪಾಕಿಸ್ತಾನದಲ್ಲಿ ಈಗ ಆಗಿರುವುದು ಈ ರೀತಿಯ ಪ್ರಕ್ರಿಯೆಯಂತೆ ಭಾಸವಾಗುತ್ತಿಲ್ಲ. ಪಟ್ಟಿಯಲ್ಲಿದ್ದ ಹೆಸರುಗಳನ್ನು ತೆಗೆಯುವ ಕೆಲಸವನ್ನುಪಾಕಿಸ್ತಾನವು ಗೋಪ್ಯವಾಗಿ ಮಾಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಹೀಗೆ ಮಾಡಿದ್ದು ಏಕೆ ಎಂಬುದನ್ನು ಅಥವಾ ಈ ರೀತಿಯಲ್ಲಿ ಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂಬುದನ್ನು ಪಾಕಿಸ್ತಾನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಬಂಧಪಟ್ಟ ಸಂಸ್ಥೆಗಳಿಗೆ ತಿಳಿಸಲಿಲ್ಲ. ಹೆಸರುಗಳನ್ನು ತೆಗೆಯುವ ಪ್ರಕ್ರಿಯೆಯ ಸುತ್ತ ಆವರಿಸಿರುವ ಗೋಪ‍್ಯತೆಯೇ ಪಾಕಿಸ್ತಾನದ ಉದ್ದೇಶದ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಪಾಕಿಸ್ತಾನವು ಎಳ್ಳಷ್ಟೂ ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಭಯೋತ್ಪಾದಕರ ಸಂಘಟನೆಗಳನ್ನು ಬೆಂಬಲಿಸುವುದು, ತನ್ನ ವಿದೇಶಾಂಗ ನೀತಿಗಳಲ್ಲಿನ ಗುರಿಗಳನ್ನು ಈಡೇರಿಸಿಕೊಳ್ಳಲು ಅಂತಹ ಸಂಘಟನೆಗಳನ್ನು ಬಳಸಿಕೊಳ್ಳುವುದು ಆ ದೇಶವು ಹಿಂದಿನಿಂದಲೂ ಮಾಡುತ್ತ ಬಂದಿರುವ ಕೆಲಸ.

ಅಂತರರಾಷ್ಟ್ರೀಯ ಸಂಸ್ಥೆಗಳು, ಬೇರೆ ಬೇರೆ ದೇಶಗಳು ಒತ್ತಡ ಹೇರಿದ್ದರೂ ಭಯೋತ್ಪಾದಕರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಜರುಗಿಸಿದ ನಿದರ್ಶನಗಳು ತೀರಾ ಕಡಿಮೆ. ಭಯೋತ್ಪಾದಕರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲಿ ಎಂಬ ಇರಾದೆ ಪಾಕಿಸ್ತಾನದ ಸ‌ರ್ಕಾರಕ್ಕೇ ಇದೆ. ಈಗ ಪಟ್ಟಿಯನ್ನು ಪರಿಷ್ಕರಿಸಿರುವ ಬಗೆಯು ಆ ಇರಾದೆಗೆ ತಕ್ಕುದಾಗಿ ಇದೆ. 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ಸೂತ್ರಧಾರರಲ್ಲಿ ಒಬ್ಬನಾದ ಝಕಿ–ಉರ್ ರೆಹಮಾನ್‌ನ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಇದು ಭಾರತದ ಮಟ್ಟಿಗೆ ತೀವ್ರ ಕಳವಳಕ್ಕೆ ಕಾರಣವಾಗುವ ವಿಚಾರ.

ಈತನಿಗೆ ಹಾಗೂ ಈ ದಾಳಿಯ ಹಿಂದೆ ಇರುವ ಇತರರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಭಾರತವು ಪಾಕಿಸ್ತಾನವನ್ನು ಒತ್ತಾಯಿಸುತ್ತಲೇ ಇದೆ. ಆದರೆ, ಪಾಕಿಸ್ತಾನವು ಇದಕ್ಕೆ ಕಿವಿಗೊಟ್ಟಿಲ್ಲ. ಈಗ ಈತನ ಹೆಸರನ್ನು ಪಟ್ಟಿಯಿಂದ ತೆಗೆಯುವ ಮೂಲಕ, ಭಾರತ ವಿರೋಧಿ ಭಯೋತ್ಪಾದನೆಗೆ ತನ್ನ ಕುಮ್ಮಕ್ಕು ಸದಾ ಇರಲಿದೆ ಎನ್ನುವಂತೆ ಪಾಕಿಸ್ತಾನ ಮತ್ತೊಮ್ಮೆ ನಡೆದುಕೊಂಡಂತೆ ಆಗಿದೆ. ಭಯೋತ್ಪಾದಕರಿಗೆ ಹಣಕಾಸು ನೆರವು ಸಿಗುತ್ತಿರುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಕಾರ್ಯಪಡೆಯು (ಎಫ್‌ಎಟಿಎಫ್‌) ಪಾಕಿಸ್ತಾನವನ್ನು ಬೂದುಪಟ್ಟಿಯಲ್ಲಿ ಇರಿಸಿದೆ. ಕಾರ್ಯಪಡೆ ವಿಧಿಸಿದ 27 ಷರತ್ತುಗಳ ಪೈಕಿ 14ರಲ್ಲಿ ಮಾತ್ರ ಪಾಕಿಸ್ತಾನ ಪೂರ್ಣ ಪ್ರಮಾಣದ ಬದ್ಧತೆ ತೋರಿಸಿದೆ. ಭಯೋತ್ಪಾದಕರ ವಿಚಾರದಲ್ಲಿ ಕೈಗೊಳ್ಳುವ ಕ್ರಮಗಳನ್ನು ಮುಚ್ಚಿಟ್ಟ ವಿಚಾರವಾಗಿಯೂ ಎಫ್‌ಎಟಿಎಫ್‌ ಪರಿಶೀಲನೆ ನಡೆಸಬೇಕು. ಭಯೋತ್ಪಾದಕರನ್ನು ಪೋಷಿಸುವ ಕೆಲಸ ಕೈಬಿಡದಿದ್ದರೆ, ಆ ರಾಷ್ಟ್ರಕ್ಕೆ ಅಂತರರಾಷ್ಟ್ರೀಯ ಸಮುದಾಯದಿಂದ ಸಿಗುತ್ತಿರುವ ಹಣಕಾಸಿನ ನೆರವನ್ನು ಸ್ಥಗಿತಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT