ಶುಕ್ರವಾರ, ಡಿಸೆಂಬರ್ 2, 2022
19 °C

ಸಂಪಾದಕೀಯ: ಮಲಿನಗೊಂಡಿರುವ ಜಾತಿವಾದಿ ಮನಸ್ಸುಗಳನ್ನು ತೊಳೆಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ನೀರು ಕುಡಿದರೆನ್ನುವ ಕಾರಣಕ್ಕಾಗಿ, ಕಿರು ನೀರು ಸರಬರಾಜು ಟ್ಯಾಂಕ್‌ ಅನ್ನು ಶುದ್ಧೀಕರಿಸಿರುವ ಅಮಾನವೀಯ ಪ್ರಸಂಗವು ಚಾಮರಾಜನಗರ ಜಿಲ್ಲೆಯ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿನ ನೆಪದಲ್ಲಿ ಆಚರಿಸಲಾಗಿರುವ ಈ ಅಸ್ಪೃಶ್ಯತೆಯು ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತೀಯತೆಗೆ ಹೊಸತೊಂದು ಉದಾಹರಣೆ. ಮದುವೆಗೆ ಬಂದಿದ್ದ ಮಹಿಳೆಯೊಬ್ಬರು, ಮಧ್ಯಾಹ್ನದ ಊಟ ಮುಗಿಸಿ ತೆರಳುವಾಗ ಲಿಂಗಾಯತರ ಬೀದಿಯಲ್ಲಿರುವ ಟ್ಯಾಂಕ್‌ನ ನಲ್ಲಿಯಿಂದ ನೀರು ಕುಡಿದಿದ್ದಾರೆ. ನೀರು ಕುಡಿದವರು ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿಯುತ್ತಿದ್ದಂತೆ ಸ್ಥಳೀಯರು ನೀರು ಮೈಲಿಗೆಯಾಯಿತೆಂದು ದೂರಿ, ಮಹಿಳೆಯನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ ಹಾಗೂ ಜಾತಿನಿಂದನೆ ಮಾಡಿದ್ದಾರೆ. ಗ್ರಾಮದೇವತೆಯ ಗುಜ್ಜುಕೋಲನ್ನು ಮುಟ್ಟಿದ ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿ, ಅವನ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ ಒಡ್ಡಿದ ಪ್ರಸಂಗವೊಂದು ಎರಡು ತಿಂಗಳ ಹಿಂದಷ್ಟೇ ಕೋಲಾರ ಜಿಲ್ಲೆಯಿಂದ ವರದಿಯಾಗಿತ್ತು. ಇಂಥ ಪ್ರಕರಣಗಳು ವರದಿಯಾದಾಗ ಸರ್ಕಾರ ನಡೆಸುವ ವಿಚಾರಣೆ ತಾರ್ಕಿಕ ಅಂತ್ಯ ಮುಟ್ಟಿದ ಉದಾಹರಣೆಗಳು ಕಡಿಮೆ. ಜಾತಿ ಮತ್ತು ಅಧಿಕಾರದ ಅನೈತಿಕ ಸಮೀಕರಣದಿಂದಲೂ ಅಸ್ಪೃಶ್ಯತೆಯ ಆಚರಣೆ ನಡೆಯುತ್ತದೆ. ಹೆಗ್ಗೋಠಾರ ಗ್ರಾಮದಲ್ಲಿ ಮಹಿಳೆಯ ಜಾತಿನಿಂದನೆ ಘಟನೆ ನಡೆದ ಮರುದಿನವೇ, ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ತನ್ನ ಸಂಕಲ್ಪದ ಬಗ್ಗೆ ರಾಜ್ಯ ಸರ್ಕಾರವು ‘ಪರಿಶಿಷ್ಟ ಪಂಗಡದ ಸಮಾವೇಶ’ದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದೆ. ಆದರೆ, ಪರಿಶಿಷ್ಟರನ್ನು ಹೀನಾಯವಾಗಿ ಕಾಣುವ ಪ್ರಸಂಗಗಳು ರಾಜ್ಯದ ವಿವಿಧ ಭಾಗಗಳಿಂದ ನಿರಂತರವಾಗಿ ವರದಿಯಾಗುತ್ತಲೇ ಇವೆ. ಪರಿಶಿಷ್ಟರ ಸ್ವಾಭಿಮಾನವನ್ನು ರಕ್ಷಿಸುವ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಂವಿಧಾನದ ಧರ್ಮನಿರಪೇಕ್ಷ ಸ್ವರೂಪದ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದರೆ ಸಾಕು, ಜಾತಿ ತಾರತಮ್ಯದ ಬಹುತೇಕ ಘಟನೆಗಳಿಗೆ ಕಡಿವಾಣ ಬೀಳುತ್ತದೆ.

ಹೆಗ್ಗೋಠಾರ ಗ್ರಾಮದಲ್ಲಿನ ಅಸ್ಪೃಶ್ಯತೆ ಆಚರಣೆಯು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಘಟನೆಯ ಮಾಹಿತಿ ಕಲೆಹಾಕಿದ್ದಾರೆ. ಗ್ರಾಮದ ವಿವಿಧ ಬೀದಿಗಳಲ್ಲಿರುವ ಟ್ಯಾಂಕ್‌ಗಳ ನೀರನ್ನು ಪರಿಶಿಷ್ಟ ಜಾತಿಯವರು ಕುಡಿಯುವಂತೆ ಮಾಡಿರುವ ಅಧಿಕಾರಿಗಳು, ‘ಅಸ್ಪೃಶ್ಯತೆ ಆಚರಣೆಗೆ ಅವಕಾಶ ನೀಡುವುದಿಲ್ಲ’ ಎಂಬ ಸಂದೇಶ ರವಾನಿಸಿದ್ದಾರೆ. ಅಸ್ಪೃಶ್ಯತೆ ಆಚರಣೆ ವಿರುದ್ಧ ಅಧಿಕಾರಿಗಳ ತಕ್ಷಣದ ಪ್ರತಿಕ್ರಿಯೆ ಸ್ವಾಗತಾರ್ಹ. ಆದರೆ, ಅಧಿಕಾರಿಗಳ ಕಣ್ಗಾವಲಿನಲ್ಲಿ ಪರಿಶಿಷ್ಟ ಜಾತಿಯವರು ಸಾರ್ವಜನಿಕ ಕೊಳಾಯಿಗಳಿಂದ ನೀರು ಕುಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಸಮಾಜದಲ್ಲಿನ ಅಸ್ಪೃಶ್ಯತೆ ಆಚರಣೆಗೆ ಹಲವಾರು ಮುಖಗಳಿವೆ. ಕೂದಲು ಕತ್ತರಿಸಲು ನಿರಾಕರಣೆ, ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಊಟ–ಉಪಾಹಾರ ನೀಡುವುದು, ಧಾರ್ಮಿಕ ಆಚರಣೆಯಿಂದ ಕೆಲವು ವರ್ಗಗಳನ್ನು ದೂರವಿಡುವುದು ಇವೆಲ್ಲವೂ ಅಸ್ಪೃಶ್ಯತೆಯ ಆಚರಣೆಯೇ ಆಗಿವೆ. ಇಂಥ ನಡವಳಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ, ನಾಗರಿಕ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲ ಎನ್ನುವುದನ್ನು ಜಾತಿವಾದಿ ಮನಸ್ಸುಗಳಿಗೆ ಸರ್ಕಾರ ಮನವರಿಕೆ ಮಾಡಬೇಕು.

ಭಾರತ ಸ್ವಾತಂತ್ರ್ಯ ಪಡೆದು ಎಪ್ಪತ್ತೈದು ವರ್ಷಗಳಾದ ಬಳಿಕವೂ ಜಾತೀಯತೆಯ ಪ್ರದರ್ಶನ ಎಗ್ಗಿಲ್ಲದೆ ನಡೆಯುತ್ತಿರುವುದು ನಾಚಿಕೆಗೇಡು. ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕಾಗಿ ಶಾಲಾ ಶಿಕ್ಷಕನಿಂದ ಪೆಟ್ಟು ತಿಂದು, ಪರಿಶಿಷ್ಟ ಜಾತಿಯ 9 ವರ್ಷದ ಬಾಲಕ ಮೃತಪಟ್ಟ ಪ್ರಕರಣವೊಂದು ಮೂರು ತಿಂಗಳ ಹಿಂದೆ ರಾಜಸ್ಥಾನದಿಂದ ವರದಿಯಾಗಿತ್ತು. ಸಮವಸ್ತ್ರ ಧರಿಸದ ದಲಿತ ವಿದ್ಯಾರ್ಥಿನಿಯ ಮೇಲೆ ಉತ್ತರಪ್ರದೇಶದಲ್ಲಿ ಇತ್ತೀಚೆಗಷ್ಟೇ ಹಲ್ಲೆ ನಡೆದಿತ್ತು. ಈಗ ಚಾಮರಾಜನಗರ ಜಿಲ್ಲೆಯಲ್ಲಿ ಟ್ಯಾಂಕ್‌ನ ನೀರು ಖಾಲಿ ಮಾಡಿ ಗಂಜಲ ಹಾಕಿ ಸ್ವಚ್ಛಗೊಳಿಸಿದ್ದಾರೆ. ದಲಿತ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಅತ್ಯಾಚಾರಗಳು ನಡೆಯುತ್ತಿವೆ. ಜಾತಿವಾದಿ ಮನಸ್ಸುಗಳು, ದೇಶದ ಧರ್ಮನಿರಪೇಕ್ಷ ಸ್ವರೂಪವನ್ನು ನಿರಂತರವಾಗಿ ಅಪಾಯಕ್ಕೊಡ್ಡುತ್ತಲೇ ಇವೆ. ಪರಿಶಿಷ್ಟ ವರ್ಗದವರು ಮುಟ್ಟಿದ ವಸ್ತುಗಳನ್ನು ಗಂಜಲದ ಮೂಲಕ ಪವಿತ್ರಗೊಳಿಸುವ ಕೆಲಸವನ್ನು ಜಾತಿವಾದಿಗಳು ಮಾಡುತ್ತಲೇ ಇರುತ್ತಾರೆ. ಆದರೆ, ಅವರು ತಮ್ಮ ಮನಸ್ಸುಗಳಲ್ಲಿನ ಜಾತಿಯ ಕಿಲುಬನ್ನು ಮೊದಲು ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ. ಸಮಾಜದಲ್ಲಿ ಬೇರು ಬಿಟ್ಟಿರುವ ಜಾತೀಯತೆ ಹಾಗೂ ತರತಮ ಭಾವನೆಗಳನ್ನು ತೊಳೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಅಸ್ಪೃಶ್ಯತೆ ನಿವಾರಣೆಯ ಪ್ರಯತ್ನಗಳನ್ನು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಮೂಲಕ ನಡೆಸುವಂತೆಯೇ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ನಿರಂತರ ಜಾರಿಯಲ್ಲಿ ಇರಿಸಬೇಕಾಗಿದೆ. ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗದೇ ಹೋದರೆ, ದೇಶದ ಹಿರಿಮೆಗೆ ಹಾಗೂ ಅಭಿವೃದ್ಧಿ ಮೀಮಾಂಸೆಗೆ ಯಾವ ಅರ್ಥವೂ ಇರುವುದಿಲ್ಲ ಎನ್ನುವುದನ್ನು ಜನಪ್ರತಿನಿಧಿಗಳು ಮನಗಾಣಬೇಕು ಹಾಗೂ ಜಾತಿವಾದಿಗಳು ಅರ್ಥ ಮಾಡಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು