ಬೆಂಗಳೂರು ಮಹಾನಗರಕ್ಕೆ ನವೀಕೃತ ಯೋಜನಾ ನಕ್ಷೆ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ವೈಫಲ್ಯದ ಸಂಕೇತ.

ಬೆಂಗಳೂರು ಮಹಾನಗರವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ನಗರೀಕರಣಗೊಳ್ಳುತ್ತಿದ್ದರೂ ಅದರ ನಿರ್ವಹಣೆಯು ಮಾತ್ರ ಈ ಪ್ರಮಾಣದ ಬೆಳವಣಿಗೆಯನ್ನು ಊಹಿಸದೆ ಬಲು ಹಿಂದೆಯೇ ರೂಪಿಸಲಾಗಿದ್ದ ಯೋಜನಾ ನಕ್ಷೆಯಂತೆ ನಡೆಯುತ್ತಿದೆ. ಬೆಂಗಳೂರಿನ ನಿರ್ವಹಣೆಗಾಗಿ ತುಂಬಾ ಹಿಂದೆಯೇ ಅನುಮೋದಿಸಲಾಗಿದ್ದ ‘ಮಾಸ್ಟರ್ ಪ್ಲಾನ್–2015’ ಕೊನೆಯ ಯೋಜನಾ ದಾಖಲೆಯಾಗಿದೆ. ಅದಕ್ಕಿಂತಲೂ ಹಿಂದೆ ‘ಮಾಸ್ಟರ್ ಪ್ಲಾನ್–2005’ ಇತ್ತು. ಇದರರ್ಥ ಇಷ್ಟೆ: ಬೆಂಗಳೂರು ಮಹಾನಗರವು 21ನೇ ಶತಮಾನದ ಸವಾಲುಗಳನ್ನು ಎದುರಿಸಲು 2000ರ ಆರಂಭದಲ್ಲಿ ರೂಪಿಸಿದ ಯೋಜನಾ ನಕ್ಷೆಯ ಮೇಲೆಯೇ ಇನ್ನೂ ಅವಲಂಬಿತವಾಗಿದೆ. ಪ್ರಸ್ತಾವಿತ ‘ನವೀಕೃತ ಮಾಸ್ಟರ್ ಪ್ಲಾನ್–2031’ ಅನ್ನು ತಾಂತ್ರಿಕ ಅಡ್ಡಿ ಹಾಗೂ ಸಾರ್ವಜನಿಕರ ಪ್ರತಿರೋಧದ ಕಾರಣದಿಂದ ವಾಪಸ್ ಪಡೆಯಲಾಗಿತ್ತು. ‘ನವೀಕೃತ ಮಾಸ್ಟರ್ ಪ್ಲಾನ್–2041’ಕ್ಕೆ ಇದುವರೆಗೆ ಚಾಲನೆ ಸಿಕ್ಕಿಲ್ಲ.

ಇಷ್ಟೊಂದು ಬೃಹತ್ ಗಾತ್ರದ ಮಹಾನಗರಕ್ಕೆ ನವೀಕೃತ ಯೋಜನಾ ನಕ್ಷೆಯೇ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದ್ಯೋತಕ. ಮಾತ್ರವಲ್ಲ, ಆಡಳಿತದ ವೈಫಲ್ಯಕ್ಕೂ ಹಿಡಿದ ಕನ್ನಡಿ. ಈಗ ಸರ್ಕಾರ ಹೊಸದೊಂದು ಹಾದಿ ತುಳಿದಿದೆ. ಮುಂದಿನ ಸಮಗ್ರ ಯೋಜನಾ ನಕ್ಷೆ (ಸಿಎಂಪಿ) ಸಿದ್ಧಪಡಿಸುವ ಹೊಣೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಡುವೆ ಹಂಚಿಕೆ ಮಾಡಿದೆ. ಒಂದೇ ನಗರದ ಒಂದಕ್ಕೊಂದು ಹೊಂದಿಕೊಂಡ ಭಾಗಗಳಿಗೆ ಎರಡೂ ಪ್ರಾಧಿಕಾರಗಳು ಪರಸ್ಪರ ಪ್ರತ್ಯೇಕ ಯೋಜನೆಗಳನ್ನು ರೂಪಿಸುತ್ತಿವೆ. ಇದಲ್ಲದೆ, ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರವು (ಬಿಎಂಐಸಿಎಪಿಎ) ಕೂಡ ತನ್ನ ಸುಪರ್ದಿಯಲ್ಲಿರುವ 90 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶಕ್ಕೆ ಪ್ರತ್ಯೇಕ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಅಂದರೆ ಬೆಂಗಳೂರು ನಗರವು ಮೂರು ಪ್ರಾಧಿಕಾರಗಳಿಂದ ಸಿದ್ಧವಾದ ಮೂರು ಪ್ರತ್ಯೇಕ ಯೋಜನೆಗಳ ನಿಯಂತ್ರಣಕ್ಕೆ ಒಳಪಡಲಿದೆ. ಯಾವುದೇ ಸಮಗ್ರ ದೃಷ್ಟಿಕೋನವಿಲ್ಲದೆ ನಡೆದಿರುವ ಯೋಜನೆ ಸಿದ್ಧಪಡಿಸುವ ಈ ಪ್ರಕ್ರಿಯೆಯನ್ನು ಸುಧಾರಣೆ ಎನ್ನಲಾಗದು. ಬದಲಾಗಿ ಆಡಳಿತದ ಪುನರ್ರಚನೆ ವೇಷದಲ್ಲಿರುವ ಸಾಂಸ್ಥಿಕ ಅವ್ಯವಸ್ಥೆ ಎಂದೇ ಅರ್ಥೈಸಬೇಕಾಗುತ್ತದೆ.

ಸಮಗ್ರ ದೃಷ್ಟಿಕೋನವಿಲ್ಲದ ತುಂಡು, ತುಂಡಾದ ಯೋಜನೆಗಳು ಅಪಾಯಕಾರಿ ಎನ್ನುವುದು ನಿಸ್ಸಂದೇಹ. 2007ರಲ್ಲಿ 110 ಹಳ್ಳಿಗಳನ್ನು ತೆಕ್ಕೆಗೆ ತೆಗೆದುಕೊಂಡ ನಗರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನೇನೋ (ಬಿಬಿಎಂಪಿ) ಪಡೆಯಿತು. ಹಳ್ಳಿಗಳು ಕಾಗದದಲ್ಲಿ ಒಂದಾದವೇ ಹೊರತು, ಯೋಜನೆಗಳ ವಿಷಯದಲ್ಲಿ ಪ್ರತ್ಯೇಕವಾಗಿಯೇ ಉಳಿದವು. ಮಹಾನಗರದಲ್ಲಿ ಒಂದಾದ ಈ ಹಳ್ಳಿಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆ, ಸಮರ್ಪಕ ರಸ್ತೆ ಮತ್ತು ಮಳೆ ನೀರಿನ ಕಾಲುವೆ ಮೊದಲಾದ ಸೌಲಭ್ಯಗಳು ಮರೀಚಿಕೆಯಾದವು. ಯೋಜನಾ ಜವಾಬ್ದಾರಿಗಳು ಹರಿದು ಹಂಚಿ ಹೋಗಿದ್ದರಿಂದ ಯಾರಿಗೂ ಉತ್ತರದಾಯಿತ್ವವೇ ಇಲ್ಲವಾಯಿತು. ಆ ಛಿದ್ರಗೊಂಡ ವ್ಯವಸ್ಥೆಯ ಗುರುತುಗಳನ್ನು ನಗರದಲ್ಲಿ ಈಗಲೂ ಕಾಣಬಹುದು.

ಬೆಂಗಳೂರು ಮಹಾನಗರವು ಅನಿಯಂತ್ರಿತವಾಗಿ ಬೆಳೆಯುತ್ತಿದ್ದು, ನೆರೆಯ ಜಿಲ್ಲೆಗಳ ಪ್ರದೇಶಗಳೂ ನಗರದ ವಿಸ್ತರಿತ ಭಾಗಗಳಾಗಿ ಪರಿವರ್ತನೆ ಆಗುತ್ತಿರುವ ಈ ಹೊತ್ತಿನಲ್ಲಿ ಒಂದೊಂದು ಪ್ರಾಧಿಕಾರ ಒಂದೊಂದು ದೃಷ್ಟಿಕೋನದಿಂದ ಸಿಎಂಪಿಯನ್ನು ವ್ಯಾಖ್ಯಾನಿಸುವುದು ಗೊಂದಲಕ್ಕೆ ಕಾರಣವಾಗಲಿದೆ. ಸಂಚಾರ ದಟ್ಟಣೆ, ವಸತಿ ಸಮಸ್ಯೆ, ನಗರ ಮಹಾಪೂರದಂತಹ ಸಮಸ್ಯೆಗಳಿಗೆ ಪ್ರಾಧಿಕಾರದ ಸರಹದ್ದುಗಳು ಅನ್ವಯವಾಗುವುದಿಲ್ಲ.

ಬೆಂಗಳೂರಿಗೆ ಬೇಕಾಗಿರುವುದು ಒಂದೇ ಪ್ರಾಧಿಕಾರದ ಉತ್ತರದಾಯಿತ್ವವನ್ನು ಹೊಂದಿದ ಒಂದು ನಗರ ಯೋಜನೆಯೇ ಹೊರತು ಹಲವು ಪ್ರಾಧಿಕಾರಗಳಿಂದಾದ ದಾಖಲೆಗಳ ತೇಪೆಯಲ್ಲ. ಒಂದೇ ಜವಾಬ್ದಾರಿಯನ್ನು ಹಲವು ಪ್ರಾಧಿಕಾರಗಳಿಗೆ ವಹಿಸಿಕೊಟ್ಟರೆ ವಿರೋಧಾಭಾಸಗಳಿಂದ ಕೂಡಿದ ವಲಯ ವರ್ಗೀಕರಣ ಮತ್ತು ಅನುಷ್ಠಾನ ಹಂತದ ಗೊಂದಲಕ್ಕೆ ಕಾರಣವಾಗುತ್ತದೆ. ಅಲ್ಲದೆ, ದೃಢವಾದ ಯೋಜನಾ ವಿನ್ಯಾಸಕ್ಕಿಂತ ತಾತ್ಕಾಲಿಕ ಪರಿಹಾರಗಳ ಕಡೆಗೆ ಒತ್ತು ನೀಡುತ್ತದೆ. ಹಿಂದಿನ ಹದಿನೈದು ವರ್ಷಗಳಿಗಿಂತಲೂ ಹೆಚ್ಚು ಸುಸಂಬದ್ಧವಾಗಿ, ಯೋಜಿತವಾಗಿ ಬೆಂಗಳೂರು ಮುಂದಿನ 30 ವರ್ಷಗಳಲ್ಲಿ ಬೆಳೆಯಬೇಕಾದರೆ ಮೊದಲು ಯೋಜನೆಗಳ ಈ ‘ತುಂಡು ಗುತ್ತಿಗೆ’ಯನ್ನು ಬಿಟ್ಟುಕೊಡಬೇಕು. ಓಬಿರಾಯನ ಕಾಲದ ಯೋಜನೆಯನ್ನು ಇಟ್ಟುಕೊಂಡು ಬೆಂಗಳೂರು ನಾಳೆಗಳ ಹೆಜ್ಜೆ ಹಾಕಲು ಸಾಧ್ಯವಿಲ್ಲ. ಹೀಗಾಗಿ ಅದಕ್ಕೊಂದು ನವೀಕೃತ ಸಿಎಂಪಿ ಬೇಕೇಬೇಕು. ಈ ನಗರದ ಭವಿಷ್ಯವನ್ನು ತುಣುಕು ತುಣುಕಾಗಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದಾಗಿ ಯೋಜಿಸಿ ಕಾರ್ಯಗತಗೊಳಿಸಿದಾಗಲೇ ಅದು ಬೆಳಗಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.