ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಾಲೇಶ್ವರ ರೈಲು ದುರಂತ‌: ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಲಿ

Published 6 ಜೂನ್ 2023, 1:08 IST
Last Updated 6 ಜೂನ್ 2023, 1:08 IST
ಅಕ್ಷರ ಗಾತ್ರ

ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಎರಡು ಸೂಪರ್ ಫಾಸ್ಟ್‌ ರೈಲುಗಳು ಹಾಗೂ ಒಂದು ಸರಕು ಸಾಗಣೆ ರೈಲಿನ ನಡುವೆ ಸಂಭವಿಸಿದ ಅಪಘಾತವು 275ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಈ ದುರಂತವು ದೇಶವನ್ನು ಆಘಾತದ ಸ್ಥಿತಿಗೆ ತಳ್ಳಿದೆ. ಅಲ್ಲದೆ, ರೈಲು ಪ್ರಯಾಣದ ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅಪಘಾತಕ್ಕೆ ಕಾರಣ ಏನು ಎಂಬ ವಿಚಾರವಾಗಿ ಹಲವು ಅಭಿಪ್ರಾಯಗಳು ಬಂದಿವೆ. ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್–ಶಾಲಿಮಾರ್ ಎಕ್ಸ್‌ಪ್ರೆಸ್‌ ರೈಲು ಸರಕು ಸಾಗಣೆ ರೈಲಿಗೆ ಮೊದಲು ಡಿಕ್ಕಿ ಹೊಡೆದಿದೆ. ಅದರ ಬೋಗಿಗಳು ಉರುಳಿ ಪಕ್ಕದ ಹಳಿಯ ಮೇಲೆ ಬಿದ್ದಿವೆ. ಕೆಲವೇ ನಿಮಿಷಗಳ ನಂತರದಲ್ಲಿ, ಆ ಹಳಿಯಲ್ಲಿ ಬಂದ ಬೆಂಗಳೂರು–ಹೌರಾ ಎಕ್ಸ್‌ಪ್ರೆಸ್‌ ರೈಲು ಉರುಳಿಬಿದ್ದಿದ್ದ ಬೋಗಿಗಳಿಗೆ ಅಪ್ಪಳಿಸಿದೆ. ಇವೆಲ್ಲವೂ ಕೆಲವೇ ನಿಮಿಷಗಳ ಅಂತರದಲ್ಲಿ ನಡೆದುಹೋಗಿವೆ. ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನೂರಾರು ಜೀವಗಳು ಇನ್ನಿಲ್ಲವಾಗಿವೆ. ಹಲವು ಕುಟುಂಬಗಳು ಅನಾಥವಾಗಿವೆ. ಅಪಘಾತದಲ್ಲಿ ಬದುಕಿ ಉಳಿದವರು ಆಘಾತದಿಂದ ಹೊರಬರಲು ವರ್ಷಗಳೇ ಬೇಕಾಗಬಹುದು. ಬಾಲೇಶ್ವರದಲ್ಲಿ ಆಗಿರುವ ದುರ್ಘಟನೆಯು ಮೂರು ದಶಕಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ರೈಲು ಅಪಘಾತ ಎಂದು ಹೇಳಲಾಗುತ್ತಿದೆ. ಕೋಟ್ಯಂತರ ಜನರಿಗೆ ಸುರಕ್ಷಿತ ಪ್ರಯಾಣದ ಖಾತರಿ ಕೊಡಬೇಕಿರುವ ರೈಲ್ವೆ ಇಲಾಖೆಯ ವಿಶ್ವಾಸಾರ್ಹತೆಗೆ ಇದು ಗಂಭೀರ ಏಟು ಕೊಟ್ಟಿದೆ.

ಅಪಘಾತ ನಡೆಯಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯು ಪೂರ್ಣಗೊಳ್ಳುವುದಕ್ಕೆ ಒಂದಿಷ್ಟು ಕಾಲ ಬೇಕೇಬೇಕು. ಆದರೆ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ಲೋಪವು ಅಪಘಾತಕ್ಕೆ ಕಾರಣ ಎಂದು ಭಾವಿಸಲಾಗಿದೆ. ಈ ಲೋಪವು ಮನುಷ್ಯಕೃತವೇ? ಅಥವಾ ಇದು ಮನುಷ್ಯನ ನಿಲುಕಿಗೆ ಸಿಗದೆ ಆಗಿರುವಂಥದ್ದೇ? ಅದಾಗಲೇ ಒಂದು ರೈಲು ಇದ್ದ ಹಳಿಯಲ್ಲಿ ಸೂಪರ್‌ಫಾಸ್ಟ್‌ ರೈಲೊಂದು ಸಂಚರಿಸಿದ್ದು ವಿಚಿತ್ರ. ಅದಕ್ಕಿಂತ ಹೆಚ್ಚು ವಿಚಿತ್ರವಾಗಿರುವುದು, ಆ ಕಡೆ ಬರುತ್ತಿದ್ದ ಇನ್ನೂ ಒಂದು ರೈಲಿಗೆ ಅಪಾಯದ ಯಾವ ಮುನ್ಸೂಚನೆಯೂ ಸಿಗದೆ ಇದ್ದುದು. ಬೇಸರದ ಸಂಗತಿಯೆಂದರೆ ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳು ಅಥವಾ ಆ ವ್ಯವಸ್ಥೆಯ ವೈಫಲ್ಯವು ಕಣ್ಣಿಗೆ ರಾಚುವುದು ಒಂದು ದುರ್ಘಟನೆ ಸಂಭವಿಸಿದಾಗ ಮಾತ್ರ. ನಂತರ, ಮತ್ತೊಂದು ದುರ್ಘಟನೆ ನಡೆಯುವವರೆಗೆ ಆ ಲೋಪಗಳು ಮರೆತುಹೋಗಿರುತ್ತವೆ. ವ್ಯಾಪಕ ಪ್ರಚಾರ ಪಡೆದಿರುವ ಹಾಗೂ ಸ್ವದೇಶಿ ನಿರ್ಮಿತ ಎಂಬ ಹೆಗ್ಗಳಿಕೆ ಹೊಂದಿರುವ ಕವಚ್ ವ್ಯವಸ್ಥೆಯನ್ನು 1,500 ಕಿ.ಮೀ. ರೈಲು ಮಾರ್ಗದಲ್ಲಿ ಮಾತ್ರ ಅಳವಡಿಸಲಾಗಿದೆ. ದೇಶದಲ್ಲಿ ಇರುವ ರೈಲು ಮಾರ್ಗದ ಉದ್ದವು 70 ಸಾವಿರ ಕಿ.ಮೀ. ಕವಚ್ ವ್ಯವಸ್ಥೆಯು ರೈಲುಗಳು ಪರಸ್ಪರ ಡಿಕ್ಕಿ ಆಗುವುದನ್ನು ತಡೆಯುತ್ತದೆ. ರೈಲ್ವೆ ಇಲಾಖೆಯಲ್ಲಿ ಹಲವು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಇನ್ನೊಂದೆಡೆ ಸಮಯಮಿತಿಯಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದ ಹಲವು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ.

2021–22ರಲ್ಲಿ ರೈಲ್ವೆ ಸುರಕ್ಷತೆಗೆ ತೆಗೆದು ಇರಿಸಿದ್ದ ₹2.15 ಲಕ್ಷ ಕೋಟಿ ಮೊತ್ತದಲ್ಲಿ ₹1.9 ಲಕ್ಷ ಕೋಟಿ ಮೊತ್ತವನ್ನು ಮಾತ್ರ ವಿನಿಯೋಗಿಸಲಾಗಿದೆ ಎಂದು ವರದಿಯಾಗಿದೆ. ಅತ್ಯುತ್ತಮ ತಂತ್ರಜ್ಞಾನದ ಬಳಕೆ ಆಗಿಲ್ಲ ಹಾಗೂ ರೈಲ್ವೆ ಇಲಾಖೆಯ ಎಲ್ಲ ಹಂತಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಕೌಶಲ ಅಭಿವೃದ್ಧಿ ಕಾರ್ಯವನ್ನು ಬಹುಪಾಲು ನಿರ್ಲಕ್ಷಿಸಲಾಗಿದೆ. 2012ರ ಕಾಕೋಡ್ಕರ್ ಸಮಿತಿ ಶಿಫಾರಸುಗಳನ್ನು ಮತ್ತು ರೈಲ್ವೆ ಸುರಕ್ಷತೆಗಾಗಿ ಸ್ವತಂತ್ರ ಏಜೆನ್ಸಿಯೊಂದನ್ನು ಆರಂಭಿಸುವ ಪ್ರಸ್ತಾವವನ್ನು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. ವಿಶ್ವದಲ್ಲಿ ನಾಲ್ಕನೆಯ ಅತಿದೊಡ್ಡ ರೈಲ್ವೆ ಜಾಲ ಇರುವುದು ಭಾರತದಲ್ಲಿ. ಆದರೆ ಅಪಘಾತಗಳ ಸಂಖ್ಯೆ ಮತ್ತು ಅದರಲ್ಲಿ ಜನ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯ ವಿಚಾರದಲ್ಲಿ ಭಾರತ ಮೊದಲಿಗೆ ನಿಲ್ಲುತ್ತದೆ. ರೈಲ್ವೆ ಇಲಾಖೆಯು ಪ್ರಚಾರ ಗಿಟ್ಟಿಸುವ ಕೆಲಸದಲ್ಲಿ ಬಹಳ ಮುಂದಿದೆ. ಆದರೆ ಸಾಧನೆಯ ದೃಷ್ಟಿಯಿಂದ ಹಿಂದೆ ಬಿದ್ದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಇನ್ನೂ ಕೆಲವು ಪ್ರಮುಖ ಖಾತೆಗಳನ್ನು ವಹಿಸಲಾಗಿದೆ. ಇದು ರೈಲ್ವೆ ಇಲಾಖೆಗೆ ಸಿಕ್ಕಿರುವ ಮಹತ್ವ ಎಷ್ಟು ಎಂಬುದನ್ನು ತೋರಿಸುತ್ತಿದೆ. ವಂದೇ ಭಾರತ್‌ ರೈಲಿಗೆ ಪ್ರಶಂಸೆ ಪಡೆದುಕೊಳ್ಳುವುದು ಸರಿ. ಆದರೆ ರೈಲ್ವೆ ಇಲಾಖೆಯ ಮೊದಲ ಜವಾಬ್ದಾರಿ ಇರುವುದು ಪ್ರತಿ ರೈಲು ಸಂಚಾರ ಕೂಡ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT