ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮನೀಷ್‌ ಸಿಸೋಡಿಯಾ ಬಂಧನ ಎಎಪಿ ಮುಂದೆ ಗಂಭೀರ ಬಿಕ್ಕಟ್ಟು

ಇಂತಹ ಪ್ರಕರಣಗಳಿಂದ ಸಿಬಿಐಯ ವಿಶ್ವಾಸಾರ್ಹತೆ ಕುಗ್ಗುತ್ತದೆ, ಕಾನೂನು ಜಾರಿ ಸಂಸ್ಥೆಗಳ ನ್ಯಾಯಬದ್ಧತೆ ಕುರಿತಂತೆ ಜನರಲ್ಲಿರುವ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ
Last Updated 28 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ದೆಹಲಿಯ ಉಪಮುಖ್ಯಮಂತ್ರಿ ಮತ್ತು ಎಎಪಿಯ ಹಿರಿಯ ಮುಖಂಡ ಮನೀಷ್‌ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ದೆಹಲಿ ಸರ್ಕಾರವು ಈಗ ರದ್ದುಪಡಿಸಿರುವ ಅಬಕಾರಿ ನೀತಿ ಜಾರಿಯಲ್ಲಿ ಈ ಹಿಂದೆ ಅಕ್ರಮ ನಡೆದಿತ್ತು ಎಂಬ ಪ್ರಕರಣದ ತನಿಖೆಯ ಭಾಗವಾಗಿ ಈ ಬಂಧನ ನಡೆದಿದೆ. ಅಬಕಾರಿ ಖಾತೆಯು ಸಿಸೋಡಿಯಾ ಅವರ ಬಳಿಯಲ್ಲಿಯೇ ಇತ್ತು. ಅಬಕಾರಿ ನೀತಿ ರೂಪಿಸುವಿಕೆ ಮತ್ತು ಅದರ ಜಾರಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಮುಖ್ಯ ಕಾರ್ಯದರ್ಶಿಯವರು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರಿಗೆ ವರದಿ ಕೊಟ್ಟಿದ್ದರು. ಅದರ ಆಧಾರದಲ್ಲಿ ಕ್ರಮ ಕೈಗೊಂಡಿರುವ ಸಕ್ಸೇನಾ ಅವರು, ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಬಳಿಕ ನೀತಿಯನ್ನು ರದ್ದುಪಡಿಸಲಾಯಿತು.

ಸಗಟು ಮಾರಾಟಗಾರರಿಗೆ ಹಳೆಯ ನೀತಿಗಿಂತ ಹೊಸ ನೀತಿಯಲ್ಲಿ ಲಾಭದ ಅಂಶ ಹೆಚ್ಚು ಎಂಬಂತಹ ಕೆಲವು ಪ್ರಶ್ನೆಗಳು ಈ ನೀತಿಯ ಕುರಿತು ಇವೆ. ಆರೋಪಿತ ವಂಚನೆ ಪ್ರಕರಣದ ಹಿಂದೆ ಕೆಲವು ವ್ಯಕ್ತಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಜಾಲದ ಷಡ್ಯಂತ್ರ ಇದೆ ಎಂದೂ ಹೇಳಲಾಗಿದೆ. ಕೆಲವು ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂಬುದಕ್ಕೆ ಡಿಜಿಟಲ್‌ ಸಾಕ್ಷ್ಯಗಳೂ ಇವೆ ಎನ್ನಲಾಗುತ್ತಿದೆ. ಈ ಅವ್ಯವಹಾರ ಪ್ರಕರಣದಿಂದ ಬಂದ ಹಣವನ್ನು ಪಂಜಾಬ್‌ ಮತ್ತು ಗೋವಾ ಚುನಾವಣೆಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಆದರೆ, ವಿರೋಧ ಪಕ್ಷಗಳ ಮುಖಂಡರು ಮತ್ತು ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ನೇತೃತ್ವದ ಸರ್ಕಾರಗಳ ಸಚಿವರನ್ನು ಕೇಂದ್ರ ಸರ್ಕಾರವು ನಡೆಸಿಕೊಳ್ಳುತ್ತಿರುವ ಶೈಲಿಗೆ ಅನುಗುಣವಾಗಿಯೇ ಸಿಸೋಡಿಯಾ ಅವರ ಬಂಧನ ಪ್ರಕರಣವೂ ಇದೆ. ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಸರ್ಕಾರದ ಟೀಕಾಕಾರರನ್ನು ಗುರಿಯಾಗಿಸಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ (ಇ.ಡಿ) ತನಿಖಾ ಸಂಸ್ಥೆಗಳನ್ನು ಕೇಂದ್ರವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಮತ್ತೆ ಕೇಳಿಬಂದಿದೆ. ಸಿಬಿಐಯನ್ನು ಈ ಹಿಂದಿನ ಸರ್ಕಾರಗಳೂ ದುರ್ಬಳಕೆ ಮಾಡಿಕೊಂಡಿದ್ದವು ಎಂಬ ಕಾರಣಕ್ಕಾಗಿಯೇ ಈ ಸಂಸ್ಥೆಗೆ ‘ಪಂಜರದೊಳಗಿನ ಗಿಣಿ’ ಎಂಬ ಹೆಸರು ಬಂದಿತ್ತು. ಆದರೆ, ಈಗಿನ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ವಿರೋಧ ಪಕ್ಷಗಳ ರಾಜಕಾರಣಿಗಳನ್ನೇ ಹೆಚ್ಚಾಗಿ ಬಂಧಿಸಲಾಗಿದೆ. ರಾಜಕೀಯವಾಗಿ ಕಿರುಕುಳ ನೀಡುವುದೇ ಇಂತಹ ಬಂಧನಗಳ ಉದ್ದೇಶ ಎಂಬುದನ್ನು ಪದೇ ಪದೇ ಹೇಳಲಾಗಿದೆ.

ಇಂತಹ ಪ್ರಕರಣಗಳು ವರ್ಷಾನುಗಟ್ಟಲೆ ಮುಂದುವರಿಯುತ್ತವೆ ಮತ್ತು ಈ ಪ್ರಕ್ರಿಯೆಯೇ ಒಂದು ರೀತಿಯ ದಂಡನೆಯಾಗಿಬಿಡುತ್ತದೆ; ಇಂತಹ ಪ್ರಕರಣಗಳಲ್ಲಿನ ಆರೋಪಿಗಳು ಹಲವು ವರ್ಷ ಸಂದೇಹದ ಸುಳಿಯಲ್ಲಿಯೇ ಇರಬೇಕಾಗುತ್ತದೆ. ಸಿಸೋಡಿಯಾ ಅವರನ್ನು ಆರೋಪಿ ಎಂಬ ಕಾರಣಕ್ಕಾಗಿ ಬಂಧಿಸಿಲ್ಲ; ಬದಲಿಗೆ ಸಿಬಿಐ ತನಿಖೆಗೆ ಅವರು ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿದೆ. ಸಿಬಿಐಯ ವಿಶ್ವಾಸಾರ್ಹತೆಯು ಇಂತಹ ಪ್ರಕರಣಗಳಿಂದಾಗಿ ಕುಗ್ಗುತ್ತದೆ. ಕಾನೂನು ಜಾರಿ ಸಂಸ್ಥೆಗಳ ನ್ಯಾಯಬದ್ಧತೆಯ ಕುರಿತಂತೆ ಜನರಲ್ಲಿ ಇರುವ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋ‍ಪಗಳನ್ನು ಎಎಪಿ ಅಲ್ಲಗಳೆದಿದೆ. ಬಂಧನವನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನೂ ನಡೆಸಿದೆ. ಸಿಸೋಡಿಯಾ ಅವರು ಪಕ್ಷ ಮತ್ತು ಸರ್ಕಾರದಲ್ಲಿ ಎರಡನೇ ಮುಖ್ಯ ವ್ಯಕ್ತಿ. ದೆಹಲಿ ಸರ್ಕಾರದ 33 ಖಾತೆಗಳ ಪೈಕಿ 18 ಖಾತೆಗಳನ್ನು ಅವರು ನಿಭಾಯಿಸುತ್ತಿದ್ದರು. ಹಣಕಾಸು, ಆರೋಗ್ಯ ಮತ್ತು ಶಿಕ್ಷಣದಂತಹ ಮಹತ್ವದ ಖಾತೆಗಳೂ ಅವುಗಳಲ್ಲಿ ಸೇರಿದ್ದವು. ಇನ್ನೊಬ್ಬ ಹಿರಿಯ ಸಚಿವ ಸತ್ಯೇಂದ್ರ ಜೈನ್‌ ಅವರೂ ಕೆಲವು ತಿಂಗಳಿನಿಂದ ಸೆರೆಮನೆಯಲ್ಲಿಯೇ ಇದ್ದಾರೆ.

ಕಳೆದ ವರ್ಷ ಬಂಧನಕ್ಕೆ ಒಳಗಾದ ಅವರ ಮೇಲೆ ಹಣ ಅಕ್ರಮ ವರ್ಗಾವಣೆಯ ಆರೋಪ ಇದೆ. ಸೆರೆಮನೆ ಸೇರಿರುವ ಸಿಸೋಡಿಯಾ ಮತ್ತು ಜೈನ್‌ ಅವರು ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಬಜೆಟ್‌ ಅನ್ನು ಶೀಘ್ರವೇ ಮಂಡಿಸಬೇಕಿದೆ ಮತ್ತು ಇಂತಹ ಸಂದರ್ಭದಲ್ಲಿ ಹಣಕಾಸು ಖಾತೆಯ ಹೊಣೆ ಹೊತ್ತಿದ್ದ ಸಿಸೋಡಿಯಾ ರಾಜೀನಾಮೆ ನೀಡಿದ್ದರಿಂದ ಸರ್ಕಾರಕ್ಕೆ ಕಷ್ಟವಾಗಬಹುದು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೇ ಹಗರಣದ ಮುಖ್ಯ ಸೂತ್ರಧಾರಿ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ಕೇಜ್ರಿವಾಲ್‌ ಅವರೇ ತನಿಖಾ ಸಂಸ್ಥೆಗಳ ಮುಂದಿನ ಗುರಿ ಆಗಬಹುದೇ ಎಂಬ ಅನುಮಾನಕ್ಕೆ ಇದು ಕಾರಣವಾಗಿದೆ. ಹಾಗಾದರೆ, ಎಎಪಿ ಗಂಭೀರವಾದ ಬಿಕ್ಕಟ್ಟು ಎದುರಿಸಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT