ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ದೇಶದ್ರೋಹ ಕುರಿತ ಕಾನೂನು: ಜನರಿಗೆ ಅಪಚಾರ ಎಸಗಿದ ಆಯೋಗ

Published 7 ಜೂನ್ 2023, 1:03 IST
Last Updated 7 ಜೂನ್ 2023, 1:03 IST
ಅಕ್ಷರ ಗಾತ್ರ

ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಇರುವ, ‘ದೇಶದ್ರೋಹ’ಕ್ಕೆ ಸಂಬಂಧಿಸಿದ ಕಾನೂನನ್ನು ಉಳಿಸಿಕೊಳ್ಳಬೇಕು; ಅಷ್ಟೇ ಅಲ್ಲ, ಆ ಕಾನೂನಿನ ಅಡಿಯಲ್ಲಿ ಇನ್ನಷ್ಟು ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳುವ ಮೂಲಕ ಕೇಂದ್ರ ಕಾನೂನು ಆಯೋಗವು ದೇಶದ ಜನರಿಗೆ ಅಪಚಾರ ಎಸಗಿದೆ. ‘ದೇಶದ್ರೋಹ’ದ ಅ‍ಪರಾಧ ಎಸಗಿದವರ ವಿರುದ್ಧ ಕ್ರಮ ಜರುಗಿಸಲು ಇರುವ ಐಪಿಸಿಯ ಸೆಕ್ಷನ್‌ 124(ಎ) ಅನ್ನು ರದ್ದು ಮಾಡಿದ್ದೇ ಆದಲ್ಲಿ, ‘ದೇಶದ ಏಕತೆ ಹಾಗೂ ಭದ್ರತೆಯ ಮೇಲೆ ಗಂಭೀರ ಹಾಗೂ ಕೆಟ್ಟ ಪರಿಣಾಮಗಳು ಉಂಟಾಗಬಹುದು’ ಎಂದು ಆಯೋಗವು ಈಚಿನ ವರದಿಯಲ್ಲಿ ವಾದಿಸಿದೆ. ಐಪಿಸಿ ಸೆಕ್ಷನ್ 124(ಎ) ವಿಚಾರವಾಗಿ ಅಭಿಪ್ರಾಯ ಕೊಡುವಂತೆ ಕೇಂದ್ರವು ಕಾನೂನು ಆಯೋಗವನ್ನು ಕೋರಿತ್ತು. ಈ ಸೆಕ್ಷನ್‌ ಬಳಕೆ ಮಾಡುವ ಸಂದರ್ಭದಲ್ಲಿ ಪ್ರಾಥಮಿಕ ತನಿಖೆಯನ್ನು ಕಡ್ಡಾಯವಾಗಿಸಬೇಕು ಹಾಗೂ ಕೆಲವು ರಕ್ಷಣೆಗಳನ್ನು ಒದಗಿಸಬೇಕು ಎಂದು ಕೂಡ ಆಯೋಗವು ಹೇಳಿದೆ. ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನನ್ನು ಮರುಪರಿಶೀಲನೆ ಮಾಡುವುದಾಗಿ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಸರಿಸುಮಾರು ಒಂದು ವರ್ಷದ ನಂತರದಲ್ಲಿ ಆಯೋಗವು ವರದಿ ಸಲ್ಲಿಸಿದೆ.

ಮರುಪರಿಶೀಲನೆ ಮಾಡುವುದಾಗಿ ಸರ್ಕಾರ ಹೇಳಿದ ನಂತರದಲ್ಲಿ, ಐಪಿಸಿಯ ಸೆಕ್ಷನ್‌ 124(ಎ) ಅಡಿಯಲ್ಲಿ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಅಲ್ಲದೆ, ಈ ಸೆಕ್ಷನ್‌ ಅಡಿಯಲ್ಲಿ ಅದಾಗಲೇ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಯನ್ನು ಅಮಾನತಿನಲ್ಲಿ ಇರಿಸಿತ್ತು. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಕೆಯಾಗುತ್ತಿದ್ದ, ವಸಾಹತು ಕಾಲದ ಈ ಕಾನೂನನ್ನು ಕೇಂದ್ರವು ಏಕೆ ರದ್ದು ಮಾಡುತ್ತಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಈ ಪ್ರಶ್ನೆಯು ಈಗಲೂ ಬಹಳ ಮಹತ್ವ ಪಡೆಯುತ್ತದೆ. ಏಕೆಂದರೆ, ಈಚಿನ ದಿನಗಳಲ್ಲಿ ಇದನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ, ಸರ್ಕಾರದ ಟೀಕಾಕಾರರ ವಿರುದ್ಧ, ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಮನಸ್ಸಿಗೆ ತೋಚಿದಂತೆ ಬಳಕೆ ಮಾಡಲಾಗಿದೆ. ಭಿನ್ನ ಅಭಿಪ್ರಾಯಗಳನ್ನು ಹತ್ತಿಕ್ಕಲು ಹಾಗೂ ಟೀಕೆಗಳ ಸದ್ದಡಗಿಸಲು ಇದನ್ನು ಬಳಸಲಾಗಿದೆ. ಈಗ ಕಾನೂನು ಆಯೋಗ ಮಾಡಿರುವ ಶಿಫಾರಸು ಪ್ರತಿಗಾಮಿತನದಿಂದ ಕೂಡಿದೆ. ಇದು ಯಾವುದೇ ಪ್ರಜಾತಂತ್ರ ವ್ಯವಸ್ಥೆಯ ಕನಿಷ್ಠ ಅಗತ್ಯಗಳಲ್ಲಿ ಒಂದಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವಕ್ಕೆ ಧಕ್ಕೆ ತರುತ್ತದೆ. ಈ ಸೆಕ್ಷನ್‌ ಅಡಿ ಕೊಡಬಹುದಾದ ಶಿಕ್ಷೆಯನ್ನು ಈಗಿನ ಮೂರು ವರ್ಷಗಳ ಬದಲಿಗೆ ಏಳು ವರ್ಷಗಳಿಗೆ ಹೆಚ್ಚಿಸಬೇಕು ಎಂದು ಆಯೋಗವು ಹೇಳಿದೆ. ‘ದೇಶದ್ರೋಹ’ ಎಂದು ಆರೋಪಿಸುವ ಕೃತ್ಯವು ಹಿಂಸಾಚಾರಕ್ಕೆ ಅಥವಾ ಸಾರ್ವಜನಿಕ ಅವ್ಯವಸ್ಥೆಗೆ ಕಾರಣವಾಗಿದ್ದರೆ ಅಥವಾ ಕಾರಣವಾಗುಗಂತೆ ಇದ್ದರೆ ಮಾತ್ರ ಈ ಸೆಕ್ಷನ್‌ ಬಳಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಈಗ ಆಯೋಗ ಮಾಡಿರುವ ಶಿಫಾರಸು ಆ ವ್ಯಾಪ್ತಿಯನ್ನು ಮೀರಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಒಲವು ಹೊಂದಿರುವುದು ಕೂಡ ಈ ಸೆಕ್ಷನ್ ಅಡಿ ಶಿಕ್ಷೆಗೆ ಅರ್ಹವಾಗುತ್ತದೆ; ಹಿಂಸಾಚಾರವು ವಾಸ್ತವದಲ್ಲಿ ನಡೆದಿರಬೇಕು ಎಂದೇನೂ ಇಲ್ಲ. ಶಿಫಾರಸುಗಳನ್ನು ಒಪ್ಪಿಕೊಂಡರೆ, ‘ಒಲವು’ ಇತ್ತೇ ಎಂಬುದನ್ನು ಪೊಲೀಸರು ತೀರ್ಮಾನಿಸುವ ಕಾರಣ ಈ ಸೆಕ್ಷನ್ ಇನ್ನಷ್ಟು ಕರಾಳವಾಗಲಿದೆ.

ಈ ಪ್ರಕರಣದಲ್ಲಿ ಕಾನೂನು ಆಯೋಗವು ಸರ್ಕಾರಕ್ಕೆ ವಿವೇಕಯುತ ಮಾರ್ಗದರ್ಶನ ನೀಡುವ ಬದಲು, ಸರ್ಕಾರದ ಮುಖವಾಣಿಯ ರೀತಿಯಲ್ಲಿ ವರ್ತಿಸಿದೆ. ವಿಸ್ತಾರ ಕಾರಣುತ್ತಲೇ ಇರುವ ಸಾಮಾಜಿಕ ಜಾಲತಾಣಗಳು, ಈಶಾನ್ಯ ರಾಜ್ಯಗಳು ಹಾಗೂ ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತು ಮಾವೊವಾದಿಗಳ ಚಟುವಟಿಕೆಗಳು ತಾನು ಬಿಗಿ ನಿಲುವು ತಾಳಲು ಒಂದು ಕಾರಣ ಎಂದು ಆಯೋಗವು ಹೇಳಿದೆ. ಇದು ಸರ್ಕಾರದ ವಾದ ಕೂಡ ಹೌದು. ಸರ್ಕಾರವು ‘ನಗರವಾಸಿ ನಕ್ಸಲರು’ ಮತ್ತು ‘ತುಕ್ಡೆ ತುಕ್ಡೆ ಗ್ಯಾಂಗ್‌’ನ ಬೆದರಿಕೆಯ ಬಗ್ಗೆ ಒತ್ತಿ ಹೇಳುತ್ತಿರುತ್ತದೆ. ವ್ಯಂಗ್ಯವೆಂದರೆ 2018ರಲ್ಲಿ ಕಾನೂನು ಆಯೋಗವು ಈ ಕಾನೂನನ್ನು ಪುನರ್‌ ಪರಿಶೀಲಿಸಬೇಕು ಎಂದು ಹೇಳಿತ್ತು. ಬ್ರಿಟನ್ ಸೇರಿದಂತೆ ಹಲವು ಪ್ರಜಾತಾಂತ್ರಿಕ ದೇಶಗಳು ಈ ಬಗೆಯ ಕಾನೂನನ್ನು ರದ್ದು ಮಾಡಿವೆ. ಭಾರತ ಕೂಡ ಅದೇ ಹಾದಿಯಲ್ಲಿ ಸಾಗಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಸರಿಯಾದ ಕ್ರಮವನ್ನು ಕೈಗೊಳ್ಳಲಿದೆ ಎಂಬ ಆಸೆ ಇರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT