ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ತಾಪಮಾನ ಏರಿಕೆ ತಡೆ ಅನಿವಾರ್ಯದೇಶದ ನೀತಿಯಲ್ಲಿ ಪಲ್ಲಟ ಅಗತ್ಯ

Last Updated 7 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಹವಾಮಾನ ಬದಲಾವಣೆಯಿಂದ ಭೂಮಿಯ ಮೇಲೆ ಮತ್ತು ಜನಜೀವನದ ಮೇಲೆ ಆಗಬಹುದಾದ ಪ್ರತಿಕೂಲ ಪರಿಣಾಮಗಳು ಏನು ಎಂಬುದು ಇತ್ತೀಚಿನ ವರ್ಷಗಳಲ್ಲಿ ನಿಚ್ಚಳವಾಗುತ್ತಿವೆ. ಅತಿಯಾದ ಮಳೆ, ಮಳೆ ಕೊರತೆ, ಅಕಾಲದಲ್ಲಿ ಮಳೆ, ಪ್ರವಾಹ, ತಾಪಮಾನ ಏರಿಕೆ, ಒಣಗುತ್ತಿರುವ ನದಿಗಳು, ನೀರ್ಗಲ್ಲುಗಳ ಕರಗುವಿಕೆಗಳನ್ನೆಲ್ಲ ನಾವು ನೋಡುತ್ತಿದ್ದೇವೆ. ಹಾಗಾಗಿಯೇ ಹವಾಮಾನ ಬದಲಾವಣೆ ತಡೆಯುವುದು ತುರ್ತಾಗಿ ಆಗಬೇಕಿರುವ ಕಾರ್ಯ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದಿದೆ. ಜಾಗತಿಕ ತಾಪಮಾನ ಏರಿಕೆ ತಡೆಗೆ ಭಾರತವು ಕೆಲವು ಮಹತ್ವದ ಕ್ರಮಗಳನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹವಾಮಾನ ಬದಲಾವಣೆ ತಡೆಗೆ ಐದು ಅಂಶಗಳ ಕ್ರಿಯಾ ಯೋಜನೆಯನ್ನು ಸಮಾವೇಶದಲ್ಲಿ ಪ್ರಕಟಿಸಿದ್ದಾರೆ. 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ಭಾರತ ಘೋಷಿಸಿದ್ದ ಬದ್ಧತೆಗಳನ್ನು ಈ ಕ್ರಿಯಾ ಯೋಜನೆಯು ಇನ್ನಷ್ಟು ವಿಸ್ತರಿಸುತ್ತದೆ. ಈಗಿನ ಘೋಷಣೆಗಳು ಮಹತ್ವಾಕಾಂಕ್ಷಿಯೂ ಸವಾಲಿನದ್ದೂ ಆಗಿವೆ. ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸುವುದು, ಇಂಧನ ಅಗತ್ಯದ ಶೇ 50ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆದುಕೊಳ್ಳುವುದು, ಇಂಗಾಲದ ಹೊರಸೂಸುವಿಕೆಯನ್ನು ನೂರು ಕೋಟಿ ಟನ್‌ನಷ್ಟು ಕಡಿತ ಮಾಡುವುದು, ಆರ್ಥಿಕ ಚಟುವಟಿಕೆಗಳ ಕಾರಣದಿಂದಾಗಿ ಪರಿಸರ ಸೇರುವ ಇಂಗಾಲದ ಪ್ರಮಾಣವನ್ನು ಶೇ 45ರಷ್ಟು ಕಡಿತ ಮಾಡುವುದು (ಈ ಹಿಂದಿನ ಗುರಿ ಶೇ 35ರಷ್ಟು ಇತ್ತು) 2030ರ ಒಳಗೆ ಸಾಧಿಸಬೇಕಾದ ಗುರಿಗಳು. 2070ರ ಹೊತ್ತಿಗೆ, ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಸಮತೋಲನ ಮಟ್ಟಕ್ಕೆ (ನೆಟ್‌ ಝೀರೊ– ಹಸಿರು ಮನೆ ಅನಿಲ ಹೊರಸೂಸುವಿಕೆ ಮತ್ತು ವಾತಾವರಣದಿಂದ ಅದನ್ನು ನಿರ್ಮೂಲನ ಮಾಡುವಿಕೆ ಎರಡೂ ಸಮಾನ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುವುದು) ತರುವುದು ಮೋದಿ ಅವರು ಪ್ರಕಟಿಸಿರುವ ಇನ್ನೊಂದು ಬದ್ಧತೆಯಾಗಿದೆ. ಮೋದಿ ಅವರು ಕಳೆದ ವಾರ ಪ್ರಕಟಿಸಿದ ಈ ಬದ್ಧತೆಗಳು ಅಚ್ಚರಿಗೆ ಕಾರಣವಾಗಿವೆ. ಏಕೆಂದರೆ, ಹವಾಮಾನ ಬದಲಾವಣೆ ತಡೆಗೆ ಇಂತಹ ಯೋಜನೆಗಳನ್ನು ಭಾರತವು ಪ್ರಕಟಿಸಲಿದೆ ಎಂಬುದರ ಯಾವ ಲಕ್ಷಣವೂ ಘೋಷಣೆ ಮಾಡುವವರೆಗೆ ಇರಲಿಲ್ಲ. ಪ್ಯಾರಿಸ್‌ ಸಮಾವೇಶದಲ್ಲಿ ಘೋಷಿಸಿದ್ದ ಬದ್ಧತೆಯನ್ನು ಇನ್ನಷ್ಟು ಉತ್ತಮಪಡಿಸುವ ಕೆಲಸವನ್ನು ಯಾವ ದೇಶವೂ ಮಾಡಿಲ್ಲ. ಹಾಗಾಗಿ, ಭಾರತದ ನಡೆಯು ಶ್ಲಾಘನೀಯವಾಗಿದೆ.

ಭಾರತವು ಹಾಕಿಕೊಂಡಿರುವ ಗುರಿಗಳು ಅತೀವ ಕ್ಲಿಷ್ಟಕರವಾದವು. ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ. ಅಭಿವೃದ್ಧಿಯ ಈಗಿನ ಹಂತದಲ್ಲಿ ಈ ಗುರಿಗಳನ್ನು ಸಾಧಿಸುವುದು ಹೇಳಿದಷ್ಟು ಸುಲಭವಲ್ಲ. ಹವಾಮಾನ ಬದಲಾವಣೆ ತಡೆಯುವ ದಿಸೆಯಲ್ಲಿ ದೇಶ ಈಗಾಗಲೇ ಕೈಗೊಂಡಿರುವ ಕ್ರಮಗಳನ್ನು ಗಮನಿಸಿದರೆ ಅದು ವೇದ್ಯವಾಗುತ್ತದೆ. ದೇಶದ ಒಟ್ಟು ಇಂಧನ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಈಗ ಇರುವುದು ಶೇಕಡ 10ರಷ್ಟು ಮಾತ್ರ. ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳದಲ್ಲಿಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರಗತಿ ಆಗಿದೆ. ಹಾಗಿದ್ದರೂ ಇದನ್ನು ಒಂಬತ್ತು ವರ್ಷಗಳಲ್ಲಿ ಶೇ 50ರಷ್ಟಕ್ಕೆ ಏರಿಸುವುದು ಸಾಧ್ಯವೇ? ನವೀಕರಿಸಬಹುದಾದ ಇಂಧನ ಉತ್ಪಾದನೆಯ ತಂತ್ರಜ್ಞಾನ ಇನ್ನಷ್ಟು ಸುಧಾರಣೆ ಆಗಬೇಕಿದೆ. ಇಂಧನ ಉತ್ಪಾದನೆ, ಸಂಗ್ರಹ, ವಿತರಣೆಯಲ್ಲಿ ಗಂಭೀರವಾದ ಹಲವು ಸಮಸ್ಯೆಗಳಿವೆ. ಇಂಗಾಲ ಹೊರಸೂಸುವಿಕೆಯನ್ನು ನೂರು ಕೋಟಿ ಟನ್‌ನಷ್ಟು ಕಡಿತ ಮಾಡಬೇಕಿದ್ದರೆ, ಹೊರಸೂಸುವಿಕೆಯು ಶೇ 22ರಷ್ಟು ಕಮ್ಮಿ ಆಗಬೇಕು. ಹಸಿರು ಮನೆ ಅನಿಲ ಹೊರಸೂಸುವಿಕೆಯ ಸಮತೋಲನ ಸಾಧಿಸಲು 2070ರವರೆಗೆ ಸಮಯ ಇದೆ. ಇದು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ಹಸಿರು ಮನೆ ಅನಿಲ ಸಮತೋಲನಕ್ಕೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟವು 2050ರ ಗುರಿ ಹಾಕಿಕೊಂಡಿವೆ. 2060ರ ಹೊತ್ತಿಗೆ ಇದನ್ನು ಸಾಧಿಸುವುದಾಗಿ ಚೀನಾ ಹೇಳಿದೆ.

ಈ ಗುರಿಗಳನ್ನು ಸಾಧಿಸಬೇಕಿದ್ದರೆ ಅಭಿವೃದ್ಧಿ ಯೋಜನೆಗಳು ಮತ್ತು ಅಭಿವೃದ್ಧಿ ನೀತಿಗಳಲ್ಲಿ ಮಹತ್ತರವಾದ ಬದಲಾವಣೆ ಅಗತ್ಯವಾಗಿದೆ. ಪ್ರಧಾನಿಯವರು ಹೇಳಿದಂತೆ, ಜೀವನಶೈಲಿಯಲ್ಲಿಯೂ ಗಮನಾರ್ಹವಾದ ಪಲ್ಲಟ ಆಗಬೇಕಾಗುತ್ತದೆ. ಅರಣ್ಯ, ಕೃಷಿ, ಕೈಗಾರಿಕೆ, ಪರಿಸರ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಈಗಿನ ನೀತಿಗಳು ಮತ್ತು ಪದ್ಧತಿಗಳು ಬದಲಾಗಬೇಕು. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ನಿಯಮಗಳನ್ನು ಮರು ರೂಪಿಸಬೇಕಿದೆ. ಇಂತಹ ಬದಲಾವಣೆಗಳನ್ನು ತರುವುದು ಸರಳವೇನೂ ಅಲ್ಲ. ಇಂತಹ ಬದಲಾವಣೆಗಳು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ದೊಡ್ಡ ಮಟ್ಟದ ಪರಿಣಾಮಗಳನ್ನು ಬೀರಬಹುದು. ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯ ಅಗತ್ಯಗಳು ಮತ್ತು ಪರಿಸರ ಸಂರಕ್ಷಣೆಯ ಬೇಡಿಕೆಗಳು ಏನು ಎಂಬುದನ್ನು ಗುರುತಿಸಿ, ಅವುಗಳ ನಡುವಣ ಅತ್ಯಂತ ನಾಜೂಕಿನ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಜಾಗತಿಕ ತಾಪಮಾನ ಏರಿಕೆ ವಿರುದ್ಧದ ಹೋರಾಟವು ಶ್ರೀಮಂತ ದೇಶಗಳ ನೀತಿಗಳು ಮತ್ತು ಕ್ರಿಯೆಗಳ ಮೇಲೆ ಅವಲಂಬಿತ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಯೋಜನೆಗಳಿಗೆ ಶ್ರೀಮಂತ ದೇಶಗಳು ಬೆಂಬಲ ಕೊಡಬೇಕು. ಶ್ರೀಮಂತ ದೇಶಗಳಿಗೆ ತಮ್ಮ ದೇಶದ ಹೊಣೆಗಾರಿಕೆಯ ಜತೆಗೆ ಜಾಗತಿಕ ಹೊಣೆಗಾರಿಕೆಯೂ ಇದೆ. ಈ ಎರಡನ್ನೂ ಸಮರ್ಪಕವಾಗಿ ನಿರ್ವಹಿಸಬೇಕು. ಮೋದಿ ಅವರು ಕೂಡ ಈ ವಿಚಾರವನ್ನು ಉಲ್ಲೇಖಿಸಿದ್ದಾರೆ. ಪರಿಸರದೆಡೆಗಿನ ಭಾರತದ ಪಯಣದಲ್ಲಿ ಜಾಗತಿಕ ಹೂಡಿಕೆಗಳು ಮತ್ತು ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ಹೇಳಿದ್ದಾರೆ. ಇಷ್ಟೇ ಸಾಲದು. ನಮಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ರೂಪಿಸಲು ಬೇಕಿರುವ ಸಂಶೋಧನೆ ಮತ್ತು
ಅಭಿವೃದ್ಧಿಯಲ್ಲಿ ಭಾರತವು ತೊಡಗಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT