ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲುಗಳಲ್ಲಿ ಸುರಕ್ಷೆಯ ಕ್ರಮಗಳನ್ನು ಬಲಪಡಿಸಿ

Last Updated 2 ಮಾರ್ಚ್ 2020, 20:06 IST
ಅಕ್ಷರ ಗಾತ್ರ

ರೈಲು ಪ್ರಯಾಣ ಅತ್ಯಂತ ಸುರಕ್ಷಿತ ಮತ್ತು ಅಗ್ಗ ಎನ್ನುವ ಭಾವನೆ ಜನಸಾಮಾನ್ಯರಲ್ಲಿ ಇದೆ. ಪ್ರಯಾಣ ದರದ ವಿಷಯದಲ್ಲಿ ಜನರ ನಂಬಿಕೆಯನ್ನು ರೈಲ್ವೆ ಇಲಾಖೆ ಇವತ್ತಿಗೂ ಉಳಿಸಿಕೊಂಡಿದೆ. ಆದರೆ ಸುರಕ್ಷೆಯ ವಿಷಯದಲ್ಲಿ ಈ ಮಾತನ್ನು ಧೈರ್ಯದಿಂದ ಹೇಳಲಾಗದು.

ಇತ್ತೀಚಿನ ವರ್ಷಗಳಲ್ಲಿ ರೈಲು ನಿಲ್ದಾಣ, ರೈಲ್ವೆ ಆವರಣ ಮತ್ತು ಚಲಿಸುತ್ತಿರುವ ರೈಲುಗಳಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಕಳವಳಕಾರಿ ಸಂಗತಿ. ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಆವರಣದಲ್ಲಿ 4,718 ಸುಲಿಗೆ, 771 ಅಪಹರಣ, 542 ಕೊಲೆ ಮತ್ತು 213 ಕೊಲೆಯತ್ನ ಪ್ರಕರಣಗಳು ವರದಿಯಾಗಿವೆ.ಅದಕ್ಕಿಂತ ಮುಖ್ಯವಾಗಿ, ಮೂರು ವರ್ಷಗಳಲ್ಲಿ 165 ಅತ್ಯಾಚಾರದ ಪ್ರಕರಣಗಳು ನಡೆದಿವೆ. 2019ರಲ್ಲಿ ಒಟ್ಟು 44 ಅತ್ಯಾಚಾರಗಳು ನಡೆದಿದ್ದು, ಅದರಲ್ಲಿ 8 ಪ್ರಕರಣಗಳು ಚಲಿಸುತ್ತಿರುವ ರೈಲಿನಲ್ಲೇ ನಡೆದಿವೆ ಎನ್ನುವುದು ಆಘಾತಕಾರಿ ಸಂಗತಿ.

ಆರ್‌ಟಿಐ ಕಾರ್ಯಕರ್ತರೊಬ್ಬರಿಗೆ ನೀಡಿರುವ ಮಾಹಿತಿಯಲ್ಲಿ ರೈಲ್ವೆ ಇಲಾಖೆಯೇ ಈ ಅಂಕಿಅಂಶ ಒದಗಿಸಿದೆ. ಚಲಿಸುತ್ತಿರುವ ರೈಲಿನಲ್ಲಿ ಸಹಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಇರುವಾಗಲೇ ಇಂತಹ ಹೀನಕೃತ್ಯಗಳು ನಡೆದಿರುವುದನ್ನು ಲಘುವಾಗಿ ಪರಿಗಣಿಸಲಾಗದು. ನಮ್ಮಲ್ಲಿ ಹೆಣ್ಣುಮಕ್ಕಳು, ಅತ್ಯಂತ ಹೆಚ್ಚು ಸುರಕ್ಷಿತ ಎನ್ನುವ ಕಾರಣಕ್ಕಾಗಿಯೇ ರೈಲು ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಇಂತಹ ಪ್ರಕರಣಗಳು, ಮಹಿಳೆಯರ ವಿಶ್ವಾಸಕ್ಕೆ ಭಂಗ ತರುತ್ತವೆ. ಅದಕ್ಕೆ ಎಳ್ಳಷ್ಟೂ ಅವಕಾಶ ಕೊಡಬಾರದು. ರೈಲು ನಿಲ್ದಾಣ, ಆವರಣ ಮತ್ತು ಚಲಿಸುವ ರೈಲಿನಲ್ಲಿ ಭದ್ರತಾ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಬೇಕಾದ ತುರ್ತು ಅಗತ್ಯವನ್ನು ಈ ಅಂಕಿಅಂಶಗಳು ಒತ್ತಿಹೇಳುತ್ತಿವೆ.

ಅಮೆರಿಕ, ಚೀನಾ ಮತ್ತು ರಷ್ಯಾ ಬಿಟ್ಟರೆ ವಿಶ್ವದಲ್ಲಿ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ದೇಶ ಭಾರತ. ಆದರೆ ಸುರಕ್ಷೆಯ ವಿಚಾರದಲ್ಲಿ ಈ ದೇಶಗಳಿಗಿಂತ ಹಿಂದುಳಿದಿದೆ. ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳು ನಮ್ಮಲ್ಲಿ ಓಡಾಡುತ್ತಿದ್ದು, 7,349 ರೈಲು ನಿಲ್ದಾಣಗಳಿವೆ. ಇವುಗಳಲ್ಲಿ 511 ರೈಲು ನಿಲ್ದಾಣಗಳಲ್ಲಿ ಮಾತ್ರ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಲಕ್ಷಾಂತರ ಬೋಗಿಗಳ ಪೈಕಿ 2,019 ಬೋಗಿಗಳಲ್ಲಿ ಮಾತ್ರ ಸಿ.ಸಿ. ಟಿ.ವಿ. ಕ್ಯಾಮೆರಾಗಳಿವೆ. ರೈಲ್ವೆ ಸುರಕ್ಷೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳು ನೀಡಿರುವ ಶಿಫಾರಸುಗಳು ಇಂದಿಗೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ. ಮುಖ್ಯವಾಗಿ ರೈಲ್ವೆ ಭದ್ರತೆಗೆ ಸಂಬಂಧಿಸಿ ಏಕರೂಪದ ಭದ್ರತಾ ವ್ಯವಸ್ಥೆಯೊಂದು ಇಲ್ಲದಿರುವುದು ಅತಿದೊಡ್ಡ ಕೊರತೆ.

ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್‌) ರೈಲಿನ ಸೊತ್ತುಗಳ ರಕ್ಷಣೆಯನ್ನು ಪ್ರಧಾನವಾಗಿ ನೋಡಿಕೊಳ್ಳುತ್ತದೆ. ಪ್ರಯಾಣಿಕರ ಸುರಕ್ಷೆಯನ್ನು ರೈಲ್ವೆ ಪೊಲೀಸ್‌ (ಜಿಆರ್‌ಪಿ) ಗಮನಿಸುತ್ತದೆ. ರೈಲು ಮಾರ್ಗದಲ್ಲಿನ ಅಪರಾಧ ಪ್ರಕರಣಗಳ ತನಿಖೆಯನ್ನು ಆಯಾ ರಾಜ್ಯದ ಪೊಲೀಸ್‌ ಇಲಾಖೆ ನೋಡಿಕೊಳ್ಳುತ್ತದೆ. ಈ ದಿಸೆಯಲ್ಲಿ ಸಮನ್ವಯದ ಕೊರತೆ ಹಲವು ಸಂದರ್ಭಗಳಲ್ಲಿ ತೊಡಕಾಗಿ ಪರಿಣಮಿಸುತ್ತದೆ. ರೈಲು ಪ್ರಯಾಣದಲ್ಲಿ ಕಳವಾದ, ಪ್ರಯಾಣಿಕರ ಅಮೂಲ್ಯ ಸೊತ್ತುಗಳಲ್ಲಿ ಹೆಚ್ಚಿನವು ಪತ್ತೆಯಾಗದೆ ಇರಲೂ ಈ ಸಮನ್ವಯದ ಕೊರತೆಯೇ ಕಾರಣ.

ಒಂದು ರೈಲು ನಿಲ್ದಾಣದಲ್ಲಿ ಕಳವಾದ ಸೊತ್ತಿನ ಬಗ್ಗೆ ಇನ್ನೊಂದು ರೈಲು ನಿಲ್ದಾಣ ತಲುಪಿದ ಬಳಿಕ ದೂರು ನೀಡಿದಾಗ ಎಷ್ಟೋ ಸಲ ಅದು ಬೇರೆಯೇ ರೈಲ್ವೆ ಡಿವಿಷನ್‌ ಆಗಿದ್ದು, ತನಿಖೆ ಪರಿಣಾಮಕಾರಿಯಾಗಿ ನಡೆಯುವುದಿಲ್ಲ. ರೈಲ್ವೆ ಸುಧಾರಣೆಯ ಕುರಿತು ನೇಮಕಗೊಂಡಿದ್ದ ಸಮಿತಿಗಳು ಸಲ್ಲಿಸಿರುವ ವರದಿಗಳು ರೈಲ್ವೆ ಭವನದಲ್ಲಿ ದೂಳು ತಿನ್ನುತ್ತಿವೆ ಎನ್ನುವುದು ಸುಳ್ಳಲ್ಲ. ಮುಖ್ಯವಾಗಿ ಮಹಿಳೆಯರ ಸುರಕ್ಷೆಗೆ ಇನ್ನಷ್ಟು ಒತ್ತು ನೀಡುವ ಉಪಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಬೇಕು. ಸಿ.ಸಿ. ಟಿ.ವಿ. ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಬೇಕು. ಅಪರಾಧಗಳ ತಡೆ– ನಿರ್ವಹಣೆಗಾಗಿ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಸುಧಾರಣೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ವರದಿಗಳ ಶಿಫಾರಸುಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರಲು ಇಚ್ಛಾಶಕ್ತಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT