ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರಣಜಿ ಟ್ರೋಫಿ ಕ್ರಿಕೆಟ್: ಹೊಳಪು ಮಂಕಾಗದಿರಲಿ

ಐಪಿಎಲ್‌ನ ಥಳಕು, ಅಂತರರಾಷ್ಟ್ರೀಯ ಕ್ರಿಕೆಟ್‌ ಅಬ್ಬರಗಳ ನಡುವೆಯೂ ರಣಜಿ ಪಂದ್ಯಗಳನ್ನು ನೋಡಲು ಇಷ್ಟಪಡುವ ಅಸಂಖ್ಯಾತ ಕ್ರಿಕೆಟ್‌ಪ್ರಿಯರು ಈಗಲೂ ಇದ್ದಾರೆ
Last Updated 3 ಫೆಬ್ರುವರಿ 2022, 1:03 IST
ಅಕ್ಷರ ಗಾತ್ರ

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯೆಂದರೆ ಕನಸುಗಳ ಕಣಜ. ತಾರೆಗಳಾಗಿ ಮಿನುಗಲು ಹಂಬಲಿಸುವ ಯುವ ಕ್ರಿಕೆಟಿಗರಿಗೆ ಚಿಮ್ಮುಹಲಗೆ. ದೇಶಿ ಕ್ರಿಕೆಟ್‌ನ ರಾಜ ಎಂದೇ ಕರೆಸಿಕೊಳ್ಳುವ ಈ ಟೂರ್ನಿ ಯನ್ನು ಈ ವರ್ಷ ಎರಡು ಹಂತಗಳಲ್ಲಿ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತೆಗೆದು ಕೊಂಡಿರುವ ನಿಲುವು ಸ್ವಾಗತಾರ್ಹ. ಫೆಬ್ರುವರಿ 16ರಿಂದ ಮಾರ್ಚ್‌ 5ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಮಾರ್ಚ್‌ 27ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್‌ ಟೂರ್ನಿಯನ್ನೂ ಭಾರತದಲ್ಲಿಯೇ ಆಯೋಜಿಸುವ ಸಾಧ್ಯತೆ ಇದೆ. ಆದ್ದರಿಂದ ಐಪಿಎಲ್ ಮುಗಿದ ನಂತರ ರಣಜಿ ಟೂರ್ನಿಯ ಎರಡನೇ ಹಂತವನ್ನು ನಡೆಸಲು ಉದ್ದೇಶಿಸಿದೆ. ಜನವರಿ 13 ರಿಂದಲೇ ರಣಜಿ ಟೂರ್ನಿ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಮೂರನೇ ಅಲೆಯ ಆತಂಕ ಆವರಿಸಿದ್ದರಿಂದ ಮುಂದೂಡಲಾಯಿತು. ಆದರೆ, ಐಪಿಎಲ್‌ ತಂಡಗಳ ಮೆಗಾ ಹರಾಜು ಪ್ರಕ್ರಿಯೆಯತ್ತ ಹೆಚ್ಚು ಗಮನಹರಿಸಿದ್ದ ಮಂಡಳಿಯನ್ನು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡರು. ರಣಜಿ ಟೂರ್ನಿಯು ದೇಶದ ಕ್ರಿಕೆಟ್‌ನ ಬೆನ್ನೆಲುಬು. ಅದನ್ನು ಕಡೆಗಣಿಸಿದರೆ ಏನೂ ಉಳಿಯುವುದಿಲ್ಲ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಮಾಡಿದ್ದ ಟ್ವೀಟ್‌ಗೆ ಭಾರಿ ಬೆಂಬಲ ವ್ಯಕ್ತವಾಯಿತು. ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ 2020–21ನೇ ಸಾಲಿನ ರಣಜಿ ಟೂರ್ನಿಯನ್ನು ರದ್ದು ಮಾಡಲಾಗಿತ್ತು. 88 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಟೂರ್ನಿ ರದ್ದಾಗಿತ್ತು. ಆಗ ಕೂಡ ಮಂಡಳಿಯು ಬಹಳಷ್ಟು ಟೀಕೆಗಳನ್ನು ಎದುರಿಸಿತ್ತು. ಐಪಿಎಲ್ ತಂಡಗಳ ಆಯ್ಕೆಗೆ ಅನುಕೂಲ ಮಾಡಿಕೊಡಲು ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಿದ್ದ ಮಂಡಳಿಗೆ ದೀರ್ಘ ಮಾದರಿಯ ದೇಶಿ ಟೂರ್ನಿ ಬಗ್ಗೆ ಒಲವು ಕಡಿಮೆ ಆಗಿದೆ ಎಂಬ ಟೀಕೆಗಳು ವ್ಯಕ್ತವಾದವು. ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದವರಿಗೆ ರಾಷ್ಟ್ರೀಯ ತಂಡದ ಆಯ್ಕೆಯಲ್ಲಿ ಆದ್ಯತೆ ನೀಡುತ್ತಿರುವುದು ಕೂಡ ದೇಶಿ ಕ್ರಿಕೆಟ್‌ಪ್ರಿಯರ ಕಣ್ಣು ಕೆಂಪಗಾಗಿಸಿತು. 1934ರಲ್ಲಿ ಆರಂಭವಾದ ರಣಜಿ ಟೂರ್ನಿಯು ದೇಶದ ಕ್ರಿಕೆಟ್‌ ಬೆಳವಣಿಗೆಗೆ ನೀಡಿದ ಕೊಡುಗೆ ಅಸಾಧಾರಣವಾದದ್ದು. ಇಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ ಹಲವರು ಕ್ರಿಕೆಟ್ ಲೋಕದ ದಿಗ್ಗಜರಾಗಿ ಬೆಳೆದರು. ಪ್ರತಿಯೊಂದು ರಾಜ್ಯದ ಪ್ರತಿಭಾವಂತರನ್ನು ಒರೆಗೆ ಹಚ್ಚುವ ವೇದಿಕೆ ಇದಾಗಿದೆ. ಅಲ್ಲದೆ ಬಹಳಷ್ಟು ಕ್ರಿಕೆಟಿಗರು, ಅಂಪೈರ್, ಸ್ಕೋರರ್, ಸಿಬ್ಬಂದಿ ಮತ್ತು ತಂಡಗಳ ನೆರವಿನ ಸಿಬ್ಬಂದಿಗೆ ಆದಾಯದ ಪ್ರಮುಖ ಮೂಲವೂ ಇದಾಗಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಐಪಿಎಲ್‌ನ ಥಳಕು, ಅಂತರರಾಷ್ಟ್ರೀಯ ಕ್ರಿಕೆಟ್‌ ಅಬ್ಬರದ ನಡುವೆಯೂ ಭವಿಷ್ಯದ ತಾರೆಯರನ್ನು ಪ್ರವರ್ಧಮಾನಕ್ಕೆ ತರುವ ರಣಜಿ ಪಂದ್ಯಗಳನ್ನು ನೋಡಲು ಇಷ್ಟಪಡುವ ಅಸಂಖ್ಯಾತ ಕ್ರಿಕೆಟ್‌ಪ್ರಿಯರು ಈಗಲೂ ಇದ್ದಾರೆ.

ಅದಕ್ಕಾಗಿಯೇ ಮಂಡಳಿಯು ಈ ವರ್ಷ ಟೂರ್ನಿಯನ್ನು ನಡೆಸಲು ಮುಂದಾಗಿದೆ. ಅದಕ್ಕಾಗಿ ಹೊಸ ಪ್ರಯೋಗಕ್ಕೆ ಸಿದ್ಧವಾಗಿದೆ. ಜೀವಸುರಕ್ಷಾ ನಿಯಮದ ಚೌಕಟ್ಟಿನಲ್ಲಿ 38 ತಂಡಗಳು ಆಡಲಿವೆ. ಬೆಂಗಳೂರು, ಅಹಮದಾಬಾದ್, ಕೋಲ್ಕತ್ತ, ತಿರುವನಂತಪುರ, ಕಟಕ್, ಚೆನ್ನೈ, ಗುವಾಹಟಿ, ಹೈದರಾ ಬಾದ್ ಮತ್ತು ರಾಜ್‌ಕೋಟ್‌ನಲ್ಲಿ ಪಂದ್ಯಗಳನ್ನು ನಡೆಸಲು ಯೋಜಿಸಿದೆ. ಎಲೀಟ್ ವಿಭಾಗದಲ್ಲಿ ಎಂಟು ಗುಂಪುಗಳನ್ನು ಮಾಡಲಾಗಿದ್ದು, ಪ್ರತಿಯೊಂದು ಗುಂಪಿನಲ್ಲಿಯೂ ನಾಲ್ಕು ತಂಡಗಳಿರುತ್ತವೆ. ಪ್ಲೇಟ್ ವಿಭಾಗದಲ್ಲಿ ಆರು ತಂಡಗಳಿವೆ. ಬಹುತೇಕ ಎಲ್ಲ ತಂಡಗಳೂ ತಟಸ್ಥ ತಾಣಗಳಲ್ಲಿಯೇ ಆಡಲಿವೆ. ಕರ್ನಾಟಕ ತಂಡವು ಚೆನ್ನೈನಲ್ಲಿ ಪಂದ್ಯಗಳನ್ನು ಆಡಲಿದೆ. ಇದು ಸಹಜವಾಗಿಯೇ ಸ್ಥಳೀಯ ಅಭಿಮಾನಿ ಗಳಲ್ಲಿ ನಿರಾಸೆ ಮೂಡಿಸಿದೆ. ಆದರೆ, ಕೊರೊನಾ ಕಾಲಘಟ್ಟದಲ್ಲಿ ಸುರಕ್ಷತೆ ಮುಖ್ಯ. ಪಂದ್ಯ ವೀಕ್ಷಿಸಲು ಜನ ಸೇರುವುದನ್ನು ತಡೆಯಲು ಈ ಕ್ರಮ ಎಂಬುದು ಮಂಡಳಿಯ ನಿಲುವು. ಎರಡು ವರ್ಷಗಳಿಂದ ಕೋವಿಡ್‌ ಸವಾಲುಗಳನ್ನು ಎದುರಿಸುತ್ತಲೇ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ. ಟೋಕಿಯೊ ಒಲಿಂಪಿಕ್ಸ್‌ ಯಶಸ್ವಿಯಾದ ನಂತರ ನಡೆದ ಬಹುತೇಕ ಎಲ್ಲ ಕ್ರೀಡಾಕೂಟಗಳು, ಕ್ರಿಕೆಟ್ ಟೂರ್ನಿಗಳು ಯಶಸ್ವಿಯಾಗಿವೆ. ಕಳೆದ ತಿಂಗಳಷ್ಟೇ ಭಾರತದಲ್ಲಿ ಎರಡು ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಗಳು ನಡೆದವು. ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಮತ್ತು ಗೋವಾದಲ್ಲಿ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಕೂಡ ನಡೆಯುತ್ತಿವೆ. ಈ ಟೂರ್ನಿಗಳಲ್ಲಿ ಕೆಲವು ಆಟಗಾರರು ಕೊರೊನಾ ಸೋಂಕಿಗೆ ಒಳಗಾದರು. ಆದರೆ ಅವರನ್ನಷ್ಟೇ ಪ್ರತ್ಯೇಕಿಸಲಾಯಿತು. ನವೀ ಮುಂಬೈನಲ್ಲಿ ನಡೆದ ಏಷ್ಯಾ ಕಪ್ ಮಹಿಳೆಯರ ಫುಟ್‌ ಬಾಲ್‌ ಟೂರ್ನಿಯಲ್ಲಿ ಭಾರತದ ಆಟಗಾರ್ತಿಯರಿಗೆ ಕೋವಿಡ್ ಖಚಿತವಾಗಿ ತಂಡ ಹೊರಬಿತ್ತು. ಆದರೆ ಟೂರ್ನಿಗಳು ಅಬಾಧಿತವಾಗಿ ನಡೆದವು. ಇದೇ 6ರಿಂದ ಭಾರತದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳ ನಡುವಣ ಸೀಮಿತ ಓವರ್‌ಗಳ ಕ್ರಿಕೆಟ್ ನಡೆಯಲಿದೆ. ಈ ಆಶಾದಾಯಕ ಬೆಳವಣಿಗೆಯ ಅಲೆಯಲ್ಲಿಯೇ ರಣಜಿ ಟೂರ್ನಿಯನ್ನು ಯಶಸ್ವಿಗೊಳಿಸುವ ವಿಶ್ವಾಸದಲ್ಲಿ ಮಂಡಳಿಯಿದೆ. ಆಯೋಜಕರಿಗೆ ದುಡ್ಡು, ನೋಡುಗರಿಗೆ ಮನರಂಜನೆಯ ಹೊಳೆ ಹರಿಸುವ ಐಪಿಎಲ್‌ಗೂ ಇದರ ನಡುವೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ, ಕೋವಿಡ್, ಐಪಿಎಲ್ ಏನೇ ಇರಲಿ, ದೇಶಿ ಕ್ರಿಕೆಟ್ ಮಂಕಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಬಿಸಿಸಿಐ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT