ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಸ್ವಾಯತ್ತತೆ: ಪ್ರತಿಷ್ಠೆಬದಿಗಿಟ್ಟು ಬಿಕ್ಕಟ್ಟು ಪರಿಹರಿಸಿ

Last Updated 1 ನವೆಂಬರ್ 2018, 20:01 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸ್ವಾಯತ್ತತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಜಟಾಪಟಿಯು ಬಹಿರಂಗಗೊಂಡಿದೆ. ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂವಹನದ ಮಾರ್ಗಗಳೆಲ್ಲ ಸದ್ಯಕ್ಕೆ ಮುಚ್ಚಿಕೊಂಡಿರುವುದನ್ನು ಇದು ದೃಢಪಡಿಸುತ್ತದೆ. ತನ್ನ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಅತಿಕ್ರಮಣವನ್ನು ಆರ್‌ಬಿಐ ಆಕ್ಷೇಪಿಸಿರುವುದರಿಂದ ಬಿಕ್ಕಟ್ಟು ವಿಷಮಿಸುತ್ತಿದೆ.

ಹಣಕಾಸು ಸಚಿವಾಲಯ ಜತೆಗಿನ ಆರ್‌ಬಿಐನ ಇಂತಹ ಜಟಾಪಟಿಯು ಇದೇ ಮೊದಲಲ್ಲ. ಕೊನೆಯದೂ ಅಲ್ಲ. ಆರ್‌ಬಿಐನ ಅಧಿಕಾರ ಮೊಟಕುಗೊಳಿಸುವ ಕೇಂದ್ರದ ಹವಣಿಕೆಯು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಪಾವತಿ ವ್ಯವಸ್ಥೆಗೆ ಪ್ರತ್ಯೇಕ ನಿಯಂತ್ರಣ ಸಂಸ್ಥೆ ಸ್ಥಾಪನೆ, ಬ್ಯಾಂಕ್‌ಗಳ ಮೇಲಿನ ನಿಯಂತ್ರಣಕ್ಕೆ ಕಡಿವಾಣ, ‘ಮುದ್ರಾ’ ಮತ್ತು ಎಸ್‌ಎಂಇ ಸಾಲ ಮಂಜೂರಾತಿ ಮೇಲಿನ ನಿಬಂಧನೆ ರದ್ದುಪಡಿಸಲು ಕೇಂದ್ರ ಒತ್ತಡ ಹೇರುತ್ತಿರುವುದು, ಕೆಲ ಬ್ಯಾಂಕ್‌ಗಳಿಗೆ ವಿಧಿಸಿರುವ ನಿರ್ಬಂಧಿತ ಕ್ರಮಗಳ ಸಡಿಲಿಕೆಗೆ ಒತ್ತಾಯ, ಸರ್ಕಾರಕ್ಕೆ ಹೆಚ್ಚಿನ ಲಾಭಾಂಶ ಪಾವತಿಸಲು ಬೇಡಿಕೆ, ಆರ್‌ಬಿಐ ನಿರ್ದೇಶಕ ಮಂಡಳಿಗೆ ಪರಿಣತರಲ್ಲದವರ ‘ರಾಜಕೀಯ ನೇಮಕಾತಿ’ ಮುಂತಾದವು ಹಾದಿ– ಬೀದಿ ರಂಪಾಟಕ್ಕೆ ಮೂಲ ಕಾರಣಗಳಾಗಿವೆ.

ಸರ್ಕಾರ ತಳೆದಿರುವ ಹಲವು ನಿಲುವುಗಳು ಹಣಕಾಸು ಸ್ಥಿರತೆಗೆ ಅಪಾಯ ಒಡ್ಡಲಿವೆ ಎನ್ನುವುದು ಆರ್‌ಬಿಐನ ಕಾಳಜಿಯಾಗಿದೆ. ಇದರಲ್ಲಿ ಅಸಹಜತೆ ಏನೂ ಇಲ್ಲ. ಡಾಲರ್‌ ಎದುರು ರೂಪಾಯಿ ಬೆಲೆ ಕುಸಿತ, ತೈಲ ಬೆಲೆ ಏರಿಕೆ, ವಿತ್ತೀಯ ಕೊರತೆ ಹೆಚ್ಚಳ, ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಏರಿಕೆ, ಷೇರುಪೇಟೆಯಲ್ಲಿನ ಅನಿಶ್ಚಿತತೆಯಂತಹ ಆರ್ಥಿಕ ಕ್ಷೋಭೆಯ ಸಂದರ್ಭದಲ್ಲಿನ ಈ ಬೆಳವಣಿಗೆಯು ಅನಪೇಕ್ಷಿತ. ಕೇಂದ್ರ ಸರ್ಕಾರದ ಹಸ್ತಕ್ಷೇಪವು, ಆರ್‌ಬಿಐನಂತಹ ಸ್ವಾಯತ್ತ ನಿಯಂತ್ರಣ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಅಡಚಣೆ ಒಡ್ಡಲಿದೆ. ಇದರಿಂದ ಬಂಡವಾಳ ಹೂಡಿಕೆದಾರರ ಆತ್ಮವಿಶ್ವಾಸ ಕುಗ್ಗಲಿದೆ. ಹೂಡಿಕೆಯ ಹೊರ ಹರಿವು ಹೆಚ್ಚಲಿದೆ.

ಚುನಾಯಿತ ಸರ್ಕಾರಗಳು ತಮ್ಮ ಭರವಸೆಈಡೇರಿಸಲು ಹೊರಟಾಗ ಅರ್ಥವ್ಯವಸ್ಥೆಗೆ ಆಗುವ ಹಾನಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸ್ವಾಯತ್ತ ಕೇಂದ್ರೀಯ ಬ್ಯಾಂಕ್‌ಗಳು ಅಂತಹ ಅಪಾಯಗಳನ್ನು ತಡೆಗಟ್ಟಲು ಮುಂದಾಗುವುದು ವಿಶ್ವದಾದ್ಯಂತ ಪ್ರಚಲಿತದಲ್ಲಿ ಇದೆ. ಬ್ಯಾಂಕ್‌ ವಂಚನೆ ಹೆಚ್ಚಳ ಪ್ರಕರಣಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿರುದ್ಧ ಕ್ರಮಕೈಗೊಳ್ಳಲು ತನಗೆ ಹೆಚ್ಚಿನ ಅಧಿಕಾರ ಇಲ್ಲ ಎಂದು ಆರ್‌ಬಿಐ ದೂರುತ್ತಿದೆ. ತನ್ನ ಸ್ವತಂತ್ರ ಕಾರ್ಯನಿರ್ವಹಣೆಗೆ ಧಕ್ಕೆಯಾಗುತ್ತಿದೆ ಎಂದು ಆರ್‌ಬಿಐ ಪ್ರತಿಬಾರಿ ದೊಡ್ಡದಾಗಿ ದನಿ ಎತ್ತುವುದೂ ಅಷ್ಟೇನೂ ನ್ಯಾಯಸಮ್ಮತವಲ್ಲ.

ತನ್ನ ಬಳಿ ಇರುವ ಪರಮಾಧಿಕಾರವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಆರ್‌ಬಿಐನ ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರವು ಪೋಷಿಸುತ್ತ, ಗೌರವಿಸುತ್ತಲೇ ಬಂದಿದೆ ಎಂದು ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ. ಆದರೆ, ಆರ್‌ಬಿಐ ಕಾಯ್ದೆ 1934ರ ಸೆಕ್ಷನ್‌ 7ರಲ್ಲಿ ತನಗೆ ಇರುವ ಅಧಿಕಾರ ಚಲಾಯಿಸಿರುವ ಬಗ್ಗೆ ಪಾರದರ್ಶಕತೆ ಕಂಡು ಬಂದಿಲ್ಲ. ಇದು ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎನ್ನುವ ಅನುಮಾನ ಮೂಡಿಸುತ್ತದೆ.

ಈ ಹಿಂದೆಯೂ ಹಲವಾರು ಬಾರಿ ಇಂತಹ ಸಂಘರ್ಷ ಕಂಡುಬಂದಿತ್ತು. ಆದರೆ, ಇಷ್ಟರಮಟ್ಟಿಗೆ ಸುದೀರ್ಘ ಅವಧಿಗೆ ಮುಂದುವರಿದಿರಲಿಲ್ಲ. ಜಾಗತಿಕ ಮತ್ತು ಸ್ಥಳೀಯ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಈ ಸಂಘರ್ಷ ಹೆಚ್ಚಿನ ಅನಾಹುತಕ್ಕೆ ಎಡೆಮಾಡಿಕೊಡದಂತೆ ಎಚ್ಚರ ವಹಿಸುವುದು ಸದ್ಯದ ಅಗತ್ಯವಾಗಿದೆ. ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ತಕ್ಷಣ ಸಂಧಾನ ಮಾರ್ಗಕ್ಕೆ ಮರಳಬೇಕು. ಸರ್ಕಾರವೇ ಒಪ್ಪಿಕೊಂಡಂತೆ ಕೇಂದ್ರೀಯ ಬ್ಯಾಂಕ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದು ಸದ್ಯದ ಅಗತ್ಯವಾಗಿದೆ. ಆರ್‌ಬಿಐನ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸಿ ಅದನ್ನು ದುರ್ಬಲಗೊಳಿಸುವ ಪ್ರಯತ್ನ
ಗಳನ್ನು ಸರ್ಕಾರ ನಿಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT