ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯನಿಧಿ ವಂತಿಗೆ ಕಡಿತ ಚಿಂತನೆ ಸಾಮಾಜಿಕ ಸುರಕ್ಷೆಗೆ ಪೂರಕವಲ್ಲ

Last Updated 13 ಡಿಸೆಂಬರ್ 2019, 20:16 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ‘ಸಾಮಾಜಿಕ ಸುರಕ್ಷಾ ಸಂಹಿತೆ ಮಸೂದೆ– 2019’, ಉದ್ಯೋಗಿಗಳ ಸಾಮಾಜಿಕ ಸುರಕ್ಷೆಗೆ ಸಂಬಂಧಿಸಿ ಹಲವು ಹೊಸ ಉಪಕ್ರಮಗಳನ್ನು ಒಳಗೊಂಡಿದೆ. ಕಾರ್ಮಿಕರಿಗೆ ಸಂಬಂಧಿಸಿ ಈಗಾಗಲೇ ಇರುವ ಹಲವು ಕಾಯ್ದೆಗಳನ್ನು ವಿಲೀನಗೊಳಿಸಿ ಈ ಹೊಸ ಮಸೂದೆಯನ್ನು ರೂಪಿಸಲಾಗಿದೆ. ಉದ್ಯೋಗಿಗಳ ಪರಿಹಾರ ಕಾಯ್ದೆ, ರಾಜ್ಯ ವಿಮೆ, ಭವಿಷ್ಯನಿಧಿ ಕಾಯ್ದೆ, ಗ್ರಾಚ್ಯುಟಿ ಪಾವತಿ, ಉದ್ಯೋಗ ವಿನಿಮಯ ಕಾಯ್ದೆ, ಕಟ್ಟಡ ನಿರ್ಮಾಣ ಕೆಲಸಗಾರರ ಮತ್ತು ಅಸಂಘಟಿತ ಕಾರ್ಮಿಕರ ಸುರಕ್ಷೆ ಕಾಯ್ದೆ ಈ ಎಲ್ಲವೂ ಈ ಮಸೂದೆಯಲ್ಲಿ ಸೇರಿವೆ. ಇವೆಲ್ಲವೂ ಆಯಾ ಕಾಲದಲ್ಲಿ ಉದ್ಯೋಗಿಗಳ ಹಿತರಕ್ಷಣೆಯ ಸಲುವಾಗಿ ಸರ್ಕಾರ ಜಾರಿಗೊಳಿಸಿದ ಕಾಯ್ದೆಗಳೇ ಆಗಿವೆ. ಎಲ್ಲವನ್ನೂ ಒಂದೇ ಸಂಹಿತೆಯಡಿ ತರುವುದರಿಂದ ಕಾನೂನಿನ ಪರಿಣಾಮಕಾರಿ ಜಾರಿ ಸಾಧ್ಯವಾಗುತ್ತದೆ ಎನ್ನುವುದು ಸರ್ಕಾರದ ಉದ್ದೇಶ. ಈ ಉದ್ದೇಶ ಒಳ್ಳೆಯದೇ. ಉದ್ಯೋಗಿಗಳು ಗ್ರಾಚ್ಯುಟಿಗೆ ಅರ್ಹತೆ ಪಡೆಯಲು ಈಗಿರುವ ಐದು ವರ್ಷಗಳ ಸೇವಾವಧಿಯನ್ನು ಒಂದು ವರ್ಷಕ್ಕೆ ಇಳಿಸುವ ಪ್ರಸ್ತಾವ ಈ ಮಸೂದೆಯಲ್ಲಿದ್ದು, ಇದು ಸ್ವಾಗತಾರ್ಹ. ನಿವೃತ್ತಿಯ ಕೊನೆಯಲ್ಲಿ ಅಥವಾ ಉದ್ಯೋಗ ತೊರೆದಾಗ ಸಿಗುವ ಈ ಮೊತ್ತ ಪ್ರತಿಯೊಬ್ಬ ಉದ್ಯೋಗಿಗೂ ಒಂದು ಭದ್ರತೆಯ ಭಾವವನ್ನು ಒದಗಿಸುತ್ತದೆ. ಹಾಗೆಯೇ ಅಸಂಘಟಿತ ವಲಯದ ಕಾರ್ಮಿಕರಿಗೆ ವೈದ್ಯಕೀಯ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸಾಮಾಜಿಕ ಸುರಕ್ಷಾ ನಿಧಿ ಮತ್ತು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ ನಿಧಿ ಸ್ಥಾಪಿಸಲು ಅವಕಾಶ ಮಾಡಿಕೊಡುವುದೂ ಮಹತ್ವದ ಕ್ರಮ. ಅಸಂಘಟಿತ ವಲಯದ ನೌಕರರೂ ನಿವೃತ್ತಿಯ ಬಳಿಕ ಗೌರವಾರ್ಹ ಜೀವನ ಸಾಗಿಸಲು ಈ ಪಿಂಚಣಿಯ ಮೊತ್ತ ನೆರವಾಗುತ್ತದೆ.

ಆದರೆ, ಭವಿಷ್ಯ ನಿಧಿಗೆ ಪ್ರತಿತಿಂಗಳೂ ನೌಕರರ ಮೂಲವೇತನದಿಂದ ಕಡಿತಗೊಳಿಸುವ ಮೊತ್ತವನ್ನು ತುಸು ಇಳಿಸುವ ಆಯ್ಕೆಯನ್ನು ಉದ್ಯೋಗಿಗಳಿಗೆ ಕೊಡುವ ಪ್ರಸ್ತಾವ ಈ ಮಸೂದೆಯಲ್ಲಿ ಇದೆ. ಈ ಪ್ರಸ್ತಾವ ಅಷ್ಟೇನೂ ಸಮಂಜಸವಲ್ಲ. ‘ಮೂಲವೇತನದಲ್ಲಿ ಭವಿಷ್ಯ ನಿಧಿಗಾಗಿ ಕಡಿತವಾಗುವ ಮೊತ್ತ ಕಡಿಮೆಯಾದರೆ ಪ್ರತಿತಿಂಗಳೂ ಉದ್ಯೋಗಿಗಳ ಕೈಗೆ ಸಿಗುವ ಸಂಬಳದ ಮೊತ್ತ ಹೆಚ್ಚಾಗುತ್ತದೆ. ಆ ಮೂಲಕ ಅವರು ಹೆಚ್ಚು ಖರ್ಚು ಮಾಡಿದರೆ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಳಗೊಳ್ಳುತ್ತದೆ’ ಎನ್ನುವುದು ಸರ್ಕಾರದ ಲೆಕ್ಕಾಚಾರ ಎಂಬ ವರದಿಗಳಿವೆ. ಭವಿಷ್ಯನಿಧಿಗೆ ಸಂಬಂಧಿಸಿ ಇಂತಹ ಪ್ರಸ್ತಾವವನ್ನು ಜಾರಿಗೊಳಿಸುವ ಸಂಬಂಧ ಕಳೆದ ವರ್ಷದ ಆಗಸ್ಟ್‌ನಲ್ಲೇ ಚರ್ಚೆ ನಡೆದಿತ್ತು. ಮೂಲವೇತನದಿಂದ ಭವಿಷ್ಯನಿಧಿಗಾಗಿ ಕಡಿತಗೊಳಿಸುವ ಪ್ರಮಾಣವನ್ನು ಶೇ 10ಕ್ಕೆ ಇಳಿಸುವ ಪ್ರಸ್ತಾವವನ್ನು2017ರಲ್ಲಿ ಮಂಡಿಸಿದಾಗ, ಭವಿಷ್ಯನಿಧಿಯ ಕೇಂದ್ರ ಧರ್ಮದರ್ಶಿಗಳ ಮಂಡಳಿ ಅದನ್ನು ತಿರಸ್ಕರಿಸಿತ್ತು. ಸರ್ಕಾರ ಈಗ ಹೊಸ ಮಸೂದೆಯಲ್ಲಿ ಉದ್ಯೋಗಿಗಳ ವಂತಿಗೆ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಆಯ್ಕೆಸ್ವಾತಂತ್ರ್ಯ ನೀಡಲು ಮುಂದಾಗಿದೆ. ಭವಿಷ್ಯ ನಿಧಿಯನ್ನು ರೂಪಿಸಿರುವುದೇ ನಿವೃತ್ತಿಯ ಬಳಿಕ ಉದ್ಯೋಗಿಗಳಿಗೆ ಆಸರೆಯಾಗಬೇಕು ಎನ್ನುವ ಕಾರಣಕ್ಕಾಗಿ. ಜೊತೆಗೆ ಮಕ್ಕಳ ಮದುವೆ, ಶಿಕ್ಷಣ, ಗೃಹನಿರ್ಮಾಣ ಮುಂತಾದ ತುರ್ತು ಅವಶ್ಯಕತೆಗಳಿಗೆ ಭವಿಷ್ಯನಿಧಿ ಬಳಕೆಯಾಗುತ್ತಿದೆ. ವಂತಿಗೆ ಕಡಿತಕ್ಕೆ ಅವಕಾಶ ಮಾಡಿಕೊಡುವುದರಿಂದ ನಿವೃತ್ತಿಯ ನಂತರ ಉದ್ಯೋಗಿಗೆ ಸಿಗುವ ಇಡುಗಂಟು ಸಹಜವಾಗಿಯೇ ಕಡಿಮೆ ಆಗುತ್ತದೆ. ಅದರ ಪರಿಣಾಮವಾಗಿ ಆರ್ಥಿಕ ಭದ್ರತೆಗೆ ಭಂಗ ಉಂಟಾಗುತ್ತದೆ. ಸರಕು ಮತ್ತು ಸೇವೆಗಳ ಬಳಕೆ ಪ್ರಮಾಣ ಹೆಚ್ಚಿಸುವ ಸಲುವಾಗಿ ಉದ್ಯೋಗಿಗಳು ಹೆಚ್ಚು ಹಣ ಖರ್ಚು ಮಾಡಬೇಕೆಂದರೆ, ಸರ್ಕಾರ ಬೇರೆ ಹಲವು ದಾರಿಗಳನ್ನು ಕಂಡುಕೊಳ್ಳಬಹುದು. ಆದಾಯ ತೆರಿಗೆಯನ್ನು ಕಡಿಮೆ ಮಾಡಬಹುದು. ಉತ್ಪಾದನಾ ವಲಯದ ಚಟುವಟಿಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಂಡು ಉದ್ಯಮಗಳಲ್ಲಿ ಕಾರ್ಮಿಕರಿಗೆ ಹೆಚ್ಚು ಕೆಲಸ ಸಿಗುವಂತೆ ನೋಡಿಕೊಳ್ಳಬಹುದು. ಇಂತಹ ಕ್ರಮಗಳನ್ನು ಕೈಗೊಂಡರೆ, ಸಹಜವಾಗಿಯೇ ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಹೆಚ್ಚಾಗುತ್ತದೆ. ಗ್ರಾಹಕರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಅವಶ್ಯಕ ವಸ್ತುಗಳ ಬೆಲೆಏರಿಕೆಯನ್ನು ನಿಯಂತ್ರಿಸುವುದರ ಜೊತೆಗೆ ಇತರ ಉಪಕ್ರಮಗಳ ಬಗ್ಗೆಯೂ ಸರ್ಕಾರ ಆಲೋಚಿಸಬಹುದು.ಅದನ್ನು ಬಿಟ್ಟು ಉದ್ಯೋಗಿಗಳ ನಿವೃತ್ತಿ ನಂತರದ ಬದುಕಿಗಾಗಿ ತೆಗೆದಿಡುವ ಹಣದ ಮೊತ್ತ ಕಡಿಮೆಯಾಗಲು ಅವಕಾಶ ಕಲ್ಪಿಸುವ ಚಿಂತನೆ ಸಮರ್ಥನೀಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT