ಬಿಜೆಪಿಯನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಅಡ್ವಾಣಿ ಮಾತು

ಶುಕ್ರವಾರ, ಏಪ್ರಿಲ್ 26, 2019
21 °C

ಬಿಜೆಪಿಯನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಅಡ್ವಾಣಿ ಮಾತು

Published:
Updated:
Prajavani

ಬಿಜೆಪಿಯ ಸಂಸ್ಥಾಪಕ ನಾಯಕರಲ್ಲಿ ಒಬ್ಬರಾದ ಎಲ್.ಕೆ. ಅಡ್ವಾಣಿ ಗುರುವಾರ ಪ್ರಕಟಿಸಿರುವ ಬ್ಲಾಗ್‌ನಲ್ಲಿ ‘ಭಿನ್ನ ರಾಜಕೀಯ ಸಿದ್ಧಾಂತವಿರುವವರನ್ನು ದೇಶದ್ರೋಹಿಗಳೆಂದು ಕರೆಯುವುದು ಸರಿಯಲ್ಲ. ಇದು ಬಿಜೆಪಿಯ ಸಂಸ್ಕೃತಿಯೂ ಅಲ್ಲ’ ಎಂದಿದ್ದಾರೆ. ಇದೇ ವೇಳೆ, ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ‘ಭಾರತೀಯ ಸೇನೆ ಮೋದಿಗೆ ಸೇರಿದ್ದು ಎಂದು ಯಾರಾದರೂ ಹೇಳಿದರೆ ಆ ವ್ಯಕ್ತಿ ದೇಶದ್ರೋಹಿ’ ಎಂದು ಹೇಳಿದ್ದಾರೆ. ಸಂಘಪರಿವಾರದ ಸಿದ್ಧಾಂತವನ್ನು ಒಪ್ಪುವವರಷ್ಟೇ ದೇಶಪ್ರೇಮಿಗಳು ಎಂಬ ಪೂರ್ವಗ್ರಹವೊಂದನ್ನು ವ್ಯವಸ್ಥಿತವಾಗಿ ಬಿತ್ತುವ ಕೆಲಸವನ್ನು ಬಿಜೆಪಿ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014ರಲ್ಲಿ ದೇಶದ ಚುಕ್ಕಾಣಿ ಹಿಡಿದ ಮೇಲೆ ಬಿಜೆಪಿ ಮತ್ತು ಅದರ ಸಹೋದರ ಸಂಘಟನೆಗಳೆಲ್ಲವೂ ದೇಶದ್ರೋಹಿಗಳು ಯಾರೆಂದು ವ್ಯಾಖ್ಯಾನಿಸುವ ಕೆಲಸವನ್ನೂ ಆರಂಭಿಸಿದವು. ಈ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಷ್ಟ್ರೀಯ ವಕ್ತಾರರಿಂದ ತೊಡಗಿ ನೆಲಮಟ್ಟದ ಕಾರ್ಯಕರ್ತರ ತನಕದ ಎಲ್ಲರೂ ‘ದೇಶದ್ರೋಹಿ’ಗಳನ್ನು ‘ಗುರುತಿಸುವ’ ಕೆಲಸದಲ್ಲಿ ತೊಡಗಿದರು. ಬಿಜೆಪಿಯ ಆಡಳಿತಾತ್ಮಕ ನಿರ್ಧಾರಗಳು ಮತ್ತು ಸಂಘಪರಿವಾರದ ಸೈದ್ಧಾಂತಿಕ ನಿಲುವುಗಳನ್ನು ಪ್ರಶ್ನಿಸುವವರೆಲ್ಲರೂ ಇವರ ದೃಷ್ಟಿಯಲ್ಲಿ ‘ದೇಶದ್ರೋಹಿ’ಗಳು. ಎಬಿವಿಪಿ ಎಂಬ ವಿದ್ಯಾರ್ಥಿ ಸಂಘಟನೆ ದೇಶವ್ಯಾಪಿಯಾಗಿ ಕ್ಯಾಂಪಸ್‌ಗಳಲ್ಲಿ ಎಬ್ಬಿಸಿದ ಹಲವು ಗಲಭೆಗಳು ರಚನಾತ್ಮಕ ಭಿನ್ನಮತವನ್ನು ವಿರೋಧಿಸುವಂಥವೇ ಆಗಿದ್ದವು. ಇನ್ನು ಬಜರಂಗದಳದಂಥ ಸಂಘಟನೆಗಳಂತೂ ಜನರ ಆಹಾರ ಮತ್ತು ಸಾಂಸ್ಕೃತಿಕ ಆಯ್ಕೆಗಳನ್ನೂ ನಿಯಂತ್ರಿಸುವ ಮೂಲಕ ‘ಭಾರತೀಯ ಸಂಸ್ಕೃತಿ’ಯನ್ನು ವ್ಯಾಖ್ಯಾನಿಸುತ್ತಿವೆ. ಇದೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿಪೂಜೆಯ ಪಂಥವೂ ವಿಸ್ತಾರಗೊಂಡಿತು. ಯೋಗಿ ಆದಿತ್ಯನಾಥ ಅವರು ಭಾರತದ ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದದ್ದು ಈ ವ್ಯಕ್ತಿಪೂಜೆ ಪಂಥದ ಇತ್ತೀಚಿನ ಉದಾಹರಣೆ.

ಐದೂ ವರ್ಷಗಳ ಕಾಲ ಮೌನ ವಹಿಸಿದ್ದ ಅಡ್ವಾಣಿಯವರು ಈಗ ಒಂದು ಬ್ಲಾಗ್‌ ಬರಹದ ಮೂಲಕ ‘ಭಿನ್ನ ಚಿಂತನೆಗಳನ್ನು ಹೊಂದಿರುವವರನ್ನು ದೇಶದ್ರೋಹಿಗಳೆಂದು ಕರೆಯುವ ಪಕ್ಷ ಬಿಜೆಪಿಯಲ್ಲ’ ಎಂದಿರುವುದು ಹಲವು ಬಗೆಯಲ್ಲಿ ಮಹತ್ವದ್ದು. ಒಂದು ಕಾಲದಲ್ಲಿ ಬಿಜೆಪಿಯೊಳಗಿನ ಉಗ್ರ ಹಿಂದುತ್ವವಾದಿಗಳಿಗೆ ನೇತಾರರಾಗಿ ಇದ್ದದ್ದೂ ಅಡ್ವಾಣಿಯವರೇ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ರಥಯಾತ್ರೆಯ ಮೂಲಕ ಅವರು ಆರಂಭಿಸಿದ ವಿಭಜನೆಯ ರಾಜಕಾರಣ ಈಗ ಅವರೇ ಟೀಕಿಸಿ ಬುದ್ಧಿ ಹೇಳಬೇಕಾದ ಸ್ಥಿತಿಗೆ ತಲುಪಿದೆ. ಗುಜರಾತ್ ನರಮೇಧದ ನಂತರ ನರೇಂದ್ರ ಮೋದಿ ಅವರಿಗೆ ಅಂದಿನ ಪ್ರಧಾನಿ ವಾಜಪೇಯಿಯವರು ರಾಜಧರ್ಮ ಬೋಧಿಸುತ್ತಿದ್ದಾಗ ತಡೆದ ಅಡ್ವಾಣಿಯವರಿಗೆ ಈಗ ತಮ್ಮ ತಪ್ಪಿನ ಅರಿವಾಗಿರಬಹುದು. ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಅವರು ಬೋಧಿಸುತ್ತಿರುವ ವಿಷಯಗಳ ಮಹತ್ವವನ್ನು ಅರಿತು ನಡೆಯುವ ವಿವೇಚನಾಸಾಮರ್ಥ್ಯ ಬಿಜೆಪಿಯಲ್ಲಿ ಉಳಿದಿದೆಯೇ ಎಂಬ ಪ್ರಶ್ನೆ ಕೇಳಿಕೊಂಡರೂ ನಿರಾಶೆಯಾಗುತ್ತದೆ. 2014ರ ಚುನಾವಣೆಯ ಸಂದರ್ಭದಲ್ಲಿ ಅದರ ಬಳಿ ತೋರಿಕೆಗಾದರೂ ಅಭಿವೃದ್ಧಿಯ ಕನಸುಗಳಿದ್ದವು. ಮತ್ತೊಂದು ಅವಧಿಯನ್ನು ಯಾಚಿಸುವ ಹೊತ್ತಿನಲ್ಲಿ ಬಿಜೆಪಿಯ ಬಳಿ ಉಳಿದಿರುವುದು ಹುಸಿ ರಾಷ್ಟ್ರಭಕ್ತಿಯನ್ನು ಉದ್ದೀಪಿಸುವ ಮಾತುಗಳು ಮತ್ತು ಕೋಮು ವಿಭಜನೆಯ ಭಾಷೆ ಮಾತ್ರ. ಪ್ರಧಾನಿ ಮೋದಿಯವರೇ ಚುನಾವಣಾ ಪ್ರಚಾರ ಸಭೆಗಳಲ್ಲಿ ಈ ಬಗೆಯ ಮಾತುಗಳನ್ನಾಡುತ್ತಿದ್ದಾರೆ.

‘ದೇಶಪ್ರೇಮ’ ಮತ್ತು ‘ದೇಶದ್ರೋಹ’ ಎಂಬುದು ಬಿಜೆಪಿ ಎಂಬ ಪಕ್ಷಕ್ಕೆ ಮತ ಯಾಚಿಸುವಾಗ ಬಳಸುವ ಪದಪುಂಜಗಳಾಗಿ ಬದಲಾಗಿಬಿಟ್ಟಿವೆ. ಅಡ್ವಾಣಿಯವರು ಕೊನೆಗಾದರೂ ಮೌನ ಮುರಿದು, ಮಾತನಾಡಿದರು ಎಂಬುದಷ್ಟೇ ಸಮಾಧಾನದ ಸಂಗತಿ. ‘ಮೋದಿ ಸೇನೆ’ಯಂಥ ವ್ಯಕ್ತಿಪೂಜೆಯ ಪರಾಕಾಷ್ಠೆಗಳನ್ನು ತಿರಸ್ಕರಿಸುವುದಕ್ಕೆ ವಿ.ಕೆ. ಸಿಂಗ್ ಬಳಸಿದ್ದೂ ಮತ್ತದೇ ‘ದೇಶಪ್ರೇಮ-ದೇಶದ್ರೋಹ’ದ ಪರಿಭಾಷೆ. ಇದೊಂದು ಆರೋಗ್ಯಕರ ರಾಜಕೀಯ ಸಂವಹನವಂತೂ ಅಲ್ಲವೇ ಅಲ್ಲ. ದೇಶಪ್ರೇಮ ಮತ್ತು ದೇಶದ್ರೋಹ ಎಂಬ ಪರಿಕಲ್ಪನೆಗಳು ನಿರ್ದಿಷ್ಟ ವ್ಯಕ್ತಿ ಅಥವಾ ಸಿದ್ಧಾಂತವೊಂದರ ಮಿತಿಯಲ್ಲಿ ಅರ್ಥೈಸುವ ವಿಚಾರಗಳೇ ಅಲ್ಲ. ತಡವಾಗಿಯಾದರೂ ಈ ಅಪಾಯದ ಕುರಿತಂತೆ ಎಚ್ಚರಿಸಿದ್ದಕ್ಕೆ ಅಡ್ವಾಣಿ ಅವರನ್ನು ಶ್ಲಾಘಿಸುತ್ತಲೇ, ಈ ಸ್ಥಿತಿ ಉದ್ಭವಿಸಿದ್ದರ ಹಿಂದೆ ಅವರ ಪಾತ್ರವೂ ಇತ್ತೆಂಬುದನ್ನು ಅವರಿಗೆ ನೆನಪಿಸಬೇಕಾಗಿದೆ. ಸೇನಾ ಕಾರ್ಯಾಚರಣೆಗಳು ರಾಜಕೀಯಕ್ಕೆ ಅತೀತ. ಇದನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳದಿರುವ ಬದ್ಧತೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ತೋರಬೇಕು.

ಬರಹ ಇಷ್ಟವಾಯಿತೆ?

 • 66

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !