ಶಿಶಿಲ– ಬೈರಾಪುರ ರಸ್ತೆ ಅರಣ್ಯ ನಾಶ ಬೇಡ

7

ಶಿಶಿಲ– ಬೈರಾಪುರ ರಸ್ತೆ ಅರಣ್ಯ ನಾಶ ಬೇಡ

Published:
Updated:
Prajavani

ಅಭಿವೃದ್ಧಿಯ ಹೆಸರಿನಲ್ಲಿ ಅಮೂಲ್ಯ ಅರಣ್ಯ ಮತ್ತು ಪರಿಸರ ನಾಶ ನಡೆಯುತ್ತಲೇ ಇದೆ. ರಸ್ತೆ, ಅಣೆಕಟ್ಟುಗಳಂತಹ ಅಭಿವೃದ್ಧಿ ಯೋಜನೆಗಳಿಂದ ಪರಿಸರದ ಮೇಲೆ ಆಗುವ ಪ್ರಹಾರ ಬಹಳ ದೊಡ್ಡದು. ಇದರ ಪರಿಣಾಮಗಳನ್ನು ನಮ್ಮ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಚಿತ್ರದುರ್ಗ– ಮಂಗಳೂರು ಮಧ್ಯೆ ಸರಕು ಸಾಗಣೆ ವ್ಯವಸ್ಥೆ ಸುಗಮಗೊಳಿಸುವುದಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ ಚತುಷ್ಪಥ ಹೆದ್ದಾರಿ ಇದಕ್ಕೆ ಇತ್ತೀಚಿನ ಉದಾಹರಣೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 173ರ ಭಾಗವಾಗಿ ದಕ್ಷಿಣ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 278 ಕಿ.ಮೀ. ಉದ್ದದ ಈ ರಸ್ತೆ ಹಾದುಹೋಗಲಿದೆ. ಈ ಯೋಜನೆಗೆ ಒಟ್ಟು 20 ಲಕ್ಷದಷ್ಟು ಮರಗಳು ಬಲಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ, ಅಪಾರ ಅರಣ್ಯದ ಜೊತೆಗೆ ಫಲವತ್ತಾದ ಕೃಷಿ ಭೂಮಿಯೂ ಬಳಕೆಯಾಗಲಿದೆ. ಈ ಹೆದ್ದಾರಿಗೆ ಬಂದು ಸೇರಲು ನೆಲ್ಯಾಡಿ–ಶಿಶಿಲ–ಬೈರಾಪುರ ನಡುವೆ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಪಶ್ಚಿಮಘಟ್ಟದ ನಡುವೆ ಹಾದುಹೋಗಲಿದೆ. ಯೋಜನೆಯನ್ನು ವಿರೋಧಿಸಿ ಮೂರೂ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಯೋಜನೆ ಕಾರ್ಯಗತವಾದರೆ ಬಾಳೂರು, ಮೀಯಾರು ಹಾಗೂ ಕಬ್ಬಿನಾಲೆಗಳಲ್ಲಿರುವ ನದಿ– ಝರಿಗಳು ಕಣ್ಮರೆಯಾಗಲಿದ್ದು, ಎತ್ತಿನಹೊಳೆ ಹಾಗೂ ನೇತ್ರಾವತಿ ನದಿಗಳೂ ಬತ್ತಿಹೋಗುವ ಅಪಾಯವಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಈ ಆತಂಕದಲ್ಲಿ ಹುರುಳಿಲ್ಲದೇ ಇಲ್ಲ. ಇದಕ್ಕಾಗಿ ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನದ ನಡುವಣ 60 ಹೆಕ್ಟೇರ್‌ನಷ್ಟು ಮೀಸಲು ಅರಣ್ಯವನ್ನು ಅಧಿಸೂಚನೆಯಿಂದ ಕೈಬಿಡುವಂತೆ ಅರಣ್ಯ ಇಲಾಖೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮನವಿ ಮಾಡಿದೆ. 2018ರ ಪೂರ್ವಾರ್ಧದಲ್ಲೇ ಪ್ರಸ್ತಾವ ಸಲ್ಲಿಸಲಾಗಿದ್ದರೂ, ಪೂರ್ಣ ವಿವರಗಳು ಇತ್ತೀಚೆಗಷ್ಟೇ ಬಹಿರಂಗವಾಗಿವೆ. ಈ ಯೋಜನೆ ಕುರಿತು ಆಕ್ಷೇಪಗಳನ್ನು ಎತ್ತಿರುವ ಅರಣ್ಯ ಇಲಾಖೆಯು ‘ಪ್ರಸ್ತಾವ ಅಪೂರ್ಣವಾಗಿದೆ’ ಎಂದು ಹೇಳಿ ಎನ್‌ಎಚ್‌ಎಐಗೆ ಅದನ್ನು ವಾಪಸ್‌ ಕಳುಹಿಸಿದೆ. ಅರಣ್ಯ ನಾಶವನ್ನು ತಡೆಯುವ ಉದ್ದೇಶದಿಂದ ತೆಗೆದುಕೊಂಡಿರುವ ಈ ಕ್ರಮ ಸ್ವಾಗತಾರ್ಹ.

ಚಿತ್ರದುರ್ಗ– ಚಿಕ್ಕಮಗಳೂರು– ಮೂಡಿಗೆರೆ ಮೂಲಕ ಹಾದುಹೋಗುವ ಚಾರ್ಮಾಡಿಘಾಟ್‌ ರಸ್ತೆ ಮತ್ತು ಹಾಸನ– ನೆಲ್ಯಾಡಿ ಮೂಲಕ ಹಾದುಹೋಗುವ ಶಿರಾಡಿಘಾಟ್‌ ರಸ್ತೆಯು ಬಂಟ್ವಾಳ ಮೂಲಕವೇ ಹೋಗಲಿವೆ. ಶಿರಾಡಿಘಾಟ್‌ ರಸ್ತೆ ಈಗಾಗಲೇ ವಾಹನ ದಟ್ಟಣೆಯಿಂದ ಕೂಡಿದೆ. ಚಾರ್ಮಾಡಿಘಾಟ್‌ ರಸ್ತೆ ವಿಸ್ತರಣೆಯಾದರೆ ವಾಹನ ದಟ್ಟಣೆಯನ್ನು ಕಡಿಮೆ ಮಾಡಬಹುದು. ಈ ಎರಡು ಪ್ರಮುಖ ರಸ್ತೆಗಳ ಜತೆಗೆ ಘಟ್ಟದಿಂದ ಕೆಳಗಿಳಿಯಲು ಕಳಸ– ಕುದುರೆಮುಖ– ಕಾರ್ಕಳ ರಸ್ತೆಯೂ ಇದೆ. ಇದರಲ್ಲಿ ಸಂಚಾರ ವಿರಳವಾಗಿದೆ. ಕರಾವಳಿಯತ್ತ ಸಾಗಲು ಮೂರು ಪ್ರಮುಖ ರಸ್ತೆಗಳೊಂದಿಗೆ ಮತ್ತಷ್ಟು ರಸ್ತೆಗಳೂ ಇವೆ. ಇವುಗಳ ಜತೆಗೆ ನೆಲ್ಯಾಡಿ– ಶಿಶಿಲ ಮೂಲಕ ಮೂಡಿಗೆರೆಯನ್ನು ಸಂಪರ್ಕಿಸುವ ಪರ್ಯಾಯ ರಸ್ತೆಯ ಅಗತ್ಯವೇ ಇಲ್ಲ. ಯೋಜನೆಯ ಹಿಂದೆ ರಾಜಕೀಯ ವ್ಯಕ್ತಿಗಳು ಮತ್ತು ಮರ ಮಾಫಿಯಾದ ಒತ್ತಡ ಕೆಲಸ ಮಾಡಿದೆ ಎನ್ನುವ ಅನುಮಾನ ಸ್ಥಳೀಯರಿಂದ ವ್ಯಕ್ತವಾಗಿದೆ. ವೃಕ್ಷ ಸಂಪತ್ತನ್ನು ಬಲಿ ಕೊಡುವುದರ ಜತೆಗೆ ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಯಾವುದೇ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಕಾಡಿನ ಮಧ್ಯೆ ಹಾದುಹೋಗುವ ಯೋಜನೆಗಳನ್ನು ರೂಪಿಸುವಾಗ ನಮ್ಮ ಇಲಾಖೆಗಳು ವಕ್ರಬುದ್ಧಿ ಪ್ರದರ್ಶಿಸುತ್ತವೆ. ಕಾಡು ಇರುವ ಪ್ರದೇಶವನ್ನು ಬಿಟ್ಟು ಉಳಿದ ಕಡೆ ಮೊದಲು ಯೋಜನೆಯನ್ನು ಜಾರಿ ಮಾಡುತ್ತವೆ. ಆನಂತರ ಅರಣ್ಯದ ಒಳಗಿನ ಕಾಮಗಾರಿಗಾಗಿ ಸಂಬಂಧಪಟ್ಟ ಇಲಾಖೆಯ ಅನುಮತಿ ಕೇಳುತ್ತವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ, ಕೆ–ಶಿಪ್‌... ಇವೆಲ್ಲ ಇದೇ ತಂತ್ರವನ್ನು ಅನುಸರಿಸುತ್ತಿವೆ. ಇಂತಹ ಹುನ್ನಾರಕ್ಕೆ ಕಾಡು ಬಲಿಯಾಗಬಾರದು. ಮರಗಳನ್ನು ಬೇಕಾದರೆ ಬೆಳೆಸಬಹುದು. ಆದರೆ ಕಾಡಿನ ಪರಿಸರವನ್ನು ರೂಪಿಸುವುದು ಸಾಧ್ಯವಿಲ್ಲ. ಜಲಮೂಲಗಳನ್ನು ಹಾಗೂ ಕಾಡಿನ ಪರಿಸರವನ್ನು ಹಾಳು ಮಾಡುವ ಯೋಜನೆಗಳಿಗೆ ಅನುಮತಿ ನೀಡುವ ಮೊದಲು ಸರ್ಕಾರಗಳು ಎಲ್ಲ ಆಯಾಮಗಳಿಂದ ಪರಿಶೀಲಿಸಿ, ವಿವೇಕದಿಂದ ನಡೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !