ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು–ಅಕ್ಷರದ ಅಪೂರ್ವ ಸಾಧಕ ಮಾನವತಾವಾದಿಗೆ ಗೌರವನಮನ

Last Updated 21 ಜನವರಿ 2019, 20:00 IST
ಅಕ್ಷರ ಗಾತ್ರ

ಸಿದ್ಧಗಂಗಾ ಮಠಾಧೀಶರಾಗಿದ್ದ ಶಿವಕುಮಾರ ಸ್ವಾಮೀಜಿ ಆಧುನಿಕ ಕರ್ನಾಟಕ ಕಂಡ ಮಹಾನ್‌ ಮಾನವತಾವಾದಿಗಳಲ್ಲೊಬ್ಬರು. ಧರ್ಮ ಹಾಗೂ ಕರ್ಮವನ್ನು ಅವರಷ್ಟು ಅರ್ಥಪೂರ್ಣವಾಗಿ ಸಮನ್ವಯಗೊಳಿಸಿದವರ ಉದಾಹರಣೆಗಳು ಎಲ್ಲ ದೇಶ–ಕಾಲಗಳಲ್ಲೂ ಬೆರಳೆಣಿಕೆಯೇ. ಆರೋಗ್ಯಕರ ಸಮಾಜ ರೂ‍ಪುಗೊಳ್ಳುವಲ್ಲಿ ವಿದ್ಯೆ ಹಾಗೂ ಅನ್ನದ ಅಗತ್ಯ ಬಹುಮುಖ್ಯವಾದುದು ಎನ್ನುವುದನ್ನು ಸ್ವಾಮೀಜಿ ಮನಗಂಡಿದ್ದರು.

ಸಮಾಜದ ಎಲ್ಲ ವರ್ಗಗಳ ಬಡ ಮಕ್ಕಳಿಗೆ ಕಲಿಯುವ ಅವಕಾಶವನ್ನು ಕಲ್ಪಿಸಿದ್ದು ಅವರ ಬಹುಮುಖ್ಯ ಸಾಧನೆ. ಶರಣರ ‘ಅನುಭವ ಮಂಟಪ’ದ ಅರಿವು, ಅಧ್ಯಾತ್ಮ, ಅಕ್ಷರಗಳನ್ನು ಸ್ವಾಮೀಜಿ ತಮ್ಮ ಮಠದ ಪರಿಸರದಲ್ಲಿ ಸಾಕಾರಗೊಳಿಸಿದ್ದು ಅಸಾಧಾರಣ ಸಾಧನೆ ಹಾಗೂ ನಿಜ ಅರ್ಥದಲ್ಲಿ ಶರಣರ ಆದರ್ಶಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ. ಜೋಳಿಗೆಯೊಂದಿಗೆ ಊರೂರು ಸುತ್ತುವ ಮೂಲಕ ವಿದ್ಯಾಸಂಸ್ಥೆಗಳನ್ನು ಕಟ್ಟಿದರು.

ಹಳ್ಳಿಗಳಲ್ಲಿ ‘ಬಸವ ಜಯಂತಿ’ಯನ್ನು ಆಚರಿಸುವ ಮೂಲಕ ಸಾಮಾಜಿಕ ತರತಮಗಳ ನಿವಾರಣೆಗೆ ಪ್ರಯತ್ನಿಸಿದರು. ಸ್ವಾಮೀಜಿ ಅವರ ದಶಕಗಳ ಪರಿಶ್ರಮ ಹಾಗೂ ಜಾತ್ಯತೀತ ಧೋರಣೆಯಿಂದಾಗಿ ಸಿದ್ಧಗಂಗಾ ಮಠ ಎಲ್ಲ ವರ್ಗಗಳ ಭಕ್ತರ ಶ್ರದ್ಧಾಕೇಂದ್ರವಾಗಿ ಗುರುತಿಸಿಕೊಂಡಿದೆ. ಅವರ ಕಣ್ಗಾವಲಿನಲ್ಲಿ ರೂಪುಗೊಂಡ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಆದರ್ಶಗಳಿಂದ ಪ್ರಭಾವಿತರಾದ ಅನೇಕ ಅಭಿಮಾನಿಗಳು ನಾಡಿನ ವಿವಿಧ ಭಾಗಗಳಲ್ಲಿ ತಂತಮ್ಮ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಈ ಅಪಾರ ಅಭಿಮಾನಿ ಶಿಷ್ಯವೃಂದದ ಮೂಲಕ ಸ್ವಾಮೀಜಿ ಅವರ ಆದರ್ಶಗಳು ಶಾಶ್ವತ ಸತ್ಯಗಳಂತೆ ಸಮಾಜದಲ್ಲಿ ಉಸಿರಾಡುತ್ತಿವೆ ಎಂದು ಭಾವಿಸಬಹುದು.

ಸಿದ್ಧಗಂಗಾ ಮಠ, ವಿದ್ಯಾರ್ಥಿಗಳ ಜೊತೆಗೆ ರೈತರಿಗೂ ಮುಕ್ತವಾಗಿ ತೆರೆದುಕೊಂಡಿತ್ತು. ‘ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ’ ಏರ್ಪಡಿಸುತ್ತಿದ್ದುದು ಹಾಗೂ ದನಗಳ ನೆರವಿಯನ್ನು ಪ್ರಮುಖ ಆಕರ್ಷಣೆಯಾಗಿಸುವ ಮೂಲಕ ಸಿದ್ಧಗಂಗಾ ಕ್ಷೇತ್ರದ ವಾರ್ಷಿಕ ಜಾತ್ರೆಯನ್ನು ‘ರೈತರ ಜಾತ್ರೆ’ಯಾಗಿಸಿದ್ದನ್ನು ಸ್ವಾಮೀಜಿ ಅವರ ರೈತಕಾಳಜಿಯ ಉದಾಹರಣೆಯನ್ನಾಗಿ ನೋಡಬಹುದು.

ಸ್ವಾಮೀಜಿ ಅವರದ್ದು 111 ವರ್ಷಗಳ ತುಂಬು ಜೀವನ. 88 ವರ್ಷಗಳ ಕಾಲದ ಸನ್ಯಾಸಜೀವನ, ಮಠದ ಮುಖ್ಯಸ್ಥರಾಗಿ 77 ವರ್ಷಗಳ ಕಾಯಕ ನಿರ್ವಹಣೆ, ಇವೆಲ್ಲವೂ ಸಂಖ್ಯಾದೃಷ್ಟಿಯಿಂದ ಬೆರಗು ಹುಟ್ಟಿಸುವಂತಹವು. ಇವೆಲ್ಲಕ್ಕೂ ಮಕುಟಪ್ರಾಯವಾದುದು ಸನ್ಯಾಸವನ್ನು ಪಾಲಿಸುವುದರ ಜೊತೆಗೆ ಸಮಾಜದೊಂದಿಗೆ ಅವರು ಹೊಂದಿದ್ದ ನಿಕಟ ಸಂಪರ್ಕ. ಅವರ ಪಾಲಿಗೆ ಸನ್ಯಾಸಧರ್ಮ ಎನ್ನುವುದು ಸಮಾಜದೊಂದಿಗೆ ಅಂತರ ಕಾಪಾಡಿಕೊಳ್ಳುವ ಹಾಗೂ ಧಾರ್ಮಿಕ ಸಂಗತಿಗಳಿಗೆ ಸೀಮಿತವಾದುದು ಆಗಿರಲಿಲ್ಲ. ಮನುಷ್ಯನ ಅಂತರಂಗದ ಉನ್ನತಿಯೇ ಅವರ ಪ್ರಧಾನ ಕಾಳಜಿಯಾಗಿತ್ತು. ಆ ಕಾರಣದಿಂದಲೇ ವ್ಯಕ್ತಿತ್ವವನ್ನು ಸಶಕ್ತಗೊಳಿಸುವಂತಹ ವಿದ್ಯೆಯನ್ನು ಸಮೂಹಕ್ಕೆ ದೊರಕಿಸಿಕೊಡುವುದಕ್ಕಾಗಿ ಜೀವನದುದ್ದಕ್ಕೂ ದುಡಿದರು.

ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾಸಂಸ್ಥೆಗಳನ್ನು ರೂಪಿಸಿದರು. ನಾಡಿನ ಎಲ್ಲ ಭಾಗಗಳ ಎಲ್ಲ ವರ್ಗಗಳ ಮಕ್ಕಳು ಸಿದ್ಧಗಂಗೆಯಲ್ಲಿ ಅರಿವು ಹಾಗೂ ಅನ್ನ ಕಂಡುಕೊಂಡಿದ್ದಾರೆ. ಸರ್ಕಾರೇತರ ಸಂಸ್ಥೆಯೊಂದು, ಉಚಿತ ಶಿಕ್ಷಣವನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಾಗೂ ವ್ಯವಸ್ಥಿತವಾಗಿ ಕಲ್ಪಿಸಿದ ಮತ್ತೊಂದು ಉದಾಹರಣೆ ಆಧುನಿಕ ಸಂದರ್ಭದಲ್ಲಿ ವಿರಳ.

‘ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ: ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ’ ಎನ್ನುವ ಜಿ.ಎಸ್‌. ಶಿವರುದ್ರಪ್ಪನವರ ಕವಿವಾಣಿ ವಸ್ತುಸ್ಥಿತಿಗೆ ಹತ್ತಿರವಾದುದು. ರಾಜಕೀಯ ಕಾರಣಗಳು ಹಾಗೂ ಸನ್ಯಾಸಜೀವನೇತರ ಸಂಗತಿಗಳ ಮೂಲಕ ಕೆಲವು ಮಠಾಧೀಶರು ಸುದ್ದಿಯಾಗುತ್ತಿರುವ ಸಂದರ್ಭದಲ್ಲಿ, ಶಿವಕುಮಾರ ಸ್ವಾಮೀಜಿ ‘ಮಠ ಪರಂಪರೆ’ಯ ನೈತಿಕತೆ–ಔನ್ನತ್ಯವನ್ನು ಹೆಚ್ಚಿಸುವಂತಿದ್ದವರು. ಅವರ ನಿರ್ಗಮನದ ಮೂಲಕ ನಾಡಿನ ಸಂತ ಪರಂಪರೆಯ ಪ್ರಬಲ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ‘ದುಡಿಯಬೇಕು, ದುಡಿದುದನ್ನು ಹಂಚಿ ತಿನ್ನಬೇಕು’ ಎನ್ನುವ ಸ್ವಾಮೀಜಿ ಅವರ ಆದರ್ಶ ಎಲ್ಲ ಕಾಲಕ್ಕೂ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT