ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಿಸ್ಟರ್ ಅಭಯಾ ಪ್ರಕರಣ ವಿಳಂಬವಾದರೂ ನ್ಯಾಯ ಸಿಕ್ಕಿತು

Last Updated 27 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

‘ನ್ಯಾಯದಾನ ಪ್ರಕ್ರಿಯೆಯಲ್ಲಿ ಅತಿಯಾದ ವಿಳಂಬ ಆಗುವುದು ಅಂದರೆ, ನ್ಯಾಯವನ್ನೇ ನಿರಾಕರಿಸುವುದಕ್ಕೆ ಸಮ’ ಎಂಬ ಜನಪ್ರಿಯ ಮಾತು ಇದೆ. ಈ ಮಾತನ್ನು ನ್ಯಾಯಾಂಗದ ಹಿರಿಯರೂ ಬಹಳಷ್ಟು ಬಾರಿ ಆಡಿದ್ದಾರೆ. ಜಗತ್ತಿನ ಹಲವೆಡೆ ಸುದ್ದಿ ಮಾಡಿದ್ದ ಕೇರಳದ ಸಿಸ್ಟರ್ ಅಭಯಾ ಪ್ರಕರಣದಲ್ಲಿ ತಿರುವನಂತಪುರದ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದ್ದು, ಇಬ್ಬರು ಆರೋಪಿಗಳಾದ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ತಪ್ಪಿತಸ್ಥರು ಎಂದು ಘೋಷಿಸಿದೆ.

ಅವರಿಬ್ಬರಿಗೆ ಈಗ ಜೀವಾವಧಿ ಶಿಕ್ಷೆಯ ಘೋಷಣೆ ಆಗಿದೆ. 21 ವರ್ಷ ವಯಸ್ಸಿನ ಅಭಯಾ ಅವರು ಕೊಟ್ಟಾಯಂನ ಒಂದು ಕಾನ್ವೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು 1992ರಲ್ಲಿ. ಅದಾದ 28 ವರ್ಷಗಳ ನಂತರ, ಅವರ ಕೊಲೆಗೆ ಕಾರಣರಾದವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ನ್ಯಾಯದಾನಕ್ಕೆ ಸರಿಸುಮಾರು ಮೂರು ದಶಕ ಬೇಕಾಯಿತು. ಅಂದರೆ, ಇಲ್ಲಿ ನ್ಯಾಯದಾನದಲ್ಲಿ ವಿಳಂಬ ಆಗಿದೆ. ಆದರೆ ಈ ವಿಳಂಬಕ್ಕೆ ಕಾರಣ ನ್ಯಾಯಾಂಗ ಅಲ್ಲ; ಬದಲಿಗೆ, ಇಲ್ಲಿನ ವಿಳಂಬಕ್ಕೆ ಹೊಣೆಯನ್ನು ತನಿಖಾ ಸಂಸ್ಥೆಗಳೇ ಹೊತ್ತುಕೊಳ್ಳಬೇಕಾಗುತ್ತದೆ.

ನ್ಯಾಯದಾನದಲ್ಲಿ ಅನಪೇಕ್ಷಿತ ವಿಳಂಬ ಆಗಿದ್ದರೂ, ಈಗ ಈ ಪ್ರಕರಣದಲ್ಲಿ ನ್ಯಾಯದ ನಿರಾಕರಣೆ ಆಗಿಲ್ಲ ಎಂಬುದು ಸಮಾಧಾನಕರ. ಕೆಲವು ಮಾನವ ಹಕ್ಕು ಸಂಘಟನೆಗಳ ಹೋರಾಟ, ಕೇರಳದ ಕೆಲವು ಜನಪ್ರತಿನಿಧಿಗಳ ಆಗ್ರಹ, ಸಾರ್ವಜನಿಕರಿಂದ ವ್ಯಕ್ತವಾದ ಒತ್ತಡ, ನ್ಯಾಯಾಂಗದ ಮೇಲ್ವಿಚಾರಣೆ ಹಾಗೂ ತನಿಖಾ ಸಂಸ್ಥೆಗಳ ಕೆಲಸದ ವೈಖರಿ ಬಗ್ಗೆ ಅದು ಕಾಲಕಾಲಕ್ಕೆ ಆಡಿದ ಸದಾಶಯದ ಕಟು ಮಾತುಗಳು... ಇವೆಲ್ಲವುಗಳ ಪರಿಣಾಮವಾಗಿ ಈ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯವೊಂದನ್ನು ತಲುಪುವಂತೆ ಆಗಿದೆ. ಈ ಪ್ರಕರಣದಲ್ಲಿ ಈಗ ಶಿಕ್ಷೆಗೆ ಗುರಿಯಾದವರು ಮೇಲ್ಮನವಿ ಸಲ್ಲಿಸುವ ಆಯ್ಕೆ ಇದ್ದೇ ಇದೆ. ಹೀಗಿದ್ದರೂ, ಸಿಬಿಐ ಪೊಲೀಸರು ನಡೆಸಿದ ಈ ಪ್ರಕರಣದ ತನಿಖೆಯು ಕೊಲೆಗೆ ಕಾರಣ ಏನು, ಕೊಲೆಗಾರರು ಯಾರು ಎಂಬುದನ್ನು ಪತ್ತೆ ಮಾಡುವಲ್ಲಿ ಕೊನೆಗೂ ಯಶಸ್ಸು ಕಂಡಿತು ಎಂಬುದು ಗಮನಾರ್ಹ.

ಆರಂಭದಲ್ಲಿ ಈ ಪ್ರಕರಣದ ತನಿಖೆ ನಡೆಸಿದ್ದ ಕೇರಳ ಪೊಲೀಸರು, ಇದು ಒಂದು ಆತ್ಮಹತ್ಯೆಯಷ್ಟೇ ಎಂದು ವರದಿ ನೀಡಿದ್ದರು. ಆದರೆ, ಸಾರ್ವಜನಿಕರ ಒತ್ತಡ ಹಾಗೂ ಆಗ್ರಹಕ್ಕೆ ಮಣಿದು ಕೇರಳ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕಾಯಿತು. ಸಿಬಿಐ ಅಧಿಕಾರಿಗಳು ಕೂಡ ಈ ಪ್ರಕರಣದ ವಿಚಾರವಾಗಿ ಮೂರು ಬಾರಿ ಪರಿಸಮಾಪ್ತಿ ವರದಿ ಸಲ್ಲಿಸಿದ್ದರು. ಈ ವರದಿಗಳನ್ನು ಒಪ್ಪಿಕೊಳ್ಳಲು ನ್ಯಾಯಾಲಯ ಸಿದ್ಧವಿರಲಿಲ್ಲ. ತನಿಖೆ ಮುಂದುವರಿಸುವಂತೆ ಅದು ಸಿಬಿಐಗೆ ಮತ್ತೆ ಮತ್ತೆ ಸೂಚಿಸುತ್ತಿತ್ತು. ಇದು ಕೊಲೆಯೇ ಹೌದಾದರೂ, ತನಿಖೆ ಮುಂದುವರಿಸಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಸಿಬಿಐ ಕೈಚೆಲ್ಲಿದ ಸಂದರ್ಭವೂ ಇತ್ತು.

ಆ ಸಂದರ್ಭದಲ್ಲೂ ಸಿಬಿಐ ಅಧಿಕಾರಿಗಳ ಮಾತಿಗೆ ಮನ್ನಣೆ ನೀಡದೆ, ತನಿಖೆ ನಡೆಸುವಂತೆ ನ್ಯಾಯಾಲಯ ತಾಕೀತು ಮಾಡಿತ್ತು. ಅದು ಈಗ ಫಲ ನೀಡಿದೆ. ಪ್ರಕರಣದ ತನಿಖೆಯ ಪ್ರತೀ ಹಂತದಲ್ಲೂ ಒಂದಲ್ಲ ಒಂದು ಬಗೆಯಲ್ಲಿ ಅಡ್ಡಿಗಳು ಎದುರಾಗುತ್ತಿದ್ದವು. ಸಾಕ್ಷ್ಯ ಹೇಳಲು ಬಂದವರು ಉಲ್ಟಾ ಹೊಡೆದಿದ್ದರು. ಆದರೆ, ಅಚಾನಕ್ ಆಗಿ ಆ ಕಾನ್ವೆಂಟ್‌ಗೆ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ದೃಢವಾಗಿ ಸಾಕ್ಷ್ಯ ಹೇಳಿದ. ಯಾವುದೇ ಒತ್ತಡಕ್ಕೂ ಆತ ಬಗ್ಗಲಿಲ್ಲ! ತನಿಖೆಯ ಭಾಗವಾಗಿದ್ದ ಒಬ್ಬ ಅಧಿಕಾರಿಯ ಮಾತಿನ ಅನ್ವಯ, ಮಹತ್ವದ ಸಾಕ್ಷ್ಯಗಳನ್ನು ಆರೋಪಿಗಳು ಮತ್ತು ಪೊಲೀಸರು ಆರಂಭದಲ್ಲೇ ನಾಶಪಡಿಸಿದ್ದರು. ಇಷ್ಟೆಲ್ಲ ಮಿತಿಗಳ ನಡುವೆಯೂ ಪ್ರಕರಣವು ಈ ಹಂತ ತಲುಪಿದೆ. ವಿಳಂಬವಾದರೂ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಹೀಗೆ ಶಿಕ್ಷೆ ಆಗದೇ ಇದ್ದಿದ್ದರೆ ಸಮಾಜಕ್ಕೆ ತೀರಾ ಕೆಟ್ಟ ಸಂದೇಶವೊಂದು ರವಾನೆಯಾಗುತ್ತಿತ್ತು, ಕಾನೂನಿನ ಕುರಿತು ಸಮಾಜ ಇಟ್ಟಿರುವ ಗೌರವಕ್ಕೆ ಚ್ಯುತಿ ಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT