ಸೋಮವಾರ, ಮಾರ್ಚ್ 20, 2023
30 °C

ಸಂಪಾದಕೀಯ | ಕೋವಿಡ್‌ ಸಾವಿಗೆ ಪರಿಹಾರ: ‘ಸುಪ್ರೀಂ’ ತೀರ್ಪು ಸ್ವಾಗತಾರ್ಹ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಸೂಕ್ತ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಸ್ವಾಗತಾರ್ಹ. ಆದರೆ ಮೃತ ಪ್ರತೀ ವ್ಯಕ್ತಿಯ ಕುಟುಂಬಕ್ಕೆ ತಲಾ ₹ 4 ಲಕ್ಷ ಪರಿಹಾರ ನೀಡಬೇಕೆಂಬ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿಲ್ಲ.

‘ಯಾವ ದೇಶವೂ ಅಮಿತ ಸಂಪನ್ಮೂಲಗಳನ್ನು ಹೊಂದಿರುವುದಿಲ್ಲ. ಕೋವಿಡ್ ಸೋಂಕಿನ ವಿರಾಟ್ ಸ್ವರೂಪದ ಹಿನ್ನೆಲೆಯಲ್ಲಿ ಮೃತರ ಕುಟುಂಬಗಳಿಗೆ ಇಂತಿಷ್ಟು ಹಣವನ್ನು ನೀಡಬೇಕೆಂದು ಸೂಚಿಸುವುದು ಕಾರ್ಯಸಾಧುವಲ್ಲ. ಆದರೆ, ಪರಿಹಾರ ನೀಡಬೇಕಾದುದು ಸರ್ಕಾರದ ಕರ್ತವ್ಯ. ಸರ್ಕಾರವೇ ರೂಪಿಸಿದ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಇದು ಕಡ್ಡಾಯವೂ ಹೌದು’ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಈ ಪರಿಹಾರ ಮೊತ್ತವನ್ನು ವಿತರಿಸಲು ಅನುವಾಗುವಂತೆ ಆರು ವಾರಗಳ ಒಳಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆಯೂ ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ. ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮಂಡಿಸಿದ ವಾದವನ್ನು ಕೋರ್ಟ್ ಸ್ಪಷ್ಟವಾಗಿ ತಿರಸ್ಕರಿಸಿರುವುದು ಗಮನಾರ್ಹ.

‘ಚಂಡಮಾರುತ, ಭೂಕಂಪ ಮತ್ತು ಪ್ರವಾಹಗಳು ಯಾವಾಗಲೋ ಒಮ್ಮೆ ಸಂಭವಿಸುವಂತಹವು. ಆದರೆ, ಕೋವಿಡ್ ಸೋಂಕು ನಿರಂತರವಾಗಿ ಕಾಡುತ್ತಿದೆ. ಹಾಗಾಗಿ ಇದನ್ನು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪರಿಗಣಿಸಬಾರದು’ ಎನ್ನುವ ಸರ್ಕಾರದ ವಾದವನ್ನು ಕೋರ್ಟ್ ಒಪ್ಪಿಕೊಂಡಿಲ್ಲ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಕನಿಷ್ಠ ಮಟ್ಟದ ಪರಿಹಾರವನ್ನಾದರೂ ಒದಗಿಸುವುದು ಪ್ರಧಾನಿ ಅಧ್ಯಕ್ಷತೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಾಂವಿಧಾನಿಕ ಹೊಣೆಗಾರಿಕೆ ಎಂದು ಕೋರ್ಟ್‌ ಸ್ಪಷ್ಟಮಾತುಗಳಲ್ಲಿ ಹೇಳಿದೆ. ಕೋವಿಡ್ ಸೋಂಕಿನ ಬಳಿಕ ಕಪ್ಪು ಮತ್ತು ಹಳದಿ ಫಂಗಸ್‍ ಬಾಧೆಗೆ ಈಡಾಗಿ ಪ್ರಾಣ ಕಳೆದುಕೊಂಡಿರುವವರ ಕುಟುಂಬಗಳಿಗೆ ತಲಾ ₹ 4 ಲಕ್ಷ ಪರಿಹಾರ ನೀಡಬೇಕೆಂದು ಕೋರಿರುವ ಇನ್ನೊಂದು ಅರ್ಜಿಯೂ ಸುಪ್ರೀಂ ಕೋರ್ಟಿನ ಮುಂದಿದೆ. ಈ ಸಂಬಂಧ ಸರ್ಕಾರಕ್ಕೆ ಕೋರ್ಟ್ ಈಗಾಗಲೇ ನೋಟಿಸ್ ನೀಡಿದೆ.

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜೂನ್‌ ಅಂತ್ಯಕ್ಕೆ 3.98 ಲಕ್ಷ ಜನರು ಮೃತಪಟ್ಟಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಎಲ್ಲ ಸಾಧ್ಯತೆಗಳೂ ಇವೆ. ಈ ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು 2020ರ ಮಾರ್ಚ್‌ನಲ್ಲಿ ಸರ್ಕಾರವೇ ಪ್ರಕಟಿಸಿದೆ. 2015ರ ಅಧಿಸೂಚನೆಯ ಪ್ರಕಾರ ಚಂಡಮಾರುತ, ಪ್ರವಾಹ, ಭೂಕಂಪ ಸಹಿತ ರಾಷ್ಟ್ರೀಯ ವಿಪತ್ತುಗಳಿಗೆ ಒಳಗಾದ ಸಂತ್ರಸ್ತರ ಕುಟುಂಬಗಳಿಗೆ ತಲಾ ₹ 4 ಲಕ್ಷ ಪರಿಹಾರ ನೀಡಬೇಕು ಎಂದು ಕಾಯ್ದೆಯೇ ಹೇಳುತ್ತದೆ. ಹಾಗಿದ್ದೂ ನ್ಯಾಯಪೀಠವು ಸರ್ಕಾರದ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರದ ಮೊತ್ತ ಎಷ್ಟೆಂದು ನಿಗದಿ ಮಾಡುವುದನ್ನು ಸರ್ಕಾರದ ವಿವೇಚನೆಗೆ ಬಿಟ್ಟಿರುವುದು ಸರಿಯಾಗಿಯೇ ಇದೆ. ಹಾಗೆ ನೋಡಿದರೆ ಈಗಿನ ಈ ದುಃಸ್ಥಿತಿಗೆ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರಗಳ ವೈಫಲ್ಯವೇ ಕಾರಣ ಎನ್ನುವುದು ಮೇಲ್ನೋಟಕ್ಕೇ ಎದ್ದು ಕಾಣಿಸುತ್ತಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ, ಕೊರೊನಾ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿದ್ದರೆ ದೇಶದಲ್ಲಿ ಸಾವಿನ ಪ್ರಮಾಣ ಇಷ್ಟೊಂದು ಏರಿಕೆ ಆಗುತ್ತಿರಲಿಲ್ಲ. ಆಡಳಿತದ ಅದಕ್ಷತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಕೊರತೆಯೇ ಸಾವಿನ ಸಂಖ್ಯೆ ಹೆಚ್ಚುವುದಕ್ಕೆ ಪ್ರಮುಖ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಎಡವಿದ್ದನ್ನು ದೇಶದ ನ್ಯಾಯಾಲಯಗಳೇ ಸರ್ಕಾರದ ಗಮನಕ್ಕೆ ತಂದು ಪದೇ ಪದೇ ಎಚ್ಚರಿಸಿವೆ.

ಆಮ್ಲಜನಕ ಪೂರೈಕೆಯಲ್ಲಿ ಅವ್ಯವಸ್ಥೆ ಆಗಿದ್ದನ್ನು ಗಮನಿಸಿ ಸರ್ಕಾರಕ್ಕೆ ಚಾಟಿಯೇಟು ನೀಡಿವೆ. ದೇಶದಲ್ಲಿ ಕೋವಿಡ್ ಪ್ರತಿರೋಧಕ ಲಸಿಕೆಯ ಅಸಮರ್ಪಕ ಪೂರೈಕೆಯನ್ನು ಸರಿಪಡಿಸಲು ಸಹ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯಿತು ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ. ಕೋವಿಡ್‌ ಅಥವಾ ಅದರಿಂದಾದ ಸಮಸ್ಯೆಗಳಿಂದ ವ್ಯಕ್ತಿ ಮೃತಪಟ್ಟಿದ್ದರೂ ‘ಕೋವಿಡ್‌ನಿಂದ ಮೃತಪಟ್ಟಿದ್ದಾರೆ’ ಎಂಬ ಪ್ರಮಾಣಪತ್ರ ಪಡೆದುಕೊಳ್ಳಲು ಹಲವು ತೊಡಕುಗಳು ಇವೆ ಎನ್ನಲಾಗುತ್ತಿದೆ. ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿ ಮಾರ್ಗಸೂಚಿ ಹೊರಡಿಸಿ ಎಂದೂ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿದೆ. ಇಂತಹ ಸಾಮಾನ್ಯಜ್ಞಾನದ ವಿಚಾರಗಳಲ್ಲಿ ಕೂಡ ನ್ಯಾಯಾಲಯದಿಂದ ಹೇಳಿಸಿಕೊಳ್ಳುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ.

ಸಾವಿಗೀಡಾದವರ ಕುಟುಂಬಗಳಿಗೆ ನೆರವಾಗುವ ವಿಷಯದಲ್ಲಿ ತನ್ನ ಹೊಣೆ ಏನೂ ಇಲ್ಲ ಎಂಬಂತೆ ಕೇಂದ್ರ ಸರ್ಕಾರವು ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ಎಳ್ಳಷ್ಟೂ ಸರಿಯಲ್ಲ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಸಕಾಲದಲ್ಲಿ ಮಾಡುವ ಮೂಲಕ ಸುಪ್ರೀಂ ಕೋರ್ಟ್, ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸಿರುವುದು ಮೆಚ್ಚಬೇಕಾದಂತಹ ಅಂಶ. ಸರ್ಕಾರಗಳು ಜನರ ರಕ್ಷಣೆಗೆ ನಿಲ್ಲುವಲ್ಲಿ ವಿಫಲವಾದಾಗ ಕೋರ್ಟ್‌ಗಳು ನೆರವಿಗೆ ಬರಲೇಬೇಕಾಗುತ್ತದೆ. ಈ ತೀರ್ಪಿನ ಬಳಿಕವಾದರೂ ಕೇಂದ್ರ ಸರ್ಕಾರವು ಜನರ ಆರೋಗ್ಯ ರಕ್ಷಣೆಯತ್ತ ಹೆಚ್ಚು ಗಮನ ಹರಿಸಿ, ಮೂಲ ಸೌಕರ್ಯಗಳ ವಿಸ್ತರಣೆಗೆ ಹೆಚ್ಚು ಸಂಪನ್ಮೂಲವನ್ನು ಒದಗಿಸಿ ಕಾರ್ಯೋನ್ಮುಖವಾಗಲಿ. ಕೋವಿಡ್‌ನ ಮೂರನೇ ಅಲೆ ಸಾಧ್ಯತೆ ಕುರಿತು ವೈದ್ಯಕ್ಷೇತ್ರದ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಆ ವೇಳೆಯಲ್ಲಾದರೂ ಜನರ ಸಾವು– ನೋವುಗಳು ಹೆಚ್ಚಾಗದಂತೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು