ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ಜನತಾ ಕರ್ಫ್ಯೂ’ಗೆ ಬೆಂಬಲ: ಸೋಂಕು ತಡೆಗೆ ಬೇಕು ಜಾಗೃತಿ

Last Updated 22 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಯಾವುದೇ ಸಾಂಕ್ರಾಮಿಕವು ಕೊರೊನಾ–2 ಸೋಂಕಿನ ರೀತಿಯಲ್ಲಿ ಇಡೀ ಜಗತ್ತನ್ನು ಇಷ್ಟೊಂದು ತೀವ್ರವಾಗಿ ಕಾಡಿದ್ದನ್ನು ಹೊಸ ತಲೆಮಾರಿನವರು ಕಂಡಿರಲಿಲ್ಲ. ಅಂತಹ ಸಾಂಕ್ರಾಮಿಕಗಳ ಕುರಿತುಬಹುತೇಕರು ಓದಿ, ಕೇಳಿ, ಟಿ.ವಿ. ಮೂಲಕ ವೀಕ್ಷಿಸಿ ತಿಳಿದುಕೊಂಡಿದ್ದಿರಬಹುದು.

ಆದರೆ, ಕೋವಿಡ್‌–19 ಎನ್ನುವ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದನ್ನು ಹಳಬರು, ಹೊಸಬರು ಎಂಬ ಭೇದವಿಲ್ಲದೆ ಎಲ್ಲರೂ ಆತಂಕದಿಂದ ಗಮನಿಸುತ್ತಿದ್ದಾರೆ. ಸಾಂಕ್ರಾಮಿಕಗಳನ್ನು ಜಗತ್ತು ಹಿಂದೆಯೂ ಕಂಡಿದೆಯಾದರೂ, ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ತಗುಲಿದ, 160ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ ಇನ್ನೊಂದು ಸಾಂಕ್ರಾಮಿಕದ ಹೆಸರು ಜನಸಮೂಹದ ಸ್ಮೃತಿ ಪಟಲದಲ್ಲಿ ಇದ್ದಿರಲಾರದು. ಕೋವಿಡ್‌–19 ಕಾಯಿಲೆಗೆ ಕಾರಣವಾಗಿರುವ ವೈರಾಣುವಿನ ಕುರಿತು ಮನುಕುಲಕ್ಕೆ ಎಲ್ಲವೂ ತಿಳಿದಿದೆ ಎಂಬುದನ್ನೂ ಈ ಹಂತದಲ್ಲಿ ಹೇಳಲು ಆಗದು. ಈ ಕಾಯಿಲೆಗೆ ಲಸಿಕೆ ಕೂಡ ಇಲ್ಲ. ಇವೆಲ್ಲ ಕಾರಣಗಳಿಂದಾಗಿ, ಈ ಕಾಯಿಲೆಯ ಹೆಸರೇ ಈಗ ಜನರ ಮನಸ್ಸಿನಲ್ಲಿ ಆತಂಕ ಸೃಷ್ಟಿಸುತ್ತಿದೆ.

ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆಯ ಮಾರ್ಗಸೂಚಿಗಳನ್ನು ಪಾಲಿಸುವುದು ಈ ಸೋಂಕು ಹರಡುವುದನ್ನು ತಡೆಯಲು ಇರುವ ಎರಡು ಅತ್ಯುತ್ತಮ ಉಪಾಯಗಳು. ಭಾರತದಂತಹ ಜನನಿಬಿಡ ದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ದೊಡ್ಡ ಸವಾಲಿನ ಕೆಲಸ. ಮಹಾನಗರಗಳಲ್ಲಿ ಅದು ಇನ್ನೂ ಕಷ್ಟ. ಇದನ್ನು ಗಮನಿಸಿಯೇ, ಪ್ರಧಾನಿ ನರೇಂದ್ರ ಮೋದಿ ಅವರು ‘ದೇಶದ ಜನ ಭಾನುವಾರ ಸ್ವಯಂಪ್ರೇರಣೆಯಿಂದ ಕರ್ಫ್ಯೂ ಹೇರಿಕೊಳ್ಳಬೇಕು’ ಎಂದು ಕರೆ ನೀಡಿದ್ದರು. ಸಾರ್ವಜನಿಕರ ಆರೋಗ್ಯದ ರಕ್ಷಣೆಗಾಗಿ ಇಂತಹ ಕ್ರಮ ಅನಿವಾರ್ಯವೂ ಹೌದು.

ಅಸಾಧಾರಣವಾದ ಈ ಕರೆಗೆ, ಸಾರ್ವಜನಿಕರು ಮನಃಪೂರ್ವಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಹಾಗೂ ರಾಷ್ಟ್ರದ ವಿವಿಧ ಕಡೆಗಳಿಂದ ಬಂದಿರುವ ವರದಿಗಳನ್ನು ಗಮನಿಸಿದರೆ, ಜನತಾ ಕರ್ಫ್ಯೂ ಯಶಸ್ಸು ಕಂಡಿದೆ. ಜನರು ಸಾರ್ವಜನಿಕ ಸ್ಥಳಗಳಿಗೆ ಬಾರದೆ, ಮನೆಯೊಳಗೇ ಉಳಿದು ಕೊಂಡಿದ್ದಾರೆ. ಆ ಮೂಲಕ, ಪ್ರಧಾನಿಯವರ ಮಾತಿಗೆ ಬೆಲೆ ಕೊಟ್ಟು, ಕೊರೊನಾ ವೈರಾಣು ಹರಡುವುದನ್ನು ತಡೆಯಲು ವ್ಯವಸ್ಥೆ ಜತೆ ಕೈಜೋಡಿಸಿದ್ದಾರೆ.

ಆದರೆ, ಇದು ಇಷ್ಟಕ್ಕೇ ನಿಲ್ಲಬಾರದು. ‘ಇದು ಮಾಮೂಲಿ ವೈರಾಣು. ಜ್ವರ ಒಂದು ಬಾರಿ ಬರುತ್ತದೆ, ಹೋಗುತ್ತದೆ. ನಮಗೆ ಏನೂ ಆಗುವುದಿಲ್ಲ’ ಎಂದು ಉದಾಸೀನ ಅಥವಾ ಉಪೇಕ್ಷೆಯ ಧಾಟಿಯಲ್ಲಿ ವರ್ತಿಸುವುದು ಸರಿಯಲ್ಲ. ಕೆಲವರಿಗೆ ಇದು ಏನೂ ತೊಂದರೆ ಮಾಡದಿದ್ದರೂ, ವಯಸ್ಸಾದವರಿಗೆ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಮಾರಕವಾಗುವ ಸಾಧ್ಯತೆಯೂ ಇದೆ. ಹಾಗಾಗಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಸರ್ಕಾರವೂ ಮುಂದುವರಿಸಬೇಕು, ಅದಕ್ಕೆ ಸಾರ್ವಜನಿಕರೂ ಸಹಕರಿಸಬೇಕು.

ಅದರ ಜತೆಯಲ್ಲೇ, ವೈಯಕ್ತಿಕವಾಗಿ ಸ್ವಚ್ಛತೆ ಕಾಯ್ದುಕೊಳ್ಳುವುದನ್ನೂ ಅಲಕ್ಷಿಸಬಾರದು. ಕೊರೊನಾ ಸೋಂಕು ಹರಡುವುದನ್ನು ತಡೆಯಲು ನೆರವಾಗಬಹುದಾದ, ಪ್ರಧಾನಿಯವರು ಕಂಡುಕೊಂಡ ಹೊಸ ವಿಧಾನ ಮೆಚ್ಚುಗೆಗೆ ಅರ್ಹ. ‘ಜನತಾ ಕರ್ಫ್ಯೂ’ ರೀತಿಯ ಪರಿಸ್ಥಿತಿಗಳಲ್ಲಿ ಹೆಚ್ಚು ತೊಂದರೆಗೆ ಒಳಗಾಗುವವರು ದಿನದ ದುಡಿಮೆಯನ್ನು ನಂಬಿ ಬದುಕುವ ಜನ. ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಎದುರಾಗಿರುವ ಈ ಹೊತ್ತಿನಲ್ಲಿ, ಪ್ರತಿದಿನದ ದುಡಿಮೆಯನ್ನು ಕಳೆದುಕೊಂಡಿರುವ ಇಂಥವರ ನೆರವಿಗೆ ಸರ್ಕಾರಗಳು ಧಾವಿಸಬೇಕು.

ಅವರಿಗೆ ಅಗತ್ಯ ದವಸ–ಧಾನ್ಯ ಕೊಡುವ ಮೂಲಕ ಹಾಗೂ ಆರ್ಥಿಕ ನೆರವು ಒದಗಿಸುವ ಮೂಲಕ ಅವರು ಸಾರ್ವಜನಿಕ ಆರೋಗ್ಯ ರಕ್ಷಣೆಯ ಈ ಬೃಹತ್ ಅಭಿಯಾನದಲ್ಲಿ ಹೆಚ್ಚು ತತ್ಪರರಾಗಿ ತೊಡಗಿ ಕೊಳ್ಳುವಂತೆ ಮಾಡಬಹುದು. ಪ್ರಧಾನಿಯವರ ಕರೆಯ ಉದ್ದೇಶವನ್ನು ಜನಪ್ರತಿನಿಧಿಗಳೂ ಅರ್ಥ ಮಾಡಿಕೊಂಡು, ಅದನ್ನು ಈಡೇರಿಸಲು ಕೈಜೋಡಿಸಬೇಕು. ವೈರಾಣು ಸರಪಳಿಯನ್ನು ತುಂಡರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನೆರವಾಗಬಹುದು.

ಆದರೆ, ಸೋಂಕಿಗೆ ಒಳಗಾದವರು ಮತ್ತು ರೋಗಪೀಡಿತರಿಗೆ ಬೇಕಾದ ಆರೋಗ್ಯ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸೋಂಕು ಪತ್ತೆಗೆ ನಮ್ಮಲ್ಲಿ ಸೌಲಭ್ಯಗಳ ಕೊರತೆ ಇದೆ. ಆ ಕೊರತೆ ನಿವಾರಿಸಲು ತುರ್ತು ಕ್ರಮ ಅಗತ್ಯ. ಅತ್ಯಂತ ದಕ್ಷವಾಗಿ ಮತ್ತು ಯೋಜನಾಬದ್ಧವಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT