ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ತಕ್ಷಣ ಪೂರೈಸಲು ಕ್ರಮ ಕೈಗೊಳ್ಳಿ

Last Updated 26 ಆಗಸ್ಟ್ 2021, 1:45 IST
ಅಕ್ಷರ ಗಾತ್ರ

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಲೆಗಳನ್ನು ಹಂತ ಹಂತವಾಗಿ ಪ್ರಾರಂಭಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡದೆಯೇ ಶಾಲೆ ಆರಂಭಿಸಿರುವುದು ಮಕ್ಕಳ ಕಲಿಕೆಯ ಬಗ್ಗೆ ಸರ್ಕಾರ ಎಷ್ಟರಮಟ್ಟಿಗೆ ಗಂಭೀರವಾಗಿದೆ ಎನ್ನುವುದನ್ನು ಸೂಚಿಸುವಂತಿದೆ. ತರಗತಿಗಳ ಆರಂಭದೊಂದಿಗೇ ಮಕ್ಕಳಿಗೆ ಪುಸ್ತಕ ನೀಡದಿರುವ ಸರ್ಕಾರದ ಕಾರ್ಯವೈಖರಿ ಬಗ್ಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಾಗಿದೆ. ಜೂನ್‌ ತಿಂಗಳಲ್ಲಿ ಪ್ರಾರಂಭವಾಗಬೇಕಿದ್ದ ಶಾಲೆಗಳು 9 ಮತ್ತು 10ನೇ ತರಗತಿಗಳನ್ನು ಆರಂಭಿಸುವ ಮೂಲಕ ಆಗಸ್ಟ್‌ 23ರಿಂದ ಕಾರ್ಯಾರಂಭ ಮಾಡಿವೆ. ಜೊತೆಗೆ ಪದವಿಪೂರ್ವ ತರಗತಿಗಳೂ ಶುರುವಾಗಿವೆ.

ಕೆಲವೆಡೆ ಹೂವು ನೀಡುವ ಮೂಲಕ ಮಕ್ಕಳನ್ನು ಶಾಲೆಗಳಿಗೆ ಸ್ವಾಗತಿಸಲಾಗಿದೆ. ಹೂವಿನ ಜೊತೆಗೆ ಪುಸ್ತಕಗಳನ್ನೂ ನೀಡುವುದು ಸಾಧ್ಯವಾಗಿದ್ದಲ್ಲಿ ಶಾಲಾರಂಭ ಅರ್ಥಪೂರ್ಣವಾಗುತ್ತಿತ್ತು. ತರಗತಿಗಳನ್ನು ಆರಂಭಿಸಿದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಶಾಲೆ ತೆರೆಯುವುದರ ಜೊತೆಜೊತೆಗೆ ಮಕ್ಕಳ ಕೈಗೆ ಪುಸ್ತಕಗಳೂ ದೊರೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ.

ಕೊರೊನಾ ಕಾರಣದಿಂದಾಗಿ ಪೂರ್ವ ಸಿದ್ಧತೆಗಳಿಗೆ ಬಹಳಷ್ಟು ಸಮಯ ದೊರೆ ತಿದ್ದರೂ ಪಠ್ಯಪುಸ್ತಕಗಳು ಲಭ್ಯವಿರುವಂತೆ ನೋಡಿ ಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪಿಯು ಪರೀಕ್ಷೆಗಳು ರದ್ದಾದರೂ, ಮಕ್ಕಳ ಭವಿಷ್ಯದ ಕಾಳಜಿ ಯನ್ನು ಮುಂದಿಟ್ಟುಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದೀಗ, ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಆದರೆ, ಮಕ್ಕಳಿಗೆ ಪಠ್ಯಪುಸ್ತಕ ಒದಗಿಸುವ ಪ್ರಾಥಮಿಕ ಜವಾಬ್ದಾರಿಯಲ್ಲೇ ಸರ್ಕಾರ ಎಡವಿದೆ. ಪರೀಕ್ಷೆಗಳನ್ನು ನಡೆಸುವುದು ಅಥವಾ ಹೊಸ ನೀತಿಯನ್ನು ಜಾರಿಗೊಳಿಸುವುದಕ್ಕಿಂತಲೂ ಮುಖ್ಯವಾಗಿ, ಕಲಿಕೆಗೆ ಅಗತ್ಯವಾದ ಮೂಲಭೂತ ಸವಲತ್ತುಗಳನ್ನು ಶಾಲಾ ಮಕ್ಕಳಿಗೆ ಒದಗಿಸುವುದರಲ್ಲಿ ಶಿಕ್ಷಣ ಕ್ಷೇತ್ರದ ನಿಜವಾದ ಯಶಸ್ಸು ಅಡಗಿದೆ.

ಪಠ್ಯಪುಸ್ತಕ ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಹಾಜರಿ ಮತ್ತು ಸರ್ಕಾರ ನೀಡುತ್ತಿರುವ ಶಿಕ್ಷಣಕ್ಕೆ ಅರ್ಥ ಬರಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, 9 ಮತ್ತು 10ನೇ ತರಗತಿ ವಿದ್ಯಾರ್ಥಿ ಗಳಿಗೆ ಪಠ್ಯಪುಸ್ತಕ ಪೂರೈಸಲಾಗಿದೆಯೇ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ನೀಡಿರುವ ನಿರ್ದೇಶನವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಪಿಯು ಪಠ್ಯಪುಸ್ತಕಗಳು ಪೇಟೆಯಲ್ಲಿ ದೊರೆಯುತ್ತಿವೆಯೇ ಎನ್ನುವುದನ್ನು ಖಚಿತಪಡಿಸುವಂತೆಯೂ ಹೈಕೋರ್ಟ್‌ ಕೇಳಿದೆ. ಇದೇ 30ರೊಳಗೆ ಪಠ್ಯಪುಸ್ತಕ ಲಭ್ಯತೆ ಕುರಿತ ಸ್ಥಿತಿಗತಿ ವರದಿ ಸಲ್ಲಿಸುವಂತೆ ಹೇಳಿದೆ. ಪಠ್ಯಪುಸ್ತಕಗಳನ್ನು ಹಂತ ಹಂತವಾಗಿ ವಿತರಿಸಲಾಗುತ್ತಿದ್ದು, ಸೆಪ್ಟೆಂಬರ್‌ ಕೊನೆಯ ವೇಳೆಗೆ ಎಲ್ಲ ಮಕ್ಕಳಿಗೂ ತಲುಪಿಸಲಾಗುತ್ತದೆ ಎನ್ನುವ ಸರ್ಕಾರದ ಹೇಳಿಕೆಯನ್ನು ಒಪ್ಪಲಾಗದು. ಶೈಕ್ಷಣಿಕ ವರ್ಷದ ಅರ್ಧ ಭಾಗ ಮುಗಿಯುತ್ತಾ ಬಂದಿದ್ದರೂ ಪಠ್ಯಪುಸ್ತಕ ಪೂರೈಸದಿರುವುದನ್ನು ಶಿಕ್ಷಣ ಇಲಾಖೆಯ ಲೋಪವೆಂದೇ ಹೇಳಬೇಕಾಗುತ್ತದೆ.

ತಾಲ್ಲೂಕು ಮಟ್ಟದ ಅಧಿಕಾರಿಗಳು ‍ಪಿಡಿಎಫ್‌ ರೂಪದ ಪುಸ್ತಕಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಪೂರೈಸಿದ್ದಾರೆ ಎನ್ನುವ ಹೇಳಿಕೆಯು ಮಕ್ಕಳ ಕಲಿಕೆಯ ಬಗ್ಗೆ ಸರ್ಕಾರ ಹೊಂದಿರುವ ಕಾಳಜಿಯ ಬಗ್ಗೆ ಅನುಮಾನ ಮೂಡಿಸುವಂತಿದೆ. ಆನ್‌ಲೈನ್‌ ಶಿಕ್ಷಣ ವ್ಯವಸ್ಥೆಯು ಲಕ್ಷಾಂತರ ವಿದ್ಯಾರ್ಥಿಗಳಿಗೆ ದುರ್ಲಭವಾಗಿರುವಾಗ, ಎಳೆಯ ಮಕ್ಕಳು ಪಿಡಿಎಫ್‌ ರೂಪದಲ್ಲಿ ಪುಸ್ತಕಗಳನ್ನು ಓದಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಡಿಜಿಟಲ್‌ ಪುಸ್ತಕಗಳನ್ನು ನೀಡುವುದು ಶಿಕ್ಷಣದಲ್ಲಿ ತರತಮ ಉಂಟುಮಾಡುವಂತಹದ್ದು. ಕೊರೊನಾ ಸಂದರ್ಭದಲ್ಲಿ ಪರೀಕ್ಷೆಗಳಿಲ್ಲದೆಯೇ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸುತ್ತಿರುವಂತೆ, ಈಗ ಪಠ್ಯಪುಸ್ತಕಗಳು ಇಲ್ಲದೆಯೇ ಶೈಕ್ಷಣಿಕ ವರ್ಷ ಮುಗಿಸಬಹುದೆಂದು ಸರ್ಕಾರ ಭಾವಿಸಿದಂತಿದೆ.

ಸೆಪ್ಟೆಂಬರ್‌ನಲ್ಲಿ 1ರಿಂದ 8ನೇ ತರಗತಿಯ ಮಕ್ಕಳನ್ನೂ ಶಾಲೆಗೆ ಕರೆಯುವ ನಿರೀಕ್ಷೆಯಿದೆ. ಆದರೆ, ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ಈವರೆಗೂ ಒದಗಿಸಿಲ್ಲ. ಹೊಸ ಪಠ್ಯಪುಸ್ತಕಗಳು ಅಲಭ್ಯವಾದುದರಿಂದ, ವಿದ್ಯಾರ್ಥಿಗಳಿಂದ ಹಿಂದಿನ ವರ್ಷದ ಪಠ್ಯಪುಸ್ತಕಗಳನ್ನು ಪಡೆದು ಈ ವರ್ಷದ ಮಕ್ಕಳಿಗೆ ನೀಡುವ ಪ್ರಯತ್ನ ಕೆಲವು ಶಾಲೆಗಳಲ್ಲಿ ನಡೆಯುತ್ತಿದೆ. ಖಾಸಗಿ ಶಾಲೆಗಳ ಮಕ್ಕಳು ಹೊಸ ಪುಸ್ತಕಗಳನ್ನು ಹಿಡಿದು ಸಂಭ್ರಮದಿಂದ ಶಾಲೆಗೆ ಹೋಗುತ್ತಿದ್ದರೆ, ಸರ್ಕಾರಿ ಶಾಲೆಗಳ ಮಕ್ಕಳು ಹಳೆಯ ಪುಸ್ತಕಗಳ ಹುಡುಕಾಟದಲ್ಲಿ ತೊಡಗುವ ಸ್ಥಿತಿ ಎದುರಾಗಿದೆ.

ಪಠ್ಯಪುಸ್ತಕಗಳ ಕೊರತೆಗೆ ಕೊರೊನಾ ಸಂದರ್ಭವನ್ನು ನೆಪ ಮಾಡುವಂತಿಲ್ಲ. ಏಕೆಂದರೆ, ಶೈಕ್ಷಣಿಕ ವರ್ಷದ ಆರಂಭದೊಂದಿಗೆ ಮಕ್ಕಳಿಗೆ ಪುಸ್ತಕಗಳನ್ನು ತಲುಪಿಸುವಲ್ಲಿ ಉಂಟಾಗುತ್ತಿರುವ ಲೋಪ ಸಾಮಾನ್ಯವಾಗಿ ಪ್ರತಿವರ್ಷವೂ ಪುನರಾವರ್ತನೆಗೊಳ್ಳುತ್ತಿದೆ. ಪ್ರಸ್ತುತ ಕೊರೊನಾ ಸಂದರ್ಭವು ಮಕ್ಕಳ ಕಲಿಕೆಯನ್ನು ಇನ್ನಷ್ಟು ಸಂಕೀರ್ಣವನ್ನಾಗಿಸಿದೆ. ದೀರ್ಘ ಕಾಲ ಶಾಲೆಯಿಂದ ದೂರ ಉಳಿದಿದ್ದರಿಂದಾಗಿ ಅನೇಕ ಮಕ್ಕಳು ಕಲಿಕೆಯ ಪ್ರಾಥಮಿಕ ಸಂಗತಿಗಳನ್ನೇ ಮರೆತಿದ್ದಾರೆ. ಆ ಮಕ್ಕಳನ್ನು ಮತ್ತೆ ಕಲಿಕೆಯ ಹಳಿಗೆ ತರಬೇಕಾದ ಸವಾಲು ಶಿಕ್ಷಣ ಇಲಾಖೆಯ ಮುಂದಿದೆ. ಕಲಿಕೆಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ.

ಪಠ್ಯ‍ಪುಸ್ತಕಗಳ ಸರಬರಾಜನ್ನು ಸರ್ಕಾರ ಅತ್ಯಂತ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು. ದೀರ್ಘ ವಿರಾಮದ ಅವಧಿಯಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಕೆಲವು ಶಾಲೆಗಳ ಕಟ್ಟಡಗಳು ಊನಗೊಂಡಿವೆ, ಕಳಾಹೀನಗೊಂಡಿವೆ. ಅಂಥ ಕಟ್ಟಡಗಳನ್ನು ದುರಸ್ತಿಗೊಳಿಸುವ ಕೆಲಸ ವಿಳಂಬವಿಲ್ಲದೆ ನಡೆಯಬೇಕು. ಮಕ್ಕಳ ಕಲಿಕೆಗೆ ಅಗತ್ಯವಾದ ಆರೋಗ್ಯಕರ ಪರಿಸರ ಹಾಗೂ ಪುಸ್ತಕಗಳನ್ನು ತಕ್ಷಣ ಒದಗಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ನೆಪ ಹೇಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT