ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಉಗ್ರರಿಂದ ದಾಳಿ ಸಂಚು: ವಿಶ್ವಸಂಸ್ಥೆ ವರದಿ ಗಂಭೀರವಾಗಿ ಪರಿಗಣಿಸಿ

Last Updated 27 ಜುಲೈ 2020, 20:53 IST
ಅಕ್ಷರ ಗಾತ್ರ

ಕೋವಿಡ್‌–19 ಪಿಡುಗು ಹರಡುವುದನ್ನು ತಡೆಯಲು ಜಗತ್ತಿನಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ ಅನ್ನು ಉಗ್ರಗಾಮಿ ಸಂಘಟನೆಗಳು ತಮ್ಮ ಜಾಲ ವಿಸ್ತರಣೆ ಮತ್ತು ಶಕ್ತಿವರ್ಧನೆಗೆ ಬಳಸಿಕೊಂಡಿವೆ ಎಂಬುದು ಕಳವಳಕಾರಿ ವಿಚಾರ. ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆಯು ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದೆ, ಲಾಕ್‌ಡೌನ್‌ ಪೂರ್ಣ ಸಡಿಲಗೊಂಡು ಜನರ ಓಡಾಟ ಸಹಜ ಸ್ಥಿತಿಗೆ ಬಂದಾಗ ಈ ಉಗ್ರರು ದಾಳಿ ನಡೆಸಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.ಭಾರತ ಉಪಖಂಡದಲ್ಲಿರುವ ಅಲ್‌ಕೈದಾ ಉಗ್ರ ಸಂಘಟನೆಯಲ್ಲಿ ಭಾರತ, ಪಾಕಿಸ್ತಾನ ಹಾಗೂ ಮ್ಯಾನ್ಮಾರ್‌ಗೆ ಸೇರಿದ 150ರಿಂದ 200 ಉಗ್ರರಿದ್ದಾರೆ. ಇವರೆಲ್ಲರೂ ದಾಳಿಯ ಷಡ್ಯಂತ್ರ ರೂಪಿಸುತ್ತಿದ್ದಾರೆ; ಅದರಲ್ಲೂ ಕರ್ನಾಟಕ ಮತ್ತು ಕೇರಳವು ಐಎಸ್‌ ಉಗ್ರರ ನೆಲೆಗಳಾಗಿವೆ ಎಂಬ ವಿಶ್ವಸಂಸ್ಥೆಯ ವರದಿಯು ಆತಂಕಕ್ಕೆ ಕಾರಣವಾಗಿರುವುದು ಮಾತ್ರವಲ್ಲ, ಎಚ್ಚರಿಕೆಯ ಗಂಟೆಯಂತೆಯೂ ಇದೆ. ಈ ವರ್ಷದ ಆರಂಭದಲ್ಲಿ ದೆಹಲಿ, ಕೇರಳದ ಹಲವೆಡೆ ಬಂಧಿಸಲಾಗಿದ್ದ ಕೆಲವು ಉಗ್ರರಿಂದ, ದಕ್ಷಿಣ ಭಾರತವು ಉಗ್ರರ ಅಡಗುದಾಣವಾಗುತ್ತಿರುವ ಸಂಗತಿ ಹೊರಬಿದ್ದಿತ್ತು. ವಿಶ್ವಸಂಸ್ಥೆಯ ವರದಿಯಿಂದ ಈ ವಿಷಯ ಇನ್ನಷ್ಟು ಸ್ಪಷ್ಟವಾಗಿದೆ. ಉಗ್ರರು ತಮ್ಮ ನೆಲೆ ಭದ್ರಪಡಿಸಿಕೊಳ್ಳಲು ಆನ್‌ಲೈನ್‌ ಮಾಧ್ಯಮವನ್ನು ಬಳಸುತ್ತಿರುವುದು ಇಲ್ಲಿ ಗಮನಾರ್ಹ. ಈ ಮಾಧ್ಯಮದ ಮೂಲಕ ಯುವಜನರನ್ನು ತನ್ನತ್ತ ಸೆಳೆಯುವುದಷ್ಟೇ ಅಲ್ಲದೆ, ಸಂಘಟನೆಗೆ ನಿಯೋಜನೆಯನ್ನೂ ಈ ಮೂಲಕವೇ ಅವರು ನಡೆಸುತ್ತಿದ್ದಾರೆ. ಹೀಗಾಗಿ, ಉಗ್ರ ಸಂಘಟನೆಗಳ ಆನ್‌ಲೈನ್ ಚಟುವಟಿಕೆಗಳ ಮೇಲೆ ಮತ್ತಷ್ಟು ನಿಗಾ ವಹಿಸುವ ಅಗತ್ಯ ಇದೆ.

‘ಉಗ್ರರ ಕೃತ್ಯಗಳಿಗೆ ರಾಜ್ಯದಲ್ಲಿ ಆಸ್ಪದ ನೀಡುವುದಿಲ್ಲ, ಅವರನ್ನು ಮಟ್ಟಹಾಕಲು ನಮ್ಮ ಪೊಲೀಸರು ಕಾರ್ಯನಿರತರಾಗಿದ್ದಾರೆ’ ಎಂದು ರಾಜ್ಯದ ಗೃಹ ಸಚಿವರು ವಿಶ್ವಸಂಸ್ಥೆಯ ವರದಿಗೆ ಪ್ರತಿಕ್ರಿಯಿಸಿದ್ದಾರೆ. ಭಯೋತ್ಪಾದನೆಗೆ ಸದಾ ಹಾತೊರೆಯುವ ಉಗ್ರರ ವಿಷಯದಲ್ಲಿ ಎಷ್ಟು ಕಟ್ಟೆಚ್ಚರ ವಹಿಸಿದರೂ ಸಾಲದು ಎಂಬುದನ್ನು ಈ ಹಿಂದಿನ ಅನೇಕ ಹಿಂಸಾಕೃತ್ಯಗಳು ನಮಗೆ ತೋರಿಸಿಕೊಟ್ಟಿವೆ. ರಾಜ್ಯದ ಸಂಪೂರ್ಣ ಆಡಳಿತಯಂತ್ರವು ಕೊರೊನಾ ಸೋಂಕು ನಿವಾರಣೆಯತ್ತಲೇ ಗಮನ ಕೇಂದ್ರೀಕರಿಸಿದೆ. ಅದರಲ್ಲೂ ಪೊಲೀಸ್‌ ಇಲಾಖೆಯು ಅನವರತ ದುಡಿಯುತ್ತಿದೆ. ಅದು ಈ ಹೊತ್ತಿನ ಅಗತ್ಯ ಕೂಡ. ಕೆಲವು ಪೊಲೀಸರು ಕೋವಿಡ್‌ಪೀಡಿತರಾಗಿದ್ದು, 50 ವರ್ಷ ಮೇಲ್ಪಟ್ಟವರನ್ನು ರಜೆ ಮೇಲೆ ಕಳುಹಿಸಿರುವ ಇಲಾಖೆಯು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಕಾರಣಗಳು ಏನೇ ಇದ್ದರೂ ಇವೇ ಈ ಹೊತ್ತಿನ ನಮ್ಮ ದೌರ್ಬಲ್ಯವಾಗದಂತೆ ನೋಡಿಕೊಳ್ಳಬೇಕಾದ ಮಹತ್ವದ ಹೊಣೆಗಾರಿಕೆಯು ಸರ್ಕಾರದ ಮುಂದೆ ಇದೆ. ಪ್ರಾರ್ಥನಾ ಮಂದಿರಗಳ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ವರದಿಯನ್ನು ಶ್ರೀಲಂಕಾ ಸರ್ಕಾರ ಕಳೆದ ವರ್ಷ ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ, ಸರಣಿ ಬಾಂಬ್‌ ದಾಳಿಗಳಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ನಾವು ಎಚ್ಚೆತ್ತುಕೊಳ್ಳಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಸಂಘಟಿತ ನೆಲೆಯಲ್ಲಿ ದಾಳಿಗಳನ್ನು ಆಯೋಜಿಸುವ ಉಗ್ರರನ್ನು ಬಗ್ಗುಬಡಿಯಲು ಅದಕ್ಕಿಂತ ಹೆಚ್ಚಿನ ಸಂಘಟಿತ ಕಾರ್ಯಯೋಜನೆಯೇ ಸೂಕ್ತ ಎಂಬ ನಂಬಿಕೆಯನ್ನು ಅಂತರರಾಷ್ಟ್ರೀಯ ಸಮುದಾಯ ಹೊಂದಿದೆ. ಈ ಕಾರ್ಯತಂತ್ರವು ಪ್ರಾಂತೀಯವಾಗಿಯೂ ಅನ್ವಯವಾಗಬೇಕು. ಕರ್ನಾಟಕವು ದಕ್ಷಿಣ ಭಾರತದ ಇತರ ರಾಜ್ಯಗಳ ಜೊತೆ ಕೈಜೋಡಿಸಿ, ದುಷ್ಟಶಕ್ತಿಗಳನ್ನು ಇನ್ನಷ್ಟು ಸಂಘಟಿತವಾಗಿ ಎದುರಿಸಬೇಕು. ಉಗ್ರರ ಬಗೆಗಿನ ಮಾಹಿತಿ ಹಂಚಿಕೆ, ಅಂತರರಾಜ್ಯ ಸಂಪರ್ಕಗಳ ವ್ಯಾಪಕ ಬಳಕೆ, ಕ್ಷಿಪ್ರ ಕಾರ್ಯಯೋಜನೆಗಳ ಮೂಲಕ ಉಗ್ರರ ಸಂಚು ವಿಫಲಗೊಳಿಸಬೇಕು. ಇದರ ಜೊತೆಜೊತೆಗೆ, ನಮ್ಮ ಯುವಕರು ಉಗ್ರರ ಬಲೆಗೆ ಬೀಳದಂತೆ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನೂ ಗಂಭೀರವಾಗಿ ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT