ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಲೋಚನೆಯ ಕೂಸಾಗಿರುವ ‘ಶಾಂತಿ ಮಂಡಳಿ’ಯು ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಒಕ್ಕೂಟದಂತೆ ಆಗಬಹುದು ಎಂದು ಕಂಡರೂ, ಅದಕ್ಕೆ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ, ಅದರ ಸ್ಪಷ್ಟ ಉದ್ದೇಶ ಏನು ಎಂಬುದು ಗೊತ್ತಾಗಿಲ್ಲ. ಮಂಡಳಿಯ ಸನ್ನದನ್ನು ಟ್ರಂಪ್ ಅವರು ಈಚೆಗೆ ದಾವೋಸ್ನಲ್ಲಿ ಬಿಡುಗಡೆ ಮಾಡಿದರು. ಆದರೆ, ಅದರಲ್ಲಿನ ಅಂಶಗಳು ಟ್ರಂಪ್ ಅವರು ಮೊದಲು ಮಂಡಳಿಯ ಬಗ್ಗೆ ಘೋಷಣೆ ಮಾಡಿದಾಗ ಹೇಳಿದ್ದಕ್ಕಿಂತ ಭಿನ್ನವಾಗಿವೆ. ಗಾಜಾದಲ್ಲಿ ಎರಡನೆಯ ಹಂತದ ಶಾಂತಿ ಯೋಜನೆಯ ಭಾಗವಾಗಿ, ಆ ಪ್ರದೇಶದ ಆಡಳಿತ ಮತ್ತು ಪುನರ್ನಿರ್ಮಾಣದ ಹೊಣೆಯನ್ನು ವಹಿಸಿ ಈ ಮಂಡಳಿಯನ್ನು ಟ್ರಂಪ್ ಘೋಷಿಸಿದ್ದರು. ಈಗ ಮಂಡಳಿಯ ವ್ಯಾಪ್ತಿ ವಿಶಾಲವಾಗಿದೆ. ಸನ್ನದಿನಲ್ಲಿ ಗಾಜಾ ಬಗ್ಗೆ ಉಲ್ಲೇಖವಿಲ್ಲ, ಅದು ‘ಅಂತರರಾಷ್ಟ್ರೀಯ ಶಾಂತಿಪಾಲನಾ ಸಂಸ್ಥೆ’ಯಂತೆ ಇರಲಿದೆ. ಈ ಮಂಡಳಿಯು ವಿಶ್ವಸಂಸ್ಥೆಯ ಜೊತೆಯಾಗಿ ಕೆಲಸ ಮಾಡುತ್ತದೆ ಎಂದು ಟ್ರಂಪ್ ಹೇಳುತ್ತಿದ್ದರಾದರೂ, ಈ ಮಂಡಳಿಯು ವಿಶ್ವಸಂಸ್ಥೆಗೆ ಬದಲಿಯಾಗಿ ರೂಪುಗೊಳ್ಳಬಹುದು ಎಂದೂ ಅವರು ಒಮ್ಮೆ ಹೇಳಿದ್ದರು. ಮಂಡಳಿಗೆ ಟ್ರಂಪ್ ಅವರು ವೈಯಕ್ತಿಕ ನೆಲೆಯಲ್ಲಿ ಅಧ್ಯಕ್ಷರಾಗಿರುತ್ತಾರೆ; ಅಮೆರಿಕದ ಅಧ್ಯಕ್ಷರಾಗಿ ಅಲ್ಲ. ಟ್ರಂಪ್ ಅವರು ತಾವು ಬಯಸಿದಷ್ಟು ಕಾಲ ಅದರ ಅಧ್ಯಕ್ಷರಾಗಿರುತ್ತಾರೆ, ಮಂಡಳಿಯ ಅಧ್ಯಕ್ಷ ಹುದ್ದೆಯ ಉತ್ತರಾಧಿಕಾರಿ ಯಾರು ಎಂಬುದನ್ನು ಅವರೇ ಹೇಳಲಿದ್ದಾರೆ. ಟ್ರಂಪ್ ಅವರು ವೈಯಕ್ತಿಕವಾಗಿ ಕೆಲವರನ್ನು ಮಂಡಳಿಗೆ ನಾಮನಿರ್ದೇಶನ ಮಾಡಿದ್ದಾರೆ. ಯಾವುದೇ ದೇಶದ ಸದಸ್ಯತ್ವವನ್ನು ರದ್ದುಪಡಿಸುವ ಅಧಿಕಾರವು ಟ್ರಂಪ್ ಅವರಿಗೆ ಇರಲಿದೆ.

ಮಂಡಳಿಯನ್ನು ಸೇರುವಂತೆ ಟ್ರಂಪ್ ಅವರು ಭಾರತಕ್ಕೆ ಆಹ್ವಾನ ನೀಡಿದ್ದಾರೆ. ಆದರೆ ಭಾರತವು ಆ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಪ್ಯಾಲೆಸ್ಟೀನ್ ನಾಗರಿಕರ ಹೋರಾಟಕ್ಕೆ ಭಾರತವು ಬೆಂಬಲ ನೀಡುತ್ತ ಬಂದಿದೆ, ದ್ವಿರಾಷ್ಟ್ರ ಸಿದ್ಧಾಂತವು ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ಹೇಳುತ್ತ ಬಂದಿದೆ. ಆದರೆ ಈಚಿನ ವರ್ಷಗಳಲ್ಲಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ನಿಲುವನ್ನು ಒಂದಿಷ್ಟು ಸಡಿಲಿಸಿದೆ. ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಯುಎಇ ಈ ಮಂಡಳಿಯನ್ನು ಸೇರಿವೆ. ಮಂಡಳಿಯನ್ನು ಸೇರುವಂತೆ ಅಮೆರಿಕವು ಭಾರತವನ್ನು ಒತ್ತಾಯಿಸಬಹುದು. ಆದರೆ ಈ ಮಂಡಳಿಯ ಉದ್ದೇಶದ ಬಗ್ಗೆ ಸ್ಪಷ್ಟತೆ ಇಲ್ಲದಿರುವಾಗ ಅದನ್ನು ಭಾರತ ಸೇರುವುದು ಸೂಕ್ತವಾಗಲಿಕ್ಕಿಲ್ಲ. ಗಾಜಾದಲ್ಲಿ ಶಾಂತಿ ಸ್ಥಾಪನೆ ವಿಚಾರವಾಗಿ ಟ್ರಂಪ್ ಅವರು ಹೊಂದಿರುವ ಆಲೋಚನೆಗಳು, ಅದೇ ವಿಷಯವಾಗಿ ಇತರ ಹಲವು ದೇಶಗಳು ಹೊಂದಿರುವ ಆಲೋಚನೆಗಳಿಗಿಂತ ಬಹಳ ಭಿನ್ನವಾಗಿವೆ. ಟ್ರಂಪ್ ಅವರ ಸಂಬಂಧಿ ಜಾರಡ್ ಕುಶ್ನರ್ ಅವರು ಗಾಜಾದಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ. ಕುಶ್ನರ್ ಅವರೂ ಮಂಡಳಿಯ ಸದಸ್ಯ. ಮಂಡಳಿಯಲ್ಲಿ ಪ್ಯಾಲೆಸ್ಟೀನ್ ಪ್ರತಿನಿಧಿಗಳಿಗೆ ಸದಸ್ಯತ್ವ ಇಲ್ಲ. ಮಂಡಳಿಗೆ ನೀಡಿರುವ ವಿಶಾಲವಾದ ಹೊಣೆಗಾರಿಕೆಯ ಫಲವಾಗಿ ಅದು ಜಗತ್ತಿನ ಇತರೆಡೆಗಳಲ್ಲಿನ ಸಮಸ್ಯೆ ಪರಿಹರಿಸಲಿಕ್ಕೆ ಕೂಡ ಮುಂದಾಗಬಹುದು. ಕಾಶ್ಮೀರದ ವಿಚಾರವಾಗಿಯೂ ಅದು ತಲೆಹಾಕಬಹುದು. ಹೀಗಾಗಿ ಭಾರತವು ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಬೇಕು.

ಮಂಡಳಿಯನ್ನು ಸೇರುವಂತೆ 62 ದೇಶಗಳಿಗೆ ಆಹ್ವಾನ ನೀಡಲಾಗಿದೆಯಾದರೂ 19 ದೇಶಗಳು ಮಾತ್ರ ಮಂಡಳಿಯನ್ನು ಸೇರಿ, ಅದರ ಸನ್ನದಿಗೆ ಸಹಿ ಹಾಕಿವೆ. ಯಾವ ದೇಶವೂ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಲು ಅಗತ್ಯವಿರುವ ಶುಲ್ಕವನ್ನು ಪಾವತಿಸಿಲ್ಲ! ಅಮೆರಿಕದ ಮಿತ್ರ ದೇಶಗಳು, ಐರೋಪ್ಯ ಒಕ್ಕೂಟದ ಪ್ರಮುಖ ಸದಸ್ಯ ರಾಷ್ಟ್ರಗಳು ಮಂಡಳಿಯಿಂದ ದೂರ ಉಳಿದಿವೆ. ಮಂಡಳಿಯನ್ನು ಸೇರುವುದಿಲ್ಲ ಎಂಬ ಸೂಚನೆಯನ್ನು ಬ್ರಿಟನ್ ಮತ್ತು ಫ್ರಾನ್ಸ್ ರವಾನಿಸಿವೆ. ಚೀನಾ ಮತ್ತು ರಷ್ಯಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಮಂಡಳಿಯ ಸ್ವರೂಪವನ್ನು ಗಮನಿಸಿದರೆ, ಅದು ಟ್ರಂಪ್ ಅವರ ಖಾಸಗಿ ಸಂಸ್ಥೆಯಾಗಿ ಕೆಲಸ ಮಾಡಬಹುದು ಎಂಬಂತೆ ಕಾಣುತ್ತದೆ. ಈ ಮಂಡಳಿಯು ವಿಶ್ವಸಂಸ್ಥೆಯ ಅಧಿಕಾರಕ್ಕೆ ಅಡ್ಡಿ ಸೃಷ್ಟಿಸಬಹುದು ಎಂಬ ಅಭಿಪ್ರಾಯ ಅಂತರರಾಷ್ಟ್ರೀಯ ಸಮುದಾಯದಲ್ಲಿ ಇದೆ. ಮಂಡಳಿಯನ್ನು ಸೇರಲು ಅವಸರ ಪ್ರದರ್ಶಿಸುವುದು ಭಾರತದ ಹಿತಕ್ಕೆ ಪೂರಕವೇನೂ ಅಲ್ಲ.