ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಂವಿಧಾನದ ಮೇಲೆ ವಾಗ್ಬಾಣ; ಟೀಕೆ ಮೊನಚಾಗಿಸಿದ ಧನಕರ್

Last Updated 15 ಜನವರಿ 2023, 21:43 IST
ಅಕ್ಷರ ಗಾತ್ರ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಜ್ಯಸಭೆಯ ಸಭಾಪತಿಯಾಗಿ ಮಾಡಿದ ಮೊದಲ ಭಾಷಣದಲ್ಲಿ ನ್ಯಾಯಾಂಗದ ಬಗ್ಗೆ ಟೀಕೆ ಮಾಡಿದ್ದರು. ಈಗ ಅವರು ತಮ್ಮ ಟೀಕೆಯನ್ನು ಇನ್ನಷ್ಟು ಮುಂದಕ್ಕೆ ಒಯ್ದಿದ್ದಾರೆ. ಅವರು ಸಂವಿಧಾನದ ಮೂಲ ಸ್ವರೂಪಕ್ಕೆ ಸಂಬಂಧಿಸಿದ ತಾತ್ವಿಕತೆಯನ್ನು ಪ್ರಶ್ನಿಸಿದ್ದಾರೆ. ಇದು ಯೋಜಿತ ವಾಗ್ದಾಳಿ ಎಂಬುದು ಸ್ಪಷ್ಟ.

ಸಂಸತ್ತು ಹಾಗೂ ನ್ಯಾಯಾಂಗದ ನಡುವಿನ ಸಂಬಂಧದ ಕುರಿತ ಅವರ ಅನಿಸಿಕೆಗಳು ತಪ್ಪಾಗಿದ್ದವು. ಆದರೆ ಈಗ ಅವರು ಸಂವಿಧಾನದ ಮೂಲ ಸ್ವರೂಪಕ್ಕೆ ಸಂಬಂಧಿಸಿದ ತಾತ್ವಿಕತೆ ಕುರಿತು ಆಡಿರುವ ಮಾತುಗಳು ಹೆಚ್ಚು ಕೆಡುಕನ್ನು ಉಂಟುಮಾಡುವಂಥವು, ಬಗೆಬಗೆಯ ಪರಿಣಾಮಗಳನ್ನು ಉಂಟುಮಾಡುವಂಥವು. ಸಂವಿಧಾನದ ಮೂಲ ಸ್ವರೂಪಕ್ಕೆ ಸಂಬಂಧಿಸಿದ ತಾತ್ವಿಕತೆ ಮೇಲಿನ ಆಕ್ರಮಣ ಅಂದರೆ ಅದು ಸಂವಿಧಾನದ ಮೇಲಿನ ಆಕ್ರಮಣವೇ ಸರಿ. ಏಕೆಂದರೆ, ಧನಕರ್ ಹೇಳಿರುವಂತೆ ಮೂಲ ಸ್ವರೂಪವು ಇಲ್ಲವೆಂದಾದರೆ, ಸಂವಿಧಾನದ ಅತ್ಯಗತ್ಯ ಅಂಶಗಳೇ ಇಲ್ಲವಾದಂತೆ. ಆಗ ಸಂವಿಧಾನವು ಮೌಲ್ಯ ಕಳೆದುಕೊಳ್ಳುತ್ತದೆ. ಮೂಲ ಸ್ವರೂಪವೆಂಬ ತಾತ್ವಿಕತೆ ಇಲ್ಲವಾದರೆ, ಮೂಲಭೂತ ಹಕ್ಕುಗಳನ್ನೂ ಮೊಟಕುಗೊಳಿಸುವ ಶಾಸನಗಳನ್ನು ಸಂಸತ್ತು ಜಾರಿಗೆ ತರಬಹುದು ಎಂದಾಗುತ್ತದೆ. ಜೀವಿಸುವ ಸ್ವಾತಂತ್ರ್ಯ, ಕಾನೂನಿನ ಪರಮಾಧಿಕಾರ, ಸಂಸದೀಯ ಪ್ರಜಾಸತ್ತೆ, ಅಧಿಕಾರದ ಮಿತಿಗಳನ್ನು ನಿಗದಿಪಡಿಸುವಿಕೆ, ನ್ಯಾಯಾಂಗಕ್ಕೆ ಇರುವ ಪರಾಮರ್ಶೆಯ ಅಧಿಕಾರ... ಇಂಥವನ್ನು ಕೂಡ ಮೊಟಕುಗೊಳಿಸುವ ಶಾಸನಗಳನ್ನು ಜಾರಿಗೆ ತರಬಹುದು ಎಂಬ ಅರ್ಥ ಬರುತ್ತದೆ. ಆ ರೀತಿ ಆದರೆ, ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತ್ತೆ ಏನು ಉಳಿಯುತ್ತದೆ?

ಸಂವಿಧಾನಕ್ಕೆ ತಂದ 99ನೆಯ ತಿದ್ದುಪಡಿ ಹಾಗೂ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ರಚಿಸಲು ಸಂಸತ್ತು ರೂಪಿಸಿದ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದ್ದರ ಬಗ್ಗೆ ಪ್ರಸ್ತಾಪಿಸುವ ಮೂಲಕ ಧನಕರ್ ಅವರು ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಸಂಸತ್ತು ಅನುಮೋದನೆ ನೀಡಿದ ಸಂವಿಧಾನ ತಿದ್ದುಪಡಿ ಅಥವಾ ಶಾಸನವೊಂದನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಬಹುದು ಎಂಬುದನ್ನು ಧನಕರ್ ಅವರು ಒಪ್ಪುತ್ತಿಲ್ಲ. ಹೀಗೆ ಅಸಿಂಧುಗೊಳಿಸುವುದು ಅವರ ಪ್ರಕಾರ, ಸಂಸತ್ತಿನ ಮೂಲಕ ವ್ಯಕ್ತವಾಗುವ ಜನರ ಇಚ್ಛೆಯನ್ನು ಅಮಾನ್ಯಗೊಳಿಸಿದಂತೆ. ‘ಮೇಲರಿಮೆಯ ಭಾವನೆ ಹೊಂದುವುದು, ನ್ಯಾಯಾಂಗದ ವೇದಿಕೆಗಳಿಂದ ಇತರರ ಗಮನ ಸೆಳೆಯುವಂತೆ ವರ್ತಿಸುವುದು ಶಾಸಕಾಂಗದ ಅಧಿಕಾರಗಳನ್ನು ದುರ್ಬಲಗೊಳಿಸುವುದಕ್ಕೆ ಕಾರಣವಾಗುತ್ತಿದೆ’ ಎಂಬ ಮಾತುಗಳನ್ನು ಆಡುವ ಮೂಲಕ ಧನಕರ್ ಅವರು ಶಾಸಕಾಂಗ ಹಾಗೂ ನ್ಯಾಯಾಂಗವನ್ನು ಪರಸ್ಪರ ಸಂಘರ್ಷದಲ್ಲಿ ಇರುವಂತೆ ತೋರಿಸಿದ್ದಾರೆ. ಮೂಲ ಸ್ವರೂಪಕ್ಕೆ ಸಂಬಂಧಿಸಿದ ತಾತ್ವಿಕತೆಯು ಸಂಸತ್ತಿನ ಪರಮೋಚ್ಚ ಸ್ಥಾನವನ್ನು ದುರ್ಬಲಗೊಳಿಸುತ್ತದೆ ಎಂದೂ ಧನಕರ್ ಭಾವಿಸಿದ್ದಾರೆ. ಇದು ತಪ್ಪು ಗ್ರಹಿಕೆ. ಸಂಸತ್ತು ಪರಮೋಚ್ಚ ಸಂಸ್ಥೆಯಲ್ಲ. ದೇಶದಲ್ಲಿ ಸಂವಿಧಾನವೇ ಪರಮೋಚ್ಚ. ಸಂಸತ್ತು ಸೃಷ್ಟಿಯಾಗಿರುವುದು ಸಂವಿಧಾನದ ಕಾರಣದಿಂದ. ಸಂಸತ್ತು ಪರಮೋಚ್ಚ ಎಂದು ಬೇರೊಂದು ಕಡೆ ಇರುವ ಪರಿಕಲ್ಪನೆಯನ್ನು ಭಾರತಕ್ಕೆ ಅನ್ವಯಿಸಲು ಆಗದು. ಇಲ್ಲಿ ಇರುವ ಲಿಖಿತ ಸಂವಿಧಾನವು, ತನ್ನ ಮೂರು ಅಂಗಗಳಿಗೆ (ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ) ನಿರ್ದಿಷ್ಟ ಅಧಿಕಾರಗಳನ್ನು, ಜವಾಬ್ದಾರಿಗಳನ್ನು ನೀಡಿದೆ.

ಶಾಸಕಾಂಗ ಹಾಗೂ ಕಾರ್ಯಾಂಗ ಕೈಗೊಳ್ಳುವ ತೀರ್ಮಾನಗಳನ್ನು ಪರಿಶೀಲನೆಗೆ ಒಳಪಡಿಸಲು ನ್ಯಾಯಾಂಗಕ್ಕೆ ನೀಡಲಾಗಿರುವ ಅಧಿಕಾರವು, ವ್ಯವಸ್ಥೆಯೊಳಗೆ ಸಮತೋಲನ ಇರುವಂತೆ ನೋಡಿಕೊಳ್ಳುತ್ತದೆ. ಪ್ರಜೆಗಳ ಹಕ್ಕುಗಳು ಮೊಟಕಾಗದಂತೆ ನೋಡಿಕೊಳ್ಳುವ ಬಹುದೊಡ್ಡ ರಕ್ಷಕನಂತೆಯೂ ಈ ಅಧಿಕಾರವು ಕೆಲಸ ಮಾಡುತ್ತದೆ. ಸಂಸತ್ತಿನಲ್ಲಿ ಬಹುಮತ ಇದೆ ಎಂಬ ಮಾತ್ರಕ್ಕೆ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಅವಕಾಶವಾಗದಂತೆ ಇದು ನಿಗಾ ವಹಿಸುತ್ತದೆ. ಈ ಬಗೆಯ ರಚನೆಯು ಬಹುಸಂಖ್ಯಾತವಾದಿ ಭಾವನೆಗಳಿಗೆ ಇಂಬು ಕೊಡುತ್ತಿರುವ ಈಗಿನ ಸಂದರ್ಭಕ್ಕೆ ಬಹುಮುಖ್ಯ.

ಬಹಳ ದೊಡ್ಡ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯು ಈಗ ಸಂವಿಧಾನದ ಮೂಲ ಸ್ವರೂಪದ ಪರಿಕಲ್ಪನೆಯನ್ನು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯ ವಿರುದ್ಧವಾಗಿ ಪಟ್ಟುಬಿಡದ ಅಭಿಯಾನವೊಂದು ನಡೆದಿದೆ. ಶಾಸಕಾಂಗದ ಪಾವಿತ್ರ್ಯವನ್ನು ನ್ಯಾಯಾಂಗವು ಗೌರವಿಸಬೇಕು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಇವೆಲ್ಲವನ್ನೂ ಬಿಡಿಬಿಡಿಯಾಗಿ ಗ್ರಹಿಸಲಾಗದು. ಸಂಘರ್ಷಕ್ಕೆ ಸನ್ನದ್ಧವಾದ ರೀತಿಯಲ್ಲಿ ಧನಕರ್ ಅವರು ಮಾತನಾಡುತ್ತಿರುವುದನ್ನು ಉಪೇಕ್ಷಿಸಲಾಗದು.

ಇವೆಲ್ಲ ಕೇಂದ್ರ ಸರ್ಕಾರದ ನಿಲುವು, ಅಭಿಪ್ರಾಯಗಳೇ? ಪ್ರಧಾನಿ ನರೇಂದ್ರ ಮೋದಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT