ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಗಳಿಗೂ ತಟ್ಟಿದ ಲಾಕ್‌ಡೌನ್‌ ಬಿಸಿ

ಸ್ಥಳೀಯವಾಗಿ ಸಿಗದ ಮೇವು: ಹೊರ ಜಿಲ್ಲೆಗಳಿಂದ ತರುವುದೂ ದುಸ್ತರ
Last Updated 4 ಮೇ 2020, 18:52 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಾದ್ಯಂತ ಮೇವಿನ ಕೊರತೆ ಎದುರಾಗಿದೆ. ಜಾನುವಾರುಗಳು ಸೊರಗುತ್ತಿವೆ. ಇನ್ನೊಂದೆಡೆ ಗೋಶಾಲೆಗಳು ಕೂಡಾ ಅಷ್ಟಿಷ್ಟು ಮೇವು ತರಿಸಿಕೊಂಡು, ಸಂಕಷ್ಟದಲ್ಲಿಯೇ ದಿನಗಳನ್ನು ದೂಡುವಂತಾಗಿದೆ.

ಹೊರವಲಯದ ಕೈರಂಗಳದಲ್ಲಿ ಗೋವನಿತಾಶ್ರಯ ಟ್ರಸ್ಟ್‌ ನಡೆಸುತ್ತಿರುವ ಗೋಶಾಲೆಗೂ ಮೇವು ಕೊರತೆ ಬಾಧಿಸಿದೆ. ಹೊರಜಿಲ್ಲೆಗಳಿಂದ ಮೇವು ತರಿಸುವುದಕ್ಕೂ ಹರಸಾಹಸ ಪಡಬೇಕಾಗಿದೆ.

‘ಇಲ್ಲಿ 360 ಜಾನುವಾರುಗಳಿವೆ. ಸಿಬ್ಬಂದಿ ವೇತನ, ಮೇವು, ಜಾನುವಾರು ಚಿಕಿತ್ಸೆ ಹೀಗೆ ಮಾಸಿಕ ₹ 8 ಲಕ್ಷ ವೆಚ್ಚವಾಗುತ್ತಿದೆ. ಸದ್ಯ ದೇಣಿಗೆ ಸಂಗ್ರಹವಾಗುತ್ತಿಲ್ಲ. ಸ್ಥಳೀಯವಾಗಿ ಮೇವು ಕೂಡಾ ಲಭ್ಯವಿಲ್ಲ’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಡಾ.ಪಿ.ಅನಂತಕೃಷ್ಣ ಭಟ್‌ ಮಾಹಿತಿ ನೀಡಿದರು.

ಹೊರಜಿಲ್ಲೆಗಳಿಂದ ಮೇವು ತರಿಸುವುದಕ್ಕೂ ಸಾಕಷ್ಟು ಅಡ್ಡಿಗಳಿವೆ. ಮೇವು ಸಾಗಣೆಗೆ ಅನುಮತಿ ಪಡೆಯುವುದು, ಮೇವಿಗೆ ಹಣ ನೀಡುವುದು ಹೀಗೆ ತೊಡಕುಗಳಿವೆ. ಗೋಶಾಲೆ ನಡೆಸಲು ಹಣ ಹೊಂದಿಸುವ ಚಿಂತೆ ಕಾಡುತ್ತಿದೆ‘ ಎನ್ನುತ್ತಾರೆ ಅವರು.

‘ಸರ್ಕಾರವೇ ಭರಿಸಲಿ’:‘ಗೋ ಸಾಗಣೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ. ದೇಣಿಗೆ ಸಂಪೂರ್ಣ ನಿಂತುಹೋಗಿರುವ ಈಗಿನ ಸಂದರ್ಭದಲ್ಲಿ ಗೋಶಾಲೆಗಳಲ್ಲಿನ ಜಾನುವಾರು ಸಾಕಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ವಿನಯ್‌ ಎಲ್‌.ಶೆಟ್ಟಿ ಆಗ್ರಹಿಸಿದ್ದಾರೆ.

‘ಬಸವ’ಗಳಿಗೂ ಬರ: ಬಸವಗಳೊಂದಿಗೆ ಮನೆ ಮನೆಗೆ ತಿರುಗಿ ಹೊಟ್ಟೆ ತುಂಬಿಸಿಕೊಳ್ಳುವವರಿಗೂ ಲಾಕ್‌ಡೌನ್‌ ಬಿಸಿ ತಟ್ಟಿದೆ.ಬಸವವನ್ನು ಬದುಕಿಗೆ ಆಶ್ರಯಿಸಿರುವ ಕೊಂಡಣ್ಣ ಅವರು, ‘ಈಗ ಮೇವು ಸಿಗುತ್ತಿಲ್ಲ. . ಬಸವಗಳೂ ಬಸವಳಿಯುತ್ತಿವೆ. ನಮ್ಮ ಉಪಜೀವನಕ್ಕೂ ತೊಂದರೆ ಆಗಿದೆ’ ಎಂದರು.

**

ಜಿಲ್ಲೆಯಲ್ಲಿ ಗದ್ದೆ ಬೇಸಾಯ ಕಡಿಮೆಯಾಗಿದೆ. ಹೀಗಾಗಿ ಹೊರ ಜಿಲ್ಲೆಗಳಿಂದಲೇ ಮೇವು ತರಿಸಿಕೊಳ್ಳಬೇಕು. ಲಾಕ್‌ಡೌನ್‌ನಿಂದಾಗಿ ಅದಕ್ಕೂ ತೊಂದರೆ ಉಂಟಾಗಿದೆ.
-ಪಿ. ಅನಂತಕೃಷ್ಣ ಭಟ್,ಗೋವನಿತಾಶ್ರಯ ಟ್ರಸ್ಟ್‌ ಕಾರ್ಯದರ್ಶಿ

**
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇವಿನ ಕೊರತೆ ಇದ್ದು, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಶೀಘ್ರ ಹೊರಜಿಲ್ಲೆಗಳಿಂದ ಮೇವು ತರಿಸಲು ಕ್ರಮ ಕೈಗೊಳ್ಳಲಾಗುವುದು.
-ಡಾ.ಜಯರಾಜ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT