ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನದ ವ್ಯಾಧಿ

Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಭಾರತೀಯ ಪುರುಷರಲ್ಲಿ ಸಿಗರೇಟ್‌ ಸೇವನೆ ಚಟ ಕಳೆದ ಮೂರು ದಶಕಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ ಎಂಬ ವರದಿ ಚೇತೋಹಾರಿ. ಆದರೆ ಜತೆಜತೆಗೇ ಆತಂಕಪಡಬೇಕಾದ ಇನ್ನೊಂದು ಸಂಗತಿಯೂ ಇದೆ. ಅದೆಂದರೆ, ಧೂಮಪಾನದ ಪಿಡುಗು ಅಂಟಿಸಿಕೊಂಡ  ಭಾರತೀಯ ಮಹಿಳೆಯರ ಪ್ರಮಾಣ ಮಾತ್ರ ಇಳಿಮುಖವಾಗಿಲ್ಲ.

ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಆರೋಗ್ಯ ಮಾಪಕ ಸಂಸ್ಥೆ, ವಿಶ್ವದ 187 ದೇಶಗಳಲ್ಲಿನ ತಂಬಾಕು ಸೇವನೆ ಪ್ರವೃತ್ತಿಯ ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿಯಲ್ಲಿ ಈ ಅಂಶಗಳಿವೆ. ಅದರ ಪ್ರಕಾರ, ತಂಬಾಕು ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನುಗಳು ಮತ್ತು ನಿರಂತರ ಜನಜಾಗೃತಿ ನಗರವಾಸಿಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ 1980– 2012ರ ಅವಧಿಯಲ್ಲಿ ಪುರುಷ ಧೂಮಪಾನಿಗಳ ಪ್ರಮಾಣ ಶೇ 33.8ರಿಂದ 23ಕ್ಕೆ ಇಳಿದಿದೆ. ಆದರೆ ಸಿಗರೇಟು ಬಿಟ್ಟವರು ಅದಕ್ಕೆ ಬದಲಾಗಿ ಬೀಡಿ, ಹುಕ್ಕಾ ಅಥವಾ ಜಗಿಯುವ ತಂಬಾಕು ಸೇವನೆ ಚಟ ಏನಾದರೂ ಅಂಟಿಸಿ­ಕೊಂಡಿದ್ದಾರೆಯೇ ಎಂಬುದನ್ನು ಅಧ್ಯಯನಕ್ಕೆ ಒಳಪಡಿಸಿಲ್ಲ. ಒಂದನ್ನು ಬಿಟ್ಟು ಇನ್ನೊಂದು ಚಟದ ದಾಸರಾದರೆ ಅದೂ ಅಪಾಯವೇ ಸರಿ.

ವರದಿಯಂತೆ ಮಹಿಳಾ ಧೂಮಪಾನಿಗಳ ಪ್ರಮಾಣ ಮಾತ್ರ ಶೇ 3.2ರ ಆಸುಪಾಸಿ­ನಲ್ಲಿಯೇ ಇದೆ. ಅಂದರೆ ಭಾರತದಲ್ಲಿ ಸುಮಾರು 1.2 ಕೋಟಿ ಮಹಿಳೆ­ಯರು ಧೂಮಪಾನಿಗಳು. ವಿಶ್ವದಲ್ಲಿ ಅಮೆರಿಕ ಬಿಟ್ಟರೆ ಅತ್ಯಧಿಕ ಮಹಿಳಾ ಧೂಮಪಾನಿಗಳುಳ್ಳ ಎರಡನೇ ದೇಶ ನಮ್ಮದು ಎಂಬುದು ನಿಜವಾಗಿದ್ದರೆ ಖಂಡಿತವಾಗಿಯೂ ಕಳವಳಪಡಲೇಬೇಕು. 

ಧೂಮಪಾನದ ಚಟ ನಮ್ಮ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಜೀವ­ಗಳನ್ನು  ಬಲಿ ತೆಗೆದುಕೊಳ್ಳುತ್ತಿದೆ. ಅತಿ ಹೆಚ್ಚು ಸಾವಿಗೆ ಕಾರಣವಾಗುವ ಕಾಯಿಲೆ­ಗಳಲ್ಲಿ ಇದಕ್ಕೆ ಮೂರನೇ ಸ್ಥಾನ. ಆದಾಗ್ಯೂ ಈ ಚಟದ ವಿರುದ್ಧ ಕೈಗೊಂಡ ಪ್ರಚಾರಾಂದೋಲನ ಮತ್ತು ಕಾನೂನಿನ ಕಟ್ಟಳೆಗಳು ಭರವಸೆ­ದಾಯಕ ಫಲಿತಾಂಶವನ್ನೇ ನೀಡಿವೆ ಎಂದು ಬೆನ್ನು ಚಪ್ಪರಿಸಿಕೊಳ್ಳ­ಬಹುದಾಗಿದೆ. ಜತೆಗೆ ತಂಬಾಕು ಉತ್ಪನ್ನಗಳ ಮೇಲೆ ದುಬಾರಿ ತೆರಿಗೆ ವಿಧಿ­ಸು­ವುದರಿಂದ ಬಳಕೆ ಕಡಿಮೆಯಾಗುತ್ತದೆ ಎಂಬುದಕ್ಕೆ ರಾಜಸ್ತಾನದ ಮಾದರಿ ನಮ್ಮ ಮುಂದಿದೆ. ಅಲ್ಲಿ ತೆರಿಗೆ ಪ್ರಮಾಣ ಶೇ 65ರಷ್ಟಿದೆ. ಅದರಿಂದ ಬಳಕೆ ಶೇ 17ರಷ್ಟು ಕಡಿಮೆಯಾಗಿದೆ.

ದಕ್ಷಿಣ ಭಾರತದಲ್ಲಿಯೇ ತಂಬಾಕು ಉತ್ಪನ್ನಗಳ ಮೇಲೆ ಅತಿ ಕಡಿಮೆ ತೆರಿಗೆ ಇರುವ ರಾಜ್ಯ ಕರ್ನಾಟಕ ಎನ್ನುವ ಸಂಗತಿಯೂ ಈಗ ಬೆಳಕಿಗೆ ಬಂದಿದೆ. ತಂಬಾಕು ಮತ್ತು ಅದರ ಉತ್ಪನಗಳ ಸೇವನೆ ಆರೋಗ್ಯಕ್ಕೆ ಮಾಡುವ ಹಾನಿ ಎಷ್ಟು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಪ್ರಾಣಿಗಳು ಕೂಡ ತಿನ್ನದೇ ಇರುವ ಏಕೈಕ ಬೆಳೆ ತಂಬಾಕು. ಆದರೆ ಮನುಷ್ಯರು ಮಾತ್ರ ತಂಬಾಕು ಉತ್ಪನ್ನಗಳ ದಾಸರಾಗಿದ್ದಾರೆ. ಅದನ್ನು ತಡೆಯಲು ಲಭ್ಯವಿರುವ ಎಲ್ಲ ವಿಧಾನ, ಅವಕಾಶ ಬಳಸಬೇಕು. ನಮ್ಮ ಯುವ ಜನಾಂಗವನ್ನು ತಂಬಾಕು ಚಟ ಮುಕ್ತಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT