ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಒಳನೋಟ | ಬಂದರು ವಿಸ್ತರಣೆಗೆ ಸರ್ಕಾರ ಮೀನ ಮೇಷ; ಮೀನುಗಾರರಿಗೆ 'ಹೊಡೆತ'
ಒಳನೋಟ | ಬಂದರು ವಿಸ್ತರಣೆಗೆ ಸರ್ಕಾರ ಮೀನ ಮೇಷ; ಮೀನುಗಾರರಿಗೆ 'ಹೊಡೆತ'
ಫಾಲೋ ಮಾಡಿ
Published 9 ಸೆಪ್ಟೆಂಬರ್ 2023, 20:26 IST
Last Updated 9 ಸೆಪ್ಟೆಂಬರ್ 2023, 20:26 IST
Comments

ಮಂಗಳೂರು: ನಿರೀಕ್ಷಿಸಿದಷ್ಟು ಮೀನು ಸಿಕ್ಕಿಲ್ಲ ಎಂಬುದಕ್ಕಿಂತಲೂ ದಕ್ಕೆಯಲ್ಲಿ ಬೋಟು ನಿಲ್ಲಿಸಲು ಜಾಗ ಸಿಗುತ್ತದೋ ಇಲ್ಲವೋ ಎಂಬುದೇ ‘ಆದಿಲ್‌’ ದೋಣಿಯ ಚಾಲಕ ಗಣಪತಿ ಅವರ ಚಿಂತೆ. ಮೂರು ದಿನಗಳ ಹಿಂದೆ ಸಮುದ್ರಕ್ಕೆ ತೆರಳಿದ್ದ ಅವರು ನಗರದ ಹಳೆ ಮೀನುಗಾರಿಕಾ ಬಂದರಿನಲ್ಲಿ ದೋಣಿ ನಿಲ್ಲಿಸಲು ಜಾಗ ಸಿಕ್ಕಾಗ ತುಸು ನಿರಾಳರಾದರು.

‘ಸಮುದ್ರದಲ್ಲಿ ಇವತ್ತಲ್ಲದಿದ್ದರೆ ನಾಳೆಯಾದರೂ ಮೀನು ಸಿಗುತ್ತದೆ ಎಂಬ ಭರವಸೆ ನಮಗಿದೆ. ಆದರೆ, ದಕ್ಕೆಯಲ್ಲಿ ಬೋಟು ನಿಲ್ಲಿಸಲಿಕ್ಕೆ ಜಾಗ ಸಿಗುತ್ತದೆ ಎಂದು ಎಳ್ಳಿನಿತೂ ವಿಶ್ವಾಸ ಇರುವುದಿಲ್ಲ. ಬೋಟು ನಿಲ್ಲಿಸಲು ಜಾಗ ಸಿಕ್ಕರೆ, ಆ ದಿನದ ಮಟ್ಟಿಗೆ ನಾವು ಪುಣ್ಯವಂತರು’ ಎನ್ನುತ್ತಾರೆ ದೋಣಿಯ ಮಾಲೀಕ ಇಬ್ರಾಹಿಂ ಬೆಂಗ್ರೆ.

‘ಒಂದಕ್ಕೊಂದು ಅಂಟಿಕೊಂಡಂತೆ ಸಾಲುಗಟ್ಟಿ ನಿಂತಿರುವ ಬೋಟುಗಳ ನಡುವೆಯೇ ತುಸು ಜಾಗ ಮಾಡಿಕೊಂಡು ನಮ್ಮ ದೋಣಿಯನ್ನು ನಿಲ್ಲಿಸಬೇಕು. ಕಿಷ್ಕಿಂದೆಯಂತಾಗಿರುವ ದಕ್ಕೆಯಲ್ಲಿ ಬೋಟುಗಳನ್ನು ತಂದು ನಿಲ್ಲಿಸುವಾಗ ಮತ್ತು ಹೊರ ತೆಗೆಯುವಾಗ ಇನ್ನೊಂದು ಬೋಟ್‌ಗೆ ಡಿಕ್ಕಿ ಸಂಭವಿಸಿ ಹಾನಿ ಉಂಟಾಗುವ ಫಜೀತಿ ಯಾರಿಗೂ ಬೇಡ’ ಎನ್ನುತ್ತಾರೆ ದೋಣಿಯ ಮಾಲೀಕ ಮೋಹನ್‌ ಬೆಂಗ್ರೆ.

ಮಂಗಳೂರಿನ ಹಳೆ ಬಂದರಿನ ದಕ್ಕೆಯಲ್ಲಿ ಮೀನುಗಾರಿಕಾ ದೋಣಿಯನ್ನು ನಿಲ್ಲಿಸುವುದು ಎಷ್ಟು ಕಷ್ಟ ಎಂಬುದು ಈ ಮೀನುಗಾರರ ಮಾತುಗಳಲ್ಲೇ ವೇದ್ಯವಾಗುತ್ತದೆ. ಇದು ಮಂಗಳೂರಿನ ಹಳೆ ಬಂದರು ದಕ್ಕೆಯೊಂದರ ಸ್ಥಿತಿ ಮಾತ್ರವಲ್ಲ; ರಾಜ್ಯದ ಬಹುತೇಕ ಮೀನುಗಾರಿಕಾ ಬಂದರುಗಳಲ್ಲಿ ಇಂತಹದ್ದೇ ಸ್ಥಿತಿ ಇದೆ. ‘ದೋಣಿಗಳ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ಅನುಗುಣವಾಗಿ ಬಂದರುಗಳನ್ನು ವಿಸ್ತರಿಸಲು ಸರ್ಕಾರ ಕ್ರಮ ವಹಿಸುತ್ತಿಲ್ಲ’ ಎಂಬ ಅಸಮಾಧಾನ ಮೀನುಗಾರರ ಸಮುದಾಯದಲ್ಲಿ ಮನೆಮಾಡಿದೆ.

‘ಕಡಲ ಮೀನು ಉತ್ಪಾದನೆ ಹಾಗೂ ರಫ್ತು ಹೆಚ್ಚಳವಾದರೂ ಮೀನುಗಾರಿಕಾ ಬಂದರುಗಳ ಅಭಿವೃದ್ಧಿ ಹಾಗೂ ವಿಸ್ತರಣೆ ಕನಸಿನ ಗಂಟಾಗಿಯೇ ಉಳಿದಿದೆ’ ಎಂದು ಬೇಸರದಿಂದಲೇ ಹೇಳುತ್ತಾರೆ ಅಖಿಲ ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್‌ ಬಂಗೇರ.

ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾದ ಮಂಗಳೂರಿನ ಮೀನುಗಾರಿಕಾ ಬಂದರಿನ ಮೂರನೇ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು 2010-11ನೇ ಸಾಲಿನಲ್ಲಿ. ಈ ಬಂದರಿನಲ್ಲಿ ಯಾಂತ್ರಿಕೃತ ಮೀನುಗಾರಿಕಾ ದೋಣಿಗಳ (ಪರ್ಸಿನ್‌ ಮತ್ತು ಟ್ರಾಲರ್‌ ದೋಣಿಗಳು) ನಿಲುಗಡೆ ಸಾಮರ್ಥ್ಯವನ್ನು 1,050ಕ್ಕೆ ಹೆಚ್ಚಿಸುವ ಉದ್ದೇಶದಿಂದ ಆರಂಭಿಸಿದ ಕಾಮಗಾರಿ 13 ವರ್ಷಗಳ ಬಳಿಕವೂ ಪೂರ್ಣಗೊಂಡಿಲ್ಲ. ಆದರೆ, ಮೀನುಗಾರಿಕಾ ದೋಣಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಇಲ್ಲಿನ ದಕ್ಕೆಯಲ್ಲಿ 1,456 ದೋಣಿಗಳನ್ನು ನಿಲ್ಲಿಸಬೇಕಾದ ಸ್ಥಿತಿ ಬಂದೊದಗಿದೆ.

ಬಂದರಿನ ಸಮೀಪದಲ್ಲಿ ಹರಿಯುವ ತೊರೆಗೆ ಮೂರನೇ ಹಂತದ ವಿಸ್ತರಣೆ ಕಾಮಗಾರಿಯಿಂದ ಅಡ್ಡಿ ಆಗುತ್ತದೆ ಎಂದು ಆರೋಪಿಸಿ ಸ್ಥಳೀಯರೊಬ್ಬರು ಈ ಕಾಮಗಾರಿಗೆ ಹಸಿರು ನ್ಯಾಯ ಮಂಡಳಿಯಿಂದ 2012 ಮಾ.15ರಂದು ತಡೆಯಾಜ್ಞೆ ತಂದಿದ್ದರು. ಇದು ತೆರವಾಗಲು 2016ರ ಮೇ 3ರವರೆಗೆ ಕಾಯಬೇಕಾಯಿತು. ಕಾಮಗಾರಿಗಾಗಿ ಬಂದರು ಇಲಾಖೆಯ ಜಾಗವನ್ನು ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸುವಾಗಲೂ ಸಾಕಷ್ಟು ವಿಳಂಬವಾಯಿತು. ತಾಂತ್ರಿಕ ಸಮಸ್ಯೆಗಳೆಲ್ಲ ನೀಗಿದವು ಎನ್ನುವಷ್ಟರಲ್ಲಿ, ಈ ಕಾಮಗಾರಿಯ ಗುತ್ತಿಗೆ ಪಡೆದ ಯೋಜಕಾ ಸಂಸ್ಥೆ, ‘ಹಳೆಯ ದರಪಟ್ಟಿ ಪ್ರಕಾರ ಕಾಮಗಾರಿ ಮುಂದುವರಿಸಲು ಸಾಧ್ಯವಿಲ್ಲ’ ಎಂದು ತಗಾದೆ ತೆಗೆಯಿತು. ಈ ಕಾಮಗಾರಿಯಡಿ ಒಟ್ಟು 780 ಮೀ. ಉದ್ದದ ಜೆಟ್ಟಿ ನಿರ್ಮಿಸಬೇಕಿತ್ತು. ಆದರೆ, 450 ಮೀ. ಉದ್ದದ ಜೆಟ್ಟಿ ಮಾತ್ರ ನಿರ್ಮಾಣವಾಗಿದೆ. 2016ರ ಬಳಿಕ ಈ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಕೆಲಸ ಮುಂದುವರಿಸಲು ಯೋಜಕ ಸಂಸ್ಥೆ ಆಸಕ್ತಿ ತೋರಿಸಲಿಲ್ಲ. ಗುತ್ತಿಗೆದಾರರು ನಡಸಿದ್ದಷ್ಟು ಕಾಮಗಾರಿಗೆ ಹಣ (₹ 57.1 ಕೋಟಿ) ಪಾವತಿಸಿ, ಹೊಸತಾಗಿ ಟೆಂಡರ್‌ ಕರೆಯಲು ಬಂದರು ಇಲಾಖೆ ನಿರ್ಧರಿಸಿದೆ.

ಈ ಜೆಟ್ಟಿಯ ಪ್ರದೇಶದಲ್ಲಿ ಹೂಳೆತ್ತುವುದು, ಕಾಂಕ್ರೀಟ್‌ ಗೋಡೆ, ಸುಸಜ್ಜಿತ ರಸ್ತೆಗಳು, ಮೋರಿಗಳು, 3 ಕಡೆ ಕಾಂಕ್ರೀಟ್‌ ಇಳಿಜಾರು, ಮೀನು ಇಳಿಸುವುದಕ್ಕೆ ವ್ಯವಸ್ಥೆ ಮತ್ತು ಹರಾಜು ಕಟ್ಟೆ, ಕಾರ್ಮಿಕರ ವಿಶ್ರಾಂತಿ ಕೊಠಡಿ, ಬಲೆ ಹೆಣೆಯುವ ಶೆಡ್‌, ರೆಸ್ಟೋರೆಂಟ್‌, ಸಾರ್ವಜನಿಕ ಶೌಚಾಲಯ, ಭದ್ರತಾ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸುವ ಕೆಲಸಗಳು ಇನ್ನಷ್ಟೇ ಆಗಬೇಕಿವೆ. ಈ ಕಾಮಗಾರಿ ಪೂರ್ಣಗೊಳಿಸಲು ₹49.5 ಕೋಟಿ ಮೊತ್ತದ ಪರಿಷ್ಕೃತ ಪ್ರಸ್ತಾವವನ್ನು ಬಂದರು ಇಲಾಖೆಯ ಸ್ಥಳೀಯ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದಕ್ಕೆ ಇನ್ನೂ ಹಣಕಾಸು ಇಲಾಖೆಯ ಅನುಮೋದನೆ ನೀಡಿಲ್ಲ.

‘ಈ ಕಾಮಗಾರಿ ಮುಗಿಯದ ಹೊರತು ಮೀನುಗಾರರ ನಿತ್ಯದ ಗೋಳು ತಪ್ಪುವುದಿಲ್ಲ’ ಎಂದು ಪರ್ಸಿನ್‌ ದೋಣಿಯ ಮಾಲೀಕ ನವೀನ್‌ ಬಂಗೇರ ಹೇಳಿದರು.

ರಾಜ್ಯದ ಅತಿದೊಡ್ಡ ಮೀನುಗಾರಿಕಾ ಬಂದರಾಗಿರುವ ಉಡುಪಿಯ ಮಲ್ಪೆ ಬಂದರಿನ ಮೂರು ಕಡೆಗಳಲ್ಲಿ ದಕ್ಕೆಗಳನ್ನು ವಿಸ್ತರಣೆ ಮಾಡಲಾಗಿದೆ. ಆದರೂ ದಟ್ಟಣೆ ಸಮಸ್ಯೆ ಪರಿಹಾರವಾಗಿಲ್ಲ. 1,000 ದೋಣಿಗಳನ್ನು ನಿಲ್ಲಿಸುವ ಸಾಮರ್ಥ್ಯವಿರುವ ಬಂದರಿನಲ್ಲಿ ನಾಡದೋಣಿ ಹಾಗೂ ಯಾಂತ್ರೀಕೃತ ದೋಣಿಗಳು ಸೇರಿ 2,500ಕ್ಕೂ ಹೆಚ್ಚು ದೋಣಿಗಳನ್ನು ನಿಲ್ಲಿಸಲಾಗುತ್ತಿದೆ.

‘ಮೀನುಗಾರಿಕೆಗೆ ಕಡಲಿಗೆ ತೆರಳುವಾಗ ಹಾಗೂ ದಕ್ಕೆಗೆ ಮರಳುವಾಗ ಬೋಟ್‌ಗಳು ಒಂದಕ್ಕೊಂದು ಡಿಕ್ಕಿಯಾಗಿ ಹಾನಿ ಸಂಭವಿಸುವುದು ಇಲ್ಲಿ ಸಾಮಾನ್ಯ. ಹೊರ ವರ್ತುಲ ಬಂದರು ವಿಸ್ತರಣೆ ಮಾಡಿದರೆ ಸಮಸ್ಯೆ ನಿವಾರಿಸಬಹುದು. ಸರ್ಕಾರ ಮೀನುಗಾರರ ಪರ ಯೋಚನೆ ಮಾಡಬೇಕು’ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ.

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನ ಕಾಂಕ್ರೀಟ್ ನೆಲಹಾಸು ಕುಸಿತವಾಗಿದ್ದು ವಾಹನ ನಿಲುಗಡೆಗೆ ಅಡ್ಡಿಯಾಗುತ್ತಿದೆ

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನ ಕಾಂಕ್ರೀಟ್ ನೆಲಹಾಸು ಕುಸಿತವಾಗಿದ್ದು ವಾಹನ ನಿಲುಗಡೆಗೆ ಅಡ್ಡಿಯಾಗುತ್ತಿದೆ

‘ಅಪ್ಪಿತಪ್ಪಿ ದೋಣಿಗಳು ಢಿಕ್ಕಿ ಹೊಡೆದರೆ ಅವುಗಳ ದುರಸ್ತಿಗೇ ಎರಡು ಮೂರು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಕೆಲವೊಮ್ಮೆ ಸಮುದ್ರದಲ್ಲಿ ಮೀನು ಸಿಗದೇ ಖಾಲಿ ದೋಣಿಗಳು ಮರಳುವುದೂ ಇದೆ. ಇಂತಹ ಪರಿಸ್ಥಿತಿಯಲ್ಲಿ ದೋಣಿ ದುರಸ್ತಿಗೂ ಹಣ ಹೊಂದಿಸುವುದು ಬಹಳ ಕಷ್ಟ’ ಎಂದು ಮಂಗಳೂರಿನ ದೋಣಿ ಮಾಲೀಕ ಇಬ್ರಾಹಿಂ ಅಳಲು ತೋಡಿಕೊಂಡರು.

ಹೊಸ ದೋಣಿಗಳಿಗಿಲ್ಲ ಪರವಾನಗಿ: ಸಾಗರ ಸಂಪನ್ಮೂಲದ ಬಳಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನೀಲಿ ಕ್ರಾಂತಿ ಯೋಜನೆ ಹಮ್ಮಿಕೊಂಡಿದೆ. ಮೀನುಗಾರರಿಗೆ ಉತ್ತೇಜನ ನೀಡಲು ದೋಣಿ ಖರೀದಿಗೆ ಸಹಾಯಧನವನ್ನೂ ಒದಗಿಸುತ್ತಿದೆ. ಬಂದರು ವಿಸ್ತರಣೆ ಕಾರ್ಯ ನಿಂತ ನೀರಿನಂತಾಗಿರುವ ಕಾರಣ ಇಂತಹ ಸವಲತ್ತುಗಳ ಪ್ರಯೋಜನ ಹೊಸ ಫಲಾನುಭವಿಗಳಿಗೆ ಸಿಗುತ್ತಲೇ ಇಲ್ಲ. ಬಂದರುಗಳಲ್ಲಿ ಬೋಟುಗಳನ್ನು ನಿಲ್ಲಿಸಲು ಜಾಗದ ಕೊರತೆ ಇರುವುದರಿಂದ ಮೀನುಗಾರಿಕಾ ಇಲಾಖೆ ಹೊಸ ದೋಣಿಗಳಿಗೆ ಪರವಾನಗಿ ನೀಡುವುದನ್ನೇ ಸ್ಥಗಿತಗೊಳಿಸಿದೆ. ಈಗಾಗಲೇ ನೋಂದಣಿ ಮಾಡಿಸಿರುವ ದೋಣಿಗಳ ಮಾಲೀಕರಿಗಷ್ಟೇ ತಮ್ಮ ಹಳೆಯ ದೋಣಿಗಳನ್ನು ನವೀಕರಿಸಲು ಅಥವಾ ದೋಣಿಯ ಗಾತ್ರವನ್ನು ಹೆಚ್ಚಿಸಲು ಅವಕಾಶ ನೀಡಲಾಗುತ್ತಿದೆ.

2016ರಿಂದ ಈಚೆಗೆ ಮೀನುಗಾರಿಕಾ ಇಲಾಖೆ ಗರಿಷ್ಠ 24 ಮೀಟರ್‌ ಉದ್ದದ ಗರಿಷ್ಠ 7 ಮೀಟರ್‌ ಅಗಲದ ದೋಣಿಗಳನ್ನು ಹೊಂದುವುದಕ್ಕೆ ಅನುಮತಿ ನೀಡುತ್ತಿದೆ. ಅದಕ್ಕೂ ಮುನ್ನ ಸಣ್ಣ ಸಣ್ಣ ದೋಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅವುಗಳ ಉದ್ದ ಗರಿಷ್ಠ 20 ಮೀಟರ್‌ ಮೀರುತ್ತಿರಲಿಲ್ಲ. 24 ಮೀಟರ್‌ ಉದ್ದದ ದೋಣಿಯು ದಕ್ಕೆಯಲ್ಲಿ ನಾಲ್ಕೈದು ಸಣ್ಣ ದೋಣಿಗಳನ್ನು ನಿಲ್ಲಿಸಲು ಬೇಕಾಗುವಷ್ಟು ಜಾಗವನ್ನು ಕಬಳಿಸುತ್ತದೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಜಾಗದ ಸಮಸ್ಯೆ ವಿಪರೀತವಾಗಿದೆ. ಇಕ್ಕಟ್ಟಿನಿಂದಾಗಿ ಉಂಟಾಗುವ ಅವಘಡಗಳು ಮೀನುಗಾರರ ನಡುವೆ ತಿಕ್ಕಾಟಕ್ಕೂ ಕಾರಣವಾಗುತ್ತಿವೆ ಎಂದು ದೂರುತ್ತಾರೆ ಬೋಟ್‌ ಮಾಲೀಕರು.

‘ಇತರ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದ ವ್ಯಾಪ್ತಿಯಲ್ಲಿ ಅರಬ್ಬೀ ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿದೆ. ಗೋವಾ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡಿನ ಮೀನುಗಾರರು ನಮ್ಮ ರಾಜ್ಯದ ವ್ಯಾಪ್ತಿಯ ಕಡಲಿನಲ್ಲಿ ಬಂದು ಮೀನು ಹಿಡಿಯುತ್ತಾರೆ. ಆದರೆ, ರಾಜ್ಯದ ಮೀನುಗಾರಿಕಾ ಬಂದರುಗಳ ಅಭಿವೃದ್ಧಿ ನಿರೀಕ್ಷಿತ ವೇಗದಲ್ಲಿ ನಡೆಯದ ಕಾರಣ ಮತ್ಸ್ಯ ಸಂಪತ್ತಿನ ಸಂಪೂರ್ಣ ಬಳಕೆ ಇನ್ನೂ ಮರೀಚಿಕೆಯಾಗಿಯೇ ಇದೆ. ಮೀನು ರಫ್ತಿನಿಂದ ವಿದೇಶಿ ವಿನಿಮಯ ಗಳಿಕೆಯಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸಿಕೊಳ್ಳುವ ಅವಕಾಶವೂ ಕೈತಪ್ಪುತ್ತಿದೆ’ ಎನ್ನುತ್ತಾರೆ ಬೋಟ್ ಮಾಲಿಕ ಇಬ್ರಾಹಿಂ.

‘ಒಂದು ಪರ್ಸೀನ್‌ ದೋಣಿ 30ರಿಂದ 40 ಮೀನುಗಾರರಿಗೆ, ಟ್ರಾಲರ್‌ ದೋಣಿ 15ರಿಂದ 20 ಮಂದಿಗೆ ನೇರ ಉದ್ಯೋಗ ಕಲ್ಪಿಸುತ್ತದೆ. ಮಂಜುಗಡ್ಡೆ ಘಟಕದ ಕಾರ್ಮಿಕರು, ಮೀನು ಇಳಿಸುವವರು, ಮೀನು ಸಾಗಿಸುವ ವಾಹನಗಳ ಚಾಲಕರು ಮತ್ತು ಸಿಬ್ಬಂದಿ, ಮೀನು ಮಾರಾಟಗಾರು ಸಂಖ್ಯೆಯನ್ನೂ ಪರಿಗಣಿಸಿದರೆ ಒಂದು ದೋಣಿಯಿಂದಾಗಿ ಏನಿಲ್ಲವೆಂದರೂ 100 ಮಂದಿಗೆ ಉದ್ಯೋಗ ಸಿಗುತ್ತದೆ. ಒಂದು ಸಲ ಮೀನುಗಾರಿಕೆಗೆ ತೆರಳುವಾಗ ದೋಣಿಗೆ ಕಡಿಮೆ ಎಂದರೂ ಒಂಬತ್ತು ಸಾವಿರ ಲೀಟರ್ ಡೀಸೆಲ್‌ ತುಂಬಿಕೊಂಡು ಹೋಗುತ್ತೇವೆ. ಇದಕ್ಕೆ ನಮಗೆ ಮಾರಾಟ ತೆರಿಗೆಯಿಂದ ವಿನಾಯಿತಿ ಇದೆ. ಆದರೆ ಪ್ರತಿ ಲೀಟರ್‌ ಡೀಸೆಲ್‌ ಬಳಸಿದಾಗಲೂ ಸರ್ಕಾರದ ಬೊಕ್ಕಸಕ್ಕೆ ನಮ್ಮಿಂದ ತೆರಿಗೆ ಪಾವತಿಯಾಗುತ್ತದೆ. ಆದರೆ ಬಂದರು ವಿಸ್ತರಣೆ ಮಾಡದ ಸರ್ಕಾರ ಮೀನುಗಾರರಿಗೆ ಅನ್ಯಾಯ ಮಾಡುತ್ತಲೇ  ಬಂದಿದೆ. ಬಂದರು ವಿಸ್ತರಣೆ ಕಾರ್ಯವನ್ನು ಬೇಗ ಕೈಗೊಂಡರೆ ಅದರಿಂದ ಸರ್ಕಾರದ ಬೊಕ್ಕಸಕ್ಕೂ ಹೆಚ್ಚಿನ ವರಮಾನ ಬರಲಿದೆ’ ಎಂದು ನವೀನ್ ಬಂಗೇರ ಅಭಿಪ್ರಾಯಪಟ್ಟರು.

ಬಂದರಿನಲ್ಲಿ ಹೂಳು–ಕಡಲ ಮಕ್ಕಳ ಗೋಳು: ಅದು 2020ರ ಸೆಪ್ಟೆಂಬರ್. ಮೀನುಗಾರಿಕೆ ಚಟುವಟಿಕೆ ಆಗತಾನೆ ಗರಿಬಿಚ್ಚಿದ್ದ ಕಾಲ. ‘ಸೇಂಟ್ ಆ್ಯಂಟನಿ’ ಪರ್ಸಿನ್ ಬೋಟ್‍ ಹತ್ತಾರು ಟನ್ ಮೀನು ಬಲೆಗೆ ಬೀಳಿಸಿಕೊಂಡು ಬಂದರಿನತ್ತ ಮರಳುತ್ತಿತ್ತು. ‘ಇನ್ನೇನು ಬಂದರನ್ನು ತಲುಪಲಿದ್ದೇವೆ’ ಎಂಬ ಖುಷಿಯಲ್ಲಿ ತೇಳುತ್ತಿದ್ದ ಮೀನುಗಾರ ಮುಖದಲ್ಲಿ ಏಕಾಏಕಿ ದುಗುಡ ಕಾಣಿಸಿತು. ‘ಜೀವ ಉಳಿಸಿಕೊಂಡರೆ ಸಾಕು’ ಎಂಬ ಸ್ಥಿತಿಗೆ ಅವರು ತಲುಪಿದ್ದರು.

ಬಂದರಿನ ಸಮೀಪ ಸಮುದ್ರದಲ್ಲಿದ್ದ ಹೂಳು ದೋಣಿಯನ್ನೇ ತಡೆದು ನಿಲ್ಲಿಸಿತ್ತು. ಅಲೆಗಳ ಅಬ್ಬರಕ್ಕೆ ಸಿಲುಕಿ ನಿಂತಲ್ಲೇ ಅತ್ತಿಂದಿತ್ತ ವಾಲುತ್ತಿದ್ದ ದೋಣಿ ನೋಡನೋಡುತ್ತಲೇ ಮುಳುಗುವ ಹಂತಕ್ಕೆ ತಲುಪಿತು. ಆ ದೋಣಿ ಮತ್ತೆ ಬಳಸಲು ಆಗದಷ್ಟು ಹಾನಿಗೊಳಗಾಯಿತು.

ಬೈತಕೋಲದ ಬಂದರಿಗೆ ಮೀನು ಹೇರಿಕೊಂಡು ಹೋಗುತ್ತಿದ್ದ ‘ನಾಗಾರ್ಜುನ’ ಟ್ರಾಲರ್ ಬೋಟ್  ಕೂಡಾ ಹೂಳಿನಲ್ಲಿ ಸಿಲುಕಿ ಹಾನಿಗೆ ಒಳಗಾಯಿತು. ಆ ದೋಣಿಯ ಮಾಲೀಕ ಅದನ್ನು ಮೇಲೆತ್ತಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಯಿತು.

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕರ ಉಪಯೋಗಕ್ಕೆ ಇರುವ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಬಾರದೆ ಬಾಗಿಲು ಮುಚ್ಚಿಕೊಂಡಿದ್ದವು

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕರ ಉಪಯೋಗಕ್ಕೆ ಇರುವ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಬಾರದೆ ಬಾಗಿಲು ಮುಚ್ಚಿಕೊಂಡಿದ್ದವು

ಇವು ಎರಡು ಘಟನೆ ಉದಾಹರಣೆಗಳಷ್ಟೆ. ಇಂತಹ ಹತ್ತಾರು ಘಟನೆಗೆ ಅರಬ್ಬೀ ಸಮುದ್ರದ ಮೀನುಗಾರಿಕಾ ಬಂದರುಗಳ ಗುಣಮಟ್ಟಕ್ಕೆ ಸಾಕ್ಷಿಯಾಗುತ್ತಿವೆ. ಸಮುದ್ರದ ಹೂಳು ತೆಗೆಯಲು ಸರ್ಕಾರ ಮೀನಮೇಷ ಎಣಿಸುತ್ತಿರುವ ಪರಿಣಾಮ ಮೀನುಗಾರಿಕೆಗೆ ಬರೆ ಬಿದ್ದಿದೆ. ಬಂದರು ಹಾಗೂ ಅಳಿವೆ ಬಾಗಿಲುಗಳಲ್ಲಿ ಹೂಳೆತ್ತುವಂತೆ ಕೋರಿ ಮೀನುಗಾರರು ಸಲ್ಲಿಸುವ ಮನವಿಗಳು ಕಸದ ಬುಟ್ಟಿ ಸೇರುತ್ತಿವೆ.

‘ಎರಡು ದಶಕಗಳ ಹಿಂದೆ ನಿರ್ಮಿಸಲಾದ ಬೈತಕೋಲ ಬಂದರಿನಲ್ಲಿ ಹೂಳು ತುಂಬಿಕೊಂಡಿದೆ. 10 ವರ್ಷದ ಹಿಂದೊಮ್ಮೆ ಹೂಳೆತ್ತಲಾಗಿತ್ತು. ತದನಂತರ ಈ ಪ್ರಕ್ರಿಯೆಯೇ ನಡೆದಿಲ್ಲ’ ಎನ್ನುತ್ತಾರೆ ಟ್ರಾಲರ್ ಬೋಟ್ ಮಾಲೀಕ ಪ್ರಶಾಂತ ಹರಿಕಂತ್ರ.

‘ಹೊನ್ನಾವರದ ಶರಾವತಿ ಅಳಿವೆ ಅಪಾಯಕಾರಿ ಪ್ರದೇಶ. ಇಲ್ಲಿಂದಲೇ ಮೀನುಗಾರಿಕೆ ಬೋಟುಗಳು ಹಾಯ್ದು ಬಂದರಿಗೆ ತಲುಪಬೇಕು. ಹೂಳು ಭರ್ತಿಯಾಗಿ ಇಲ್ಲಿ ದೋಣಿ ಸಾಗಲು ಸಮಸ್ಯೆ ಆಗುತ್ತಿದೆ. ದೋಣಿಗಳ ನಿಲುಗಡೆಗೆ ದೊಡ್ಡ ಜಾಗದ ಅಗತ್ಯವಿರುವ ಕಾರಣ ಬಂದರು ವಿಸ್ತರಣೆಗೆ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಮನವಿಗೆ ಬೆಲೆಯೇ ಇಲ್ಲದಂತಾಗಿದೆ’ ಎನ್ನುತ್ತಾರೆ ಮೀನುಗಾರ ಮುಖಂಡ ರಾಜು ತಾಂಡೇಲ್.

ಉತ್ತರ ಕನ್ನಡದ ಎಂಟು ಮೀನುಗಾರಿಕಾ ಬಂದರುಗಳ ಪೈಕಿ ಭಟ್ಕಳ ತಾಲ್ಲೂಕಿನ ಅಳ್ವೆಕೋಡಿ, ತೆಂಗಿನಗುಂಡಿ ಬಂದರುಗಳನ್ನು ₹86.05 ಕೋಟಿ ವೆಚ್ಚದಲ್ಲಿ ಹೂಳೆತ್ತಲಾಗಿದ್ದು, ಜತೆಗೆ ಅಲ್ಲಿ ಅಲೆ ತಡೆಗೋಡೆಯನ್ನೂ ನಿರ್ಮಿಸಲಾಗಿದೆ. ಮಾವಿನಕುರ್ವೆ ಬಂದರಲ್ಲಿ ₹5 ಕೋಟಿ ವೆಚ್ಚದಲ್ಲಿ ಹೂಳೆತ್ತಲಾಗಿದೆ. ಕಾರವಾರ ತಾಲ್ಲೂಕಿನ ಬೈತಕೋಲ ಬಂದರು ಹೂಳೆತ್ತಲು ₹3.50 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಉಳಿದಂತೆ ಮುದಗಾ ಬಂದರು ಹೂಳೆತ್ತಲು ₹6.50 ಕೋಟಿ, ಕುಮಟಾ ತಾಲ್ಲೂಕಿನ ತದಡಿ ಬಂದರು ಹೂಳೆತ್ತಲು ₹4.50 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಕೆಯಾಗಿದೆ.

ಮೀನುಗಾರಿಕೆ ಬಂದರುಗಳಲ್ಲಿ ಪರ್ಸಿನ್, ಟ್ರಾಲರ್ ಬೋಟ್‍ಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಮೀನುಗಾರರ ಹಲವು ವರ್ಷಗಳ ಬೇಡಿಕೆ. ಅದನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಲಿ.
ರಾಜು ತಾಂಡೇಲ್

‘ನಾಲ್ಕು ವರ್ಷಗಳ ಹಿಂದೆ ಸುಮಾರು ₹3 ಕೋಟಿ ವೆಚ್ಚದಲ್ಲಿ ಅಂಕೋಲಾ ತಾಲ್ಲೂಕಿನ ಬೆಲೇಕೇರಿ ಬಂದರು ಹೂಳೆತ್ತುವ ಕೆಲಸ ನಡೆದಿತ್ತು. ಅದಾದ ಬಳಿಕ ಹೂಳೆತ್ತುವ ಪ್ರಕ್ರಿಯೆ ನಡೆದಿರಲಿಲ್ಲ. ಈವರೆಗೆ ಐದರಿಂದ ₹10 ಕೋಟಿ ಮೊತ್ತ ಮಾತ್ರ ಹೂಳೆತ್ತಲು ವ್ಯಯಿಸಿರುವ ಅಂದಾಜಿದೆ. ಆದರೆ ಈಗ ಜಿಲ್ಲೆಯ ಮೀನುಗಾರಿಕಾ ಬಂದರು ಹೂಳೆತ್ತಿ ಅಭಿವೃದ್ಧಿಪಡಿಸಲು ದೊಡ್ಡ ಮೊತ್ತವೇ ಬೇಕು’ ಎನ್ನುತ್ತಾರೆ ಬಂದರು ಜಲಸಾರಿಗೆ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ತಾರಾನಾಥ ರಾಠೋಡ್.

ಉಡುಪಿ ಜಿಲ್ಲೆಯಲ್ಲೂ ಹೂಳಿನ ಸಮಸ್ಯೆ: ಬಂದರಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದು ಹೂಳಿನಡಿ ಸಿಲುಕಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.  2017ರಿಂದ 2022ರವರೆಗಿನ ಅವಧಿಯಲ್ಲೇ ಜಿಲ್ಲೆಯಲ್ಲಿ 54 ಮೀನುಗಾರರು ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನುತ್ತವೆ ಇಲ್ಲಿನ ಪೊಲೀಸ್‌ ಠಾಣೆಯ ಅಂಕಿಅಂಶಗಳು. ಪ್ರತಿವರ್ಷ ಹೂಳೆತ್ತಬೇಕು ಎಂಬುದು ಮೀನುಗಾರರ ಪ್ರಮುಖ ಬೇಡಿಕೆ.

‘ಮಲ್ಪೆ ಬಂದರಿನ ಹೂಳೆತ್ತುವ ₹3 ಕೋಟಿ ಮೊತ್ತದ ಕಾಮಗಾರಿಗೆ ಕಳೆದ ವರ್ಷ ಚಾಲನೆ ದೊರೆತಿದೆ. ಇದುವರೆಗೂ ಶೇ 80ರಷ್ಟು ಹೂಳೆತ್ತಲಾಗಿದೆ.  2022ರಲ್ಲಿ ₹2 ಕೋಟಿ ಮೊತ್ತದಲ್ಲಿ ಕೊಡೇರಿ ಬಂದರಿನ ಹೂಳೆತ್ತಲಾಗಿದೆ. ಗಂಗೊಳ್ಳಿ ಬಂದರು ಹೂಳೆತ್ತಲು ₹4.6 ಕೋಟಿ ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಲಿದೆ’ ಎನ್ನುತ್ತಾರೆ ಬಂದರು ಇಲಾಖೆಯ ಅಧಿಕಾರಿ ವೀರಣ್ಣ. ಇಲ್ಲಿರುವಂತೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲೂ ಹೂಳಿನ ಸಮಸ್ಯೆ ಇದೆ. ಬಂದರಿನಲ್ಲಿ ಕೆಲವೆಡೆ 2 ಮೀಟರ್‌ ಆಳದಲ್ಲೇ ಹೂಳು ಇದೆ. ದೊಡ್ಡ ದೋಣಿಗಳ ಸಂಚಾರಕ್ಕೆ ಇದರಿಂದ ಸಮಸ್ಯೆ ಉಂಟಾಗುತ್ತಿದೆ. ‘ಮೀನುಗಾರಿಕಾ ಬಂದರಿನ ಹೂಳೆತ್ತುವುದಕ್ಕೆ ₹3.9 ಕೋಟಿ ಮಂಜೂರಾಗಿದೆ. ಕೇರಳ ಏಸ್‌ ಫೌಂಡೇಷನ್ ಈ ಕಾಮಗಾರಿಯ ಗುತ್ತಿಗೆ ಪಡೆದಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಕಾಮಗಾರಿ ಆರಂಭವಾಗಲಿದೆ’ ಎಂದು ಆಶ್ವಾಸನೆ ನೀಡುತ್ತಾರೆ ಬಂದರು ಇಲಾಖೆ ಅಧಿಕಾರಿಗಳು.

ಗರಿಷ್ಠ ಸಾಮರ್ಥ್ಯದ ಎರಡು ಪಟ್ಟು ಬೋಟ್‌ಗಳು ಮಲ್ಪೆ ಬಂದರಿನಲ್ಲಿ ನಿಲ್ಲುತ್ತಿವೆ. ಬೋಟ್‌ಗಳನ್ನು ಹೊರಗೆ ತೆಗೆಯುವಾಗ, ಮೀನುಗಾರಿಕೆ ಮುಗಿಸಿ ದಕ್ಕೆಗೆ ಮರಳುವಾಗ ಅವುಗಳಿಗೆ ಹಾನಿಯಾಗುತ್ತಿದೆ. ಬಂದರು ವಿಸ್ತರಣೆ, ನಿಯಮಿತವಾಗಿ ಹೂಳೆತ್ತುವಿಕೆಯೇ ಇದಕ್ಕೆ ಪರಿಹಾರ.
–ದಯಾನಂದ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ

‘ಮೀನುಗಾರಿಕೆ ಬಂದರುಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಮೀನುಗಾರರು ಎದುರಿಸುವ ಸಮಸ್ಯೆಯ ವಾಸ್ತವ ಸ್ಥಿತಿಯನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಇದೇ ಕಾರಣಕ್ಕೆ ಪ್ರತಿ ಎರಡು ವರ್ಷಕ್ಕೊಮ್ಮೆ ಎಲ್ಲ ಮೀನುಗಾರಿಕಾ ಬಂದರುಗಳಲ್ಲಿ ಹೂಳು ತೆಗೆಯುವ ಕೆಲಸ ನಡೆಸಲು ನಿರ್ದಿಷ್ಟ ಅನುದಾನವನ್ನು ಮೀಸಲಿಡಲು ರಾಜ್ಯ ಬಜೆಟ್‍ನಲ್ಲಿಯೇ ನಿರ್ಣಯಿಸಲಾಗಿದೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಮಲ್ಪೆ ಬಂದರು– ಮೂಲಸೌಕರ್ಯ ಮರೀಚಿಕೆ

ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಮೀನುಗಾರರು ಹಾಗೂ ಇತರ ಕಾರ್ಮಿಕರು ನಿತ್ಯವೂ ಸಮಸ್ಯೆ ಎದುರಿಸುತ್ತಿದ್ದಾರೆ. ಒಳ ಚರಂಡಿ ಆಗಾಗ ಕಟ್ಟಿಕೊಂಡು ರಸ್ತೆಯ ಮೇಲೆ ಮಲ ತ್ಯಾಜ್ಯ ಉಕ್ಕಿ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಇಡೀ ಪರಿಸರ ಗಬ್ಬೆದ್ದು ನಾರುತ್ತದೆ.

ಮೀನು ಹರಾಜು ಹಾಕುವ ಪ್ರಾಂಗಣಕ್ಕೂ ಮಳೆಯ ನೀರು ನುಗ್ಗುತ್ತದೆ. ಬಂದರಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇಲ್ಲಿ ವಾಹನ ಚಲಾಯಿಸುವುದು ಸವಾಲೇ ಸರಿ ಎನ್ನುತ್ತಾರೆ ಮೀನು ಸಾಗಾಟ ವಾಹನಗಳ ಚಾಲಕರು. ಬಂದರಿನಲ್ಲಿ ಬೋಟ್‌ಗಳಿಂದ ಮೀನು ಇಳಿಸುವ, ಬಲೆಯಿಂದ ಮೀನು ಬಿಡಿಸುವ, ವಾಹನಗಳಿಗೆ ಮೀನು ತುಂಬುವ ಹಾಗೂ ಚಿಲ್ಲರೆಯಾಗಿ ಮೀನು ಮಾರಾಟ ಮಾಡುವ ಮಹಿಳೆಯರು ನೂರಾರು ಸಂಖ್ಯೆಯಲ್ಲಿದ್ದಾರೆ. ಅವರಿಗಾಗಿ ಇರುವುದು ಒಂದೇ ಶೌಚಾಲಯ!

ಮಲ್ಪೆ ಬಂದರು

ಮಲ್ಪೆ ಬಂದರು

ಬಂದರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿಯ ವ್ಯವಸ್ಥೆ, ಆರೋಗ್ಯ ಹದಗೆಟ್ಟರೆ ಚಿಕಿತ್ಸೆ ಪಡೆಯಲು ಪ್ರಾಥಮಿಕ ಚಿಕಿತ್ಸಾ ಕೇಂದ್ರ... ಯಾವ ವ್ಯವಸ್ಥೆಯೂ ಇಲ್ಲ. ಗ್ರಾಹಕರಿಗೆ ಮೀನು ಕತ್ತರಿಸಿ ಕೊಡಲು ಸೂಕ್ತ ಸ್ಥಳಾವಕಾಶವೂ ಇಲ್ಲ.

ಸೌಕರ್ಯ ಕೊರತೆ: ಮೀನುಗಾರರು ತತ್ತರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರದ ಬೈತಕೋಲ, ಮುದಗಾ, ಕುಮಟಾ ತಾಲ್ಲೂಕಿನ ತದಡಿ, ಅಂಕೋಲಾ ತಾಲ್ಲೂಕಿನ ಬೇಲೆಕೇರಿ, ಹೊನ್ನಾವರ ತಾಲ್ಲೂಕಿನ ಕಾಸರಕೋಡ, ಭಟ್ಕಳ ತಾಲ್ಲೂಕಿನ ಮಾವಿನಕುರ್ವೆ, ಅಳಿವೆಕೋಡಿ, ತೆಂಗಿನಗುಂಡಿ  ಬಂದರುಗಳಿವೆ. ಅವುಗಳ ದುಃಸ್ಥಿತಿಯಿಂದಾಗಿ ಮೀನುಗಾರಿಕೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ ಎಂಬುದು ಮೀನುಗಾರರ ಅಳಲು.

ಬೈತಕೋಲ, ತದಡಿ, ಕಾಸರಕೋಡ ಸೇರಿದಂತೆ ಬಹುತೇಕ ಎಲ್ಲ ಬಂದರುಗಳಲ್ಲೂ ಮೀನುಗಾರರಿಗೆ, ಕಾರ್ಮಿಕರಿಗೆ ನೀರು, ನೆರಳಿನ ವ್ಯವಸ್ಥೆಯಿಲ್ಲ. ಹತ್ತಾರು ಬಾರಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಳಿಕ ಬೈತಕೋಲದಲ್ಲಿ ಮೂರು ವರ್ಷಗಳ ಹಿಂದೆ ಮಹಿಳೆಯರ ವಿಶ್ರಾಂತಿ ಕೊಠಡಿ ತೆರೆಯಲಾಗಿದೆ. ಆದರೆ ಪುರುಷ ಕಾರ್ಮಿಕರಿಗೆ ಶೌಚಾಲಯವಾಗಲಿ, ನೀರಿನ ವ್ಯವಸ್ಥೆ ಇನ್ನೂ ದಕ್ಕಿಲ್ಲ. ಹೊನ್ನಾವರ ತಾಲ್ಲೂಕಿನ ಕಾಸರಕೋಡ ಮೀನುಗಾರಿಕಾ ಬಂದರು ಜಿಲ್ಲೆಯಲ್ಲೇ ಅತಿ ದೊಡ್ಡದು. ಇಲ್ಲಿ 120ಕ್ಕೂ ಹೆಚ್ಚು ಪರ್ಸಿನ್‌, 150ಕ್ಕೂ ಅಧಿಕ ಟ್ರಾಲರ್ ಬೋಟ್‌ಗಳನ್ನು ನಿಲ್ಲಿಸಲಾಗುತ್ತದೆ. ಇದರ ವಿಸ್ತರಣೆಯ ಬೇಡಿಕೆಯೂ ನನೆಗುದಿಗೆ ಬಿದ್ದಿದೆ.

ಬಂದರು–ಸೌಕರ್ಯ ಒದಗಿಸಲು ಬದ್ಧ: ಸಚಿವ ಮಂಕಾಳ ವೈದ್ಯ 

‘ರಾಜ್ಯದ ಎಲ್ಲ ಮೀನುಗಾರಿಕಾ ಬಂದರುಗಳಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಿದೆ. ಡೀಸೆಲ್ ಬಂಕ್‍, ಮಹಿಳೆಯರ ವಿಶ್ರಾಂತಿ ಗೃಹವೂ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪೂರೈಸುವಲ್ಲಿ ತಪ್ಪಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮೀನುಗಾರರ ಸಮಸ್ಯೆಗೆ ಪರಿಹಾರ ಒದಗಿಸುವ ದೃಷ್ಟಿಯಿಂದ ಇಲಾಖೆ ಕೆಲಸ ಮಾಡಲಿದೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್‌. ವೈದ್ಯ ತಿಳಿಸಿದರು.

‘ದಕ್ಷಿಣ ಕನ್ನಡ, ಉಡುಪಿ ಮೀನುಗಾರಿಕೆ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿವೆ. ಅದೇ ಮಾದರಿಯಲ್ಲಿ ಉತ್ತರ ಕನ್ನಡದಲ್ಲೂ ಮೀನುಗಾರಿಕೆ ಚಟುವಟಿಕೆಗೆ ಉತ್ತೇಜನಕ್ಕೆ ಕ್ರಮವಹಿಸುತ್ತೇನೆ. ಕಾರವಾರದ ಮಾಜಾಳಿಯಲ್ಲಿ ಮೀನುಗಾರಿಕೆ ಬಂದರು ಸ್ಥಾಪನೆಗೆ ಈಗಾಗಲೆ ₹250 ಕೋಟಿ ಬಿಡುಗಡೆಯಾಗಿದೆ. ಬಂದರು ನಿರ್ಮಾಣಕ್ಕೆ ಅಗತ್ಯ ಪ್ರಕ್ರಿಯೆಗೆ ವೇಗ ನೀಡಲಾಗುವುದು’ ಎಂದರು

ಉತ್ತರ ಕನ್ನಡಕ್ಕೆ ಹೊಸ ಬಂದರು? 

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಬೇಲೆಕೇರಿ ಬಂದರುಗಳ ವಿಸ್ತರಣೆ ಮಾಡುವ ಬೇಡಿಕೆ ಇದ್ದರೂ, ವಿಸ್ತರಣೆ ಬದಲು ಹೊಸ ಬಂದರು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಕಾರವಾರ ತಾಲ್ಲೂಕಿನ ಮಾಜಾಳಿ, ಅಂಕೋಲಾ ತಾಲ್ಲೂಕಿನ ಬೇಲೆಕೇರಿ, ಕೇಣಿಯಲ್ಲಿ ಹೊಸ ಬಂದರು ಸ್ಥಾಪನೆಗೆ ತಲಾ ₹250 ಕೋಟಿ ಅನುದಾನವನ್ನು ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಈ ಹಿಂದೆಯೆ ಘೋಷಿಸಲಾಗಿದೆ. ಈ ಕಾಮಗಾರಿಗಳನ್ನು ಆರಂಭಿಸಲು ಕರಾವಳಿ ನಿಯಂತ್ರಣ ಪ್ರಾಧಿಕಾರದ ಅನುಮತಿಯ ಅಗತ್ಯವಿದ್ದು, ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ.

‘ಕಾರವಾರದಲ್ಲಿ ವಾಣಿಜ್ಯ ಬಂದರಿಗೆ ಸಮೀಪದಲ್ಲೇ ಮೀನುಗಾರಿಕೆ ಬಂದರು ಇದೆ. ವಾಣಿಜ್ಯ ಬಂದರು ವಿಸ್ತರಿಸುವ ನೆಪದಲ್ಲಿ ಮೀನುಗಾರಿಕೆ ಬಂದರು ಸ್ಥಗಿತಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ಅದರ ಭಾಗವಾಗಿಯೇ ದೂರದ ಮಾಜಾಳಿಯಲ್ಲಿ ಹೊಸ ಬಂದರು ಸ್ಥಾಪಿಸಿ ಮೀನುಗಾರರನ್ನು ಅಲ್ಲಿಗೆ ಸ್ಥಳಾಂತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದನ್ನು ಮೀನುಗಾರರು ವಿರೋಧಿಸುತ್ತೇವೆ’ ಎನ್ನುತ್ತಾರೆ ವಿನಾಯಕ ಹರಿಕಂತ್ರ.

ನಾಡದೋಣಿಗಳ ನಿಲುಗಡೆಗೆ ಮಂಗಳೂರು ನಗರದ ಹೊರವಲಯದ ಬೆಂಗರೆ ಪ್ರದೇಶದಲ್ಲಿ ₹65 ಕೋಟಿ ಮೊತ್ತದಲ್ಲಿ ಹೊಸ ದಕ್ಕೆಯನ್ನು ನಿರ್ಮಿಸಲಾಗುತ್ತಿದೆ. ಇದರ ಜೆಟ್ಟಿ ನಿರ್ಮಾಣದ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಮೀನುಗಾರಿಕಾ ಬಂದರಿನ ಒಂದನೇ ಮತ್ತು ಎರಡನೇ ಹಂತದ ವಿಸ್ತರಣೆ ಸಂದರ್ಭದಲ್ಲಿ ನಿರ್ಮಾಣವಾಗಿದ್ದ ಜೆಟ್ಟಿಗಳು ಶಿಥಿಲವಾಗಿದೆ. ಇಲ್ಲಿರುವ ಕಲ್ಲಿನ ಜೆಟ್ಟಿಗಳು ಕಿತ್ತು ಬರುತ್ತಿವೆ. ಈ ದಕ್ಕೆಗಳನ್ನು ನವೀಕರಿಸಲು ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಅನುದಾನ ಪಡೆಯಲು ಕೇಂದ್ರ ಸರ್ಕಾರಕ್ಕೆ ₹37.5 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕಿನ್ನೂ ಮಂಜುರಾತಿ ಸಿಕ್ಕಿಲ್ಲ. 

ಉಳ್ಳಾಲ ಕೋಡಿಯಲ್ಲಿ ನಾಡದೋಣಿ ಜೆಟ್ಟಿ ಅಭಿವೃದ್ಧಿಗೆ ನಬಾರ್ಡ್‌ ಅಡಿ ₹6.5 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿದೆ.

ಕುಳಾಯಿಯಲ್ಲಿ ನವಮಂಗಳೂರು ಪ್ರಾಧಿಕಾರದವರು ಸಾಮಾಜಿಕ ಹೊಣೆಗಾರಿಕೆ ನಿಧಿಯ ಅನುದಾನ ಬಳಸಿ ಹೊಸ ಮೀನುಗಾರಿಕಾ ಬಂದರನ್ನು ನಿರ್ಮಿಸುತ್ತಿದ್ದಾರೆ. ಈ ಯೋಜನೆಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಪೂರಕ ಮಾಹಿತಿ: ಗಣಪತಿ ಹೆಗಡೆ (ಕಾರವಾರ), ಬಾಲಚಂದ್ರ ಎಚ್‌. (ಉಡುಪಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT