ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ | 50 ವರ್ಷಗಳ ಹಿಂದೆ: ಭಾನುವಾರ 20-09-1970

Last Updated 19 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಜಂಬೂ ಸವಾರಿ, ಅರಮನೆ ದೀಪಾಲಂಕಾರ ಇನ್ನಿಲ್ಲ

ಬೆಂಗಳೂರು, ಸೆ. 19– ಜಗತ್ಪ್ರಸಿದ್ಧವಾದ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮತ್ತು ಅರಮನೆ ದೀಪಾಲಂಕಾರ ಇನ್ನು ಮುಂದೆ ಇರುವುದಿಲ್ಲ.

ರಾಜರಿಗೆ ಮಾನ್ಯತೆ ರದ್ದುಮಾಡಿದ ರಾಷ್ಟ್ರಪತಿಗಳ ಆಜ್ಞೆಯ ಹಿನ್ನೆಲೆಯಿಂದ ಬದಲಾದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ಸರಕಾರದ ವೆಚ್ಚದಲ್ಲಿ ನಡೆಸುತ್ತಿದ್ದ ಈ ಸಮಾರಂಭ ನಿಲ್ಲಿಸಲು ಇಂದು ನಿರ್ಧರಿಸಿತು.

ಜಂಬೂ ಸವಾರಿ ಬದಲು ಬೇರೆ ಮೆರವಣಿಗೆ ಸಲಹೆಯನ್ನೂ ಕೈಬಿಡಲಾಗಿದೆ.

ಜನತೆ ಮತ್ತು ಸರಕಾರಕ್ಕೆ ನೇರವಾಗಿ ಸಂಬಂಧಿಸಿರುವಷ್ಟರಮಟ್ಟಿಗೆ ಮಾತ್ರ ಮೈಸೂರಿನಲ್ಲಿ ದಸರಾ ಉತ್ಸವ ಆಚರಿಸಲು ನಿರ್ಧರಿಸಿದ ಸಂಪುಟ ಸಭೆ, ದಸರೆಯ ವೈಭವ ಯಾವ ರೀತಿಯಲ್ಲೂ ಕುಂದದಂತೆ ಏನು ಕ್ರಮ ಕೈಗೊಳ್ಳಬೇಕೆಂದು ಪರಿಶೀಲಿಸಿ ಶಿಫಾರಸು ಸಲ್ಲಿಸಲು ಸಮಿತಿಯೊಂದನ್ನು ನೇಮಿಸಲು ನಿರ್ಧರಿಸಿತು.

ಮಹಾಜನ್ ವರದಿ ಕೈಬಿಟ್ಟರೆ ರಾಜ್ಯದ ಉಗ್ರ ಪ್ರತಿಕ್ರಿಯೆ

ಬೆಂಗಳೂರು, ಸೆ. 19–ಮೈಸೂರು–ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಯಾವುದೇ ಅವಸರದ ನಿರ್ಣಯಕ್ಕೆ ಬರಬಾರದೆಂದು ಕೋರಿ ಮುಖ್ಯಮಂತ್ರಿ ಶ್ರೀವೀರೇಂದ್ರ ಪಾಟೀಲರು, ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಮಹಾಜನ್ ವರದಿಯನ್ನು ಬಿಟ್ಟು ಯಾವುದೇ ನಿರ್ಧಾರ ಕೈಗೊಂಡರೂ ಮೈಸೂರು ರಾಜ್ಯದಲ್ಲಿ ಉಗ್ರ ಪ್ರತಿಕ್ರಿಯೆ ಉಂಟಾಗಿ ಅನಾಹುತಗಳೊದಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಸಮಿತಿ ನೇಮಕ

ಬೆಂಗಳೂರು ಸೆ. 19–ನಿರುದ್ಯೋಗಿಗಳು ಅದರಲ್ಲೂ ಮುಖ್ಯವಾಗಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಏರುತ್ತಿರುವುದರ ಬಗ್ಗೆ ಸೂಕ್ತಕ್ರಮ ಕೈಗೊಂಡು ಸಮಸ್ಯೆಯನ್ನು ಎದುರಿಸುವುದಕ್ಕಾಗಿ ಸರ್ಕಾರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ.

ಚೀನಾದಿಂದ ಹೊಸ ಬಾಂಬರ್ ವಿಮಾನ ತಯಾರಿಕೆ

ವಾಷಿಂಗ್ಟನ್, ಸೆ. 19–ಕಮ್ಯುನಿಸ್ಟ್ ಚೀನಾ, ರಷ್ಯಾದ ಟಿಯು–16 ಬಾಂಬರ್ ವಿಮಾನಕ್ಕೆ ಸರಿಸಮನಾದ ಸಬ್ ಸಾನಿಕ್ ಬಾಂಬರ್ ವಿಮಾನವನ್ನು ತಯಾರಿಸುತ್ತಿದೆ ಎಂದು ಅಮೆರಿಕದ ಮೂಲಗಳು ಇಂದು ಪ್ರಕಟಿಸಿವೆ.

ಚೀನಾ ತಿಂಗಳಿಗೆ ಆರರಂತೆ ಈ ವಿಮಾನವನ್ನು ತಯಾರಿಸುವುದು. ಅಮೆರಿಕದ ಬೇಹುಗಾರಿಕೆ ವಿಮಾನಗಳು ಚೀನಾದ ಈ ಉತ್ಪಾದನೆಯನ್ನು ಪತ್ತೆ ಹಚ್ಚಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT