ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 11–7–1969

Last Updated 10 ಜುಲೈ 2019, 19:45 IST
ಅಕ್ಷರ ಗಾತ್ರ

ಬ್ಯಾಂಕ್ ರಾಷ್ಟ್ರೀಕರಣ: ಕಾರ್ಯಕಾರಿ ಸಭೆಯಲ್ಲಿ ಉಗ್ರ ವಾದವಿವಾದ

ಬೆಂಗಳೂರು, ಜುಲೈ 10– ಸುಮಾರು 3 ಗಂಟೆಗಳ ಕಾಲ ಬಿರುಸಿನ ಚರ್ಚೆ ನಡೆದ ನಂತರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕರಡು ನಿರ್ಣಯವನ್ನು ರೂಪಿಸುವ ಕಾರ್ಯವನ್ನು ಗೃಹ ಸಚಿವ ಶ್ರೀ ಚವ್ಹಾಣರಿಗೆ ವಹಿಸಿತು.

ಸಭೆ ಇಂದು ರಾತ್ರಿ 12.15ರವರೆಗೆ ಜರುಗಿತು.

ಭಾರಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಬೇಕೆಂಬ ಪ್ರಧಾನಿ ಅವರ ವಾದ ಹಾಗೂ ಬ್ಯಾಂಕುಗಳ ಮೇಲಿನ ಸಾಮಾಜಿಕ ಹತೋಟಿಯ ನೀತಿಯ ಕಾರ್ಯಾಚರಣೆಯ ಬಗ್ಗೆ ಅವರ ನಿರ್ದಿಷ್ಟ ಟೀಕೆಯ ಬಗ್ಗೆ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಮತ್ತು ಎಸ್‌.ಕೆ. ಪಾಟೀಲ್ ಅವರು ಪ್ರತಿಭಟಿಸಿದರು.

ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿ ಕೇವಲ ಕಳೆದ ಫೆಬ್ರುವರಿಯಲ್ಲಿ ಮಾತ್ರ ಜಾರಿಗೆ ಬಂದಿತೆಂದೂ, ಈ ನೀತಿಯ ಬಗ್ಗೆ ಅಂತಿಮ ತೀರ್ಪು ಕೊಡುವ ಮುನ್ನ ಕನಿಷ್ಠ ಎರಡು ವರ್ಷಗಳ ಕಾಲ ಅದನ್ನು ಪ್ರಯೋಗಿಸಿ ನೋಡಬೇಕೆಂಬುದು ಕಾಂಗ್ರೆಸ್ಸಿನ ಅಂಗೀಕೃತ ನೀತಿಯೆಂದು ಇವರಿಬ್ಬರು ವಾದ ಮಾಡಿದರು.

ಇಂದಿರಾಜಿಗೆ ಸುಸ್ವಾಗತ

ಬೆಂಗಳೂರು, ಜುಲೈ 10– ಇಂದು ಬೆಳಿಗ್ಗೆ ನಗರಕ್ಕಾಗಮಿಸಿದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ನಗರದ ನಾಗರಿಕರು ಹಾರ್ದಿಕ ಸುಸ್ವಾಗತವನ್ನು ಕೋರಿದರು.

ವಿಮಾನ ನಿಲ್ದಾಣದಿಂದ ಪ್ರಧಾನಿ ಅವರು ತಂಗಲಿರುವ ರಾಜಭವನದ ಮಾರ್ಗದುದ್ದಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದು ಶ್ರೀಮತಿ ಗಾಂಧಿ ಅವರಿಗೆ ಕೈಬೀಸಿ ಕರತಾಡನ ಮಾಡಿ ಸ್ವಾಗತಿಸಿದರು.

ನಿನ್ನೆ ನಗರಕ್ಕೆ ಆಗಮಿಸಬೇಕಾಗಿದ್ದ ಶ್ರೀಮತಿ ಗಾಂಧಿ ಅವರು ಅನಾರೋಗ್ಯದ ಕಾರಣ ಬಾರದೆ ಇಂದು ನಗರಕ್ಕಾಗಮಿಸಿದರು.

ಕಾರ್ಮಿಕರಿಗೆ ಲಾಭದಲ್ಲಿ ಪಾಲು, ಭೂಸುಧಾರಣೆ ಅನುಷ್ಠಾನಕ್ಕೆ ಕರೆ

ಬೆಂಗಳೂರು, ಜುಲೈ 10– ಕೆಲಸಗಾರರಿಗೆ, ಕೈಗಾರಿಕಾ ಲಾಭಗಳಲ್ಲಿ ಪಾಲು ಕೊಡಲು ಮತ್ತು ಏಕಸ್ವಾಮ್ಯ ಸಂಸ್ಥೆಗಳ ಪ್ರಭಾವವನ್ನು ನಿಗ್ರಹಿಸಲು ಕೈಗಾರಿಕಾ ಲೈಸೆನ್ಸ್ ನೀಡಿಕೆ ನೀತಿಯಲ್ಲಿ ತೀವ್ರ ಬದಲಾವಣೆ ಮಾಡುವ ಬಗ್ಗೆಪರಿಶೀಲಿಸಬೇಕೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಭಾರಿ ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ಸರ್ಕಾರಿ ಸಾಲಪತ್ರಗಳಲ್ಲಿ ಬ್ಯಾಂಕ್ ಹಣ ಹೂಡಿಕೆಗೆ ಸಂಬಂಧಿಸಿದ ಶಾಸನಬದ್ಧ ಮಿತಿಯನ್ನು ಹೆಚ್ಚಿಸುವ ವಿಷಯವನ್ನೂ ಸಹ ಪರಿಶೀಲಿಸಬೇಕೆಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT