ಸೋಮವಾರ, ನವೆಂಬರ್ 18, 2019
24 °C

ಭಾನುವಾರ, 14–9–1969

Published:
Updated:

ಭೂಸುಧಾರಣೆ ನೀತಿ ಪುನರ್‌ವಿಮರ್ಶೆ ಅಗತ್ಯ: ಇಂದಿರಾ

ಕಲ್ಕತ್ತ, ಸೆ. 13– ಸದ್ಯದ ಭೂ ಸುಧಾರಣೆ ನೀತಿಯಲ್ಲಿ ಅನೇಕ ನ್ಯೂನತೆಗಳು ವ್ಯಕ್ತಪಟ್ಟಿವೆಯೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ನುಡಿದು ಅದರ ಪುನರ್‌ವಿಮರ್ಶೆ ಅಗತ್ಯವೆಂದರು.

ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಸುಮಾರು ಮೂರು ಲಕ್ಷ ಜನರ ಬಹಿರಂಗ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಸ್ವಾತಂತ್ರ್ಯಾನಂತರ ಕೆಲವು ವರ್ಷಗಳಲ್ಲಿ ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡಿದರೂ ಅದರಿಂದ ನಿರೀಕ್ಷಿತ ಪರಿಣಾಮಗಳು ಲಭಿಸಿಲ್ಲವೆಂದರು.

ರೈತರಿಗೆ ಆದ ಅಲ್ಪಸ್ವಲ್ಪ ಲಾಭವೂ ಈ ನ್ಯೂನತೆಗಳಿಂದ ಸ್ಥಗಿತಗೊಂಡಿದೆಯೆಂದೂ ಆ ಇಡೀ ನೀತಿಯ ಪುನರ್‌ವಿಮರ್ಶೆ ಈಗ ಅಗತ್ಯವೆಂದೂ ಅವರು ನುಡಿದರು.

‘ನಾನು ಕಮ್ಯುನಿಸ್ಟ್ ಎಂಬ ವರ್ಣನೆ ಹುರುಳಿಲ್ಲದ್ದು’

ಕಲ್ಕತ್ತ, ಸೆ. 13– ‘ನಾನು ಕಮ್ಯುನಿಸ್ಟ್ ಎಂದು ಕೆಲವರು ಆಡುತ್ತಿರುವ ಮಾತು ಅರ್ಥಹೀನ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.

ಕೈಗಾರಿಕೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಗಾಂಧಿ ‘ಯಾವುದೋ ಬೇರೊಂದು ರಾಷ್ಟ್ರದಲ್ಲಿ ಭಾರತೀಯ ನೀತಿಗಳು ರೂಪುಗೊಳ್ಳುತ್ತಿವೆಯೆಂಬ ಕತೆಗಳು ಹಬ್ಬುತ್ತಿವೆ. ಇದರಲ್ಲಿ ಅರ್ಥವಿಲ್ಲ. ಇಂತಹ ಪ್ರವೃತ್ತಿಗಳು ಕಮ್ಯುನಿಸಂಗೆ ನಿಜದರ್ಶನವೆಂದು ನಾವು ಎಚ್ಚರವಹಿಸಬೇಕು. ಇಲ್ಲದಿದ್ದರೆ ನಾವು ಕೂಡಾ ಮೆಕಾರ್ಥಿ ಅನುರಿಸುತ್ತಿದ್ದಂತಹ ಧೋರಣೆಯನ್ನು ಕಾಣಬೇಕಾಗುತ್ತದೆ’ ಎಂದರು.

ಪ್ರಧಾನಿ ಪಶ್ಚಾತ್ತಾ‍ಪ ಪಡದಿದ್ದರೆ ಮುರಾರಜಿ ಸತ್ಯಾಗ್ರಹ

ಮುಂಬೈ, ಸೆ. 13– ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಅವರ ಸಹೋದ್ಯೋಗಿಗಳು ಪಶ್ಚಾತ್ತಾಪ ಪಡಬೇಕೆಂದು ಒತ್ತಾಯ ಮಾಡುವ ಸಲುವಾಗಿ ತಾವು ಸತ್ಯಾಗ್ರಹ ನಡೆಸುವುದಾಗಿ ಮಾಜಿ ಉಪಪ‍್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ಘೋಷಿಸಿದರು.

ತಮ್ಮ ಸತ್ಯಾಗ್ರಹ ರಸ್ತೆಗಳಲ್ಲಿ ಕಂಡು ಬರುವ ಆಧುನಿಕ ಮಾದರಿಯದಲ್ಲವೆಂದೂ, ಆದರೆ ಗಾಂಧೀ ಮಾದರಿಯದೆಂದೂ ಹೇಳಿದ ಶ್ರೀ ದೇಸಾಯಿಯವರು ಅದರ ವಿವರಗಳನ್ನು ತಿಳಿಸಲಿಲ್ಲ.

 

ಪ್ರತಿಕ್ರಿಯಿಸಿ (+)