ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ| ವ್ಯಕ್ತಿ ನಿಮಿತ್ತ, ಸಾಹಿತ್ಯವೇ ದೊಡ್ಡದು: ಪದ್ಮರಾಜ ದಂಡಾವತಿ

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಭಾಜನವಾದ ಕೃತಿ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಸಾಕಷ್ಟು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ದೇವದತ್ತ ಪಟ್ಟನಾಯಕ ಇಂಗ್ಲಿಷ್‌ನಲ್ಲಿ ಬರೆದಿದ್ದ ‘ಸೀತಾ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಪದ್ಮರಾಜ ದಂಡಾವತಿ. ಪ್ರಶಸ್ತಿಯ ಪುಲಕದಲ್ಲೇ ಅವರು ಸಾಹಿತ್ಯದ ಸುಖ, ಅನುವಾದದ ಸವಾಲು, ಪತ್ರಿಕೋದ್ಯಮದ ಅನುಭವ ಎಲ್ಲವುಗಳ ಕುರಿತು ಮುಕ್ತವಾಗಿ‌ ಮಾತನಾಡಿದರು.

* ‘ಪ್ರಜಾವಾಣಿ’ಯಲ್ಲಿ ಸುದೀರ್ಘಾವಧಿ ಪತ್ರಕರ್ತರಾಗಿ ಕೆಲಸ ಮಾಡಿ, ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ಏರಿ ನಿವೃತ್ತರಾದವರು ನೀವು. ಪತ್ರಿಕಾ ಕೆಲಸವೇ ಕೃತಿಯ ಅನುವಾದಕ್ಕೆ ಪ್ರೇರೇಪಿಸಿತೋ ಅಥವಾ ವಸ್ತುವಿಷಯ ಆಕರ್ಷಿಸಿತೋ?

ಪತ್ರಕರ್ತ ಪದ್ಮರಾಜ ದಂಡಾವತಿಗೆ ಈ ಪ್ರಶಸ್ತಿ ಬಂದಿದೆ ಎಂದಷ್ಟೆ ಹೇಳುವುದು ನನಗೆ ಇಷ್ಟವಿಲ್ಲ. ಪತ್ರಿಕೆಯಲ್ಲಿ ನಾನು ಕೆಲವು ಅನುವಾದಗಳನ್ನು ಮಾಡಿರಬಹುದು, ಲೇಖನಗಳನ್ನು ಬರೆದಿರಬಹುದು. ಆದರೆ, ಎಂದೂ ಒಂದು ಕೃತಿಯನ್ನು ಅನುವಾದಿಸಬೇಕು ಎನಿಸಿರಲಿಲ್ಲ. ನಾನು ‘ನಾಲ್ಕನೇ ಆಯಾಮ’ ಅಂಕಣದಲ್ಲಿ‌ ಒಮ್ಮೆ ‘ಜಯ’ ಕೃತಿಯ ಬಗೆಗೆ ಬರೆದಿದ್ದೆ. ಗಿರಡ್ಡಿ ಗೋವಿಂದರಾಜ ಅದನ್ನು ಅನುವಾದಿಸಿದ್ದರು. ದೇವದತ್ತ ಪಟ್ಟನಾಯಕ ಅವರೇ ಬರೆದಿದ್ದ ಕೃತಿಯ ಅನುವಾದ ಅದು. ವರ್ಷಗಳ ನಂತರ ಅದೇ ದೇವದತ್ತ ಬರೆದ ‘ಸೀತಾ’ ಓದಿದೆ. ಅದನ್ನೂ ಯಾಕೆ ಅನುವಾದಿಸಬಾರದು ಎಂದು ಗಿರಡ್ಡಿ ಅವರಿಗೆ ಸೂಚಿಸಿದೆ. ಅವರು ‘ನೀನೇ ಮಾಡಬಹುದು. ನಿನ್ನ ಕನ್ನಡ ಚೆನ್ನಾಗಿದೆ’ ಎಂದರು. ನನ್ನನ್ನು ಆ ಕೃತಿಯ ಅಂತಃಸತ್ವ ಬಹುವಾಗಿ ಕಾಡಿತ್ತು. ಹೀಗಾಗಿ ಅನುವಾದ ಮಾಡಿದೆ.

* ಕಾಡಿದ್ದ ಕೃತಿಯ ಅಂತಃಸತ್ವದ ಕೆಲವು ಭಾಗಗಳನ್ನು ಹಂಚಿಕೊಳ್ಳಿ...
ಸೀತಾಯಣ ಇದು. ಸೀತಾ ರಾಮಾಯಣ.‌ ಎಂ.ಎಸ್.ಆಶಾದೇವಿ ಅವರು ಮಯೂರ ಮಾಸಪತ್ರಿಕೆಯಲ್ಲಿ ಬರೆದ ವಿಮರ್ಶೆಯಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಿದ್ದರು. ಅನುವಾದದಲ್ಲಿ ನನಗೆ ಸಲಹೆ ನೀಡಿದ ಸಿ.ಎನ್. ರಾಮಚಂದ್ರನ್ ಅವರೂ ಅದನ್ನೇ ಹೇಳಿದ್ದರು. ಸೀತೆ, ದ್ರೌಪದಿ ಪಟ್ಟಿರುವ ಕಷ್ಟದ ಮುಂದೆ ನಮ್ಮದೆಲ್ಲ ಏನೇನೂ ಅಲ್ಲ.

ರಾವಣ ಅಪಹರಿಸಿದ ಮೇಲೆ ಅವಳು ರಾಮನನ್ನು ಮತ್ತೆ ಸೇರಿದ ಸಂದರ್ಭ ಇದೆ. ಆಗ ರಾಮ, ‘ರಘುವಂಶ ಕುಲದ ಕಣ್ಣಿನ ಕಪ್ಪು ಚುಕ್ಕಿ ನೀನು’ ಎನ್ನುತ್ತಾನೆ. ವಿಭೀಷಣ, ಸುಗ್ರೀವ ಅಥವಾ ಲಕ್ಷ್ಮಣನ ಜತೆಗೆ ಹೋಗು ಎನ್ನುತ್ತಾನೆ. ಆಗ ಸೀತೆ ಅಗ್ನಿಪರೀಕ್ಷೆಗೆ ಗುರಿಯಾಗುತ್ತಾಳೆ. ಪಟ್ಟಾಭಿಷೇಕಕ್ಕೆ ಹೋಗಬೇಕಾದ ರಾಮ ಕಾಡಿಗೆ ಹೊರಟಾಗ ಅವನೊಟ್ಟಿಗೆ ಇವಳೂ ಹೊರಟು ನಿಲ್ಲುತ್ತಾಳೆ. ರಾಮನಿಗೆ ತನ್ನ ವಂಶದ ಕೀರ್ತಿಯದ್ದೇ ವ್ಯಾಕುಲ ಕಾಡುತ್ತದೆ. ತಂದೆ ಸತ್ತಮೇಲೆ ಅವನಿಗೆ ವನವಾಸ ಬಿಟ್ಟು ವಾಪಸ್ ಅರಮನೆಗೆ ಹೋಗುವಂತೆ ಕೆಲವರು ಸೂಚಿಸಿದರೂ ಅವನು ಹೋಗುವುದಿಲ್ಲ. ಮರ್ಯಾದಾ ಪುರುಷ ಎನಿಸಿಕೊಂಡ ಅವನು ಒಳ್ಳೆಯ ಗಂಡನಾ, ಒಳ್ಳೆಯ ತಂದೆಯಾ...ಎಂದರೆ ಅಲ್ಲ. ಅವನ ತೊಡೆಯ ಮೇಲೆ ಮಕ್ಕಳು ಬೆಳೆಯಲೇ ಇಲ್ಲ.

ವೇದ-ಉಪನಿಷತ್ತುಗಳನ್ನು ಕೇಳಿದ್ದ ವಾತಾವರಣದಲ್ಲಿ ಬೆಳೆದ ಸೀತೆ ಮಾಯಾಜಿಂಕೆ ತಾ ಎಂದೊಡನೆ ರಾಮನೂ ಅದರ ಹಿಂದೆ ಓಡುತ್ತಾನೆ. ಅಷ್ಟೆಲ್ಲ ವಿಜ್ಞಾನ ಓದಿದ ರಾವಣ ಕ್ಷಣಮಾತ್ರದಲ್ಲಿ ಸೀತೆಯನ್ನು ಹೊತ್ತೊಯ್ಯುತ್ತಾನೆ. ಇವೆಲ್ಲವೂ ಬದುಕಿನ ರೂಪಕಗಳು. ಇಂತಹವನ್ನು ಅರಿಯಲು ಕಾವ್ಯದ ಓದು ನಮಗೆ ಬೇಕು.

* ನೀವೇ ಹೇಳಿಕೊಂಡಂತೆ ಸದಾ ನೀವು ಸಾಹಿತ್ಯದ ವಿದ್ಯಾರ್ಥಿ. ಈ ಆಸಕ್ತಿಗೆ ಕಾರಣವಾದ ಬಾಲ್ಯದ ಘಟನೆ ಯಾವುದು?

ನನ್ನ ತಾಯಿ ಯಾವಾಗಲೂ ಶುದ್ಧಬರಹ ಬರಿ ಎನ್ನುತ್ತಿದ್ದಳು. ಮಗ್ಗಿ ಬರೆ ಎನ್ನುತ್ತಿದ್ದಳು. ನನ್ನೂರು ಮುದ್ದೇಬಿಹಾಳ. ಅಲ್ಲಿ ಗ್ರಂಥಾಲಯಕ್ಕೆ ಹೋಗಿ ಪತ್ರಿಕೆ, ಪುಸ್ತಕ ಓದುತ್ತಿದ್ದೆ. ಅನಕೃ, ಶಿವರಾಮ ಕಾರಂತರ ಕೃತಿಗಳು ಅಲ್ಲೇ ನನಗೆ ದಕ್ಕಿದ್ದು. ಅಂಕಣ ಬರೆಯುವಾಗಲೂ ಆ ಓದು ನನಗೆ ನೆರವಾಯಿತು. ಆ ಗ್ರಂಥಾಲಯದಲ್ಲಿಯೇ ನನ್ನ ಸಾಹಿತ್ಯದ ಬೀಜವಿದೆ ಎನಿಸುತ್ತದೆ.

* ಅಂಕಣ ಬರವಣಿಗೆಯಲ್ಲೂ ನೀವು ಸಾಹಿತ್ಯ, ಸಂಸ್ಕೃತಿಯ ವಿಷಯಗಳನ್ನು ಹೆಚ್ಚಾಗಿ ತರುತ್ತಿದ್ದಿರಲ್ಲವೆ?

ಸಾಂಸ್ಕೃತಿಕ ಸ್ವರೂಪದ ವಸ್ತುಗಳಿಗೇ ಹೆಚ್ಚು ಪ್ರತಿಕ್ರಿಯೆ ಬರುತ್ತಿತ್ತು. ಸಿನಿಮಾ, ಕಾದಂಬರಿ ಬಗೆಗೆ ಬರೆದಾಗ ಅನೇಕರು ಮೆಚ್ಚುತ್ತಿದ್ದರು. ಕೃಷಿ, ಸಾಹಿತ್ಯ, ರಾಜಕೀಯ ಹೀಗೆ ವೈವಿಧ್ಯಮಯ ವಿಷಯಗಳನ್ನು ಓದುಗರಿಗೆ ರುಚಿಸುವಂತೆ ಬರೆಯುವುದೇ ಸವಾಲು. ಅದನ್ನು ನಿಭಾಯಿಸಲು ಸಾಹಿತ್ಯದ ಓದು ನನ್ನ ನೆರವಿಗೆ ಬಂದಿತ್ತು.

*ಪತ್ರಿಕೋದ್ಯಮ ಈಗ ವೇಗ, ಬಹುಮಾಧ್ಯಮದ ನಿಕಷಕ್ಕೆ ಒಳಪಡುತ್ತಿದೆ. ಆ ಕಾಲದ ಪತ್ರಕರ್ತರಿಗೂ, ಈ ಕಾಲದವರಿಗೂ ಏನು ವ್ಯತ್ಯಾಸವಿದೆ?

ಮೌಲ್ಯಗಳು ಯಾವಾಗಲೂ ಹಾಗೆಯೇ ಇವೆ. ಒಳ್ಳೆಯ ಭಾಷೆ ಇರಬೇಕು ಎನ್ನುವುದು ಬರವಣಿಗೆಯ ಮೂಲ. ಇಂಗ್ಲಿಷ್, ಹಿಂದಿ ಯಾವುದನ್ನೇ ಓದಿದರೂ ಅದು ಬರವಣಿಗೆಗೆ ನೆರವು ನೀಡುತ್ತದೆ. ಇಂಗ್ಲಿಷ್ ಸುದ್ದಿಯಲ್ಲಿ ತಪ್ಪು ಬಹಳ ಕಡಿಮೆ ಇರುತ್ತದೆ. ತಪ್ಪಿಲ್ಲದೆ ಬರೆಯುವ ಬಾಧ್ಯಸ್ಥಿಕೆ ಕನ್ನಡದಲ್ಲೇ ಕಡಿಮೆ ಆಗುತ್ತಿದೆ.

* ನಿವೃತ್ತಿಯ ನಂತರ ನಿಮ್ಮ ಬರವಣಿಗೆಯ ದಿಕ್ಕು ಸಾಹಿತ್ಯಪ್ರಣೀತವೇ ಆಯಿತಲ್ಲವೆ?

ನಿವೃತ್ತಿಯಾದಾಗ ನಾನೇನು ಮಾಡಬೇಕು ಎನ್ನುವ ಪ್ರಶ್ನೆ ಇತ್ತು. ಅದಕ್ಕೆ ಉತ್ತರರೂಪದಲ್ಲಿ ಬರವಣಿಗೆಯಲ್ಲಿ ತೊಡಗಿದೆ. ಜರ್ಮನ್ ಮೂಲದ ಹೆನ್ರಿಷ್ ಬೋಲ್ 1974ರಲ್ಲಿ ಬರೆದ ‘ಲಾಸ್ಟ್ ಆನರ್ ಆಫ್ ಕ್ಯಾಥರೀನಾ ಬ್ಲೂಮ್’ ಎನ್ನುವ ಕೃತಿಯನ್ನು ‘ಕ್ಯಾಥರೀನಾ ಏನಾದಳು?’ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿರುವೆ. ಅದರಲ್ಲಿ ಮಾಧ್ಯಮದ ಕಥೆಯ ಜತೆಗೆ ಮನುಷ್ಯನ ಕಥೆಯೂ ಇದೆ. ಅದನ್ನು ಅನುವಾದ ಮಾಡುವಂತೆ ಸಲಹೆ ನೀಡಿದವರು ಸಿ.ಎನ್. ರಾಮಚಂದ್ರನ್. ‘ಕನ್ನಡ ಪತ್ರಿಕೋದ್ಯಮ: 30 ವರ್ಷ’ ಎನ್ನುವ ವಿಷಯವಾಗಿ ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಕೂಡ ಮಾಡಿದೆ.

* ಸಾಹಿತ್ಯ ಕೃತಿಯ ಅನುವಾದ ಒಡ್ಡಿದ ಸವಾಲುಗಳೇನು?

ಇಂಗ್ಲಿಷ್ ಭಾರತೀಯ ಭಾಷೆಯಲ್ಲ.‌ ಅದರ ರೂಪುರೇಷೆ, ವಾಕ್ಯರಚನೆ ಎಲ್ಲವೂ ಭಿನ್ನ. ಹೀಗಾಗಿ ಅದನ್ನು ನಮ್ಮ ಭಾಷೆಗೆ ತರುವುದು ಸವಾಲಿನ ಕೆಲಸ. ದ್ರಾವಿಡ ಭಾಷೆಗಳಲ್ಲೇ ಪರಸ್ಪರ ಅನುವಾದ ಮಾಡುವಾಗ ಈ ರೀತಿ ಕಷ್ಟ ಇರೊಲ್ಲ.‌ ‘ವರ್ಬ್ಯಾಟಮ್’ ಆಗದಂತೆ ಅನುವಾದಿಸುವುದು ಕಷ್ಟ. ನನಗೆ ‘ಸೀತೆ’ ಬಹುವಾಗಿ ಕಾಡಿತು. ಎಷ್ಟೋ ಸಲ ನಡುರಾತ್ರಿಯೂ ಎದ್ದು ಕೂರುತ್ತಿದ್ದೆ. ದೇವದತ್ತ ಪಟ್ಟನಾಯಕ ತಮ್ಮದೇ ಆದ ‘ಪಾರ್ಮ್’ ರೂಢಿಸಿಕೊಂಡಿದ್ದಾರೆ. ರಾಮಚಂದ್ರ ಚರಿತ ಪುರಾಣದಲ್ಲಿ ಹಾಗಿದೆ, ಹೀಗಿದೆ ಎಂಬ ಉಲ್ಲೇಖವೂ ಇರುತ್ತದೆ. ಇವೆಲ್ಲ ಅವರ ಓದಿನ ಮೊತ್ತ. ಇಂಥದನ್ನು ಅನುವಾದಿಸುವಾಗ ಕನ್ನಡದ ಮೇಲೂ ಹಿಡಿತ ಇದ್ದರಷ್ಟೆ ಅನುವಾದ ಚೆನ್ನಾಗಿ ಆಗುತ್ತದೆ.

ಗಿರಡ್ಡಿ ಅವರು ಹೇಳದೇ ಇದ್ದರೆ ಈ ಕೃತಿಯನ್ನು ನಾನು ಅನುವಾದ ಮಾಡುತ್ತಿರಲಿಲ್ಲ. ಮನೋಹರ ಗ್ರಂಥಮಾಲಾದವರು ಬಹಳ ಚೆನ್ನಾಗಿ ಮುದ್ರಿಸಿದ್ದಾರೆ‌. ಸಿ‌.ಎನ್. ರಾಮಚಂದ್ರನ್ ಅವರು ಅದನ್ನು ಪರಿಷ್ಕರಿಸಲು ನೆರವಾದರು. ಅವರಿಗೆಲ್ಲ ನಾನು ಆಭಾರಿ. ಈ ಅನುವಾದ ನನ್ನ ಬದುಕಿನ ಅತ್ಯಂತ ಸೃಷ್ಟ್ಯಾತ್ಮಕ ಪ್ರಕ್ರಿಯೆ.

* ಈ ಕೃತಿಗೆ ಸಿಕ್ಕ ಜನಮೆಚ್ಚುಗೆ ಎಂಥದ್ದು?

ನಾನೇ ಬೆರಗಾಗುವಷ್ಟು. ಅನೇಕರು ಫೋನ್ ಮಾಡಿ ಮಾತನಾಡಿದರು. ಬರೆದು, ಖುಷಿ ಹಂಚಿಕೊಂಡರು. ಬಿಎಂಶ್ರೀ ಪ್ರತಿಷ್ಠಾನ, ಕರ್ನಾಟಕ ಸಂಘ ಕೊಡಮಾಡುವ ಪ್ರಶಸ್ತಿಗಳೂ ಸಂದವು. ಒಂದು ಪ್ರಮುಖ‌ ಪ್ರಶಸ್ತಿ ಮಾತ್ರ ಯಾವುದೋ, ಯಾರದ್ದೋ ಕಾರಣಕ್ಕೆ ಕೈತಪ್ಪಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಮೇಲೆ ಬದುಕು ಪರಿಪೂರ್ಣ ಎನ್ನುವ ಭಾವನೆ ಮೂಡಿತು. ಗಿರಡ್ಡಿ ಅವರು ‘ಜಯ’ ಅನುವಾದ ಮಾಡಿದಾಗ ಅದಕ್ಕೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಈಗ ಈ ಕೃತಿಗೆ. ಅದನ್ನು ನೋಡಲು ಅವರಿಲ್ಲ. ವ್ಯಕ್ತಿ ನಿಮಿತ್ತ ಮಾತ್ರ, ಸಾಹಿತ್ಯವೇ ದೊಡ್ಡದು ಎನ್ನುವುದಕ್ಕೆ ಇದುವೇ ಸಾಕ್ಷಿ.

* ಪತ್ರಕರ್ತರು ಅನುವಾದದ ಕೆಲಸದಲ್ಲಿ ಮುಳುಗೇಳಬೇಕಾಗುತ್ತದೆ. ಈ ಪ್ರಕ್ರಿಯೆಯು ಸಾಹಿತ್ಯ ಕೃತಿಯ ಅನುವಾದದಲ್ಲೂ ಕೆಲಸಕ್ಕೆ ಬರಬಹುದೆ?

ಪತ್ರಿಕೋದ್ಯಮದ ಕಾಪಿ ಅನುವಾದ ಮಾಡುವುದರಿಂದ ಮಹಾಕೃತಿಯ ಅನುವಾದಕ್ಕೆ ಅಷ್ಟೇನೂ ನೆರವು ಸಿಗಲಾರದು. ಸಾಹಿತ್ಯಿಕವಾದ ಬಹಳ ಸಂವೇದನೆ ಇದ್ದರಷ್ಟೆ ಇದು ಸಾಧ್ಯ.

ವೇದ-ಉಪನಿಷತ್ತುಗಳ ಓದಿಗಿಂತ ಸಾಹಿತ್ಯದ ಓದು ದೊಡ್ಡದು. ಮಹಾಕಾವ್ಯದ ಓದು ಬದುಕಿನ ಅಸಂಗತತೆಯನ್ನು ತೋರಿಸುತ್ತದೆ. ಕೊನೆಯಲ್ಲಿ ದುರ್ಯೋಧನನೂ ಸ್ವರ್ಗಕ್ಕೆ ಹೋಗುತ್ತಾನೆ. ಧರ್ಮರಾಯನೂ ಹೋಗುತ್ತಾನೆ!

* ಈಗ ಯಾವ ಕೃತಿ ರಚನೆಯಲ್ಲಿ ತೊಡಗಿದ್ದೀರಿ?

ಆತ್ಮಚರಿತ್ರೆ ಬರೆಯುತ್ತಿರುವೆ. ತೆರೆಮೇಲೆ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT