ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಮನೆಯಲ್ಲಿ ಗೆಲುವಿನ ನಗೆ ಚೆಲ್ಲುವ ಉಮೇದು: ಪ್ರಕಾಶ್ ಜಾವಡೇಕರ್ ಸಂದರ್ಶನ

ಪ್ರಧಾನಿ ಮೋದಿ ವರ್ಚಸ್ಸು, ಅಭಿವೃದ್ಧಿ, ದೇಶದ ಸುರಕ್ಷತೆಯೇ ಬಿಜೆಪಿಯ ಅರ್ಹತೆ: ಬಿಜೆಪಿಯ ರಾಜಸ್ಥಾನ ಉಸ್ತುವಾರಿ ಜಾವಡೇಕರ್
Last Updated 25 ಏಪ್ರಿಲ್ 2019, 8:21 IST
ಅಕ್ಷರ ಗಾತ್ರ

ಇನ್ನೆರಡು ವಾರಗಳ ಬಳಿಕ ರಾಜಸ್ಥಾನದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ರಾಜ್ಯದ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ರಾಜ್ಯದ ಎಲ್ಲ 25 ಕ್ಷೇತ್ರಗಳಲ್ಲೂ ಮತ್ತೆ ಗೆದ್ದು ಇತಿಹಾಸ ನಿರ್ಮಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಾವಡೇಕರ್ ಅವರು ‘ಪ್ರಜಾವಾಣಿ’ಯ ತಬೀನಾ ಅಂಜುಂ ಅವರಿಗೆ ಸಂದರ್ಶನ ನೀಡಿದ್ದು, ವಿಧಾನಸಭಾ ಚುನಾವಣೆಯ ಸೋಲು ಬೆನ್ನಿಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

* ವಿಧಾನಸಭೆ ಹಾಗೂ ಈಗಿನ ಲೋಕಸಭೆ ಚುನಾವಣೆಗೆ ನೀವು ರಾಜ್ಯದ ಉಸ್ತುವಾರಿ ವಹಿಸಿದ್ದೀರಿ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದ ಬಳಿಕ ನಿಮ್ಮ ಮುಂದಿರುವ ಸವಾಲುಗಳೇನು?
ವಿಧಾನಸಭಾ ಚುನಾವಣೆ ಬಳಿಕ ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ ಎಂದ ಮಾತ್ರಕ್ಕೆ ಲೋಕಸಭಾ ಚುನಾವಣೆ ನಮಗೆ ಕಠಿಣವಾಗುತ್ತದೆ ಎಂದು ಅರ್ಥವಲ್ಲ. ಅಂಕಿ–ಸಂಖ್ಯೆ ಮೌಲ್ಯಮಾಪನ ಮಾಡಿ ನೋಡಿದರೆ, ಕೇವಲ 1.5 ಲಕ್ಷ ಮತಗಳಿಂದ ಬಿಜೆಪಿ ಸೋತಿದೆ. ರಾಜ್ಯದ 50 ಸಾವಿರ ಮತಗಟ್ಟೆಗಳಲ್ಲಿ ಪಕ್ಷಕ್ಕೆ ಕೇವಲ 3 ಮತಗಳ ಕೊರತೆಯಿದೆ ಎಂಬುದುಇದರರ್ಥ. ಪ್ರತಿ ಚುನಾವಣೆಯೂ ಭಿನ್ನ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಜನರು ವಿಭಿನ್ನವಾಗಿಯೇ ಆಲೋಚಿಸುತ್ತಾರೆ.

* ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ ಅವರನ್ನು ಬಹಿರಂಗವಾಗಿ ಟೀಕಿಸಿದ್ದ ಜಾಟ್ ಸಮುದಾಯದ ನಾಯಕ ಹನುಮಾನ್ ಬೇನಿವಾಲ್‌ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡ ಉದ್ದೇಶ ಏನು? ರಾಜೇ ಅವರಿಗೆ ಆದ್ಯತೆ ಕಡಿಮೆಯಾಗಿದೆ ಎಂಬುದು ಇದರರ್ಥವೇ?
ಬೇನಿವಾಲ್ ಅವರ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ 10 ಲಕ್ಷ ಮತಗಳನ್ನು ಗಳಿಸಿರುವುದು, ಅವರು ಪ್ರಭಾವಿ ಎಂಬುದನ್ನು ಬಿಂಬಿಸುತ್ತದೆ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಅವರು ಬಯಸಿದ್ದರು. ಈ ಉದ್ದೇಶದಿಂದ ಅವರು ಮೈತ್ರಿಕೂಟ ಸೇರಿದ್ದಾರೆ. ಚುನಾವಣಾ ಉಸ್ತುವಾರಿಯಾಗಿ, ರಾಜೇ ಸೇರಿದಂತೆ ಎಲ್ಲರಿಂದಲೂ ಈ ಬಗ್ಗೆ ಪ್ರತಿಕ್ರಿಯೆ ಪಡೆದಿದ್ದೇನೆ.

* ರೈತರ ಸಾಲಮನ್ನಾ, ನಿರುದ್ಯೋಗಿಗಳಿಗೆ ಭತ್ಯೆ ನೀಡಿದ ರಾಜ್ಯ ಕಾಂಗ್ರೆಸ್ ಅನ್ನು ನೀವು ಹೇಗೆ ನೋಡುತ್ತೀರಿ?
ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಕಳೆದ ನಾಲ್ಕು ತಿಂಗಳ ಅವಧಿಯ ಆಡಳಿತ ವಿಫಲವಾಗಿದೆ. ಚುನಾವಣಾ ಭರವಸೆಗಳಲ್ಲಿ ಒಂದನ್ನೂ ಈಡೇರಿಸಲು ಆಗಿಲ್ಲ. ಯಾವುದೇ ರಾಷ್ಟ್ರೀಯ ಬ್ಯಾಂಕ್‌ಗಳು ಈವರೆಗೆ ಸಾಲ ನೀಡಿಲ್ಲ. ರೈತರಿಗೆ ₹6 ಸಾವಿರ ಭತ್ಯೆ ನೀಡುವ ಕೇಂದ್ರ ಸರ್ಕಾರದ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ.

* ಮೋದಿ ಅವರು ಮತ್ತೆ ಪ್ರಧಾನಿಯಾಗಿ ಆರಿಸಿಬಂದರೆ, ಮತ್ತೆ ಚುನಾವಣೆಗಳೇ ಇರುವುದಿಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳುತ್ತಾರಲ್ಲಾ?
2014ರಲ್ಲಿ ಮೋದಿ ಅವರು ಅಧಿಕಾರಕ್ಕೆ ಬಂದರು. ಇದೀಗ 2019ರಲ್ಲಿ ಸರಿಯಾದ ಸಮಯಕ್ಕೆ ಚುನಾವಣೆ ನಡೆಯುತ್ತಿದೆ. 2024, 2029ರಲ್ಲೂ ಚುನಾವಣೆಗಳು ನಡೆಯಲಿವೆ. ಆದರೆ ಕಾಂಗ್ರೆಸ್ ಮಾತ್ರ ಅಸ್ತಿತ್ವದಲ್ಲಿ ಇರುವುದಿಲ್ಲ.

* ರಾಜ್ಯದ ಯಾವ ವಿಷಯಗಳ ಮೇಲೆ ಪಕ್ಷ ಗಮನ ಹರಿಸಲಿದೆ?
ನೀರು, ಅಭಿವೃದ್ಧಿ ಹಾಗೂ ಶಿಕ್ಷಣ–ಈ ಮೂರು ವಿಷಯಗಳ ಮೇಲೆ ರಾಜಸ್ಥಾನದಲ್ಲಿ ಬಿಜೆಪಿ ಗಮನ ನೆಟ್ಟಿದೆ. ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದ ನದಿಗಳ ಜೋಡಣೆ ಬಳಿಕ ಪ್ರತಿ ಮನೆಗೆ ನೀರು ಪೂರೈಸುವುದು ನಮ್ಮ ಗುರಿ.

* ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ 25 ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿದ್ದರೂ, 2018ರ ಉಪಚುನಾವಣೆಯಲ್ಲಿ ಎರಡು ಸ್ಥಾನ ಕಳೆದುಕೊಂಡಿತು. ಈ ಬಾರಿ ಎಷ್ಟು ಸ್ಥಾನಗಳ ಮೇಲೆ ನಿಮ್ಮ ಕಣ್ಣಿದೆ?
ನಾವು ಎಣಿಕೆ ಮಾಡಲು ಹೋಗುವುದಿಲ್ಲ. ಎಲ್ಲ 25 ಕ್ಷೇತ್ರಗಳಲ್ಲಿ ಗೆಲುವಿನ ಪತಾಕೆ ಹಾರಿಸುವತ್ತ ನಾವು ಮುನ್ನಡೆಯುತ್ತಿದ್ದೇವೆ.

* ಮತದಾರರ ಮೇಲೆ ಪ್ರಭಾವ ಬೀರುವ ಅಂಶಗಳಾವುವು? ನಿಮ್ಮ ಪಕ್ಷದ ಕಾರ್ಯಸೂಚಿ ಏನು?
ಮೊದಲನೆಯದಾಗಿ, ಪ್ರಧಾನಿ ಅಭ್ಯರ್ಥಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಜನರು ಮತ ಹಾಕಲಿದ್ದಾರೆ. ಸದ್ಯದ ವಾತಾವರಣದಲ್ಲಿ ನರೇಂದ್ರ ಮೋದಿ ಅವರಿಗಿಂತ ಉತ್ತಮ ಪ್ರಧಾನಿ ಅಭ್ಯರ್ಥಿ ಇಲ್ಲ. ಎರಡನೆಯದಾಗಿ, ಭಯೋತ್ಪಾದನೆ ವಿರುದ್ಧ ಹೋರಾಡಲು ಮೋದಿ ಅವರು ನಡೆಸಿದ ವಾಯುದಾಳಿ, ನಿರ್ದಿಷ್ಟ ದಾಳಿಗಳನ್ನು ಗಮನಿಸಿದ ಜನರು, ಮೋದಿ ಅವರಿಂದ ದೇಶದ ರಕ್ಷಣೆ ಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಉದಾಹರಣೆಗೆ, 2008ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ, ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಪ್ರತಿದಾಳಿ ನಡೆಸಲು ಸೇನೆ ಅನುಮತಿ ಕೇಳಿತ್ತು. ಆದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅದನ್ನು ನಿರಾಕರಿಸಿದ್ದರು. ಈ ವ್ಯತ್ಯಾಸಗಳನ್ನು ಜನರು ಗಮನಿಸಿದ್ದಾರೆ. ಮೂರನೆಯದಾಗಿ, ಅಭಿವೃದ್ಧಿಯೇ ಮಂತ್ರವಾಗಿರುವ ಪಕ್ಷಕ್ಕೆ ಜನರು ಮತ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT