ಸೋಮವಾರ, ಅಕ್ಟೋಬರ್ 21, 2019
21 °C
ಫಟಾಫಟ್‌

ಕೆಪಿಎಲ್ ಟೂರ್ನಿ ಸ್ಥಗಿತ ಇಲ್ಲ: ರೋಜರ್‌ ಬಿನ್ನಿ

Published:
Updated:
Prajavani

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ರೋಜರ್‌ ಬಿನ್ನಿ ಅವರು ‘ಪ್ರಜಾವಾಣಿ’ಗೆ ನೀಡಿದ ಫಟಾಫಟ್‌ ಸಂದರ್ಶನ ಇಲ್ಲಿದೆ.

* ಮೊದಲ ಬಾರಿಗೆ ಕೆಎಸ್‌ಸಿಎ ಅಧ್ಯಕ್ಷರಾಗಿ ಚುನಾಯಿತರಾಗಿದ್ದೀರಿ. ಭವಿಷ್ಯದ ಯೋಜನೆಗಳು ಏನೇನು ಇವೆ?

ನಮ್ಮ ಸಂಸ್ಥೆಯು ಮೊದಲಿನಿಂದಲೂ ವಿಶ್ವಮಟ್ಟದ ಗೌರವ ಹೊಂದಿದೆ. ಉತ್ತಮ ಸೌಲಭ್ಯಗಳು ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಹಿಂದಿನ ಸಮಿತಿಗಳು ಮಾಡಿರುವ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡುತ್ತೇವೆ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಮುಂದುವರಿಸುತ್ತೇವೆ.
ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತಷ್ಟು ಉತ್ತಮವಾದ ಮೂಲಸೌಲಭ್ಯಗಳು, ತರಬೇತಿ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು.

* ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್‌ ಫಿಕ್ಸಿಂಗ್ ಆರೋಪಗಳು ಕೇಳಿಬಂದಿವೆ. ಮುಂದಿನ ಕ್ರಮ ಏನು? ಕೆಪಿಎಲ್‌ ಭವಿಷ್ಯವೇನು?

ತನಿಖೆ ನಡೆಯುತ್ತಿದೆ. ಸಮಗ್ರವಾದ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ. ಕೆಪಿಎಲ್, ಯುವ ಆಟಗಾರರಿಗೆಪ್ರತಿಭೆ ಸಾಬೀತು ಮಾಡಲು ಉತ್ತಮ ವೇದಿಕೆಯಾಗಿದೆ. ಆದ್ದರಿಂದ ಟೂರ್ನಿಯನ್ನು ಬಂದ್ ಮಾಡುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾ
ಗುವುದು. ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವ ಕುರಿತು ಯೋಜನೆ ರೂಪಿಸುತ್ತೇವೆ.

* ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯ ಶಿಫಾರಸುಗಳ ಜಾರಿ ನಿಮಗೆ ತೃಪ್ತಿಕರವಾಗಿದೆಯೇ?

 ಶಿಫಾರಸುಗಳನ್ನು ಆಧರಿಸಿದ ಪರಿಷ್ಕೃತ ನಿಯಮಾವಳಿಗಳನ್ನು ಒಪ್ಪಿಕೊಂಡ ಮೇಲೆ ಚುನಾವಣೆ ನಡೆದಿದೆ. ಅವುಗಳ ಜಾರಿಗೆ ಬದ್ಧರಾಗಿದ್ದೇವೆ.

* ಕ್ರಿಕೆಟ್ ಆಡಳಿತದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿರುವ ಸಂದರ್ಭ ಇದು. ಈಗ ಆಡಳಿತ ನಡೆಸುವುದು ಕಠಿಣ ಸವಾಲು ಅಲ್ಲವೇ?

ಯಾವಾಗಲೂ ವಿಭಿನ್ನ ಸನ್ನಿವೇಶಗಳು ಮತ್ತು ಪರಿಸ್ಥಿತಿ ಇರುತ್ತವೆ. ಯಾವುದೂ ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಎರಡು ಬಾರಿ ಉಪಾಧ್ಯಕ್ಷನಾಗಿ, ಕೋಚ್, ಆಟಗಾರ ಮತ್ತು ಆಯ್ಕೆಗಾರನಾಗಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ತಂಡ ನಮ್ಮದು. ಬಹುತೇಕ ಸದಸ್ಯರ ಬೆಂಬಲವೂ ಇರುವುದರಿಂದ ಹೊಣೆ ನಿಭಾಯಿಸುವುದು ಕಷ್ಟವಲ್ಲ.

Post Comments (+)