ಶನಿವಾರ, ಸೆಪ್ಟೆಂಬರ್ 25, 2021
28 °C
ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ

ಸಂದರ್ಶನ | ಸಮಗ್ರ ಅಭಿವೃದ್ಧಿ ಬಾಗಿಲು ಸದಾ ತೆರೆದಿದೆ: ಭಗವಂತ ಖೂಬಾ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಮೊದಲ ಬಾರಿಗೆ ಪ್ರಾತಿನಿಧ್ಯ ದೊರಕಿದೆ. ಬೀದರ್‌ ಸಂಸದ ಭಗವಂತ ಖೂಬಾ ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವಿಕರೀಸಬಹುದಾದ ಇಂಧನ ಖಾತೆಗಳ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದಲ್ಲಿ, ಔದ್ಯಮಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಕೇಂದ್ರದ ಯೋಜನೆಗಳ ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

* ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಅಧಿಕ ಇದ್ದರೂ ಮೋದಿ ಅವರು ನಿಮ್ಮನ್ನೇ ಆಯ್ಕೆ ಮಾಡಿದ್ದು ಏಕೆ?
– ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಮೊದಲಿನಿಂದಲೂ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತ ಬಂದಿದ್ದೇನೆ. ಜನರ ಅನುಕೂಲಕ್ಕಾಗಿ ರೂಪಿಸಿದ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮಾಡಿದ್ದೇನೆ. ವಿಶೇಷವಾಗಿ ರೈತರಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದೇನೆ. ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ಪಕ್ಷ ಹಲವು ಮಗ್ಗಲುಗಳಿಂದ ಪರಾಮರ್ಶೆ ನಡೆಸಿ, ಕೆಲಸದಲ್ಲಿನ ನನ್ನ ಬದ್ಧತೆ ಗುರುತಿಸಿ ನನಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದೆ.

* ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಮುಂದಿನ ಯೋಜನೆಗಳೇನು?
–ನಾನು ಈಗಷ್ಟೇ ಕೇಂದ್ರ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾಗಿ ಅಭಿವೃದ್ಧಿಯ ವಿಚಾರ ಮಾಡಲಾಗದು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನನ್ನ ಆದ್ಯತೆ ಇರಲಿದೆ. ಸ್ಥಳೀಯ ಶಾಸಕರು ತಮ್ಮ ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಸ್ತಾವಗಳನ್ನು ಸಿದ್ಧಪಡಿಸಿಕೊಂಡು ಬಂದರೆ ಖಂಡಿತವಾಗಿಯೂ ಅವರಿಗೆ ಸಹಕಾರ ನೀಡುವೆ.

* ನಿಮ್ಮ ಇಲಾಖೆಯಿಂದ ರಾಜ್ಯಕ್ಕೆ ಏನು ಕೊಡುಗೆ ಸಿಗಲಿದೆ?
–ಈಗಾಗಲೇ ಪಾವಗಡದಲ್ಲಿ ಸೋಲಾರ್ ಪಾರ್ಕ್‌ ಸ್ಥಾಪಿಸಲಾಗಿದೆ. ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ನನೆಗುದಿಗೆ ಬಿದ್ದಿದ್ದ ಸೋಲಾರ್ ಪಾರ್ಕ್‌ ಸ್ಥಾಪನೆ ಪ್ರಸ್ತಾವಕ್ಕೆ ಮರುಜೀವ ನೀಡಿದ್ದೇನೆ. ಯಾದಗರಿ ಜಿಲ್ಲೆಯ ಕಡೆಚೂರ್‌ನಲ್ಲಿ ಫಾರ್ಮಾ ಹಬ್‌ ಸ್ಥಾಪಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಸ್ಥಳೀಯ ಶಾಸಕರು ಇಂತಹ ಯೋಜನೆಗಳನ್ನು ಬೆನ್ನುಬಿದ್ದು ಮಾಡಿಸಿಕೊಳ್ಳಬೇಕು. ರಾಜ್ಯದ ಯೋಜನೆಗಳಿಗೆ ಪ್ರಾಮುಖ್ಯ ನೀಡುವೆ. ಅಭಿವೃದ್ಧಿ ಯೋಜನೆಗಳಿಗೆ ನನ್ನ ಸಹಕಾರ ಸದಾ ಇರಲಿದೆ.

* ಕಲ್ಯಾಣ ಕರ್ನಾಟಕದಲ್ಲಿಯ ಪ‌್ರವಾಸೋದ್ಯಮ ಅಭಿವೃದ್ಧಿ...
– ಈ ಭಾಗದವರೇ ಹಿಂದೆ ರಾಜ್ಯದ ಪ್ರವಾಸೋದ್ಯಮ ಸಚಿವರೂ ಆಗಿದ್ದರು. ಹಿಂದೆ ಆಡಳಿತ ನಡೆಸಿದವರು ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಡಬೇಕಿತ್ತು. ಆದರೆ, ಅದು ಆಗಲಿಲ್ಲ. ಕೇಂದ್ರದ ಪ್ರಸಾದ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಇದೆ. ಅದನ್ನು ಬಳಸಿಕೊಳ್ಳಲಾಗುವುದು.

ಹೈದರಾಬಾದ್‌, ಬೀದರ್‌ ಹಾಗೂ ನಳದುರ್ಗ ಸೇರಿಸಿ ಟೂರಿಸಂ ಕಾರಿಡಾರ್‌ ಮಾಡಬೇಕು ಎನ್ನುವ ಬೇಡಿಕೆ ಇದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉದ್ಯಮಿಗಳು, ಸಂಘ ಸಂಸ್ಥೆಗಳು ಹಾಗೂ ಆಸಕ್ತರ ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ರೂಪಿಸುವ ದಿಸೆಯಲ್ಲಿ ಚಿಂತನೆ ಮಾಡಲಾಗುವುದು.

* ಬೀದರ್‌ ಜಿಲ್ಲೆಯಲ್ಲಿ ಔದ್ಯಮಿಕ ಅಭಿವೃದ್ಧಿ ಬಗ್ಗೆ ನಿಮ್ಮ ಕನಸೇನು?
– ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣ ಬೀದರ್‌ ಜಿಲ್ಲೆಯಲ್ಲಿ ಇದೆ. ಕರ್ನಾಟಕ ಹಾಗೂ ನೆರೆಯ ರಾಜ್ಯ ಸರ್ಕಾರಗಳು ಅಗತ್ಯ ಮೂಲಸೌಕರ್ಯ ಒದಗಿಸಲು ಮುಂದಾದರೆ ಕೆಮಿಕಲ್‌ ಫ್ಯಾಕ್ಟರಿಗಳನ್ನು ಆರಂಭಿಸಲು ಸಾಧ್ಯವಾಗುತ್ತದೆ. ಇದು ಒಬ್ಬರಿಂದ ಆಗುವ ಕಾರ್ಯವಲ್ಲ. ಎಲ್ಲ ಜನಪ್ರತಿನಿಧಿಗಳ ಸಹಕಾರ ಹಾಗೂ ಇಚ್ಛಾಶಕ್ತಿ ಮುಖ್ಯ. ಅಭಿವೃದ್ಧಿ ವಿಷಯ ಬಂದಾಗ ನನ್ನ ಕಚೇರಿ ಬಾಗಿಲು ಯಾವಾಗಲೂ ತೆರೆದುಕೊಂಡಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು